ಇತ್ಯುಕ್ತೋ ನಾರದಃ
ಪ್ರಾಹ ರಾಜಸೂಯಕೃತೋನ್ನತಿಮ್ ।
ಹರಿಶ್ಚನ್ದ್ರಸ್ಯ ತಾಂ
ದೃಷ್ಟ್ವಾ ಪಿತಾ ಯಮಸಭಾತಳೇ ।
ಸ್ಥಿತಸ್ತ್ವಾಮವದತ್
ಪಾಣ್ಡೂ ರಾಮದ್ವಯಸುದೈವತೇ ॥೨೧.೭೨॥
ಈ ರೀತಿ ಹೇಳಲ್ಪಟ್ಟ ಧರ್ಮರಾಯನಿಗೆ ನಾರದರು ರಾಜಸೂಯದಿಂದ(ಹರಿಶ್ಚಂದ್ರನಿಗೆ) ಯಾವ ರೀತಿಯ
ಉನ್ನತಿಯಾಯಿತು ಎನ್ನುವುದನ್ನು ವಿವರಿಸಿದರು. (ಹರಿಶ್ಚಂದ್ರ ರಾಜಸೂಯ ಯಾಗ ಮಾಡಿರುವುದರಿಂದ
ಇಂದ್ರಲೋಕಕ್ಕೆ ಹೋಗಿದ್ದಾನೆ. ಪಾಂಡು ಮಾಡಿಲ್ಲ, ಹಾಗಾಗಿ ಎತ್ತರದ ಲೋಕಕ್ಕೆ ಹೋಗಿಲ್ಲ
ಎನ್ನುವುದನ್ನು ನಾರದರು ವಿವರಿಸಿದರು). ‘ಈ ಪ್ರಶ್ನೆ ನಿನಗೆ ಮಾತ್ರ ಕಾಡಿರುವುದಲ್ಲ. ನಿನ್ನ
ಅಪ್ಪನನ್ನೂ ಕಾಡಿತ್ತು. ದಾಶರಥೀರಾಮ ಮತ್ತು ಪರಶುರಾಮ ಎಲ್ಲಿ ಆರಾಧ್ಯರಾಗಿದ್ದಾರೋ, ಅಂಥಹ ಯಮನ ಸಭೆಯಲ್ಲಿ ನನ್ನನ್ನು ಕುರಿತು ಪಾಂಡು ನಿನಗೆ ಸಂದೇಶವನ್ನು ಕಳುಹಿಸಿದ್ದಾನೆ.
ಕರೋತು ರಾಜಸೂಯಂ ಮೇ
ಪುತ್ರೋsಜೇಯಾನುಜಾರ್ಚ್ಚಿತಃ ।
ಪಾಲಿತೋ ವಾಸುದೇವೇನ
ಕಿಂ ತಸ್ಯಾಸಾದ್ಧ್ಯಮತ್ರ ಹಿ ॥೨೧.೭೩॥
‘ನನ್ನ ಮಗನಾದ ಧರ್ಮರಾಜನಿಗೆ ಅಜೇಯರಾಗಿರುವ
ತಮ್ಮಂದಿರಿದ್ದಾರೆ. ಅವರಿಂದ ಕೂಡಿಕೊಂಡು ನನಗಾಗಿ ಅವನು ರಾಜಸೂಯ ಯಾಗವನ್ನು ಮಾಡಲಿ. ಕೃಷ್ಣನಿಂದ ರಕ್ಷಿತನಾಗಿರುವ ಅವನಿಗೆ ಈ ವಿಚಾರದಲ್ಲಿ
ಅಸಾಧ್ಯವಾದದ್ದು ಏನಿದೆ?’
ಏತಚ್ಛ್ರುತ್ವಾ ಧರ್ಮ್ಮಸುತೋ
ಭ್ರಾತೃಭಿಃ ಸಹಿತೋ ವಶೀ ।
ಅವಾಪ್ತಿಂ ರಾಜಸೂಯಸ್ಯ
ಮನ್ತ್ರಯಾಮಾಸ ಧರ್ಮ್ಮವಿತ್ ॥೨೧.೭೪॥
ನಾರದರ ಮಾತನ್ನು ಕೇಳಿದ ಧರ್ಮರಾಜನು, ತನ್ನ ತಮ್ಮಂದಿರೊಂದಿಗೆ
ರಾಜಸೂಯಯಾಗವನ್ನು ಮಾಡುವುದರ ಕುರಿತು ಮಂತ್ರಾಲೋಚನೆ
ಮಾಡಿದನು.
ಸುಕಾರ್ಯ್ಯಮೇತದಿತ್ಯಲಂ
ನಿಶಮ್ಯ ಸೋದರೋದಿತಮ್ ।
ಅಯಾತಯತ್ ಸ್ವಸಾರಥಿಂ ಸ
ಕೇಶವಾಯ ಭೂಪತಿಃ ॥೨೧.೭೫॥
ಇದು ಮಾಡಲೇಬೇಕಾದ ಸುಕಾರ್ಯ ಎಂದು ಚೆನ್ನಾಗಿ ತಮ್ಮಂದಿರು
ಹೇಳಿದ ಸಂಗತಿಯನ್ನು ಕೇಳಿದ ಧರ್ಮರಾಜ ಕೃಷ್ಣನಲ್ಲಿಗೆ
ತನ್ನ ಸಾರಥಿಯನ್ನು ಕಳುಹಿಸಿದ.
[ಮಹಾಭಾರತ (ಸಭಾಪರ್ವ-೧೩.೪೬): ‘ಗುರುವದ್ ಭೂತಗುರವೇ ಪ್ರಾಹಿಣೋದ್
ದೂತಮಞ್ಞಸಾ’ ಜಗದ್ಗುರು ಶ್ರೀಕೃಷ್ಣನಲ್ಲಿಗೆ
ಧರ್ಮರಾಜ ದೂತನನ್ನು ಕಳುಹಿಸಿದ. ‘ಇಂದ್ರಸೇನೇನ ಸಹಿತ ಇಂದ್ರಪ್ರಸ್ಥಮಗಾತ್ ತದಾ’(೧೩.೫೧)].
ತದೈವ ಕೇಶವಸ್ಯ ಯಾಃ
ಸ್ತ್ರಿಯಸ್ತದೀಯತಾತಕೈಃ ।
ಸಹೋದರೈಶ್ಚ ಯಾಪಿತಃ
ಸುದೂತ ಆಪ ಮಾಧವಮ್ ॥೨೧.೭೬॥
ಅದೇ ಕಾಲದಲ್ಲಿ ಕೃಷ್ಣನ ಹದಿನಾರುಸಾವಿರದ ನೂರುಮಂದಿ ಪತ್ನಿಯರ
ಅಪ್ಪಂದಿರಿಂದಲೂ, ಅವರ ಅಣ್ಣತಮ್ಮಂದಿರಿಂದಲೂ ಕಳುಹಿಸಲ್ಪಟ್ಟ ಇನ್ನೊಬ್ಬ ದೂತ ಕೃಷ್ಣನ ಬಳಿ ಬಂದ.
[ಅದೇ ಸಂದರ್ಭದಲ್ಲಿ ಶ್ರೀಕೃಷ್ಣನ ವಿವಾಹಬಾಂಧವರೆಲ್ಲರೂ ಕೂಡಿ ದೂತನನ್ನು ಕಳುಹಿಸಿದ ಘಟನೆಯನ್ನು
ಭಾಗವತದಲ್ಲಿ ವಿವರಿಸಿದ್ದಾರೆ: ‘ತತ್ರೈಕಃ ಪುರುಷೋ ರಾಜನ್ನಾಗತೋsಪೂರ್ವ ದರ್ಶನಃ । ವಿಜ್ಞಾಪಿತೋ ಭಗವತೇ
ಪ್ರತೀಹಾರೈಃ ಪ್ರವೇಶಿತಃ । ಸ ನಮಸ್ಕೃತ್ಯ
ಕೃಷ್ಣಾಯ ಪರೇಶಾಯ ಕೃತಾಞ್ಜಲಿಃ । ರಾಜ್ಞಾಮಾವೇದಯದ್
ದುಃಖಂ ಜರಾಸನ್ಧೋಪರೋಧಜಮ್’ (೧೦.೭೮.೨೨-೨೩) ಒಬ್ಬ ದೂತ ಬಂದ. ಒಳಗೆ ಪ್ರವೇಶ ಮಾಡಿದ ಆತ ಜರಾಸಂಧನ
ಬಂಧನದಿಂದ ರಾಜರಿಗೆ ಏನು ದುಃಖವಾಗಿದೆ ಎನ್ನುವುದನ್ನು ವಿವರಿಸುತ್ತಾನೆ:]
ಪ್ರಣಮ್ಯ ಕೇಶವಂ ವಚಃ ಸ
ಆಹ ಮಾಗಧೇನ ತೇ ।
ವಿವಾಹಬಾನ್ಧವಾ ರಣೇ
ವಿಜಿತ್ಯ ರೋಧಿತಾ ಗಿರೌ ॥೨೧.೭೭॥
ಆ ದೂತನು ಕೇಶವನಿಗೆ ನಮಸ್ಕರಿಸಿ ಮಾತನ್ನು ಹೇಳಿದನು: ಕೃಷ್ಣನೇ, ನಿನ್ನ
ವಿವಾಹಬಾಂಧವರೆಲ್ಲರೂ ಜರಾಸಂಧನಿಂದ ಯುದ್ಧದಲ್ಲಿ ಸೋತು ಪರ್ವತದ ತಪ್ಪಲಿನಲ್ಲಿ ಬಂಧಿತರಾಗಿದ್ದಾರೆ.
ನೃಪಾಯುತದ್ವಯೇನ ಸೋsಷ್ಟವಿಂಶಕೈಃ ಶತೈರಪಿ ।
ಯಿಯಕ್ಷುರುಗ್ರರೂಪಿಣಂ
ತ್ರಿಲೋಚನಂ ತ್ವಯಿ ಸ್ಥಿತೇ ॥೨೧.೭೮॥
ಓ ಕೃಷ್ಣನೇ, ನೀನಿರುವಾಗಲೇ, ಇಪ್ಪತ್ತೆರಡು ಸಾವಿರದ ಎಂಟುನೂರು
ಜನ ಅರಸರನ್ನು ಬಲಿ ಕೊಟ್ಟು, ಉಗ್ರರೂಪಿಯಾದ ರುದ್ರನನ್ನು
ಕುರಿತು ಯಾಗ ಮಾಡಲು ಸಂಕಲ್ಪಿಸಿದ್ದಾನೆ.
[ಭಾಗವತ: ‘ಯೇ
ತು ದಿಗ್ವಿಜಯೇ ತಸ್ಯ ಸನ್ನತಿಂ ನಾSಯಯುರ್ನೃಪಾಃ । ಪ್ರಸಹ್ಯ ರುದ್ಧಾಸ್ತೇನಾsಸನ್ನಯುತೇ ದ್ವೇ ಗಿರಿವ್ರಜೇ’ (೧೦.೭೮.೨೪)
ಇಪ್ಪತ್ತು ಸಾವಿರ ಮಂದಿಯನ್ನು ಪರ್ವತದ ತಪ್ಪಲಿನಲ್ಲಿ ಬಂಧಿಸಿದ್ದಾನೆ ಎಂದು ಪೂರ್ಣಾಂಕವಾಗಿ
ಇಲ್ಲಿ ಹೇಳಿದರೆ, ಅಲ್ಲೇ ಮುಂದೆ - ‘ಅಯುತೇ ದ್ವೇ ಶತಾನ್ಯಷ್ಟೌ ಲೀಲಯಾ
ಯುಧಿ ನಿರ್ಜಿತಾಃ । ವಿನಿರ್ಗತಾ ಗಿರಿದ್ರೋಣ್ಯಾ ಮಲಿನಾ ಮಲವಾಸಸಃ’ (೧೦.೮೧.೧) ಎಂದು ೨೨,೮೦೦
ಜನ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇನ್ನು ಮಹಾಭಾರತದ ಸಭಾಪರ್ವದಲ್ಲಿ: ‘ಶಡಶೀತಿಃ ಸಮಾನೀತಾಃ ಶೇಷಾ ರಾಜಂಶ್ಚತುರ್ದಶ । ಜರಾಸನ್ಧೇನ ರಾಜಾನಸ್ತತಃ
ಕ್ರೂರಂ ಪ್ರವತ್ಸರ್ಯತೇ’(೧೫.೨೬)
ಎಂದು ೮೬ ಜನರನ್ನು ಜರಾಸಂಧ ಬಂಧಿಸಿದ್ದಾನೆ, ಇನ್ನು ಹದಿನಾಕು ಜನ ಮಾತ್ರ ಬಾಕಿ ಇದ್ದಾರೆ
ಎಂದು ಹೇಳಲಾಗಿದೆ. ಭಾಗವತದಲ್ಲಿ ಹೇಳಿರುವುದು ಒಟ್ಟು ಸಂಖ್ಯೆಯಾದರೆ, ಮಹಾಭಾರತದಲ್ಲಿ ಹೇಳಿರುವುದು ಶೇಕಡಾವಾರು. ಅಂದರೆ ಭಾಗವತದಲ್ಲಿ ಹೇಳಿದ ೨೨,೮೦೦ ಜನ ೮೬%
ಇನ್ನು ೧೪% ರಾಜರು ಬಂಧನಕ್ಕೆ ಬಾಕಿ
ಉಳಿದಿದ್ದರು. ಒಟ್ಟು ಭರತಖಂಡದಲ್ಲಿ ಆಗ ಸುಮಾರು ೨೬,೫೦೦ ರಾಜರುಗಳಿದ್ದಿರಬಹುದು ಎಂದು ನಾವಿಲ್ಲಿ
ಊಹಿಸಬಹುದು].
ವಿಮೋಚಯಸ್ವ ತಾನ್
ಪ್ರಭೋ ನಿಹತ್ಯ ಮಾಗಧೇಶ್ವರಮ್ ।
ಅವೈದಿಕಂ ಮಖಂ ಚ ತಂ
ವಿಲುಮ್ಪ ಧರ್ಮ್ಮಗುಪ್ತಯೇ ॥೨೧.೭೯॥
ಓ ಪ್ರಭುವೇ, ಜರಾಸಂಧನನ್ನು ಕೊಂದು ರಾಜರುಗಳನ್ನು ಬಿಡಿಸು.
ಅವನು ಮಾಡುತ್ತಿರುವುದು ಅವೈದಿಕ ಯಜ್ಞ. ಧರ್ಮದ ರಕ್ಷಣೆಗಾಗಿ – ಆ ಯಾಗ ನಡೆಯದಂತೆ ನೋಡಿಕೋ.
[ಇಲ್ಲಿ ನಮಗೆ ತಿಳಿಯುವುದೇನೆಂದರೆ - ಇದು ಕೇವಲ ಪ್ರಭುತ್ವಕ್ಕಾಗಿ
ನಡೆಯುತ್ತಿರುವ ಸಂಘರ್ಷವಲ್ಲ, ಇದು ಸಿದ್ಧಾಂತದ(ವೈದಿಕ
v/s ಅವೈದಿಕ) ಸಂಘರ್ಷ. ವೇದದಲ್ಲೂ ಈ ಕಥೆ ಸಂಕ್ಷಿಪ್ತವಾಗಿ
ಒಗಟಿನ ರೂಪದಲ್ಲಿ ಕಾಣಸಿಗುತ್ತದೆ. ಶತಪಥ ಬ್ರಾಹ್ಮಣ ಹಾಗೂ ಐತರೇಯ ಬ್ರಾಹ್ಮಣದಲ್ಲಿ ಈ ಕುರಿತ
ವಿವರವನ್ನು ಕಾಣಬಹುದು. ‘ಯಜ್ಞ ಹಾರಿತು, ಮನುಷ್ಯನನ್ನು ಆಶ್ರಯಿಸಿಕೊಂಡಿತು,
ದೇವತೆಗಳು ಒಪ್ಪಲಿಲ್ಲ, ಅಲ್ಲಿಂದ ಹಾರಿ ಹೋಯಿತು, ಗೋವಿನಲ್ಲಿ ಕುಳಿತಿತು, ಅದನ್ನೂ ದೇವತೆಗಳು
ಒಪ್ಪಲಿಲ್ಲ. ಅಲ್ಲಿಂದಲೂ ಹಾರಿ ಹೋಯಿತು, ಕುದುರೆಯಲ್ಲಿ ಕುಳಿತಿತು, ಆಗ ಆಗಬಹುದು ಎಂದು
ದೇವತೆಗಳು ಹೇಳಿದರು.... ಈ ರೀತಿಯ ಒಗಟಿನ ರೂಪದ ಪ್ರಸ್ತುತಿ ವೇದದಲ್ಲಿ ಕಾಣಬಹುದು. ವೇದದಲ್ಲಿ
ನಿರೂಪಿತವಾದ ಕಥೆಯೇ ಮಹಾಭಾರತದಲ್ಲಿ ವಿಸ್ತಾರವಾಗಿ ಕಾಣಸಿಗುತ್ತದೆ].
ಇತೀರಿತೋsಥ ಸಾರಥಿಂ ನಿಶಾಮ್ಯ ಧರ್ಮ್ಮಜಸ್ಯ ಚ ।
ನಿಶಮ್ಯ ತದ್ವಚಸ್ತದಾ
ಜಗಾಮ ಪಾಣ್ಡವಾಲಯಮ್ ॥೨೧.೮೦॥
ಈ ರೀತಿಯಾಗಿ ರಾಜರ ಸಾರಥಿ ಹೇಳಲ್ಪಟ್ಟ ನಂತರ ಶ್ರೀಕೃಷ್ಣ ಧರ್ಮರಾಜನ ಸಾರಥಿಯ ಮಾತನ್ನೂ ಕೇಳಿ ಇಂದ್ರಪ್ರಸ್ಥಕ್ಕೆ
ತೆರಳಿದ. (ಜರಾಸಂಧನೂ ಒಂದು ಯಾಗಕ್ಕೆ ತಯಾರಿ ನಡೆಸಿದ್ದಾನೆ, ಅದೇ ಸಮಯದಲ್ಲಿ ಇತ್ತ ಪಾಂಡವರೂ
ಕೂಡಾ ಒಂದು ಯಾಗದ ಸಂಕಲ್ಪ ಮಾಡುತ್ತಿದ್ದಾರೆ. ದೂತರಿಂದ ಎರಡನ್ನೂ ಕೇಳಿಸಿಕೊಂಡ ಶ್ರೀಕೃಷ್ಣ
ಪಾಂಡವರ ಕಡೆ ಹೊರಟ].
No comments:
Post a Comment