ಪಕ್ಷದ್ವಯೇನ ವಿಹರತ್ಸ್ವಥ ಗೋಪಕೇಷು ದೈತ್ಯಃ ಪ್ರಲಮ್ಬ ಇತಿ
ಕಂಸವಿಸೃಷ್ಟ ಆಗಾತ್ ।
ಕೃಷ್ಣಸ್ಯ ಪಕ್ಷಿಷು ಜಯತ್ಸು ಸ ರಾಮಮೇತ್ಯ ಪಾಪಃ ಪರಾಜಿತ ಉವಾಹ
ತಮುಗ್ರರೂಪಃ ॥೧೩.೫೫॥
ತದನಂತರ, ಗೋಪಾಲಕರೆಲ್ಲರೂ ಎರಡು
ಪಂಗಡ ಮಾಡಿಕೊಂಡು ಕ್ರೀಡಿಸುತ್ತಿರಲು, ಕಂಸನಿಂದ ಕಳುಹಿಸಲ್ಪಟ್ಟ ಪ್ರಲಂಬನೆಂಬ ದೈತ್ಯನು(ಬಾಲಕನ
ರೂಪದಲ್ಲಿ) ಬಂದು ಅವರಲ್ಲಿನ ಒಂದು ಪಂಗಡವನ್ನು ಸೇರಿಕೊಂಡನು. ಕೃಷ್ಣನ ಪಕ್ಷದವರು ಜಯವನ್ನು
ಹೊಂದುತ್ತಿರಲು, ಆಟದ ನಿಯಮದಂತೆ ಸೋತ ಗುಂಪಿನವನಾದ ಪ್ರಲಂಬ ಬಲರಾಮನನ್ನು ಹೊತ್ತ.(ಆಟದ
ನಿಯಮದಂತೆ ಯಾರು ಸೋಲುತ್ತಾರೋ ಅವರು
ಗೆದ್ದವರನ್ನು ಹೊರಬೇಕು. ಪ್ರಲಂಬನಿದ್ದ ಪಂಗಡ ಸೋತು, ಕೃಷ್ಣ ಹಾಗು ಬಲರಾಮರಿದ್ದ ಪಂಗಡ
ಗೆದ್ದುದ್ದರಿಂದ ಪ್ರಲಂಬ ಬಲರಾಮನನ್ನು ಹೊರಬೇಕಾಯಿತು. ಹಾಗೇ ಶ್ರಿಧಾಮ ಕೃಷ್ಣನನ್ನು ಹೊತ್ತ). ಆಗ
ಪ್ರಲಂಬ ತನ್ನ ದೈತ್ಯ ರೂಪವನ್ನು ತೋರಿಸುತ್ತಾನೆ.
ಭೀತೇನ ರೋಹಿಣಿಸುತೇನ ಹರಿಃ ಸ್ತುತೋsಸೌ ಸ್ವಾವಿಷ್ಟತಾಮುಪದಿದೇಶ
ಬಲಾಭಿಪೂರ್ತ್ತ್ಯೈ ।
ತೇನೈವ ಪೂರಿತಬಲೋsಮ್ಬರಚಾರಿಣಂ ತಂ ಪಾಪಂ
ಪ್ರಲಮ್ಬಮುರುಮುಷ್ಟಿಹತಂ ಚಕಾರ ॥೧೩.೫೬॥
ಈ ಘಟನೆಯಲ್ಲಿ ಭಯಗೊಂಡ
ರೋಹಿಣಿಪುತ್ರನಿಂದ ಸ್ತೋತ್ರಮಾಡಲ್ಪಟ್ಟ ಪರಮಾತ್ಮನು, ಅವನ ಬಲದ ಪೂರ್ತಿಗಾಗಿ ‘ನಾನು ನಿನ್ನಲ್ಲಿ
ಆವಿಷ್ಟನಾಗಿದ್ದೇನೆ’ ಎಂದು ಉಪದೇಶ ಮಾಡಿದನು. ಆ ಉಪದೇಶದಿಂದ ತನ್ನೊಳಗೇ ಇರತಕ್ಕ ಪರಮಾತ್ಮನಿಂದಲೇ
ಪೂರ್ತಿಯಾದ ಬಲವುಳ್ಳ ಆ ಬಲರಾಮನು, ಆಕಾಶ ಸಂಚಾರಿಯಾದ ಪ್ರಲಂಬನನ್ನು ಗುದ್ದಿ ಸಾಯುವಂತೆ ಮಾಡಿದನು.
[ಹರಿವಂಶದಲ್ಲಿ(ವಿರಾಟಪರ್ವ.
೧೪.೪೮-೪೯) ಈ ಕುರಿತಾದ ವಿವರ ಕಾಣಸಿಗುತ್ತದೆ: ಪ್ರಲಂಬನನ್ನು ಕಂಡು ಭಯಗೊಂಡ ಬಲರಾಮನನ್ನು
ಕುರಿತು ಶ್ರೀಕೃಷ್ಣ ಹೇಳುವ ಮಾತು ಇದಾಗಿದೆ: ಅಹಂ
ಯಃ ಸ ಭವಾನೇವ ಯಸ್ತ್ವಂ ಸೊsಹಂ ಸನಾತನಃ ।.... ನಾನು ಅಂದರೆ ನೀನೇ. ನಿನ್ನೊಳಗಡೆ ಇರತಕ್ಕ ಪರಮಾತ್ಮ
ನಾನೇ. .. ತದಾಸ್ಸೇ ಮೂಢವತ್ ತ್ವಂ ಕಿಂ ಪ್ರಾಣೇನ ಜಹಿ ದಾನವಂ ।.. ಯಾಕಾಗಿ ಸುಮ್ಮನಿದ್ದೀಯ,
ನಿನ್ನ ಶಕ್ತಿಯಿಂದ ಈ ದಾನವನನ್ನು ಕೊಲ್ಲು. ಮೂರ್ಧ್ನಿ ದೇವರಿಪುಂ ದೇವ ವಜ್ರಕಲ್ಪೇನ ಮುಷ್ಟಿನಾ’ ನಿನ್ನ ವಜ್ರದಂತೆ ಗಟ್ಟಿಯಾಗಿರುವ ಮುಷ್ಟಿಯಿಂದ
ಅವನನ್ನು ಗುದ್ದಿ ಕೊಲ್ಲು’].
ತಸ್ಮಿನ್ ಹತೇ ಸುರಗಣಾ
ಬಲದೇವನಾಮ ರಾಮಸ್ಯ ಚಕ್ರುರತಿತೃಪ್ತಿಯುತಾ ಹರಿಶ್ಚ।
ವಹ್ನಿಂ ಪಪೌ ಪುನರಪಿ ಪ್ರದಹನ್ತಮುಚ್ಚೈರ್ಗ್ಗೋಪಾಂಶ್ಚ
ಗೋಗಣಮಗಣ್ಯಗುಣಾರ್ಣ್ಣವೋsಪಾತ್ ॥೧೩.೫೭॥
ಆ ಪ್ರಲಂಬಾಸುರನು
ಕೊಲ್ಲಲ್ಪಡುತ್ತಿರಲು, ಅತ್ಯಂತ ತೃಪ್ತಿಯುತರಾದ ದೇವತಾಸಮೂಹ ರಾಮನಿಗೆ ‘ಬಲದೇವ’ ಎಂದು ಹೆಸರಿಟ್ಟರು.
ಮತ್ತೆ, ಎಣಿಸಲಾಗದ ಗುಣಗಳಿಗೆ
ಕಡಲಿನಂತಿರುವ ಶ್ರೀಕೃಷ್ಣನು, ಚೆನ್ನಾಗಿ ಸುಡುವ ಕಾಳ್ಗಿಚ್ಚನ್ನು ಗೋವುಗಳ ಗಣ ಮತ್ತು ಗೋವಳರಿಗಾಗಿ ಕುಡಿದನು ಹಾಗೂ ಎಲ್ಲರನ್ನೂ ರಕ್ಷಿಸಿದನು
ಕೂಡಾ.
No comments:
Post a Comment