ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 21, 2019

Mahabharata Tatparya Nirnaya Kannada 1367_1372


ತುಷ್ಟಾವ ಚೈನಮುರುವೇದಶಿರೋಗತಾಭಿರ್ಗ್ಗೀರ್ಭಿಃ ಸದಾsಗಣಿತಪೂರ್ಣ್ಣಗುಣಾರ್ಣ್ಣವಂ ತಮ್
ಗೋಭೃದ್ ಗುರುಂ ಹರಗುರೋರಪಿ ಗೋಗಣೇನ ಯುಕ್ತಃ ಸಹಸ್ರಗುರಗಾಧಗುಮಗ್ರ್ಯಮಗ್ರ್ಯಾತ್ ॥೧೩.೬೭

ಸಾವಿರಕಣ್ಣುಳ್ಳ ವಜ್ರಧಾರಿ ಇಂದ್ರನು, ಉತ್ಕೃಷ್ಟವಾದ ಉಪನಿಷತ್ತಿನಲ್ಲಿ ಗತವಾಗಿರುವ ಮಾತುಗಳಿಂದ, ಅಗಣಿತಪೂರ್ಣಗುಣಾರ್ಣವನಾದ, ರುದ್ರನ ತಂದೆಯಾದ, ಬ್ರಹ್ಮನಿಗೂ ಕೂಡಾ ಉಪದೇಶಕನಾಗಿರುವ, ಎಣೆಯಿರದ ಕಣ್ಗಳುಳ್ಳ(ಸಹಸ್ರಾಕ್ಷನಾದ), ಎಲ್ಲರಿಗಿಂತಲೂ ಮಿಗಿಲಾದವರಿಗೂ ಶ್ರೇಷ್ಠನಾದ ನಾರಾಯಣನನ್ನು ಸ್ತೋತ್ರಮಾಡಿದನು.  

ತ್ವತ್ತೋ ಜಗತ್ ಸಕಲಮಾವಿರಭೂದಗಣ್ಯಧಾಮ್ನಸ್ತ್ವಮೇವ ಪರಿಪಾಸಿ ಸಮಸ್ತಮನ್ತೇ
ಅತ್ಸಿ ತ್ವಯೈವ ಜಗತೋsಸ್ಯ ಹಿ ಬನ್ಧಮೋಕ್ಷೌ ನ ತ್ವತ್ಸಮೋsಸ್ತಿ ಕುಹಚಿತ್ ಪರಿಪೂರ್ಣ್ಣಶಕ್ತೇ ॥೧೩.೬೮

‘ಎಣೆಯಿರದ ಶಕ್ತಿಯುಳ್ಳ ನಿನ್ನಿಂದಲೇ ಈ ಎಲ್ಲಾ ಪ್ರಪಂಚವೂ ಹುಟ್ಟಿದೆ. ನೀನೇ ಜಗತ್ತನ್ನು ಪಾಲಿಸುತ್ತೀಯೇ. ಕೊನೆಯಲ್ಲಿ ನೀನೇ ಇವೆಲ್ಲವನ್ನೂ ತಿನ್ನುತ್ತೀಯೇ(ಸಂಹಾರ ಮಾಡುವೆ). ನಿನ್ನಿಂದಲೇ ಈ ಜಗತ್ತಿಗೆ ಬಂಧನ ಮತ್ತು ಬಿಡುಗಡೆ. ನಿನಗೆ ಸಮನಾದವನು ಎಲ್ಲಿಯೂ  ಇಲ್ಲಾ’ ಎಂದು ಇಂದ್ರ ಶ್ರೀಕೃಷ್ಣನನ್ನು ಸ್ತೋತ್ರ ಮಾಡುತ್ತಾನೆ. ಇಲ್ಲಿ ಇಂದ್ರ ಶ್ರೀಕೃಷ್ಣನನ್ನು  ‘ಪರಿಪೂರ್ಣಶಕ್ತೇ’ ಎಂದು ಸಂಬೋಧನೆ ಮಾಡಿರುವುದನ್ನು ಕಾಣುತ್ತೇವೆ.

ಕ್ಷನ್ತವ್ಯಮೇವ ಭವತಾ ಮಮ ಬಾಲ್ಯಮೀಶ ತ್ವತ್ಸಂಶ್ರಯೋsಸ್ಮಿ ಹಿ ಸದೇತ್ಯಭಿವನ್ದಿತೋsಜಃ ।
ಕ್ಷಾನ್ತಂ ಸದೈವ ಭವತಸ್ತವ ಶಿಕ್ಷಣಾಯ ಪೂಜಾಪಹಾರವಿಧಿರಿತ್ಯವದದ್ ರಮೇಶಃ ॥೧೩.೬೯

‘ಓ ಕೃಷ್ಣನೇ, ನಿನ್ನಿಂದ  ನನ್ನ ಬಾಲಿಶ್ಯವು  ಕ್ಷಮಿಸಲ್ಪಡಬೇಕಾಗಿದೆ. ಯಾವಾಗಲೂ ನಿನ್ನಲ್ಲಿಯೇ ನಾನು ಆಶ್ರಯವನ್ನು ಹೊಂದಿದ್ದೇನೆ’ ಎಂದು ಹೇಳಿದ ಇಂದ್ರನಿಂದ ನಮಸ್ಕರಿಸಲ್ಪಟ್ಟ, ಎಂದೂ ಹುಟ್ಟದ ರಮೇಶನು ಹೇಳುತ್ತಾನೆ: ‘ನಿನ್ನನ್ನು ಸದೈವ  ಕ್ಷಮಿಸಿದ್ದೇನೆ. ನಿನ್ನ ಶಿಕ್ಷಣಕ್ಕಾಗಿಯೇ ನಾನು ನಿನ್ನ ಪೂಜೆಯನ್ನು  ಅಪಹರಿಸಿದೆ’ ಎಂದು.

ಗೋವಿನ್ದಮೇನಮಭಿಷಿಚ್ಯ ಸ ಗೋಗಣೇತೋ ಗೋಭಿರ್ಜ್ಜಗಾಮ ಗುಣಪೂರ್ಣ್ಣಮಮುಂ ಪ್ರಣಮ್ಯ
ಗೋಪೈರ್ಗ್ಗಿರಾಮ್ಪತಿರಪಿ ಪ್ರಣತೋsಭಿಗಮ್ಯ ಗೋವರ್ದ್ಧನೋದ್ಧರಣಸಙ್ಗತಸಂಶಯೈಃ ಸಃ ॥೧೩.೭೦॥

ಶ್ರೀಕೃಷ್ಣನಿಂದ ಕ್ಷಮಿಸಲ್ಪಟ್ಟ ಇಂದ್ರನು ಗುಣಪೂರ್ಣನಾಗಿರುವ ಕೃಷ್ಣನನ್ನು ಗೋವುಗಳಿಂದ ಕೂಡಿಕೊಂಡು, ಹಾಲಿನಿಂದ ಅಭಿಷೇಕಮಾಡಿ, ನಮಸ್ಕರಿಸಿ ಅಲ್ಲಿಂದ ತೆರಳಿದನು. (ಅಂದರೆ: ಗೋಮಾತೆ ಸುರಭಿಯೂ ಕೂಡಾ  ಅಲ್ಲಿಗೆ ಬಂದಿದ್ದಳು. ತನ್ನ ಸಂತತಿಯನ್ನು ರಕ್ಷಿಸಿದ ಕೃಷ್ಣನಿಗಾಗಿ ಆಕೆ ತನ್ನ ಹಾಲನ್ನು ಸುರಿಸಿದಳು. ಇಂದ್ರನೂ ಕೂಡಾ ಅಭಿಷೇಕ ಮಾಡಿದನು. ಈ ಎಲ್ಲಾ ಕಾರಣಗಳಿಂದ  ಶ್ರೀಕೃಷ್ಣ ‘ಗೋವಿಂದ’ ಎನ್ನುವ ಹೆಸರಿನಿಂದ ಕರೆಯಲ್ಪಟ್ಟನು ಕೂಡಾ). ಗೋವರ್ಧನ ಪರ್ವತವನ್ನು ಎತ್ತಿದ್ದುದರಿಂದ ತಮ್ಮೆಲ್ಲಾ ಸಂಶಯವನ್ನೂ ಕಳೆದುಕೊಂಡ   ಗೋಪಾಲಕರಿಂದ ಕೃಷ್ಣ ನಮಸ್ಕರಿಸಲ್ಪಟ್ಟನು. [ಇವನೂ ನಮ್ಮಂತೆ ಒಬ್ಬ ಗೋಪಾಲಕ ಎಂದು ತಿಳಿದಿದ್ದ ಗೋಪಾಲಕರು, ಇವನು ನಮ್ಮಂತೆ ಅಲ್ಲಾ. ನಾವು ಇಂದ್ರನಿಗೆ ನಮಸ್ಕರಿಸಿದರೆ, ಇಂದ್ರನೇ ಇವನಿಗೆ ನಮಸ್ಕಾರ ಮಾಡಿದ. ಇವನಾರೋ ಅತಿಮಾನುಷ ವ್ಯಕ್ತಿ ಎಂದೂ, ಇವನು ದೇವರ ದೇವ ಎಂದೂ ತಿಳಿದು ತಮ್ಮೆಲ್ಲಾ ಸಂಶಯಗಳಿಂದ ರಹಿತರಾದರು.  (ಸಂ + ಗತ = ಚೆನ್ನಾಗಿ ದೂರವಾದ ಸಂಶಯ)].

ಕೃಷ್ಣಂ ತತಃ ಪ್ರಭೃತಿ ಗೋಪಗಣಾ ವ್ಯಜಾನನ್  ನಾರಾಯಣೋsಯಮಿತಿ ಗರ್ಗ್ಗವಚಶ್ಚ ನನ್ದಾತ್ ।
ನಾರಯಣಸ್ಯ ಸಮ ಇತ್ಯುದಿತಂ ನಿಶಮ್ಯ ಪೂಜಾಂ ಚ ಚಕ್ರುರಧಿಕಾಮರವಿನ್ದನೇತ್ರೇ ॥೧೩.೭೧ ॥

ಈ ಘಟನೆಯ ನಂತರ ಗೋಪಾಲಕರು ‘ಇವನು ನಾರಾಯಣ’ ಎನ್ನುವ ಸತ್ಯವನ್ನು ತಿಳಿದರು. ‘ಇವನು ನಾರಾಯಣನಿಗೆ ಸಮನು’ ಎನ್ನುವ  ಗರ್ಗಾಚಾರ್ಯರ ಮಾತನ್ನು ನಂದಗೋಪನಿಂದ ಕೇಳಿದ ಅವರು, ಅದನ್ನು ನಿಶ್ಚಯ ಮಾಡಿ, ಅರವಿಂದನೇತ್ರ  ಶ್ರೀಕೃಷ್ಣನಲ್ಲಿ ಅಧಿಕ ಸಮ್ಮಾನವನ್ನು ಮಾಡಿದರು.

ಸ್ಕನ್ದಾದುಪಾತ್ತವರತೋ ಮರಣಾದಪೇತಂ ದೃಷ್ಟ್ವಾ ಚ ರಾಮನಿಹತಂ ಬಲಿನಂ ಪ್ರಲಮ್ಬಮ್ ।
ಚಕ್ರುರ್ವಿನಿಶ್ಚಯಮಮುಷ್ಯ ಸುರಾಧಿಕತ್ವೇ ಗೋಪಾ ಅಥಾಸ್ಯ ವಿದಧುಃ ಪರಮಾಂ ಚ ಪೂಜಾಮ್ ॥೧೩.೭೨॥

ಸ್ಕಂದನಿಂದ ಪಡೆದ ವರದಿಂದಾಗಿ ಮರಣದಿಂದ ರಹಿತನಾಗಿದ್ದ ಹಾಗೂ ಬಲಿಷ್ಠನಾಗಿದ್ದ ಪ್ರಲಂಭನನ್ನು ರಾಮ ಕೊಂದದ್ದನ್ನು ಕಂಡು, ಇವನು(ಬಲರಾಮ) ದೇವತಾಶ್ರೇಷ್ಠ ಎಂದು ಅವರೆಲ್ಲರೂ  ನಿಶ್ಚಯಿಸಿದರು. ಕೃಷ್ಣನ ನಂತರ ಬಲರಾಮನಿಗೆ ಅವರೆಲ್ಲರೂ ಉತ್ಕೃಷ್ಟವಾದ ಪೂಜೆಯನ್ನು ಮಾಡಿದರು ಕೂಡಾ.

No comments:

Post a Comment