ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 17, 2021

Mahabharata Tatparya Nirnaya Kannada 21: 42-49

                        ಕಿಮೇತದ್ ದೃಷ್ಟಮಿತ್ಯೇವ ತೇನ ಪೃಷ್ಟೋ ರಮಾಪತಿಃ ।

ಅಯಂ ದ್ವೀಪಃ ಸಾಗರಶ್ಚ ಲಕ್ಷಯೋಜನವಿಸ್ತೃತೌ                      ॥೨೧.೪೨॥

 

‘ನಿನ್ನಿಂದ ನೋಡಲ್ಪಟ್ಟದ್ದು ಯಾವುದು ಎಂದು ಅರ್ಜುನನಿಂದ ಕೇಳಲ್ಪಟ್ಟ ರಮಾಪತಿ ಹೇಳುತ್ತಾನೆ: ‘ಜಂಬೂ ದ್ವೀಪವೂ ಇದನ್ನು ಆವರಿಸಿಕೊಂಡ ಸಾಗರವೂ ಲಕ್ಷಯೋಜನ ವಿಸ್ತಾರವುಳ್ಳದ್ದು.

[ವಿಷ್ಣುಪುರಾಣ(೨.೩.೨೭-೨೮): ‘ನವವರ್ಷಂ ತು ಮೈತ್ರೇಯ ಜಂಬೂ ದ್ವೀಪಮಿದಂ ಮಯಾ । ಲಕ್ಷಯೋಜನವಿಸ್ತಾರಂ ಸಙ್ಕ್ಷೇಪಾತ್ ಕಥಿತಂ ತವ । ಜಂಬೂದ್ವೀಪಂ ಸಮಾವೃತ್ಯ ಲಕ್ಷಯೋಜನಾವಿಸ್ತರಃ । ಮೈತ್ರೇಯ ವಲಯಾಕಾರಃ ಸ್ಥಿತಃ ಕ್ಷಾರೋದಧಿರ್ಭಹಿಃ’]

 

ತದನ್ಯೇ ತು ಕ್ರಮೇಣೈವ ದ್ವಿಗುಣೇನೋತ್ತರೋತ್ತರಾಃ ।

ಅನ್ತ್ಯಾದ್ಧ್ಯರ್ದ್ಧಸ್ಥಲಂ ಹೈಮಂ ಬಾಹ್ಯತೋ ವಾಜ್ರಲೇಪಿಕಮ್       ॥೨೧.೪೩॥

 

ಅದಕ್ಕಿಂತ ಅತಿರಿಕ್ತವಾದ ಎಲ್ಲಾ ದ್ವೀಪ-ಸಮುದ್ರಗಳೂ ಕೂಡಾ ಕ್ರಮವಾಗಿ ಒಂದಕ್ಕಿಂತ ಒಂದು ಎರಡುಪಟ್ಟು ಹೆಚ್ಚು ವಿಸ್ತಾರವುಳ್ಳದ್ದು. ಶುದ್ಧೋದಕದ ವಿಸ್ತಾರ ಏನಿದೆ, ಅದಕ್ಕಿಂತ ಒಂದೂವರೆ ಪಟ್ಟು ವಿಸ್ತಾರವಾಗಿ  ವಜ್ರಲೇಪವುಳ್ಳ ಪ್ರದೇಶವಿದೆ.

[ವಿಷ್ಣುಪುರಾಣ( ೨.೨.೫-೬) ಜಂಬೂಪ್ಲಕ್ಷಾಹ್ವಯೌ ದ್ವೀಪೌ ಶಾಲ್ಮಲಶ್ಚಾಪರೋ ದ್ವಿಜ । ಕುಶಃ ಕ್ರೌಞ್ಚಸ್ತಥಾ ಶಾಕಃ ಪುಷ್ಕರಶ್ಚೈವ ಸಪ್ತಮಃ ।  ಎತೇ ದ್ವೀಪಾಃ ಸಮುದ್ರೈಸ್ತು ಸಪ್ತ ಸಪ್ತಭಿರಾವೃತಾಃ । ಲವಣೇಕ್ಷುಸುರಾಸರ್ಪಿರ್ದಧಿದುಗ್ಧಜಲೈಃ ಸಮಮ್’ ಜಂಬೂ, ಪ್ಲಕ್ಷ, ಶಾಲ್ಮಲ, ಕುಶ,  ಕ್ರೌಞ್ಚ  ಶಾಕಃ ಮತ್ತು ಪುಷ್ಕರ ಎನ್ನುವ ಏಳುದ್ವೀಪಗಳಿವೆ. ಇವು ಏಳು ಸಮುದ್ರಗಳಿಂದ ಆವೃತವಾಗಿವೆ. ಅವುಗಳೆಂದರೆ: ಲವಣ(ಉಪ್ಪು), ಇಕ್ಷು(ಕಬ್ಬಿನರಸ), ಸುರಾ(ಮದ್ಯ), ಸರ್ಪಿಃ(ಘೃತ -ತುಪ್ಪ), ದಧಿ(ಮೊಸರು), ದುಗ್ಧ(ಹಾಲು) ಮತ್ತು ಶುದ್ಧೋದಕ].

 

ಏತತ್ ಸರ್ವಂ ಲೋಕನಾಮ ಹ್ಯೇತಸ್ಮಾದ್ ದ್ವಿಗುಣಂ ತಮಃ ।

ಅನ್ಧಂ ಯತ್ರ ಪತನ್ತ್ಯುಗ್ರಾ ಮಿಥ್ಯಾಜ್ಞಾನಪರಾಯಣಾಃ                 ॥೨೧.೪೪॥

 

ಇದೆಲ್ಲವೂ ಸೇರಿದರೆ ಅದು ಸೂರ್ಯನ ಬೆಳಕು ಓಡಾಡುವ ಪ್ರದೇಶ ಅಂದರೆ ‘ಲೋಕ. ಈ ಲೋಕಕ್ಕಿಂತ  ಎರಡುಪಟ್ಟು ಕತ್ತಲೆ (ಅನ್ಧಂತಮ) ಇದೆ. ಮಿಥ್ಯಾಜ್ಞಾನಪರಾಯಣರಾಗಿರುವವರು ಈ ಅನ್ಧಂತಮದಲ್ಲೇ ಬೀಳುತ್ತಾರೆ.

 

ಘನೋದಕಂ ತದ್ದ್ವಿಗುಣಂ ತದನ್ತೇ ಧಾಮ ಮಾಮಕಮ್ ।

ಯತ್ತದ್ ದೃಷ್ಟಂ ತ್ವಯಾ ಪಾರ್ತ್ಥ ತತ್ರ ಮುಕ್ತೈರಜಾದಿಭಿಃ           ॥೨೧.೪೫॥

 

ಸೇವ್ಯಮಾನಃ ಸ್ಥಿತೋ ನಿತ್ಯಂ ಸರ್ವೈಃ ಪರಮಪೂರುಷಃ ।

ಲೋಕಾಲೋಕಪ್ರದೇಶಸ್ತು ಪಞ್ಚಾಶಲ್ಲಕ್ಷವಿಸ್ತೃತಃ                       ॥೨೧.೪೬॥

 

ಸಪಞ್ಚಾಶತ್ಸಹಸ್ರಶ್ಚ ತಸ್ಯಾಪಿ ಗಣನಂ ತಥಾ ।

ಯೋಜನಾನಾಂ ಪಞ್ಚವಿಂಶತ್ಕೋಟಯೋ ಮೇರುಪರ್ವತಾತ್ ॥೨೧.೪೭॥

 

ಚತಸೃಷ್ವಪಿ ದಿಕ್ಷೂರ್ಧ್ವಮಧಶ್ಚಾಣ್ಡಂ ಪ್ರಕೀರ್ತ್ತಿತಮ್ ।  

ಅಬಗ್ನೀರನಭೋಹಙ್ಕೃನ್ಮಹತ್ತತ್ವಗುಣತ್ರಯೈಃ                           ॥೨೧.೪೮॥

 

ಕ್ರಮಾದ್ ದಶೋತ್ತರೈರೇತದಾವೃತಂ ಪರತಸ್ತತಃ ।

ವ್ಯಾಪ್ತೋsಹಂ ಸರ್ವಗೋsನನ್ತೋsನನ್ತರೂಪೋ ನಿರನ್ತರಃ      ॥೨೧.೪೯॥

 

ಅನ್ಧಂತಮಕ್ಕಿಂತ ಎರಡುಪಟ್ಟು ಮಿಗಿಲಾಗಿ ಘನೋದಕವಿದೆ. ಅದರ ನಂತರ ನನ್ನ ಧಾಮವಿದೆ. ಅದನ್ನೇ ನೀನು ನೋಡಿರುವುದು. ಅಲ್ಲಿ ಪರಮಪುರುಷನಾದ ನಾನು ಮುಕ್ತರಾದ ಸಮಸ್ತ ಬ್ರಹ್ಮಾದಿದೇವತೆಗಳಿಂದ,  ಇತರ ಮುಕ್ತರಿಂದ  ಸೇವ್ಯನಾಗಿದ್ದೇನೆ.

ಲೋಕಾಲೋಕ ಪ್ರದೇಶವಾದರೋ ಐವತ್ತುಸಾವಿರ ಯೋಜನದಿಂದ ಸಹಿತವಾದ ಐವತ್ತು ಲಕ್ಷ ಯೋಜನ ವಿಸ್ತಾರವಾಗಿದೆ. (ಇದೇ ಸರಿಯಾದ ಗುಣಿತವಾಗಿದೆ.ಪುರಾಣದ ಕೆಲವು ಕಡೆ ಪೂರ್ಣಾಂಕವಾಗಿ ಐವತ್ತುಲಕ್ಷ ಯೋಜನ ಎಂದು ಹೇಳಿರುವುದನ್ನು ಕಾಣುತ್ತೇವೆ.  ಅದನ್ನು ತಾತ್ಪರ್ಯ ಗ್ರಾಹಕವಾಗಿ ಈ ರೀತಿ ಸ್ವೀಕರಿಸಬೇಕು). ಇದೆಲ್ಲದಕ್ಕಿಂತ ಹಿರಿದಾದ ಪರ್ವತ ಮೇರುಪರ್ವತ. ಈ ಬ್ರಹ್ಮಾಂಡ  ಜಂಬೂ ದ್ವೀಪದ ಕೇಂದ್ರದಿಂದ  ಸುಮಾರು ಇಪ್ಪೈತೈದು ಕೋಟಿ ಯೋಜನ ಮೇಲೆ ಮತ್ತು ಕೆಳಗಿದೆ. ನಾಲ್ಕೂ ದಿಕ್ಕುಗಳಲ್ಲಿ ಮೇಲ್ಗಡೆಯೂ, ಕೆಳಗಡೆಯೂ ಈರೀತಿಯಾದ ಪರಿಮಾಣವನ್ನು ತಿಳಿಯತಕ್ಕದ್ದು. (ಅಂದರೆ ಆಳ ಎಷ್ಟಿದೆಯೋ ಅಗಲವೂ ಅಷ್ಟೇ ಇದೆ. ನಾಲ್ಕೂ ದಿಕ್ಕುಗಳಲ್ಲಿ ವ್ಯಾಪ್ತವಾಗಿದೆ. ಇದು ಬ್ರಹ್ಮಾಂಡದ ಸ್ಥೂಲವಾದ ಲೆಕ್ಕಾಚಾರ). ಇಂತಹ ಬ್ರಹ್ಮಾಂಡ ಆವರಣಗಳಿಂದ ಒಡಗೂಡಿದೆ. ನೀರಿನ ಆವರಣ, ಬೆಂಕಿಯ ಆವರಣ, ಗಾಳಿ-ಆಕಾಶದ ಆವರಣ, ಅಹಂಕಾರತತ್ವದ ಆವರಣ, ಮಹತತ್ವದ ಆವರಣ ಮತ್ತೆ ಮೂರು ಗುಣಗಳ(ತಮ, ರಜ ಮತ್ತು ಸತ್ವಗುಣಗಳ) ಆವರಣ. ಇಲ್ಲಿ ಪ್ರತಿಯೊಂದು ಆವರಣವೂ ಕೂಡಾ ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಹತ್ತು ಪಟ್ಟು  ವಿಸ್ತಾರವಾಗಿದೆ. ಇವೆಲ್ಲವುದರ ಆಚೆ ನಾನು ವ್ಯಾಪ್ತನಾಗಿದ್ದೇನೆ. ಎಲ್ಲೆಡೆ ಇದ್ದೇನೆ. ನನಗೆ ಕೊನೆ ಎನ್ನುವುದಿಲ್ಲ.(ಅನಂತ ರೂಪವುಳ್ಳವನಾಗಿದ್ದೇನೆ. ಈ  ಬ್ರಹ್ಮಾಂಡದ ಪರಮಾಣು-ಪರಮಾಣುವನ್ನೂ  ಕೂಡಾ ನಾನು ವ್ಯಾಪಿಸಿದ್ದೇನೆ).  

 

[ಮೇರುಪರ್ವತದ ಕೇಂದ್ರದಿಂದ ಲವಣ ಸಾಗರದ ತನಕ  ಜಂಬೂದ್ವೀಪ  ೫೦,೦೦೦ ಯೋಜನ. ನಂತರ ಲವಣಸಮುದ್ರ ೧,೦೦೦೦೦ ಯೋಜನ ವಿಸ್ತಾರ.  ಹಾಗೆಯೇ ಪ್ಲಕ್ಷದ್ವೀಪ ೨,೦೦೦೦೦ ಯೋಜನ, ಅದನ್ನು ಆವರಿಸಿರುವ ಇಕ್ಷುಸಮುದ್ರದ ವಿಸ್ತಾರವೂ ೨,೦೦೦೦೦ ಯೋಜನ. ನಂತರ ಶಾಲ್ಮಲದ್ವೀಪ ೪,೦೦೦೦೦ ಯೋಜನ ಮತ್ತು ಅದನ್ನು ಆವರಿಸಿರುವ ಸುರಸಮುದ್ರವು ೪,೦೦೦೦೦ ಯೋಜನ ವಿಸ್ತಾರವುಳ್ಳದ್ದು. ಕುಶದ್ವೀಪ ೮,೦೦೦೦೦ ಯೋಜನವಾದರೆ ಘೃತಸಮುದ್ರ ೮,೦೦೦೦೦ ಯೋಜನ. ಕ್ರೌಞ್ಚದ್ವೀಪ ೧೬,೦೦೦೦೦ ಯೋಜನ ಮತ್ತು ದಧಿಸಮುದ್ರ ೧೬,೦೦೦೦೦ ಯೋಜನ. ಶಾಕದ್ವೀಪ ೩೨,೦೦೦೦೦ ಯೋಜನ ಮತ್ತು ಕ್ಷೀರಸಾಗರ ೩೨,೦೦೦೦೦ ಯೋಜನ,  ನಂತರ ಪುಷ್ಕರದ್ವೀಪ ೬೪,೦೦೦೦೦ ಯೋಜನವಾದರೆ ಶುದ್ಧೋದಕ  ೬೪,೦೦೦೦೦ ಯೋಜನ. ವಜ್ರಲೇಪಿತ ಪ್ರದೇಶ ೧.೫X೬೪,೦೦೦೦೦=೯೬,೦೦,೦೦೦ ಯೋಜನ ವಿಸ್ತಾರ. ಇವಿಷ್ಟನ್ನು ‘ಲೋಕ’ ಎಂದು ಕರೆಯುತ್ತಾರೆ. ಅಂದರೆ ಲೋಕದ ವಿಸ್ತಾರ ಜಂಬೂದ್ವೀಪದ ಮಧ್ಯದಿಂದ ೩,೪೯,೫೦,೦೦೦ ಯೋಜನ. ಲೋಕಾಲೋಕಪರ್ವತ ಪ್ರದೇಶ ೫೦,೫೦,೦೦೦ ಯೋಜನ. ಲೋಕಮಾನದ ದ್ವಿಗುಣ ಅನ್ಧಂತಮ. ಅಂದರೆ ೬,೯೯,೦೦,೦೦೦ ಯೋಜನ. ಇದರ ದ್ವಿಗುಣ ಘನೋದಕ. ಅಂದರೆ ೧೩,೯೮,೦೦,೦೦೦ ಯೋಜನ. ಒಟ್ಟಿನಲ್ಲಿ ಜಂಬೂದ್ವೀಪದ ಕೇಂದ್ರದಿಂದ ಘನೋದಕದ ಕೊನೆಯ ತನಕದ ವಿಸ್ತಾರ: ೨೪,೯೭,೦೦,೦೦೦ ಯೋಜನ.  {೩,೪೯,೫೦,೦೦೦(ಲೋಕ) + ೫೦,೫೦,೦೦೦(ಲೋಕಾಲೋಕ) + ೬,೯೯,೦೦,೦೦೦(ಅನ್ಧಂತಮ) + ೧೩,೯೮,೦೦,೦೦೦(ಘನೋದಕ) = ೨೪,೯೭,೦೦,೦೦೦ ಯೋಜನ}. ಅದರಾಚೆ ಇರುವುದು ಭಗವಂತನ ಧಾಮ. ಅದು ಮೂರುಲಕ್ಷ ಯೋಜನ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕೇಂದ್ರಬಿಂದುವಿನಿಂದ ೨೫ ಕೋಟಿ ಯೋಜನ ಎಲ್ಲಾ ದಿಕ್ಕಿನಲ್ಲೂ ಎಂದು ಹೇಳಲಾಗುತ್ತದೆ. ಅಂದರೆ ಒಟ್ಟು ವಿಸ್ತಾರ ೫೦ ಕೋಟಿ ಯೋಜನ].

No comments:

Post a Comment