ಸೇವಕಾ ಬ್ರಹ್ಮಣಶ್ಚೈವ
ದೇವಾ ವೇದಾಶ್ಚ ಸರ್ವಶಃ ।
ಶಕ್ರಸ್ಯ ಮುನಯಃ ಸರ್ವೇ
ಹರಿಶ್ಚನ್ದ್ರಶ್ಚ ಭೂಮಿಪಃ ॥೨೧.೬೫॥
ಬ್ರಹ್ಮಲೋಕದಲ್ಲಿ ದೇವತೆಗಳು, ವೇದಾಭಿಮಾನಿಗಳು ಎಲ್ಲರೂ ಚತುರ್ಮುಖನ ಸೇವಕರಾಗಿದ್ದಾರೆ
ಹಾಗೆಯೇ ಇಂದ್ರನ ಲೋಕದಲ್ಲಿ ಎಲ್ಲಾ ಮುನಿಗಳೂ, ರಾಜನಾದ ಹರಿಶ್ಚಂದ್ರನೂ ಇದ್ದಾನೆ.
ಅಖಿಲಾ ಅಪಿ ರಾಜಾನಃ
ಪಾಣ್ಡುಶ್ಚಾಸ್ಮತ್ಪಿತಾ ಮುನೇ ।
ಯಮಸ್ಯೈವಾನುಗಾಃ
ಪ್ರೋಕ್ತಾ ರಾಜಭಿಸ್ತೈರ್ಯ್ಯಮೇನ ಚ ॥೨೧.೬೬॥
ಉಪಾಸ್ಯಮಾನೋ ಭಗವಾನ್
ರಾಮೋ ಯಮಸಭಾತಳೇ ।
ಉಕ್ತ ಇನ್ದ್ರೇಣ
ಚೋಪಾಸ್ಯೇ ವಾಮನಾತ್ಮಾ ಜನಾರ್ದ್ದನಃ ॥೨೧.೬೭॥
ಭೂಮಂಡಲವನ್ನು ಆಳಿದ ಎಲ್ಲಾ ರಾಜರೂ, ನನ್ನ ತಂದೆಯಾದ ಪಾಣ್ಡುವೂ ಕೂಡಾ ಯಮನ
ಲೋಕದಲ್ಲಿ ಇದ್ದಾರೆ ಎಂದು ಹೇಳಿದಿರಿ. (ಯಮನ ಲೋಕದಲ್ಲಿ ನರಕ ಇರುವ ಹಾಗೇ, ಭೋಗಸ್ಥಾನವೂ ಇದೆ. ಆ
ಭೋಗಸ್ಥಾನದಲ್ಲಿ ಎಲ್ಲಾ ರಾಜರಿದ್ದಾರೆ, ಅಲ್ಲೇ ಪಾಣ್ಡು ಕೂಡಾ ಇದ್ದಾನೆ).
ಆ ರಾಜರಿಂದಲೂ, ಯಮನಿಂದಲೂ, ಭಗವಾನ್ ರಾಮನು ಯಮಲೋಕದಲ್ಲಿ
ಉಪಾಸ್ಯನಾಗುತ್ತಿದ್ದಾನೆ. ಇಂದ್ರಲೋಕದಲ್ಲಿ ವಾಮನರೂಪಿಯಾದ ಜನಾರ್ದನನನ್ನು ಎಲ್ಲರೂ ಆರಾಧನೆ ಮಾಡುತ್ತಿದ್ದಾರೆ ಅಂತಲೂ ಹೇಳಿದಿರಿ. (ಮಹಾಭಾರತದ ಸಭಾಪರ್ವದಲ್ಲಿ
ನೋಡಿದಾಗ ಪರಶುರಾಮನೂ ಯಮಲೋಕದಲ್ಲಿದ್ದಾನೆ, ದಾಶರಥೀರಾಮನೂ
ಅಲ್ಲೇ ಇದ್ದಾನೆ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಅವರು ಅಲ್ಲಿ ಉಪಾಸ್ಯರಾಗಿದ್ದಾರೆ ಎಂದು
ತಿಳಿಯಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಉಪಾಸಕರಾಗಿ ಯಮ ಹಾಗೂ ಇತರ
ರಾಜರಿದ್ದಾರೆ).
ಪ್ರಾದುರ್ಭಾವಾಶ್ಚ
ನಿಖಿಲಾ ಬ್ರಹ್ಮಣೋಪಾಸಿತಾಃ ಸದಾ ।
ವರುಣಸ್ಯಾನುಗಾ
ನಾಗಾಸ್ತತ್ರ ಮತ್ಸ್ಯಾಕೃತಿರ್ಹರಿಃ ॥೨೧.೬೮॥
ಬ್ರಹ್ಮಲೋಕದಲ್ಲಿ ಭಗವಂತನ ಎಲ್ಲಾ ಅವತಾರಗಳೂ ಸದಾ ಉಪಾಸಿಸಲ್ಪಡುತ್ತವೆ.
ವರುಣನ ಸಭೆಯಲ್ಲಿ (ವರುಣಲೋಕದಲ್ಲಿ) ಮತ್ಸ್ಯಾರೂಪಿಯಾದ ನಾರಾಯಣ ಉಪಾಸ್ಯನಾಗುತ್ತಿದ್ದಾನೆ.
ಗನ್ಧರ್ವಾ ಧನದಸ್ಯಾಪಿ
ತತ್ರ ಕಲ್ಕೀ ಹರಿಃ ಪ್ರಭುಃ ।
ರುದ್ರಸ್ಯೋಗ್ರಾಣಿ
ಭೂತಾನಿ ನೃಸಿಂಹಾತ್ಮಾ ಶಿವೇನ ಚ ॥೨೧.೬೯॥
ಗಂಧರ್ವರು ಕುಬೇರನ ಭೃತ್ಯರಾಗಿದ್ದಾರೆ. ಅಲ್ಲಿ ನಾರಾಯಣನು ಕಲ್ಕೀ ರೂಪದಿಂದ ಉಪಾಸ್ಯನಾಗಿದ್ದಾನೆ. ಭಯಂಕರವಾಗಿರುವ ಭೂತಗಳು ರುದ್ರನ ಭೃತ್ಯರು. ಶಿವನಿಂದ ನರಸಿಂಹ
ದೇವರು ಉಪಾಸ್ಯರಾಗಿದ್ದಾರೆ.
ಉಪಾಸ್ಯತೇ ಸದಾ ವಿಷ್ಣುರಿತ್ಯಾದ್ಯುಕ್ತಂ
ತ್ವಯಾsನಘ ।
ಸರ್ವರತ್ನಸ್ಥಲಾನ್
ದಿವ್ಯಾನ್ ದೇವಲೋಕಾನ್ ಪ್ರಭಾಷತಾ ॥೨೧.೭೦॥
ತತ್ರ ಮೇ ಸಂಶಯೋ
ಭೂಯಾನ್ ಹರಿಶ್ಚನ್ದ್ರಃ ಕಥಂ ನೃಪಃ ।
ಐನ್ದ್ರಂ ಸಭಾತಳಂ
ಪ್ರಾಪ್ತಃ ಪಾಣ್ಡುರ್ನ್ನಾಸ್ಮತ್ಪಿತಾ ಮುನೇ ॥೨೧.೭೧॥
ಓ ಪಾಪ ರಹಿತರಾದ ನಾರದರೇ, ನೀವು ಎಲ್ಲಾ ಸಭೆಗಳನ್ನು ವರ್ಣಿಸುತ್ತಾ ಅಲ್ಲಿ ಯಾವಾಗಲೂ ವಿಷ್ಣುವು ಆರಾಧ್ಯನಾಗಿದ್ದಾನೆ
ಎನ್ನುವುದನ್ನು ತಿಳಿಸಿದಿರಿ. ದೇವತೆಗಳ
ಲೋಕವನ್ನೂ, ಅಲ್ಲಿರುವ ಅಲೌಕಿಕವಾದ ರತ್ನಮಯ ಸ್ಥಳಗಳನ್ನೂ ವರ್ಣಿಸಿದಿರಿ. ಎಲ್ಲವೂ ಸರಿ, ಆದರೆ ಈ ವಿಚಾರದಲ್ಲಿ ಒಂದು ದೊಡ್ಡ ಸಂಶಯ ನನ್ನನ್ನು
ಕಾಡುತ್ತಿದೆ. ರಾಜನಾಗಿರುವ ಹರಿಶ್ಚನ್ದ್ರನು ಇಂದ್ರಲೋಕದಲ್ಲಿದ್ದಾನೆ.
ಆದರೆ ನಮ್ಮ ಅಪ್ಪನಾದ ಪಾಂಡುವು ಏಕೆ ಅಲ್ಲಿಲ್ಲ(ಹರಿಶ್ಚಂದ್ರ ಪಾಂಡುವಿಗಿಂತ ಯಾವ ಲೆಕ್ಕದಲ್ಲೂ
ಮಿಗಿಲಾದವನಲ್ಲ. ಅವನು ಚಕ್ರವರ್ತಿಯಾಗಿದ್ದ ಅಷ್ಟೇ.
ಆದರೆ ಈಗ ಮೇಲಿನ ಲೋಕದಲ್ಲಿ ಅವನು ಪಾಂಡುವಿಗಿಂತ ಎತ್ತರದ ಲೋಕದಲ್ಲಿದ್ದಾನೆ. ಏಕೆ ಹೀಗೆ
ಎಂದು ನಾರದರನ್ನು ಕುರಿತು ಯುಧಿಷ್ಠಿರ ಪ್ರಶ್ನೆ ಮಾಡಿದ).
[ಎಲ್ಲಾ ಸಭೆಗಳು, ಅಲ್ಲಿನ
ಪರಮಾತ್ಮನ ರೂಪ ಹಾಗೂ ಅಲ್ಲಿರುವ ಉಪಾಸಕರು, ಅಲ್ಲಿರುವ ಅಲೌಕಿಕವಾದ ರತ್ನಗಳು, ಹೀಗೆ ಶ್ರೇಷ್ಠವಾದ ಸಭೆಗಳನ್ನು ವರ್ಣಿಸುವ ಪರ್ವ ಮಹಾಭಾರತದ
ಸಭಾಪರ್ವ. ಇದು ನಿಜವಾದ ಸಭಾಪರ್ವದ ನಿರ್ಣಯ].
No comments:
Post a Comment