ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 2, 2021

Mahabharata Tatparya Nirnaya Kannada 21: 34-37

             ದರ್ಪ್ಪಂ ನಿಹನ್ತುಂ ಹರಿರರ್ಜ್ಜುನಸ್ಯ ಸಮಾನಯದ್ ವಿಪ್ರಸುತಾನ್ ಪರೇಶಃ ।

ಪ್ರೀತಿರ್ಮ್ಮಹತ್ಯೇವ ಯತೋsರ್ಜ್ಜುನೇ ಹರೇಃ ಸಂಶಿಕ್ಷಯಾಮಾಸ ತತಃ ಸ ಏನಮ್ ॥೨೧.೩೪॥

 

ಪರಮಾತ್ಮನು ಅರ್ಜುನನ ದರ್ಪವನ್ನು(ಅಹಂಕಾರವನ್ನು) ನಾಶಮಾಡಲೆಂದು ಬ್ರಾಹ್ಮಣನ ಮಕ್ಕಳನ್ನು ತಂದನು. ಯಾವ ಕಾರಣದಿಂದ ಅರ್ಜುನನಲ್ಲಿ ಕೃಷ್ಣನಿಗೆ ಅತ್ಯಂತ ಪ್ರೀತಿಯೋ, ಆ ಕಾರಣದಿಂದಲೇ ಅವನು ಈ ರೀತಿ ಅರ್ಜುನನಿಗೆ ಭೋಧಿಸಿದನು(ಜ್ಞಾನೋದಯವಾಗುವಂತೆ ಮಾಡಿದನು).

 

ಅಪ್ರಾಕೃತಾತ್ ಸದನಾದ್ ವಾಸುದೇವೋ ನಿಸ್ಸೃತ್ಯ ಸೂರ್ಯ್ಯಾಧಿಕಲಕ್ಷದೀಧಿತೇಃ ।

ರಥಂ ಸಮಾರು̐ಹ್ಯ ಸಪಾರ್ತ್ಥವಿಪ್ರ ಆಗಾತ್ ಸುತಾಂಶ್ಚೈವ ದದೌ ದ್ವಿಜಾಯ             ॥೨೧.೩೫॥

 

ಕೃಷ್ಣನು ಅಪ್ರಾಕೃತವಾಗಿರುವ, ಅನಂತ ಸೂರ್ಯರ ಕಾಂತಿಯುಳ್ಳ ತನ್ನ ಮನೆಯಿಂದ ಹೊರ ಬಂದು, ರಥವನ್ನು ಏರಿ, ಅರ್ಜುನ ಹಾಗೂ ಬ್ರಾಹ್ಮಣನೊಂದಿಗೆ ಕೂಡಿಕೊಂಡು ಮರಳಿ ಬಂದ. ಬ್ರಾಹ್ಮಣನಿಗೆ ಮಕ್ಕಳನ್ನು ಕೊಟ್ಟ ಕೂಡಾ.

 

ಲೋಕಶಿಕ್ಷಾರ್ತ್ಥಮೇವಾಸೌ ಪ್ರಾಯಶ್ಚಿತ್ತಂ ಚ ಚಾಲನೇ ।

ಚಕ್ರೇ ಸಾರ್ದ್ಧಮುಹೂರ್ತೇನ  ಸಮಾಗಮ್ಯ ಪುನರ್ಮ್ಮಖಮ್    ॥೨೧.೩೬॥

 

ಶ್ರೀಕೃಷ್ಣನು ಲೋಕಶಿಕ್ಷಣಕ್ಕಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡ. (ಯಜ್ಞದಲ್ಲಿ ದೀಕ್ಷಿತನಾದ ಯಜಮಾನನು ಅನಿವಾರ್ಯ ಕಾರಣಗಳಿಂದ ಹೊರಗಡೆ ಹೋಗಬೇಕಾಗಿ ಬಂದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಷ್ಟೇ, ಲೋಕಶಿಕ್ಷಣಕ್ಕಾಗಿ ಶ್ರೀಕೃಷ್ಣ ಪ್ರಾಯಶ್ಚಿತವನ್ನು ಮಾಡಿಕೊಂಡ). ಇದೆಲ್ಲವೂ ನಡೆದಿರುವುದು ಕೇವಲ ಮೂರು ಘಳಿಗೆಯಲ್ಲಿ.  (ಸಾರ್ದ್ಧಂ ಮುಹೂರ್ತ್ತಮಿತಿ ಘಟಿಕಾತ್ರಯಮ್). 

 

ಬ್ರಹ್ಮಾದೀನಾಗತಾಂಶ್ಚೈವ ಸದಾ ಸ್ವಪರಿಚಾರಕಾನ್ ।

ಪೂಜಯಿತ್ವಾsಭ್ಯನುಜ್ಞಾಯ ಬ್ರಾಹ್ಮಣಾನಪ್ಯಪೂಜಯತ್           ॥೨೧.೩೭॥

 

ಬಂದಿರುವ, ತನ್ನ ಸೇವೆಯನ್ನು ಮಾಡುವ ಬ್ರಹ್ಮಾದಿಗಳನ್ನು ಗೌರವಿಸಿ, ಅವರಿಗೆ (ಇನ್ನು ನಿಮ್ಮ ಲೋಕಕ್ಕೆ ತೆರಳಿರಿ ಎನ್ನುವ) ಅನುಜ್ಞೆಯನ್ನು ಕೊಟ್ಟು, ಬ್ರಾಹ್ಮಣರನ್ನೂ ಕೃಷ್ಣ ಪೂಜಿಸಿದ. 

[ಈ ಕುರಿತಾದ ವಿವರಣೆಯನ್ನು ನಾವು ಭಾಗವತದಲ್ಲಿ(೧೦.೧೦೦.೭೨-೭೫) ಕಾಣಬಹುದು. ‘ಪ್ರಾಯಶ್ಚಿತ್ತಂ ತು ಚಲನೇ ದೀಕ್ಷಾಯಾಂ  ಯ ಉದಾಹೃತಃ   ತಂ ಚಕಾರ  ಯಥಾನ್ಯಾಯಂ ಬ್ರಾಹ್ಮಣೈರನುಮೋದಿತಃ । ಸಮಾಪ್ಯ ಯಜ್ಞಂ ವಿಧಿವತ್ ತರ್ಪಯಿತ್ವಾsರ್ಥಿನೋ ದ್ವಿಜಾನ್ । ಋತ್ವಿಜಃ ಪೂಜಯಿತ್ವಾsನ್ಯಾನೃಷಿಂಶ್ಚ ಕುರುಸತ್ತಮ । ಯಮುನಾಯಾಂ ಮಹಾನದ್ಯಾಂ ಕೃತ್ವಾsವಭೃಥಮಜ್ಜನಮ್ । ವಿಜಹಾರ ಯಥಾಕಾಮಂ ಮಹಿಷೀಭಿರ್ಯದೂತ್ತಮಃ’ ]

No comments:

Post a Comment