ಕಾರ್ತ್ತ್ಯಾಯನೀವ್ರತಪರಾಃ
ಸ್ವಪತಿತ್ವಹೇತೋಃ ಕನ್ಯಾ ಉವಾಹ ಭಗವಾನಪರಾಶ್ಚ ಗೋಪೀಃ ।
ಅನ್ಯೈ ರ್ದ್ಧೃತಾ
ಅಯುಗಬಾಣಶರಾಭಿನುನ್ನಾಃ ಪ್ರಾಪ್ತಾ ನಿಶಾಸ್ವರಮಯಚ್ಛಶಿರಾಜಿತಾಸು ॥೧೩.೭೩॥
ಭಗವಂತನು ಮದುವೆಯಾದ, ಕಾರ್ತ್ಯಾಯನೀ ವ್ರತತೊಟ್ಟ, ಕಾಮಬಾಣನೆಟ್ಟ, ಇವನೇ ನಮ್ಮ ಪತಿಯಾಗಬೇಕು
ಎಂದು ಪಣತೊಟ್ಟ, ಕನ್ನಿಕೆಯರನ್ನೂ, ಬೇರೆ ಗೋಪರ ಮಡದಿಯರಾದ
ಗೋಪಿಕೆಯರನ್ನೂ. ನಟ್ಟಿರುಳಿನಲ್ಲಿ ರಮಿಸಿದನು ತುಂಬಿದ ಚಂದ್ರನ ಕಾಂತಿಯಲ್ಲಿ.
ತಾಸ್ವತ್ರ ತೇನ ಜನಿತಾ ದಶಲಕ್ಷಪುತ್ರಾ ನಾರಾಯಣಾಹ್ವಯಯುತಾ
ಬಲಿನಶ್ಚ ಗೋಪಾಃ ।
ಸರ್ವೇsಪಿ ದೈವತಗಣಾ
ಭಗವತ್ಸುತತ್ವಮಾಪ್ತುಂ ಧರಾತಳಗತಾ ಹರಿಭಕ್ತಿಹೇತೋಃ ॥೧೩.೭೪॥
ಇಲ್ಲಿಯೇ ಆ ಎಲ್ಲಾ
ಗೋಪಿಕೆಯರಲ್ಲಿ ಶ್ರೀಕೃಷ್ಣನಿಂದ ‘ನಾರಾಯಣ’ ಎಂಬ ಹೆಸರುಳ್ಳ, ಬಲಿಷ್ಠರಾದ ಹತ್ತು ಲಕ್ಷಜನ ಪುತ್ರರು ಹುಟ್ಟಿಸಲ್ಪಟ್ಟರು.
ಅವರೆಲ್ಲರೂ ಕೂಡಾ ದೇವತಾಗಣಕ್ಕೆ ಸೇರಿದವರು. ಹರಿಭಕ್ತಿಯ ಕಾರಣದಿಂದ ಪರಮಾತ್ಮನ ಮಕ್ಕಳಾಗಬಯಸಿ
ಈರೀತಿ ಭೂಮಿಯಲ್ಲಿ ಹುಟ್ಟಿದರು.
[ಈ ಕುರಿತಾದ ವಿವರವನ್ನು ಮಹಾಭಾರತದ
ಉದ್ಯೋಗಪರ್ವದಲ್ಲಿ(೭.೧೯) ಕಾಣುತ್ತೇವೆ: ಮತ್ಸಂಹನನತುಲ್ಯಾನಾಂ ಗೋಪಾನಾಮರ್ಬುದಂ ಮಹತ್ । (‘ಅರ್ಬುದ’ ಎಂದರೆ
ನೂರು-ಹತ್ತುಸಾವಿರ. ಅಂದರೆ ಹತ್ತು ಲಕ್ಷ). ನಾರಾಯಣಾ ಇತಿ ಖ್ಯಾತಾಃ ಸರ್ವೇ ಸಙ್ಗಾಮಯೋಧಿನಃ’ (ನನ್ನ
ತರಹದ ಶರೀರ ಉಳ್ಳವರಿವರು ಎಂದು ಕೃಷ್ಣ ಹೇಳಿರುವುದನ್ನು ನಾವಿಲ್ಲಿ ಗಮನಿಸಬೇಕು) ]
ಶ್ರೀಕೃಷ್ಣ ಈರೀತಿ ಅವರೆಲ್ಲರನ್ನು
ಮದುವೆಯಾಗಲು ಕಾರಣವೇನು ಎನ್ನುವುದನ್ನು ಮುಂದಿನಶ್ಲೋಕದಲ್ಲಿ ವಿವರಿಸಿದ್ದಾರೆ:
ತಾಸ್ತತ್ರ ಪೂರ್ವವರದಾನಕೃತೇ ರಮೇಶೋ ರಾಮಾ ದ್ವಿಜತ್ವಗಮನಾದಪಿ
ಪೂರ್ವಮೇವ ।
ಸರ್ವಾ ನಿಶಾಸ್ವರಮಯತ್ ಸಮಭೀಷ್ಟಸಿದ್ಧಿಚಿನ್ತಾಮಣಿರ್ಹಿ
ಭಗವಾನಶುಭೈರಲಿಪ್ತಃ ॥೧೩.೭೫॥
ಹಿಂದೆ ಕೊಟ್ಟ ವರಕ್ಕಾಗಿ ಆ
ಎಲ್ಲಾ ಹೆಣ್ಣುಮಕ್ಕಳನ್ನು ರಮೇಶನು ತನ್ನ ಮುಂಜಿಯಾಗುವುದಕ್ಕೂ ಮೊದಲೇ, ಆ ರಾತ್ರಿಗಳಲ್ಲಿ
ಸಂತಸಗೊಳಿಸಿದ. ಅಭೀಷ್ಟಸಿದ್ಧಿಯಲ್ಲಿ ಚಿಂತಾಮಣಿಯಂತಿರುವ ನಾರಾಯಣನು ಪಾಪ ಮೊದಲಾದವುಗಳಿಂದ
ಲಿಪ್ತನಲ್ಲವಷ್ಟೇ.
ಸಮ್ಪೂರ್ಣ್ಣಚನ್ದ್ರಕರರಾಜಿತಸದ್ರಜನ್ಯಾಂ ವೃನ್ದಾವನೇ
ಕುಮುದಕುನ್ದಸುಗನ್ಧವಾತೇ ।
ಶುತ್ವಾಮುಕುನ್ದಮುಖನಿಸ್ಸೃತಗೀತಸಾರಂ ಗೋಪಾಙ್ಗನಾ ಮುಮುಹುರತ್ರ
ಸಸಾರ ಯಕ್ಷಃ॥೧೩.೭೬॥
ಪೂರ್ಣವಾಗಿರುವ ಚಂದ್ರನ
ಕಿರಣದಿಂದ ಶೋಭಿತವಾದ ಒಳ್ಳೆಯ ರಾತ್ರಿಯಲ್ಲಿ ನೈದಿಲೆ, ಮಲ್ಲಿಗೆ, ಮೊದಲಾದ ಪರಿಮಳಭರಿತವಾದ ಗಾಳಿಯುಳ್ಳ
ವೃನ್ದಾವನದಲ್ಲಿ ಕೃಷ್ಣನ ಮುಖದಿಂದ ಹೊರಟ ಸಾರಭೂತವಾದ ಗೀತೆಯನ್ನು ಕೇಳಿ ಗೋಪಿಕೆಯರು
ಮೂರ್ಛೆಹೊಂದಿದರು. ಆಗ ಅಲ್ಲಿಗೆ ಯಕ್ಷನೊಬ್ಬ ಬಂದನು.
ರುದ್ರಪ್ರಸಾದಕೃತರಕ್ಷ ಉತಾಸ್ಯ ಸಖ್ಯುರ್ಭೃತ್ಯೋ ಬಲೀ ಖಲತರೋsಪಿಚ ಶಙ್ಖಚೂಡಃ ।
ತಾಃ ಕಾಲಯನ್ ಭಗವತಸ್ತಳತಾಡನೇನ ಮೃತ್ಯುಂ ಜಗಾಮ ಮಣಿಮಸ್ಯ ಜಹಾರ
ಕೃಷ್ಣಃ ॥೧೩.೭೭॥
ಆ ಯಕ್ಷ ರುದ್ರನ
ಅನುಗ್ರಹವನ್ನೇ ರಕ್ಷಣೆಯಾಗಿ ಹೊಂದಿರುವ, ರುದ್ರನ ಗೆಳೆಯನಾದ ಕುಬೇರನ ಸೇವಕನಾದ, ಬಲಿಷ್ಠನಾದ,
ಅತ್ಯಂತ ದುಷ್ಟನಾದ ಶಂಖಚೂಡನಾಗಿದ್ದ. ಆತ ಗೋಪಿಕೆಯರನ್ನು ಅಪಹಾರ ಮಾಡುತ್ತಿರುವಾಗಲೇ, ಕೃಷ್ಣನ ಮುಂಗೈ ಹೊಡೆತದಿಂದ ಸತ್ತುಬಿದ್ದ. ಕೃಷ್ಣನು ಅವನ
ಮಣಿಯನ್ನು ಅಪಹರಿಸಿದ.
No comments:
Post a Comment