ಸ ಪಾಣ್ಡವೈಃ ಸಮರ್ಚ್ಚಿತೋ
ಮಖಾಯ ಧರ್ಮ್ಮಜೇನ ಚ ।
ಪ್ರ ಪೃಷ್ಟ ಆಹ ಮಾಧವೋ
ವಚೋ ಜಗತ್ಸುಖಾವಹಮ್ ॥೨೧.೮೧॥
ಪಾಂಡವರಿಂದ ಅರ್ಚಿತನಾದ ಶ್ರೀಕೃಷ್ಣನು, ಧರ್ಮರಾಜನಿಂದ
ರಾಜಸೂಯಯಾಗದ ಕುರಿತು ಪ್ರಶ್ನಿಸಲ್ಪಟ್ಟವನಾಗಿ, ಜಗತ್ತಿಗೇ ಸುಖವನ್ನುಂಟುಮಾಡುವ ಮಾತನ್ನು ಹೇಳಿದನು.
ಕ್ರತುರ್ಯ್ಯಥಾ ವಿಧಾನತಃ
ಕೃತೋ ಹಿ ಪಾರಮೇಷ್ಠ್ಯಕಮ್ ।
ಪದಂ ನಯೇತ ತತ್ಪದೇ
ಸುಯೋಗ್ಯಮೇಷ ನಾನ್ಯಥಾ ॥೨೧.೮೨॥
ಶಾಸ್ತ್ರಪೂರ್ವಕವಾಗಿ ಮಾಡಿದ ರಾಜಸೂಯ ಯಾಗವು
ಬ್ರಹ್ಮಪದವಿಯನ್ನೇ ಕೊಡುತ್ತದೆ- ಆ ಪದವಿಯ ಯೋಗ್ಯತೆ ಇದ್ದರೆ ಹೊರತು ಬೇರೆ ರೀತಿಯಾಗಿ ಅಲ್ಲ.
[ಈ ಕುರಿತ ವಿವರ ಭಾಗವತದಲ್ಲಿ ಕಾಣಸಿಗುತ್ತದೆ: ‘ಯಕ್ಷ್ಯತಿ ತ್ವಾಂ ಮಖೇನ್ದ್ರೇಣ ರಾಜಸೂಯೇನ ಪಾಣ್ಡವಃ
। ನೃಪತಿಃ ಪಾರಮೇಷ್ಠ್ಯೇನ ತದ್ ಭವಾನನುಮೋದತಾಮ್’ (೧೦.೭೮.೪೧). ‘ಯುಧಿಷ್ಠಿರನು
ಯಜ್ಞದಲ್ಲಿ ಶ್ರೇಷ್ಠವಾಗಿರುವ, ಬ್ರಹ್ಮಪದವಿಯನ್ನು ಕೊಡಬಲ್ಲ ರಾಜಸೂಯಯಾಗದಿಂದ ನಿನ್ನನ್ನು ಪೂಜಿಸಲು ಬಯಸಿದ್ದಾನೆ. ಅದಕ್ಕೆ
ನೀನು ಅನುಮತಿ ಕೊಡಬೇಕು’ ಎಂದು ಧರ್ಮರಾಜನು ಕಳುಹಿಸಿದ ದೂತ ಕೃಷ್ಣನನ್ನು ಕುರಿತು ಹೇಳುವ ಮಾತು
ಇದಾಗಿದೆ. ಇದಲ್ಲದೇ, ಶತಪಥ ಬ್ರಾಹ್ಮಣದಲ್ಲೂ ಕೂಡಾ ಈ ಕುರಿತ ಮಾತನ್ನು ಕಾಣಬಹುದು].
ಬ್ರಹ್ಮಪದವಿಗೆ ಅಯೋಗ್ಯರಾದವರು(ಉದಾಹರಣೆಗೆ- ಸೋಮ, ವರುಣ, ಇಂದ್ರ.. ) ಈ ಯಾಗವನ್ನು ಮಾಡಿದರೆ ಅವರಿಗೆ ಏನು ಫಲ ಎನ್ನುವುದನ್ನು
ವಿವರಿಸುತ್ತಾರೆ-
ಅಯೋಗ್ಯಕಾನ್ಮಹಾಪದೇ ವಿಧಾತುರೇಷ ಹಿ ಕ್ರತುಃ ।
ಸಮಾನಯೋಗ್ಯತಾಗಣಾತ್ ಕರೋತಿ ಮುಕ್ತಿಗಂ ವರಮ್ ॥೨೧.೮೩॥
ಪುರಾ ತು ಮುಕ್ತಿತೋsಧಿಕಂ ಸ್ವಜಾತಿತಃ ಕರೋತಿ
ಚ ।
ಅತಸ್ತ್ರಿಶಙ್ಕುಪುತ್ರಕೋ ನೃಪಾನತೀತ್ಯ ವರ್ತ್ತತೇ ॥೨೧.೮೪॥
ಬ್ರಹ್ಮಪದವಿಗೆ ಅಯೋಗ್ಯರಾದವರನ್ನು ಈ ಯಾಗವು ಮುಕ್ತಿಯಲ್ಲಿರತಕ್ಕವನಾಗಿಯೂ, ತನ್ನ ಸಮಾನ ಯೋಗ್ಯತಾ ಗಣಕ್ಕಿಂತ ಶ್ರೇಷ್ಠರನ್ನಾಗಿಯೂ
ಮಾಡುತ್ತದೆ.
ಮುಕ್ತಿಯನ್ನು ಹೊಂದುವುದಕ್ಕೂ ಮೊದಲು, ತನಗೆ ಸರಿಸಮಾನ
ಯೋಗ್ಯತೆಯುಳ್ಳ ಗಣಗಳಿಗಿಂತ
ಉತ್ತಮಲೋಕವನ್ನು ಹೊಂದುವಂತೆ ಮಾಡುತ್ತದೆ. ಆ ಕಾರಣದಿಂದಲೇ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನು ತನಗೆ
ಸರಿಸಮಾನರಾದ ಕ್ಷತ್ರಿಯರನ್ನು ಮೀರಿ
ನಿಂತಿದ್ದಾನೆ.
ಸುರಾಂಶಕೋsಪಿ ತೇ ಪಿತಾ ವಿನಾ ಹಿ ರಾಜಸೂಯತಃ ।
ನ ಶಕ್ಷ್ಯತಿ ತ್ರಿಶಙ್ಕುಜಾದ್ ವರತ್ವಮಾಪ್ತುಮದ್ಯ ತು ॥೨೧.೮೫॥
ನಿನ್ನ ತಂದೆಯಾದ ಪಾಂಡುವು ದೇವತೆಗಳ ಅಂಶದಿಂದ ಕೂಡಿದ್ದರೂ ಕೂಡಾ
ರಾಜಸೂಯ ಯಾಗ ಮಾಡದೇ ಇದ್ದುದರಿಂದ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನಿಗಿಂತ ಶ್ರೇಷ್ಠತ್ವವನ್ನು ಹೊಂದಲು
ಶಕ್ತನಾಗಿಲ್ಲ.
[ಏಕೆ ಮರುದ್ಗಣೋತ್ತಮನಾದ ಪಾಂಡುವಿಗೆ ಈ ಸಮಸ್ಯೆ ಎದುರಾಯಿತು ಎನ್ನುವುದರ
ಹಿನ್ನೆಲೆಯನ್ನು ಹೇಳುತ್ತಾರೆ-]
ತಪಶ್ಚರನ್ ಸಮಾಗತೇ ಶಚೀಪತೌ ಪಿತಾ ತವ ।
ಮರುದ್ಗಣೋತ್ತಮಃ ಪುರಾ ನತೂತ್ಥಿತಃ ಶಶಾಪ ಸಃ ॥೨೧.೮೬॥
ಮರುದ್ಗಣೋತ್ತಮನಾದ ನಿನ್ನ ತಂದೆ ತಪಸ್ಸು ಮಾಡುತ್ತಿರುವಾಗ,
ಇಂದ್ರ ಬರುತ್ತಿರಲು ಎದ್ದು ನಿಲ್ಲಲಿಲ್ಲ. ಅದಕ್ಕಾಗಿ ಅವನನ್ನು ಇಂದ್ರ ಶಪಿಸಿದ.
ವ್ರಜಸ್ವ ಮಾನುಷೀಂ ತನುಂ ತತೋ ಮೃತಃ ಪುನರ್ದ್ಧಿವಮ್ ।
ಗತೋsಪಿ ನ ಸ್ವಕಾಂ ತನುಂ ಪ್ರವೇಷ್ಟುಮತ್ರ ನೇಶಸೇ ॥೨೧.೮೭॥
ತದಾsಧಿಕಸ್ತ್ರಿಶಙ್ಕುಜೋ ಭವಿಷ್ಯತು ತ್ವದಿತ್ಯಥ ।
ಕ್ಷಮಾಪಿತಶ್ಚ ವಾಸವೋ ಜಗಾದ ರಾಜಸೂಯತಃ ।
ತ್ರಿಶಙ್ಕುಜಾಧಿಕೋ ಭವಾನವಾಪ್ಸ್ಯತಿ ಸ್ವಕಾಂ ತನುಮ್ ॥೨೧.೮೮॥
‘ಮನುಷ್ಯದೇಹವನ್ನು ಹೊಂದು, ನಂತರ ಮಾನವ ದೇಹ ತೊರೆದಮೇಲೆ ಮತ್ತೆ
ಉನ್ನತಲೋಕಕ್ಕೆ ಹೋದರು ಕೂಡಾ, ನಿನ್ನ ಸ್ವರೂಪಭೂತ ದೇಹವನ್ನು ಪ್ರವೇಶಿಸಲು ನೀನು ಶಕ್ತನಾಗುವುದಿಲ್ಲ. ಆಗ ತ್ರಿಶಂಕು ಪುತ್ರನಾದ ಹರಿಶ್ಚನ್ದ್ರನು ನಿನಗಿಂತಲೂ
ಮಿಗಿಲಾಗಿರುವನು’ -ಎನ್ನುವ ಶಾಪ.
ಆಗ ಮರುದ್ಗಣೋತ್ತಮ ಕ್ಷಮೆ ಬೇಡಿದ. ಬೇಡಿಕೊಂಡಾದ ಮೇಲೆ
ಇಂದ್ರನು - ರಾಜಸೂಯ ಯಾಗದಿಂದ ನೀನು ಹರಿಶ್ಚಂದ್ರನಿಗಿಂತ ಮಿಗಿಲಾಗಿ, ನಿನ್ನ ಮೂಲರೂಪವನ್ನು
ಪ್ರವೇಶಮಾಡುತ್ತೀಯ’ ಎಂದ.
ಅತಃ ಸುಕಾರ್ಯ್ಯ ಏವ ತೇ ಯುಧಿಷ್ಠಿರ ಕ್ರತೂತ್ತಮಃ ।
ಭವದ್ಭಿರಪ್ಯವಾಪ್ಯತೇ ಸ್ವಯೋಗ್ಯತಾsಮುನಾsಖಿಲಾ ॥೨೧.೮೯॥
ಓ ಯುಧಿಷ್ಠಿರನೇ, ಈ ಎಲ್ಲಾ
ಕಾರಣದಿಂದ ನಿನ್ನಿಂದ ಯಾಗಗಳಲ್ಲಿ ಶ್ರೇಷ್ಠವಾದ ರಾಜಸೂಯ ಯಾಗವು ಮಾಡಲ್ಪಡಬೇಕಾದದ್ದೇ ಆಗಿದೆ. (ಕೇವಲ
ನಿನ್ನ ಅಪ್ಪನಿಗಷ್ಟೇ ಇದರಿಂದ ಪ್ರಯೋಜನವಲ್ಲ), ನಿಮಗೂ ಕೂಡಾ ನಿಮ್ಮ
ಯೋಗ್ಯತೆಗೆ ಅನುಗುಣವಾದ ಫಲವು ಇದರಿಂದ ಹೊಂದಲ್ಪಡುತ್ತದೆ.