ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 7, 2019

Mahabharata Tatparya Nirnaya Kannada 12.89-12.93


ಯದಾssಪ ದೇವಶ್ಚತುರಃ ಸ ಮಾಸಾಂಸ್ತದೋಪನಿಷ್ಕ್ರಾಮಣಮಸ್ಯ ಚಾsಸೀತ್ ।
ಜನ್ಮರ್ಕ್ಷಮಸ್ಮಿನ್ ದಿನ ಏವ ಚಾsಸೀತ್ ಪ್ರಾತಃ ಕಿಞ್ಚಿತ್ ತತ್ರ ಮಹೋತ್ಸವೋsಭವತ್೧೨.೮೯

ಯಾವಾಗ ಕೃಷ್ಣನು ನಾಲ್ಕು ತಿಂಗಳುಗಳನ್ನು ಕಳೆದನೋ, ಆಗ (ಕೃಷ್ಣನಿಗೆ  ನಾಲ್ಕು ತಿಂಗಳು ಆಗಿರುವಾಗ),  ಮಗುವಿನ ಉಪನಿಷ್ಕ್ರಾಮಣ ಸಂಸ್ಕಾರದ ಸಂಭ್ರಮ ನಡೆಯುತ್ತಿತ್ತು. (ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವ ಸಂಭ್ರಮ-ಸಿದ್ಧತೆ). ಆ ದಿನವೇ ಶ್ರೀಕೃಷ್ಣನ ಜನ್ಮ ನಕ್ಷತ್ರವೂ ಇದ್ದು, ಆ ಪ್ರದೇಶದಲ್ಲಿ ಬೆಳಿಗ್ಗೆ ಸಣ್ಣದಾದ ಮಹೋತ್ಸವವೂ ನಡೆಯಿತು.  

ತದಾ ಶಯಾನಃ ಶಕಟಸ್ಯ ಸೋsಧಃ ಪದಾsಕ್ಷಿಪತ್ ತಂ ದಿತಿಜಂ ನಿಹನ್ತುಮ್ ।
ಅನಃ ಸಮಾವಿಶ್ಯ ದಿತೇಃ ಸುತೋsಸೌ ಸ್ಥಿತಃ ಪ್ರತೀಪಾಯ ಹರೇಃ ಸುಪಾಪಃ ॥೧೨.೯೦॥

ಆಗಲೇ, ಗಾಡಿಯ ಕೆಳಭಾಗದಲ್ಲಿ ಮಲಗಿರುವ ಶ್ರೀಕೃಷ್ಣನು, ಗಾಡಿಯನ್ನು ಪ್ರವೇಶಿಸಿಕೊಂಡಿದ್ದ ಶಕಟಾಕ್ಷ ಎಂಬ ರಾಕ್ಷಸನನ್ನು ಕೊಲ್ಲಲೆಂದೇ ತನ್ನ ಕಾಲಿನಿಂದ ಒದ್ದನು. ಆ ದೈತ್ಯನಾದರೋ, ಕೃಷ್ಣನ ವಿರುದ್ಧವಾದ ಕೆಲಸಗಳನ್ನು ಮಾಡುವುದಕ್ಕಾಗಿಯೇ ಆ ಗಾಡಿಯನ್ನು ಪ್ರವೇಶಮಾಡಿಕೊಂಡಿದ್ದನು.

ಕ್ಷಿಪ್ತೋsನಸಿಸ್ಥಃ ಶಕಟಾಕ್ಷನಾಮಾ ಸ ವಿಷ್ಣುನೇತ್ವಾಸಹಿತಃ ಪಪಾತ ।
ಮಮಾರ ಚಾsಶು ಪ್ರತಿಭಗ್ನಗಾತ್ರೋ ವ್ಯತ್ಯಸ್ತಚಕ್ರಾಕ್ಷಮಭೂದನಶ್ಚ ॥೧೨.೯೧

ಗಾಡಿಯಲ್ಲಿ ಸೇರಿಕೊಂಡಿದ್ದ ಆ ಶಕಟಾಕ್ಷ ಕೃಷ್ಣನಿಂದ ಒದೆಯಲ್ಪಟ್ಟವನಾಗಿ, ಗಾಡಿಯಿಂದ ಒಡಗೂಡಿ ಬಿದ್ದು, ಅಂಗಾಂಗಗಳು  ಭಗ್ನಗೊಂಡು ಸತ್ತುಹೋದನು. ಗಾಡಿಯೂ ಕೂಡಾ ನೊಗ-ಚಕ್ರ ಎಲ್ಲವೂ ಅಸ್ತವ್ಯಸ್ತವಾಗಿ ಮುರಿದು ಬಿದ್ದಿತು. 

ಸಸಮ್ಭ್ರಮಾತ್ತಂ ಪ್ರತಿಗೃಹ್ಯ ಶಙ್ಕಯಾ ಕೃಷ್ಣಂ ಯಶೋದಾ ದ್ವಿಜವರ್ಯ್ಯಸೂಕ್ತಿಭಿಃ ।
ಸಾ ಸ್ನಾಪಯಾಮಾಸ ನದೀತಟಾತ್ ತದಾ ಸಮಾಗತಾ ನನ್ದವಚೋsಭಿತರ್ಜ್ಜಿತಾ ॥೧೨.೯೨

ಆಗ ಮಗುವಿಗೆ ಏನಾಯಿತೋ ಎಂಬ ಅನುಮಾನದಿಂದ, ಉದ್ವೇಗಗೊಂಡ ಯಶೋದೆಯು ಕೃಷ್ಣನನ್ನು ಎತ್ತಿಕೊಂಡು, ಬ್ರಾಹ್ಮಣರ ಆಶೀರ್ವಾದ ಮಂತ್ರಗಳಿಂದ ಮಗುವಿಗೆ ಸ್ನಾನ ಮಾಡಿಸಿದಳು. ಆಗಲೇ ನದಿ ತಟದಿಂದ ಬಂದ ನಂದನಿಂದ ಯಶೋದೆ ಚೆನ್ನಾಗಿ ಬೈಸಿಕೊಂಡಳು ಕೂಡಾ. (ಮಗುವೊಂದನ್ನೇ ಆ ರೀತಿ ಗಾಡಿಯ ಕೆಳಗೆ ಮಲಗಿಸಿದ್ದುದಕ್ಕಾಗಿ ನಂದಗೋಪ ಯಶೋದೆಗೆ ಬಯ್ಯುತ್ತಾನೆ)   

ಹತ್ವಾ ತು ತಂ ಕಂಸಭೃತ್ಯಂ ಸ ಕೃಷ್ಣಃ ಶಿಶ್ಯೇ ಪುನಃ ಶಿಶುವತ್ ಸರ್ವಶಾಸ್ತಾ ।
ಏವಂ ಗೋಪಾನ್ ಪ್ರೀಣಯನ್ ಬಾಲಕೇಳೀವಿನೋದತೋ ನ್ಯವಸತ್ ತತ್ರ ದೇವಃ ॥೧೨.೯೩॥

ಈ ರೀತಿಯಾಗಿ ಶ್ರೀಕೃಷ್ಣನು ಕಂಸನ ಭೃತ್ಯನಾದ ಶಕಟಾಕ್ಷನನ್ನು ಕೊಂದು,  ತಾನು ಎಲ್ಲರನ್ನೂ ನಿಯಂತ್ರಣ ಮಾಡುವವನಾದರೂ ಕೂಡಾ,  ಪುನಃ ಮಗುವಂತೆ ಮಲಗಿಕೊಂಡ. ಹೀಗೆ ಗೋಪಾಲಕರನ್ನು ಕ್ರೀಡಾವಿನೋದದಿಂದ ಸಂತಸಗೊಳಿಸುತ್ತಾ, ಅಲ್ಲಿಯೇ ಅವರ ಮಧ್ಯದಲ್ಲಿಯೇ ಶ್ರೀಕೃಷ್ಣ ವಾಸಮಾಡಿಕೊಂಡಿದ್ದ.

No comments:

Post a Comment