ತತ್ರಾಥ ಕೃಷ್ಣಮವದನ್ ಸಬಲಂ ವಯಸ್ಯಾಃ ಪಕ್ವಾನಿ ತಾಲಸುಫಲಾನ್ಯನುಭೋಜಯೇತಿ ।
ಇತ್ಯರ್ತ್ಥಿತಃ ಸಬಲ ಆಪ ಸ ತಾಲವೃನ್ದಂ ಗೋಪೈರ್ದ್ದುರಾಸದಮತೀವ
ಹಿ ಧೇನುಕೇನ ॥೧೩.೫೧॥
‘ಹಣ್ಣಾಗಿರುವ ತಾಳೆಮರದ ಒಳ್ಳೆಯ
ಫಲಗಳನ್ನು ನಮಗೆ ಉಣ್ಣಿಸು’ ಎಂದು ಗೆಳೆಯರಿಂದ ಬೇಡಲ್ಪಟ್ಟ
ಶ್ರೀಕೃಷ್ಣನು, ಬಲರಾಮನಿಂದ ಕೂಡಿಕೊಂಡು, ಧೇನುಕನ ಕಾರಣದಿಂದಾಗಿ ಗೋಪಾಲಕರಿಂದ ಹೊಂದಲು
ಅಸಾಧ್ಯವಾದ ತಾಳೆಮರಗಳ ಸಮೂಹವನ್ನು ಹೊಂದಿದನು.
ವಿಘ್ನೇಶತೋ ವರಮವಾಪ್ಯ ಸ ದೃಷ್ಟದೈತ್ಯೋ
ದೀರ್ಘಾಯುರುತ್ತಮಬಲಃ ಕದನಪ್ರಿಯೋsಭೂತ್ ।
ನಿತ್ಯೋದ್ಧತಃ ಸ ಉತ ರಾಮಮವೇಕ್ಷ್ಯ ತಾಲವೃನ್ತಾತ್ ಫಲಾನಿ
ಗಳಯನ್ತಮಥಾಭ್ಯಧಾವತ್ ।
ತಸ್ಯ ಪ್ರಹಾರಮಭಿಕಾಙ್ಕ್ಷತ ಆಶು ಪೃಷ್ಠಪಾದೌ ಪ್ರಗೃಹ್ಯ
ತೃಣರಾಜಶಿರೋsಹರತ್ ಸಃ ॥೧೩.೫೨॥
ಆ ಧೇನುಕನೆಂಬ ದೈತ್ಯನು
ಗಣಪತಿಯಿಂದ ವರವನ್ನು ಹೊಂದಿ, ಧೀರ್ಘವಾದ ಆಯುಷ್ಯವುಳ್ಳವನಾಗಿಯೂ, ಉತ್ಕೃಷ್ಟವಾದ
ಬಲವುಳ್ಳವನಾಗಿಯೂ, ಯುದ್ಧಪ್ರಿಯನೂ ಆಗಿದ್ದನು. ಯಾವಾಗಲೂ ಉದ್ಧತನಾಗಿದ್ದ ಅವನು ತಾಳೆಮರದಿಂದ
ಹಣ್ಣುಗಳನ್ನು ಕೆಳಗೆ ಬೀಳಿಸುತ್ತಿರುವ ಬಲರಾಮನನ್ನು ಕಂಡು
ಅಲ್ಲಿಗೆ ಓಡಿಬಂದನು. ಬಲರಾಮನಿಗೆ ಒದೆಯಬೇಕು
ಎಂದು ಇಚ್ಛಿಸುತ್ತಿರುವ ಆ ಧೇನುಕನ ಹಿಂಗಾಲನ್ನು
ಹಿಡಿದ ಶ್ರೀಕೃಷ್ಣನು, ಅವನನ್ನು ಎತ್ತಿ ಮೇಲಕ್ಕೆಸೆದನು. ಅದರಿಂದ ಧೇನುಕನ ಕತ್ತೆಯರೂಪದ ತಲೆ
ಕತ್ತರಿಸಲ್ಪಟ್ಟಿತು.
ತಸ್ಮಿನ್ ಹತೇ ಖರತರೇ ಖರರೂಪದೈತ್ಯೇ ಸರ್ವೇ ಖರಾಶ್ಚ
ಖರತಾಲವನಾನ್ತರಸ್ಥಾಃ ।
ಪ್ರಾಪುಃ ಖರಸ್ವರತರಾ ಖರರಾಕ್ಷಸಾರಿಂ ಕೃಷ್ಣಂ ಬಲೇನ
ಸಹಿತಂ ನಿಹತಾಶ್ಚ ತೇನ ॥೧೩.೫೩॥
ಅತ್ಯಂತ ಭಯಂಕರವಾದ ಕತ್ತೆಯ ರೂಪದಲ್ಲಿದ್ದ ದೈತ್ಯನು ಕೊಲ್ಲಲ್ಪಡುತ್ತಿರಲು,
ಆ ತೋಪಿನಲ್ಲಿರುವ ಎಲ್ಲಾ ಕತ್ತೆಗಳೂ ಕೂಡಾ (ಕತ್ತೆಯ ರೂಪದ ದೈತ್ಯರು) ಕೆಟ್ಟದ್ದಾಗಿ ಕಿರುಚುತ್ತಾ,
ರಾಕ್ಷಸರ ಶತ್ರುವಾಗಿರುವ ಬಲರಾಮನಿಂದ ಕೂಡಿಕೊಂಡ ಕೃಷ್ಣನನ್ನು ಹೊಂದಿದರು ಮತ್ತು ಶ್ರೀಕೃಷ್ಣನಿಂದ ಸಂಹರಿಸಲ್ಪಟ್ಟರೂ
ಕೂಡಾ.
ಸರ್ವಾನ್ ನಿಹತ್ಯ
ಖರರೂಪಧರಾನ್ ಸ ದೈತ್ಯಾನ್ ವಿಘ್ನೇಶ್ವರಸ್ಯ ವರತೋsನ್ಯಜನೈರವದ್ಧ್ಯಾನ್ ।
ಪಕ್ವಾನಿ ತಾಲಸುಫಲಾನಿ
ನಿಜೇಷು ಚಾದಾದ್ ದುರ್ವಾರಪೌರುಷಗುಣೋದ್ಭರಿತೋ ರಮೇಶಃ॥೧೩.೫೪॥
ಕತ್ತೆಯ ರೂಪ ಧರಿಸಿರುವ, ಗಣಪತಿಯ
ವರದಿಂದ ಉಳಿದವರಿಂದ ಕೊಲ್ಲಲಾಗದ ಎಲ್ಲಾ ದೈತ್ಯರನ್ನು ಕೊಂದು, ಯಾರೂ ತಡೆಯಲಾಗದ ಬಲವೆಂಬ ಗುಣದಿಂದ
ಕೂಡಿರುವ ಕೃಷ್ಣನು, ಹಣ್ಣಾಗಿರುವ ತಾಳೆಮರದ ಫಲಗಳನ್ನು ತನ್ನವರೆಲ್ಲರಿಗೆ ಕೊಟ್ಟನು.
No comments:
Post a Comment