ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 27, 2022

Mahabharata Tatparya Nirnaya Kannada 23-11-18

 

ಅಥಾSಜಗಾಮ ಮಲ್ಲಕಃ ಸಮಸ್ತಭೂಮಿಮಣ್ಡಲೇ ।

ವರೇಣ ಯೋSಜಿತೋ ಜಯೀ ಶಿವಸ್ಯ ಸಙ್ಜಗರ್ಜ್ಜ ಚ ॥೨೩.೧೧॥

 

ಒಮ್ಮೆ ಭೂಮಿಯಲ್ಲಿರುವ ಎಲ್ಲಾ ಮಲ್ಲರನ್ನು ಗೆದ್ದಿರುವ, ಶಿವನ ವರವಿರುವುದರಿಂದ ಯಾರಿಂದಲೂ  ಗೆಲ್ಲಲಾಗದಿರುವ ಮಲ್ಲನೊಬ್ಬ ವಿರಾಟನಗರಕ್ಕೆ ಬಂದ ಮತ್ತು ಗರ್ಜಿಸಿದ(ವಿರಾಟ ನಗರದಲ್ಲಿರುವ ಮಲ್ಲರೆಲ್ಲರನ್ನೂ ಅವನು ಯುದ್ಧಕ್ಕೆ ಕರೆದ. ಮಹಾಭಾರತದಲ್ಲಿ ಆ ಮಲ್ಲನನ್ನು ಜೀಮೂತಃ ಎಂದು ಹೇಳಿದ್ದಾರೆ).

 

ತಮೀಕ್ಷ್ಯ ಸರ್ವಮಲ್ಲಕಾ ವಿರಾಟರಾಜಸಂಶ್ರಯಾಃ ।

ಪ್ರದುರ್ದ್ರುವುರ್ಭಯಾರ್ದ್ದಿತಾಸ್ತದಾSವದದ್ ಯುಧಿಷ್ಠಿರಃ ॥೨೩.೧೨ ॥

 

ಅವನನ್ನು ಕಂಡು ವಿರಾಟರಾಜನನ್ನು ಆಶ್ರಯಿಸಿಕೊಂಡಿರುವ ಎಲ್ಲಾ ಮಲ್ಲರೂ ಕೂಡಾ ಅಳುಕಿನಿಂದ ಓಡಿಹೋದರು. ಆಗ ಯುಧಿಷ್ಠಿರನು ವಿರಾಟರಾಜನಿಗೆ ಹೀಗೆ ಹೇಳಿದ-

 

ಯ ಏಷ ಸೂದ ಆಶು ತಂ ನಿಹತ್ಯ ಮಲ್ಲಮೋಜಸಾ ।

ಯಶಸ್ತವಾಭಿವರ್ದ್ಧಯೇತ್ ಸಮಾಹ್ವಯಾದ್ಯ ತಂ ನೃಪ ॥೨೩.೧೩॥

 

ರಾಜನೇ, ನಿನ್ನ ಆಸ್ಥಾನದಲ್ಲಿ ಅಡಿಗೆಯವನಿದ್ದಾನಲ್ಲ, ಅವನು ಈ ಮಲ್ಲನನ್ನು ತನ್ನ ಶಕ್ತಿಯಿಂದ ಕೊಂದು ನಿನ್ನ ಕೀರ್ತಿಯನ್ನು ಬೆಳೆಸಿಯಾನು. ಅವನನ್ನು ಈಗಲೇ ಕರೆ.

 

ಇತೀರಿತೇ ಸಮಾಹುತೋ ಜಗಾದ ಮಾರುತಿರ್ವಚಃ ।

ಪ್ರಸಾದತೋ ಹರೇರಹಂ ನಿಸೂದಯೇSದ್ಯ ಮಲ್ಲಕಮ್ ॥೨೩.೧೪॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲು, ಕರೆಯಲ್ಪಟ್ಟ ಭೀಮಸೇನನು ‘ನಾರಾಯಣನ ಅನುಗ್ರಹದಿಂದ ಈ ಮಲ್ಲನನ್ನು ಕೊಲ್ಲುತ್ತೇನೆ’ ಎಂದನು.

[ಮಹಾಭಾರತದಲ್ಲಿ ಹೀಗೊಂದು ಮಾತಿದೆ: ‘ಮಹಾದೇವಸ್ಯ ಭಕ್ತ್ಯಾ ಚ ತಂ ಮಲ್ಲಂ ಪಾತಯಾಮ್ಯಹಮ್’ - ಮಹಾದೇವನ ಭಕ್ತಿಯಿಂದ ಆ ಮಲ್ಲನನ್ನು ಕೊಲ್ಲುತ್ತೇನೆ(ವಿರಾಟಪರ್ವ-೧೫.೩೨).  ನರೇಂದ್ರ ತೇ ಪ್ರಭಾವೇನ ಶ್ರೀಯಾ ಶಕ್ತ್ಯಾ ಚ ಶಾಸನಾತ್ ।  ಅನೇನ ಸಹ ಮಲ್ಲೇನ ಯೋದ್ಧುಂ ರಾಜೇಂದ್ರ ಶಕ್ನುಯಾಮ್ । ಯುಧಿಷ್ಠಿರಕೃತಂ ಜ್ಞಾತ್ವಾ ಶ್ರೀಯಾ ತವ ವಿಶಾಮ್ಪತೇ’- ಓ ನರೇಂದ್ರ, ನಿನ್ನ ಪ್ರಭಾವದಿಂದ, ನಿನ್ನ ಮೇಲಿನ ಭಕ್ತಿಯಿಂದ, ನಿನ್ನ ಅನುಗ್ರಹದಿಂದ, ನಿನ್ನ ಅಣತಿಯಂತೆ ಈ ಮಲ್ಲನೊಡನೆ ನಾನು ಯುದ್ಧ ಮಾಡುತ್ತೇನೆ  (ವಿರಾಟಪರ್ವ ೧೫.೩೧), ಇಲ್ಲಿ ಭೀಮ ಈಶ್ವರನ ಅನುಗ್ರಹದಿಂದ ಎಂದಿದ್ದಾನೆ; ಇನ್ನು ವಿರಾಟನಲ್ಲಿ ನಿನ್ನ ಅನುಗ್ರಹದಿಂದ ಎಂದಿದ್ದಾನೆ, ಇದಕ್ಕೆ ಆಚಾರ್ಯರು ಹೀಗೆ ವಿವರಣೆಯನ್ನು ಕೊಡುತ್ತಾರೆ-]

 

ಸಮಸ್ತದೇವವೃನ್ದತೋ ಮಹಾನ್ ಯ ಏವ ಕೇಶವಃ ।

ಸಮಸ್ತದೇವನಾಮವಾಂಸ್ತದೀಯಭಕ್ತಿತೋ ಬಲಮ್ ॥೨೩.೧೫॥

 

ಎಲ್ಲಾ ದೇವತೆಗಳ ಸಮೂಹದಿಂದ ಯಾರು ಶ್ರೇಷ್ಠನೋ ಅವನು ಮಹಾದೇವ. ಎಲ್ಲಾ ದೇವತೆಗಳ ನಾಮ ಮುಖ್ಯವಾಗಿರುವುದು ನಾರಾಯಣನಲ್ಲಿಯೇ. ಹೀಗಾಗಿ ‘ಅಂತಹ ಭಗವಂತನ ಭಕ್ತಿಯಿಂದಲೇ ನನಗೆ ಬಲವಿದೆ’

 

ಯ ಏವ ದೇವನಾಮಧಾ ಇತಿ ಶ್ರುತಿರ್ಜ್ಜಗಾದ ಹಿ ।

ಮಹಾಂಶ್ಚ ದೇವ ಏಷ ತತ್ ಸ ಮೇ ಜಯಂ ವಿಧಾಸ್ಯತಿ ॥೨೩.೧೬॥

 

ಯಾರು ಎಲ್ಲಾ ದೇವತೆಗಳ ನಾಮವನ್ನು ಧರಿಸಿದ್ದಾನೋ, ಅಂತಹ ನಾರಾಯಣನಿಗೆ ನಮಸ್ಕಾರ ಎಂದು ಶ್ರುತಿಗಳಲ್ಲಿ ಹೇಳಿದ್ದಾರೆ. ಅವನು ಮಹಾನ್-ದೇವ. ಅದರಿಂದಾಗಿ ಅವನು ನನಗೆ ಜಯವನ್ನು ಕೊಡುತ್ತಾನೆ.

 [‘ಯೋ ದೇವಾನಾಂ ನಾಮಧಾ ಏಕ ಏವ’ (ಋಗ್ವೇದ ೧೦.೮೨.೩)  ತಾಥಾಚ ದೇವ ನಾಮಕ್ಕೆ ಧಾರಕತ್ವ ಎನ್ನುವುದು ನಾರಾಯಣನಿಗಿದೆ. ಹೀಗಾಗಿ ಎಲ್ಲಾ ದೇವತೆಗಳ ನಾಮವೂ ಅವನದಾಗಿರುವುದರಿಂದ ಮಹಾದೇವ ನಾಮವೂ ಮೂಲತಃ ಅವನದೇ. ಇಲ್ಲಿ ಭೀಮಸೇನ ಈ ಮಹಾದೇವ ನಾಮಕ ಭಗವಂತನಿಗೆ ನಮಸ್ಕಾರ ಮಾಡಿರುವುದು].

 

ಯುಧಿಷ್ಠಿರಾಭಿಧಶ್ಚ ಯೋ ಯುಧಿಷ್ಠಿರೇ ಸ್ಥಿತಃ ಸದಾ ।

ತ್ವಯಿ ಸ್ಥಿತಸ್ತ್ವಮಿತ್ಯಸೌ ಸದಾSಭಿಧೀಯತೇ ಹರಿಃ ॥೨೩.೧೭॥

 

ಯುಧಿಷ್ಠಿರನ ಒಳಗಿರುವ ಭಗವಂತ ‘ಯುಧಿಷ್ಠಿರ ನಾಮಕ.  ತ್ವಮ್ ಎಂದರೂ ದೇವರೇ. ತ್ವಮ್ ಎಂದರೆ ನಿನ್ನೊಳಗಿರುವ ದೇವರು. (ಅಹಮ್ ಎಂದರೂ ದೇವರೇ. ಅಹಮ್ ಎಂದರೆ ನನ್ನೊಳಗಿರುವ ದೇವರು). ದೇವರು ಎಲ್ಲಾ ನಾಮಗಳಿಂದ ಪ್ರತಿಪಾದ್ಯ. ಹೀಗಾಗಿ ಜಗತ್ತಿನ ಯಾವುದೇ ಶಬ್ದಗಳು ದೇವರನ್ನು ಹೇಳುತ್ತವೆ. [ಹೀಗೆ ಭೀಮಸೇನ ಭಗವಂತನನ್ನೇ ಮುಖ್ಯವಾಗಿರಿಸಿಕೊಂಡು ಮಾತನಾಡಿರುವುದು]

 

ಇತಿ ಬ್ರುವಾಣೋ ಮಲ್ಲಂ ತಮಭಿಯಾತೋ ವೃಕೋದರಃ ।

ಅನಯನ್ಮೃತ್ಯುಲೋಕಾಯ ಬಲಾಢ್ಯೈರಪಿ ದುರ್ಜ್ಜಯಮ್ ॥೨೩.೧೮॥

 

ಈರೀತಿಯಾಗಿ ಹೇಳುತ್ತಾ ಆ ಮಲ್ಲನನ್ನು ಕುರಿತು ತೆರಳಿದ ಭೀಮಸೇನನು, ಬಲಾಢ್ಯರಿಂದಲೂ ಕೂಡಾ ಗೆಲ್ಲಲಾಗದ ಆ ಮಲ್ಲನನ್ನು ಯಮಲೋಕಕ್ಕೆ ಕಳುಹಿಸಿದ.  

No comments:

Post a Comment