ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 7, 2021

Mahabharata Tatparya Nirnaya Kannada 21: 38-41

                        ಸಸ್ನಾವವಭೃಥಂ ಕೃಷ್ಣಃ ಸದಾರಃ ಸಸುಹೃಜ್ಜನಃ ।

ಆಯಾನ್ತಂ ದ್ವಾರಕಾಂ ಕೃಷ್ಣಂ ದನ್ತವಕ್ರೋ ರುರೋಧ ಹ           ॥೨೧.೩೮॥

 

ಜಘಾನ ಗದಯಾ ಕೃಷ್ಣಃ  ತಂ ಕ್ಷಣಾತ್ ಸವಿಡೂರಥಮ್ ।

ವಿಡೂರಥಸ್ತಮೋsಗಚ್ಛದ್ ದನ್ತವಕ್ರೇ ಚ ಯೋsಸುರಃ                ॥೨೧.೩೯॥

 

ಹರೇಃ ಪಾರ್ಷದಃ ಕ್ಷಿಪ್ರಂ ಹರಿಮೇವ ಸಮಾಶ್ರಿತಃ ।

ಕೃಷ್ಣೇ ಪ್ರಾಪ್ತೇ ಸ್ವಲೋಕಂ ಚ ನಿಸ್ಸೃತ್ಯಾಸ್ಮಾತ್ ಸ್ವರೂಪತಃ     ॥೨೧.೪೦॥

 

ಏಕೀಭಾವಂ ಸ್ವರೂಪೇಣ ದ್ವಾರಪೇನ ಗಮಿಷ್ಯತಿ ।                   

ತತಃ ಕೃಷ್ಣಃ ಪುರೀಮೇತ್ಯ ಬೋಧಯಾಮಾಸ ಫಲ್ಗುನಮ್         ॥೨೧.೪೧॥

 

ಕೃಷ್ಣನು ತನ್ನ ಹೆಂಡತಿಯರೊಂದಿಗೆ ಮತ್ತು ಮಿತ್ರರೊಂದಿಗೆ ಕೂಡಿದವನಾಗಿ ಅವಭೃಥ ಸ್ನಾನವನ್ನು(ಯಜ್ಞಾಂತ್ಯದಲ್ಲಿ ಮಾಡುವ ಸ್ನಾನವನ್ನು) ಮಾಡಿದ. [ಸಾಮಾನ್ಯವಾಗಿ ಯಜ್ಞ ನಡೆಸುವುದು ಊರ ಹೊರಗೆ ನದಿ ತೀರದಲ್ಲಿ. ಯಜ್ಞ ಮುಗಿದಮೇಲೆ ನದಿಯಲ್ಲಿ ಸ್ನಾನ ಮಾಡಿ(ಅವಭೃಥ ಸ್ನಾನ ಮುಗಿಸಿ) ಪಟ್ಟಣಕ್ಕೆ ಹಿಂತಿರುಗುತ್ತಾರೆ]. ದ್ವಾರಕಾಪಟ್ಟಣವನ್ನು ಕುರಿತು ಬರುತ್ತಿರುವ ಕೃಷ್ಣನನ್ನು ಶಿಶುಪಾಲನ ವೈಮಾತ್ರೇಯನು (ದಂತವಕ್ರನು) ವಿಡೂರಥನಿಂದೊಡಗೂಡಿ ತಡೆದ. ಕೃಷ್ಣನು ಅವರನ್ನು  ಕ್ಷಣದಲ್ಲಿ ತನ್ನ ಗದೆಯಿಂದ ಕೊಂದ. ವಿಡೂರಥನು ಅನ್ಧಂತಮಸ್ಸಿಗೆ ತೆರಳಿದ. ದಂತವಕ್ರನಲ್ಲಿ ಯಾವ ಅಸುರನಿದ್ದ, ಅವನೂ ಕೂಡಾ ಅನ್ಧಂತಮಸ್ಸಿಗೆ ತೆರಳಿದ. (ದಂತವಕ್ರನಲ್ಲಿ ಜೀವದ್ವಯ ಸಮಾವೇಶ. ಒಬ್ಬ ಭಗವಂತನ ದ್ವಾರಪಾಲಕನಾದ ವಿಜಯನಾದರೆ ಇನ್ನೊಬ್ಬ ಅಸುರ. ಆ ಅಸುರ ಅನ್ಧಂತಮಸ್ಸಿಗೆ ಹೋದ) ಪರಮಾತ್ಮನ ದ್ವಾರಪಾಲಕನಾಗಿರುವ ವಿಜಯನು ಕೂಡಲೇ ಕೃಷ್ಣನ ಉದರವನ್ನಾಶ್ರಯಿಸಿದ. ಮುಂದೆ ಕೃಷ್ಣ ತನ್ನ ಲೋಕವನ್ನು ಹೊಂದಲು ವಿಜಯನು ಕೃಷ್ಣನಿಂದ ಹೊರಬಂದು, ತನ್ನ ಮೂಲರೂಪದಲ್ಲಿ(ದ್ವಾರಪಾಲಕ ವಿಜಯನಲ್ಲಿ)  ಐಕ್ಯವನ್ನು ಹೊಂದುತ್ತಾನೆ. (ದೇವತೆಗಳಿಗಿರುವಂತೆ  ಹಲವಾರು ದೇಹ ಜಯ-ವಿಜಯರಿಗೂ ಇದೇ ಎನ್ನುವುದು ಇಲ್ಲಿ ನಮಗೆ ತಿಳಿಯುತ್ತದೆ. ಭೂಮಿಯಲ್ಲಿ ಹುಟ್ಟಿದಾಗಲೂ ಕೂಡಾ  ವೈಕುಂಠದಲ್ಲೂ ಅವರ ಉಪಸ್ಥಿತಿ ಇರುತ್ತದೆ. ಜಯ-ವಿಜಯರು ವೈಕುಂಠದಲ್ಲಿ ದ್ವಾರಪಾಲಕರಾಗಿ ಯಾವಾಗಲೂ ಒಂದು ರೂಪದಿಂದ ಇದ್ದೇ ಇದ್ದರು. ಇನ್ನೊಂದು ರೂಪದಿಂದ ಅವರು ಹಿರಣ್ಯಕಶಿಪು-ಹಿರಣ್ಯಾಕ್ಷ, ರಾವಣ-ಕುಂಭಕರ್ಣ, ದಂತವಕ್ರ-ಶಿಶುಪಾಲರಾಗಿ ಇಲ್ಲಿ ಪರಮಾತ್ಮನ ಕಾರ್ಯಕ್ಕೆ ನೆರವಾದರು.)

ತದನಂತರ ಕೃಷ್ಣನು ದ್ವಾರಕಾ ಪಟ್ಟಣವನ್ನು ಹೊಂದಿ ಅರ್ಜುನನಿಗೆ ಉಪದೇಶವನ್ನು ಮಾಡಿದ.

[ದಂತವಕ್ರ ಕೃಷ್ಣನನ್ನು ಎದುರಿಸಿದ ಪ್ರಸಂಗವನ್ನು ಭಾಗವತದಲ್ಲಿ(೧೦.೧೦೧.೧) ವಿವರಿಸಿರುವುದನ್ನು ನಾವು ಕಾಣಬಹುದು. ಉದ್ಯಾಪನಸ್ನಾನಹೇತೋರ್ಯಮುನಾತೀರಮಾಗತಮ್   ಶ್ರುತ್ವಾ ತೂರ್ಣಂ ಕಲಿಙ್ಗೇಶೋ ದನ್ತವಕ್ರಃ ಸಹಾನುಜಃ । ಮಹತ್ಯಾ ಸೇನಯಾ ಯುಕ್ತೋ ಗಜಾನೀಕಸಮನ್ವಿತಃ । ಗಚ್ಛನ್ತಂ ದ್ವಾರಕಾಂ ಕೃಷ್ಣಂ ಪಥಿ ರೋದ್ಧುಂ ಸಮಾಯಯೌ’ ದಂತವಕ್ರನು ಅನುಜನಾದ ವಿಡೂರಥನೊಂದಿಗೆ ಕೂಡಿ, ದೊಡ್ಡ ದೊಡ್ಡ ಆನೆಗಳ ಪಡೆಯನ್ನು ಕಟ್ಟಿಕೊಂಡು ದ್ವಾರಕೆಗೆ ಹೋಗುತ್ತಿರುವ ಕೃಷ್ಣನನ್ನು ಎದುರುಗೊಂಡ].

No comments:

Post a Comment