ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 1, 2021

Mahabharata Tatparya Nirnaya Kannada 21: 29-33

 

ವಹ್ನಿಂ ವಿವಿಕ್ಷನ್ತಮಮುಂ ನಿವಾರ್ಯ್ಯ ಯಯೌ ಸವಿಪ್ರಃ  ಸಹಫಲ್ಗುನೋ ಹರಿಃ ।

ಆಶಾಮುದೀಚೀಂ ಬೃಹತಾ ರಥೇನ ಕ್ಷಣೇನ ತೀರ್ತ್ತ್ವೈವ ಚ ಸಪ್ತವಾರಿಧೀನ್             ॥೨೧.೨೯॥

 

ತದನಂತರ ಬೆಂಕಿಯನ್ನು ಪ್ರವೇಶಮಾಡಲು ಬಯಸುವ ಅರ್ಜುನನನ್ನು ತಡೆದ ಕೃಷ್ಣನು, ಬ್ರಾಹ್ಮಣ ಹಾಗೂ ಅರ್ಜುನನೊಂದಿಗೆ ಕೂಡಿಕೊಂಡು, ಬೃಹತ್ ರಥವನ್ನೇರಿ, ಉತ್ತರದಿಕ್ಕಿನಲ್ಲಿ, ಕ್ಷಣದಲ್ಲಿ ಏಳು ಸಮುದ್ರಗಳನ್ನು ದಾಟಿ ತೆರಳಿದನು.

 

ದದುಶ್ಚ ಮಾರ್ಗ್ಗಂ ಗಿರಯೋsಬ್ಧಯಸ್ತಥಾ ವಿದಾರ್ಯ್ಯ ಚಕ್ರೇಣ ತಮೋsನ್ಧಮೀಶಃ ।

ಘನೋದಕಂ ಚಾಪ್ಯತಿತೀರ್ಯ್ಯ ತತ್ರ ದದರ್ಶ ಧಾಮ ಸ್ವಮನನ್ತವೀರ್ಯ್ಯಃ             ॥೨೧.೩೦॥

 

ಪರ್ವತಗಳೂ ಸಮುದ್ರಗಳೂ ಅವರಿಗೆ ದಾರಿಯನ್ನು ಕೊಟ್ಟವು. ಕೃಷ್ಣನು ಚಕ್ರದಿಂದ ದಟ್ಟವಾದ ಕತ್ತಲನ್ನು(ಅನ್ಧಂತಮಸ್ಸನ್ನು) ಕತ್ತರಿಸಿ, ಘನೋದಕವನ್ನೂ ದಾಟಿ, ಅಪ್ರಾಕೃತವಾದ ತನ್ನ ಮನೆಯನ್ನು ಕಂಡನು.

[ಹರಿವಂಶದ ವಿಷ್ಣುಪರ್ವದಲ್ಲಿ(೧೧೨.೩೦) ಈ ಕುರಿತ ವಿವರವಿದೆ: ‘ತತಃ ಸಮಾಸ್ಥಾಯ ರಥಂ ಕೃಷ್ಣೋsಹಂ ಬ್ರಾಹ್ಮಣಃ ಸ ಚ । ಪ್ರಯಾತಾಃ ಸ್ಮ ದಿಶಂ ಸೌಮ್ಯಾಮುದೀಚೀಂ ಕೌರವರ್ಷಭ’  ‘ತದನಂತರ ನಾನು, ಬ್ರಾಹ್ಮಣ ಮತ್ತು ಕೃಷ್ಣ ರಥವನ್ನು ಏರಿ ಉತ್ತರ ದಿಕ್ಕನ್ನು ಕುರಿತು ಹೊರಟೆವು’ ಎಂದು ಅರ್ಜುನ ಯುಧಿಷ್ಠಿರನಲ್ಲಿ ಹೇಳಿದ ಮಾತು ಇದಾಗಿದೆ. ಇನ್ನು ಭಾಗವತ (೧೦.೧೦೦.೨೪) ಹೀಗೆ ಹೇಳುತ್ತದೆ: ಸಹೈವ ರಥಮಾಸ್ಥಾಯ ಪ್ರಾಚೀಂ ದಿಶಮವೀವಿಷತ್’ – ಇಲ್ಲಿ ಪೂರ್ವದಿಕ್ಕಿನತ್ತ ಹೊರಟರು ಎಂದು ಹೇಳಿದಂತೆ ಕಾಣುತ್ತದೆ. ವಸ್ತುತಃ ಪೂರ್ವದಿಕ್ಕಿನಿಂದ(ದ್ವಾರಕೆಯಿಂದ) ಹೊರಟರು ಎನ್ನುವುದನ್ನು ಭಾಗವತ ಹೇಳಿದೆ ಎಂದು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ಭಾಗವತಲ್ಲೇ  ಮುಂದೆ (೧೦.೧೦೦.೫೫) ಸಪ್ತ ದ್ವೀಪಾನ್ ಸ ಸಿನ್ಧೂಂಶ್ಚ ಸಪ್ತ ಸಪ್ತ ಗಿರಿನಥ’ ಏಳು ಗಿರಿಗಳನ್ನು, ಏಳು  ಸಮುದ್ರಗಳನ್ನು ನಿರಾಯಾಸವಾಗಿ ದಾಟಿದರು ಎಂದು ಹೇಳಿರುವುದನ್ನು ನಾವು ಕಾಣಬಹುದು.

ಇಲ್ಲಿ ಆಚಾರ್ಯರು ‘ವಿದಾರ್ಯ ಚಕ್ರೇಣ ತಮೋsನ್ಧಮೀಶಃ’ ಎಂದು ಹೇಳಿದ್ದಾರೆ. ಅಂದರೆ ಗಟ್ಟಿಯಾದ ಕತ್ತಲನ್ನು ಕತ್ತರಿಸಿ ದೇವರು ಮುಂದೆ ಹೋದ ಎಂದರ್ಥ. ಭಾಗವತದಲ್ಲಿಯೂ ‘ಅನ್ಧಂತಮಃ’ ಎಂದು ಹೇಳಿರುವುದು ಕಾಣಸಿಗುತ್ತದೆ. ಇದನ್ನು ಹಿನ್ನೆಲೆಯಾಗಿ ಬಳಸಿ ವ್ಯಾಸತೀರ್ಥರು ‘ಕತ್ತಲಿಗೆ ಒಂದು ಪ್ರತ್ಯೇಕವಾದ ಅಸ್ತಿತ್ವವಿದೆ, ತಮಸ್ಸು ಎನ್ನುವುದು ಒಂದು ದ್ರವ್ಯ. ಅನ್ಧಂತಮಃ  ಎಂದರೆ ಕೇವಲ ಬೆಳಕು ಇಲ್ಲದಿರುವಿಕೆ ಅಲ್ಲ’ ಎಂದು ವಿವರಿಸಿರುವುದನ್ನು ನಾವು ಕಾಣಬಹುದು.]

 

ಸಂಸ್ಥಾಪ್ಯ ದೂರೇ ಸರಥಂ ಸವಿಪ್ರಂ ಪಾರ್ತ್ಥಂ ಸ್ವರೂಪೇ ದ್ವಿಚತುಷ್ಕಬಾಹೌ ।

ಸಮಸ್ತರತ್ನೋಜ್ಜ್ವಲದಿವ್ಯಭೂಷಣೇ ವಿವೇಶ ನಿತ್ಯೋರುಗುಣಾರ್ಣ್ಣವೇ ಪ್ರಭುಃ             ॥೨೧.೩೧॥

 

ದೂರದಲ್ಲಿ ರಥದಿಂದ ಕೂಡಿರುವ ಬ್ರಾಹ್ಮಣನಿಂದ ಕೂಡಿರುವ ಅರ್ಜುನನನ್ನು ನಿಲ್ಲಿಸಿ, ಎಂಟು ಕೈಗಳುಳ್ಳ, ಎಲ್ಲಾ ರತ್ನಗಳಿಂದ, ಉಜ್ವಲವಾಗಿ ಹೊಳೆಯುತ್ತಿರುವ ಭೂಷಣಗಳನ್ನು ಒಳಗೊಂಡ ತನ್ನ ಮೂಲರೂಪದಲ್ಲಿ ಸರ್ವಸಮರ್ಥನಾದ ಆ ಕೃಷ್ಣನು ಪ್ರವೇಶಿಸಿದನು.

[ಅರ್ಜುನ-ಬ್ರಾಹ್ಮಣರನ್ನು  ದೂರದಲ್ಲಿ ನಿಲ್ಲಿಸಿ ಕೃಷ್ಣ ತನ್ನ ಭವನವನ್ನು ಪ್ರವೇಶ ಮಾಡಿದ. ಆದರೆ ತನ್ನ ರೂಪಗಳೆಲ್ಲವನ್ನೂ ಅವರು ಕಾಣುವಂತೆ ಕರುಣಿಸಿದ.]    

 

ಸಹಸ್ರಮೂರ್ದ್ಧನ್ಯುರುಶೇಷಭೋಗ ಆಸೀನರೂಪೇsಮಿತಸೂರ್ಯ್ಯದೀಧಿತೌ ।

ರಮಾಸಹಾಯೇ ತಟಿದುಜ್ಜ್ವಲಾಮ್ಬರೇ ಮುಕ್ತೈರ್ವಿರಿಞ್ಚಾದಿಭಿರರ್ಚ್ಚಿತೇ ಸದಾ             ॥೨೧.೩೨॥

 

ಸ್ಥಿತ್ವೈಕರೂಪೇಣ ಮುಹೂರ್ತ್ತಮೀಶ್ವರೋ ವಿನಿರ್ಯ್ಯಯೌ ವಿಪ್ರಸುತಾನ್ ಪ್ರಗೃಹ್ಯ ।

ಸುನನ್ದನನ್ದಾದಯ ಏವ ಪಾರ್ಷದಾಸ್ತೇ ವೈಷ್ಣವಾ ಭೂಮಿತಳೇ ಪ್ರಜಾತಾಃ             ॥೨೧.೩೩॥

 

ಅನಂತವಾದ ತಲೆಗಳುಳ್ಳ, ಉತ್ಕೃಷ್ಟವಾಗಿರುವ ಮುಕ್ತಶೇಷನ ಮೈಯಲ್ಲಿ ಕುಳಿತಿರುವ, ಎಣೆಯಿರದಷ್ಟು  ನೇಸರರ ಕಾಂತಿಯುಳ್ಳ, ಲಕ್ಷ್ಮೀದೇವಿಯಿಂದ ಕೂಡಿರುವ, ಮಿಂಚಿನಂತಹ ಬಣ್ಣದ ಬಟ್ಟೆಯನ್ನು ತೊಟ್ಟಿರುವ, ಮುಕ್ತರಾಗಿರುವ ಬ್ರಹ್ಮಾದಿ ದೇವತೆಗಳಿಂದ ಪೂಜಿಸಲ್ಪಟ್ಟ ಆ ಮೂಲರೂಪದಲ್ಲಿ ಈ ಭೂವಿಷ್ಟವಾದ ಕೃಷ್ಣರೂಪದಿಂದ ಪ್ರವೇಶಿಸಿ,  ಸ್ವಲ್ಪಕಾಲ ಇದ್ದ ಸರ್ವಸಮರ್ಥನಾದ ಕೃಷ್ಣನು, ಬ್ರಾಹ್ಮಣನ ಮಕ್ಕಳೊಂದಿಗೆ ಹೊರಬಂದ. ಸುನಂದ, ನಂದ, ಕುಮುದ, ಕುಮುದಾಕ್ಷ ಎನ್ನುವ ಹೆಸರಿನ ಅವರು ವಿಷ್ಣುಲೋಕಪಾಲಕರು. ಭೂಮಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಅವರೇ ಹುಟ್ಟಿರುವುದು. ಅವರೇ ಮಾಯವಾಗಿ ಅಲ್ಲಿಗೆ ಹೋಗುತ್ತಿದ್ದರು.

[ಇಲ್ಲಿ ಭಗವಂತನ ಅವತಾರ ರೂಪಕ್ಕೂ ಮೂಲರೂಪಕ್ಕೂ ಭೇದವಿಲ್ಲ ಎನ್ನುವುದನ್ನು ಭಗವಂತ ಮತ್ತೆ ತೋರಿಸಿರುವುದನ್ನು ಕಾಣಬಹುದು. ಭಗವಂತನ ಸಂಕಲ್ಪದಂತೆ ಈ ದ್ವಾರಪಾಲಕರು ಭೂಮಿಯಲ್ಲಿ ಹುಟ್ಟಿದಾಕ್ಷಣ ಮಾಯವಾಗಿ ಅಲ್ಲಿಗೆ ಹೋಗುತ್ತಿದ್ದರು. ಪರಮಾತ್ಮನ ಸಂಕಲ್ಪಕ್ಕೆ ವಿರುದ್ಧವಾಗಿ ಯಾವುದೇ ದಿಗ್ಬಂಧನ ಕೆಲಸ ಮಾಡಲು ಸಾಧ್ಯವಿಲ್ಲ.  

ಪೂಜೆಯಲ್ಲಿ ನಾವು ಸಂಕಲ್ಪಮಾಡುವ ದ್ವಾರಪಾಲಕರೆಲ್ಲರೂ ಆ ಕಾಲದಲ್ಲಿ ಭೂಮಿಯಲ್ಲಿ ಹುಟ್ಟಿರುವುದು ಇಲ್ಲಿ ನಮಗೆ ತಿಳಿಯುತ್ತದೆ. ಜಯ-ವಿಜಯರು ಶಿಶುಪಾಲ-ದಂತವಕ್ರರಾಗಿ, ಗದ-ಸಾರಣರು ಚಂಡ-ಪ್ರಚಂಡರಾಗಿ, ಸುನಂದ, ನಂದ, ಕುಮುದ ಮತ್ತು ಕುಮುದಾಕ್ಷ ಎನ್ನುವ ನಾಲ್ಕು ಜನ ಈ ಬ್ರಾಹ್ಮಣನ ಮಕ್ಕಳಾಗಿ  ಹುಟ್ಟಿದ್ದರು.

ಅರ್ಜುನ ತನಗಾದ ಈ ಅಚ್ಚರಿಯ ಅನುಭವವನ್ನು ಧರ್ಮರಾಜನೊಂದಿಗೆ ಹಂಚಿಕೊಳ್ಳುವ ವಿವರವನ್ನು ಹರಿವಂಶ(ವಿಷ್ಣುಪರ್ವ ೧೧೩.೧೮-೧೯) ವಿವರಿಸುತ್ತದೆ:  ಪ್ರದದುಃ ಕಾಮತೋ ಮಾರ್ಗಂ ಗಚ್ಛತೋ ಭರತರ್ಷಭ ತತ್ರೈವಾನ್ತರ್ಹಿತಾಃ  ಸರ್ವೇ ತದಾಶ್ಚರ್ಯತರಂ ಮಮ । ಅಸಕ್ತಂ ಚ ರಥೋ  ಯಾತಿ ಮೇಘಜಾಲೇಶ್ವಿವಾಂಶುಮಾನ್

ದ್ವಿಚತುಷ್ಕಬಾಹೌ’ ಎಂದು ಆಚಾರ್ಯರು ಇಲ್ಲಿ ಹೇಳಿರುವುದನ್ನು  ಭಾಗವತದಲ್ಲಿ(೧೦.೧೦೦.೬೩)  ಪ್ರಲಮ್ಬಚಾರ್ವಷ್ಟಭುಜಮ್’ ಎಂದು ವಿವರಿಸಿರುವುದನ್ನು ಕಾಣಬಹುದು. ಅದೇ ರೀತಿ  ಸಹಸ್ರಮೂರ್ದ್ಧನ್ಯುರುಶೇಷಭೋಗ’ ಎನ್ನುವ ಮಾತು ಭಾಗವತದಲ್ಲಿ(೧೦.೧೦೦.೬೧) ‘ಸಹಸ್ರಮೂರ್ಧನ್ಯಫಣಾಮಣಿದ್ಯುತಿಮ್’ ಎಂದು ಹೇಳಲ್ಪಟ್ಟಿದೆ.

ಶ್ರೀಕೃಷ್ಣ ಬ್ರಾಹ್ಮಣನ ನಾಲ್ಕು ಜನ ಮಕ್ಕಳೊಂದಿಗೆ  ತನ್ನ ಮನೆಯಿಂದ ಹೊರಬಂದ ಎಂದು ಹರಿವಂಶ (ವಿಷ್ಣುಪರ್ವ ೧೧೩.೨೭)  ವಿವರಿಸುವುದನ್ನು ಕಾಣಬಹುದು: ‘ಸ ಮಹೂರ್ತಾತ್ ತತಃ ಕೃಷ್ಣೋ ನಿಶ್ಚಕ್ರಾಮ ತದಾ ಪ್ರಭುಃ । ಚತುರೋ ಬಾಲಕಾನ್ ಗೃಹ್ಯ ಬ್ರಾಹ್ಮಣಾಸ್ಯಾsತ್ಮಜಾಂಸ್ತದ’ ]

No comments:

Post a Comment