ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 18, 2018

Mahabharata Tatparya Nirnaya Kannada 11.155-11.157


ಸ ತತ್ರ ಜಜ್ಞಿವಾನ್ ಸ್ವಯಂ ದ್ವಿತೀಯರೂಪಕೋ ವಿಭುಃ ।
ಸವರ್ಮ್ಮದಿವ್ಯಕುಣ್ಡಲೋ ಜ್ವಲನ್ನಿವ ಸ್ವತೇಜಸಾ ॥೧೧.೧೫೫

ಸೂರ್ಯನು ಕುಂತಿಯಲ್ಲಿ ಎರಡನೆಯ ರೂಪವುಳ್ಳವನಾಗಿ ಹುಟ್ಟಿದನು. ಹುಟ್ಟುತ್ತಲೇ ಕವಚವನ್ನೂ, ದಿವ್ಯವಾಗಿರುವ ಕುಂಡಲವನ್ನೂ ಜೊತೆಗಿರಿಸಿಕೊಂಡೇ ತನ್ನ ಕಾಂತಿಯಿಂದ ಬೆಳಗುತ್ತಾ, ಹುಟ್ಟಿದನು.

[ಮಹಾಭಾರತದ ಆಶ್ರಮವಾಸಿಕ ಪರ್ವದಲ್ಲಿ(೩೩.೧೨) ಸೂರ್ಯನೇ ಕರ್ಣನಾಗಿ ಬಂದಿದ್ದಾನೆ ಎನ್ನುವುದನ್ನು ವೇದವ್ಯಾಸರೇ  ಹೇಳಿರುವುದನ್ನು ಕಾಣುತ್ತೇವೆ:   ದ್ವಿಧಾ ಕೃತ್ತ್ವಾsತ್ಮನೋ ದೇಹಮಾದಿತ್ಯಂ ತಪತಾಂ ವರಂ ಲೋಕಾಂಶ್ಚ ತಾಪಯಾನಂ ವೈ  ಕರ್ಣಂ ವಿದ್ಧಿ ಪೃಥಾಸುತಮ್ ’ ]

ಪುರಾ ಸ ವಾಲಿಮಾರಣಪ್ರಭೂತದೋಷಕಾರಣಾತ್ ।
ಸಹಸ್ರವರ್ಮ್ಮನಾಮಿನಾsಸುರೇಣ ವೇಷ್ಟಿತೋsಜನಿ ॥೧೧.೧೫೬

ಹಿಂದೆ ಅವನು ವಾಲಿಯನ್ನು ಕೊಲ್ಲಿಸಿದ್ದರಿಂದ ಉಂಟಾದ ದೋಷದ ಕಾರಣದಿಂದ ಸಹಸ್ರವರ್ಮ ಎಂಬ ಹೆಸರುಳ್ಳ ಅಸುರನಿಂದ ಸುತ್ತುವರಿಯಲ್ಪಟ್ಟು ಹುಟ್ಟಿದನು. (ಸಹಸ್ರವರ್ಮನೆಂಬ  ಅಸುರನ ಆವೇಶದೊಂದಿಗೆ ಹುಟ್ಟಿದನು).

[ಆಚಾರ್ಯರ ಈ ಮೇಲಿನ ವಿವರಣೆಯನ್ನು ನೋಡಿದಮೇಲೆ ನಮಗೆ ಮಹಾಭಾರತದ  ಆಶ್ರಮವಾಸಿಕಪರ್ವದಲ್ಲಿನ  (೩೩.೧೩) ಈ ಮಾತು ಅರ್ಥವಾಗುತ್ತದೆ: ‘ಯಃ ಸ ವೈರಾರ್ಥಮುದ್ಭೂತಃ ಸಙ್ಘರ್ಷಜನನಸ್ತಥಾ ತಮ್ ಕರ್ಣಂ ವಿದ್ಧಿ ಕಲ್ಯಾಣಿ ಭಾಸ್ಕರಂ ಶುಭದರ್ಶನೇ’ ಅಂದರೆ ವೈರವನ್ನು ನಿಮಿತ್ತೀಕರಿಸಿಕೊಂಡು ಹುಟ್ಟಿದವ, ಸಂಘರ್ಷಕ್ಕೆ ಕಾರಣನಾದವನು ಯಾರೋ ಅವನೇ ಕರ್ಣ.
‘ವಾಲಿಯ ಮಾರಣದಿಂದ ಉಂಟಾದ ಬಹಳ ದೋಷದಿಂದ ಕರ್ಣನಾಗಿ ಹುಟ್ಟುವಾಗ ಸೂರ್ಯನು ಸಹಸ್ರವರ್ಮ ಎಂಬ ಹೆಸರುಳ್ಳ ಅಸುರನ ಆವೇಶದೊಂದಿಗೆ ಹುಟ್ಟಬೇಕಾಯಿತು.’ ಈ ಮಾತು  ಮಾಧ್ವ ಸಿದ್ಧಾಂತದಲ್ಲಿ ಹೇಳುವ  ಶಾಸ್ತ್ರಕ್ಕೇ ವಿರುದ್ದ ಎನ್ನುವುದು ಕೆಲವರ ಆಕ್ಷೇಪ. ಏಕೆಂದರೆ: ಮುಂದೆ ಬರುವ ಪಾಪ , ಹಿಂದೆ ಆದ ಪಾಪ ಎರಡೂ ಕೂಡಾ ನಾಶವಾಗಿ, ಅಪರೋಕ್ಷಜ್ಞಾನವಾಗುತ್ತದೆ. ಹೀಗೆ ಅಪರೋಕ್ಷ ಜ್ಞಾನವಾದ ಮೇಲೆಯೇ  ದೇವತಾ ಪದವಿ ಪ್ರಾಪ್ತವಾಗುತ್ತದೆ ಎನ್ನುವುದು ಸಿದ್ಧಾಂತ. ಅಂದಮೇಲೆ  ದೇವತೆಗಳ ಪದವಿ ಬಂದ ಮೇಲೆ ಅವರಿಗೆ ಪಾಪದ ಲೇಪ ಹೇಗೆ? ಇದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವನ್ನು ತಿಳಿಯಲು ನಾವು ಕರ್ಮಸಿದ್ಧಾಂತವನ್ನೊಮ್ಮೆ ನೋಡಬೇಕಾಗುತ್ತದೆ. ಕರ್ಮವೆಂಬುದು ಒಂದು ಪ್ರವಾಹದಂತೆ. ಅದು ಅವ್ಯವಹಿತವಾಗಿ, ಅಂದರೆ, ತಡೆಯಿಲ್ಲದಂತೆ ಹರಿಯುತ್ತಿರುವ ನೀರಿನಂತೆ. ‘ಎಂದೋ ಶುರುವಾಗಿದ್ದು’ ಎಂದು ಅದಕ್ಕೆ ‘ಪ್ರಾರಬ್ಧ’ ಎಂದು ಕರೆಯುತ್ತಾರೆ.
ಪಾಪ ಹಾಗೂ ಪುಣ್ಯ ಇವೆರಡೂ ಅಭಿಮಾನದಿಂದ ಉಂಟಾಗುವ ಅಂಟು. ಈ ಅಂಟನ್ನು ‘ಬಿಂಬ’ ತೆಗೆಯುತ್ತಾನೆ. ಅದೇ ಅಪರೋಕ್ಷದ ಮಹತ್ವ. ಅಪರೋಕ್ಷವಾದಮೇಲೆ ಅಂಟಿಲ್ಲ ಅಷ್ಟೇ, ಆದರೆ ಕರ್ಮಪ್ರವಾಹ ಇನ್ನೂ ಇದ್ದೇ ಇರುತ್ತದೆ.
ದೇವತೆಗಳು ಹೀಗೆ ಅಂಟಿಲ್ಲದೆ ಕರ್ಮ ಮಾಡುವವರು. ಅಂತಹ ದೇವತೆಗಳ ಪ್ರಾರಬ್ಧಭೋಗ ಮಾತ್ರ ನಮಗೆ ಕಾಣುತ್ತದೆ.
ಕರ್ಣನಲ್ಲಿ ಸಹಸ್ರವರ್ಮ ಎಂಬ ದೈತ್ಯನ ಆವೇಶವೂ ಹಿಂದೆ ವಾಲಿಯನ್ನು ಕೊಲ್ಲಿಸಿದ ಪ್ರಾರಬ್ಧಕ್ಕೇ ಅಂದರೆ, ಅವನು ವಾಲಿಯನ್ನು ಯಾವ ಪ್ರಾರಬ್ಧದ ಹಿನ್ನೆಲೆಯಲ್ಲಿ ಕೊಲ್ಲಿಸಿದ ಎಂದು ಕೇಳಬೇಕಾಗುತ್ತದೆ. ಕರ್ಮಗಳ ಸರಪಳಿಯೇ ಇಲ್ಲಿ ಉತ್ತರ.
ಈ ಪ್ರಾರಬ್ಧವು ಅಪರೋಕ್ಷವಾದರೂ  ಹೋಗದೆಂಬ ಸಿದ್ಧಾಂತ ನಮ್ಮದು. ಅದನ್ನು ಅನುಭವಿಸಿಯೇ ತೀರಬೇಕು. ಪ್ರಾರಬ್ಧಕ್ಕೆ ನಿಮಿತ್ತ ಮಾತ್ರ ಇರುತ್ತದೆ ಅಷ್ಟೇ. ಇಲ್ಲಿ ಅಸುರನ ಆವೇಶವೆಂಬ ಪ್ರಾರಬ್ಧ ವಾಲಿಯನ್ನು ಕೊಲ್ಲಿಸಿದ ನೆವವಿಟ್ಟುಕೊಂಡು ಅಂಟಿತು. ಹೀಗಾಗಿ ಇಲ್ಲಿ ಸಿದ್ಧಾಂತ ವಿರೋಧವೇನೂ ಇಲ್ಲಾ. ಒಬ್ಬ ವಿಷವನ್ನು ಕುಡಿಸುತ್ತಾನೆ. ತಿಂದವನು ಸಾಯುತ್ತಾನೆ. ಲೋಕದಲ್ಲಿ ವಿಷಪ್ರಾಷನದಿಂದ ಆತ ಸತ್ತ ಎಂದು ಹೇಳಲಾಗುತ್ತದೆ.  ವಸ್ತುತಃ ಅದು ಮೂಲ ಕಾರಣ ಅಲ್ಲವೇ ಅಲ್ಲ.  ಮೊದಲು ಮಾಡಿದ ಪಾಪಕರ್ಮದಿಂದಲೇ ಈ ರೀತಿ ಸತ್ತ ಎನ್ನುವುದು ವಸ್ತುಸ್ಥಿತಿ. ಆದರೆ ಅದಕ್ಕೆ ಅವ್ಯವಹಿತ ಅಥವಾ ನಿಮಿತ್ತಕಾರಣ ವಿಷಪ್ರಾಷನವಾಗುತ್ತದೆ ಅಷ್ಟೇ. ಇದೇ ಸಿದ್ಧಾಂತ. ಇಲ್ಲಿ ಗೊಂದಲವಿಲ್ಲ]

ಯಥಾ ಗ್ರಹೈರ್ವಿದೂಷ್ಯತೇ ಮತಿರ್ನ್ನೃಣಾಂ ತಥೈವ ಹಿ
ಅಭೂಚ್ಚ ದೈತ್ಯದೂಷಿತಾ ಮತಿರ್ದ್ದಿವಾಕರಾತ್ಮನಃ       ೧೧.೧೫೭

ಹೇಗೆ ಮನುಷ್ಯರ ಬುದ್ಧಿಯು ಸೂರ್ಯಾದಿ ಗ್ರಹಗಳಿಂದ ಕೆಡುತ್ತದೋ ಹಾಗೆಯೇ ದಿವಾಕರನ ಬುದ್ಧಿಯು ದೈತ್ಯರಿಂದ ಕೆಟ್ಟಿತು. (ಅದರಿಂದಾಗಿ ಅವನು ಸಾಮಾನ್ಯ ಸೌಜನ್ಯವನ್ನೂ ತೋರುವುದಿಲ್ಲ. “ನನ್ನನ್ನು ವ್ಯರ್ಥವಾಗಿ ಹೀಗೆ ಕರೆದುದು ಸರಿಯಲ್ಲ. ಈಗಲೇ ನಾನು ನಿನ್ನನ್ನು ಮತ್ತು ನಿನಗೆ  ಮಂತ್ರವನ್ನು ಕೊಟ್ಟ ಆ ಬ್ರಾಹ್ಮಣನನ್ನು ದಹಿಸಿಬಿಡುತ್ತೇನೆ” ಎಂದು ಉಗ್ರವಾಗಿ ಮಾತನ್ನಾಡಿದನು) 

Sunday, December 16, 2018

Mahabharata Tatparya Nirnaya Kannada 11.151-11.154


ಚಕಾರ ಕರ್ಮ್ಮ ಸಾ ಪೃಥಾ ಮುನೇಃ ಸುಕೋಪನಸ್ಯ ಹಿ ।
ಯಥಾ ನ ಶಕ್ಯತೇ ಪರೈಃ ಶರೀರವಾಙ್ಮನೋನುಗಾ ॥೧೧.೧೫೧

ಬೇರೊಬ್ಬರಿಂದ ಮಾಡಲಸಾಧ್ಯವಾದ,  ಕಾರಣವಿಲ್ಲದೇಯೂ ಕೋಪಮಾಡಿಕೊಳ್ಳುವ ದುರ್ವಾಸರೆಂಬ ಋಷಿಯ ಸೇವಾರೂಪವಾದ ಕರ್ಮವನ್ನು ಪೃಥೆ ಮಾಡಿದಳು.  ದೇಹದಿಂದಲೂ,  ಮಾತಿನಿಂದಲೂ,  ಮನಸ್ಸಿನಿಂದಲೂ ಮುನಿಯ ಇಂಗಿತವನ್ನು ತಿಳಿದವಳಾಗಿ ಪೃಥೆ ದುರ್ವಾಸರ ಸೇವೆ ಮಾಡಿದಳು.

ಸ ವತ್ಸರತ್ರಯೋದಶಂ ತಯಾ ಯಥಾವದರ್ಚ್ಚಿತಃ ।
ಉಪಾದಿಶತ್ ಪರಂ ಮನುಂ ಸಮಸ್ತದೇವವಶ್ಯದಮ್ ॥೧೧.೧೫೨

ಹೀಗೆ ಒಂದುವರ್ಷ ಸೇವೆ ಮಾಡಿದ ಕುಂತಿಗೆ ಹದಿಮೂರನೇ ವರ್ಷ ತುಂಬಿದಾಗ,  ಅವಳಿಂದ ಯಥಾನುಗುಣವಾಗಿ ಪೂಜಿತನಾಗಿ ಸಂತುಷ್ಟರಾದ  ದುರ್ವಾಸರು, ಎಲ್ಲಾ ದೇವತೆಗಳನ್ನು ವಶಕ್ಕೆ ತಂದುಕೊಡಬಲ್ಲ  ಉತ್ಕೃಷ್ಟವಾದ ಮಂತ್ರವನ್ನು ಆಕೆಗೆ ಉಪದೇಶಿಸಿದರು.
[ಇಲ್ಲಿ ‘ವತ್ಸರತ್ರಯೋದಶಂ’ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಈ ಮಾತು ‘ಹದಿಮೂರು ವರ್ಷಗಳ ಕಾಲ  ಸೇವೆಮಾಡಿದಳು’ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಆಕೆ ಹದಿಮೂರು ವರ್ಷಗಳ ಕಾಲ ಸೇವೆ ಮಾಡಿರುವುದಲ್ಲ. ಆಕೆ ಒಂದು ವರ್ಷ ಸೇವೆಯನ್ನು ಮಾಡಿ, ತಾನು  ಹದಿಮೂರನೇ ವಯಸ್ಸಿನವಳಾಗಿದ್ದಾಗ ದುರ್ವಾಸರಿಂದ ಉಪದೇಶ ಪಡೆದಳು. ಈ ಸ್ಪಷ್ಟತೆ ನಮಗೆ ಮಹಾಭಾರತದ ಆದಿಪರ್ವದಲ್ಲಿ(೧೨೦.೬) ಕಾಣಸಿಗುತ್ತದೆ. ಅಲ್ಲಿ ಸ್ಪಷ್ಟವಾಗಿ ‘ದುರ್ವಾಸಾ ವತ್ಸರಸ್ಯಾಂತೇ ದದೌ ಮಂತ್ರಮನುತ್ತಮಮ್' ಎಂದು ಹೇಳಿರುವುದನ್ನು ಕಾಣಬಹುದು.  ಇಲ್ಲಿ ‘ವತ್ಸರಸ್ಯ ಅಂತೇ’ ಎಂದಿರುವುದರಿಂದ, ಮೇಲಿನ ಶ್ಲೋಕದಲ್ಲಿ ‘ವತ್ಸರತ್ರಯೋದಶಂ’ ಎಂದರೆ ಹದಿಮೂರನೇ ವಯಸ್ಸಿನಲ್ಲಿ ಎಂದು ತಿಳಿಯಬೇಕು.

ಋತೌ ತು ಸಾ ಸಮಾಪ್ಲುತಾ ಪರೀಕ್ಷಣಾಯಾ ತನ್ಮನೋಃ।
ಸಮಾಹ್ವಯದ್ ದಿವಾಕರಂ ಸ ಚಾsಜಗಾಮ ತತ್ ಕ್ಷಣಾತ್ ॥೧೧.೧೫೩

ಅವಳು ತನ್ನ ಮೊದಲ ಋತುಸ್ನಾನವನ್ನು ಮಾಡಿ, ಆ ಮಂತ್ರದ ಪರೀಕ್ಷೆಗಾಗಿ ಸೂರ್ಯನನ್ನು ಕರೆದಳು. ಅವನಾದರೋ ಆ ಕ್ಷಣದಲ್ಲೇ ಬಂದುಬಿಟ್ಟ.
 [ಈ ಕುರಿತ ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ(೧೨೦.೦೭,೧೭,೧೮) ಕಾಣುತ್ತೇವೆ. ಅಲ್ಲಿ ವೇದವ್ಯಾಸರಿಗೆ ಕುಂತಿ ಕರ್ಣ ಹೇಗೆ ಹುಟ್ಟಿದ ಎನ್ನುವ ವಿಷಯವನ್ನು ವಿವರಿಸುತ್ತಾಳೆ. ‘ಯ̐ಯಂ ದೇವಂ ತ್ವಮೇತೇನ  ಮಂತ್ರೇಣಾsವಾಹಾಯಿಷ್ಯಸಿ । ತಸ್ಯತಸ್ಯ ಪ್ರಭಾವೇಣ ತವ ಪುತ್ರೋ ಭವಿಷ್ಯತಿ  ಕಶ್ಚಿನ್ಮೇ ಬ್ರಾಹ್ಮಣಃ ಪ್ರಾದಾದ್ ವರಂ ವಿದ್ಯಾಂ ಚ ಶತ್ರುಹನ್ ।  ತದ್ವಿಜಿಜ್ಞಾಸಯಾssಹ್ವಾನಂ  ಕೃತವತ್ಯಸ್ಮಿ  ತೇ ವಿಭೋ ।  ಏತಸ್ಮಿನ್ನಪರಾಧೇ ತ್ವಾಂ ಶಿರಸಾsಹಂ  ಪ್ರಸಾದಯೇ । ಯೋಶಿತೋ ಹಿ ಸದಾ ರಕ್ಷ್ಯಾಸ್ತ್ವಪರಾಧೇsಪಿ ನಿತ್ಯಶಃ  ಮಂತ್ರೋಚ್ಛಾರಣೆ ಮಾಡಿದಾಗ ಪ್ರತ್ಯಕ್ಷನಾದ ಸೂರ್ಯನನ್ನು ಕುರಿತು ಕುಂತಿ ಆಡಿದ ಮಾತುಗಳಿವು: ಬ್ರಾಹ್ಮಣನೊಬ್ಬ ನನಗೆ ವಿದ್ಯೆಯನ್ನು ಇತ್ತ.  ಆತನಿಂದ ಪಡೆದ ಮಂತ್ರದ ಬಲವನ್ನು ತಿಳಿಯುವುದಕ್ಕಾಗಿ ನಾನು ಅದನ್ನು ಉಚ್ಛಾರಣೆ ಮಾಡಿದೆ. ಈ ಅಪರಾಧದ ವಿಚಾರದಲ್ಲಿ ನಾನು ನಿನಗೆ ತಲೆಬಾಗಿ ನಮಸ್ಕರಿಸುತ್ತೇನೆ. ಅಪರಾಧ ಮಾಡಿದ್ದರೂ ಕೂಡಾ ಹೆಣ್ಣನ್ನು ರಕ್ಷಣೆ ಮಾಡಬೇಕಾಗಿರುವುದು ನಿನ್ನ ಕರ್ತವ್ಯವಲ್ಲವೇ?  ]

ತತೋ ನ ಸಾ ವಿಸರ್ಜ್ಜಿತುಂ ಶಶಾಕ ತಂ ವಿನಾ ರತಿಮ್ ।
ಸುವಾಕ್ಪ್ರಯತ್ನತೋsಪಿ ತಾಮಥಾsಸಸಾದ ಭಾಸ್ಕರಃ ॥೧೧.೧೫೪

ಹೀಗೆ ಬಂದ ಸೂರ್ಯ ತನ್ನನ್ನು ಸೇರದಂತೆ ಕುಂತಿ ಪ್ರಯತ್ನಿಸಿದರೂ ಕೂಡಾ,  ತನ್ನ ಮಾತಿನ ಪ್ರಯತ್ನದಿಂದ  ಅವನನ್ನು ಅವಳಿಂದ ತಡೆಯಲಿಕ್ಕಾಗಲಿಲ್ಲಾ. ತದನಂತರ ಒಪ್ಪಿಗೆಯಮೇಲೆ ಭಾಸ್ಕರನು ಕುಂತಿಯನ್ನು ಸೇರುತ್ತಾನೆ.

Friday, December 14, 2018

Mahabharata Tatparya Nirnaya Kannada 11.147-11.150


ಗಾನ್ಧಾರರಾಜಸ್ಯ ಸುತಾಮುವಾಹ ಗಾನ್ಧಾರಿನಾಮ್ನೀಂ ಸುಬಲಸ್ಯ ರಾಜಾ ।
ಜ್ಯೇಷ್ಠೋ ಜ್ಯೇಷ್ಠಾಂ ಶಕುನೇರ್ದ್ದ್ವಾಪರಸ್ಯ ನಾಸ್ತಿಕ್ಯರೂಪಸ್ಯ ಕುಕರ್ಮ್ಮಹೇತೋಃ ೧೧.೧೪೭

ಧೃತರಾಷ್ಟ್ರನು ‘ಸುಬಲ’ ಎಂಬ ಹೆಸರಿನ ಗಾಂಧಾರ ರಾಜನ ಮಗಳಾದ, ಕುಕರ್ಮಕ್ಕೆ ಕಾರಣವಾದ ಮತ್ತು ನಾಸ್ತಿಕ್ಯದ ಅಭಿಮಾನಿಯಾದ ‘ದ್ವಾಪರ’ನೆಂಬ ಅಸುರನ ಅವತಾರವಾಗಿರುವ ಶಕುನಿಯ ಅಕ್ಕ ಗಾಂಧಾರಿಯನ್ನು ಮದುವೆಯಾಗುತ್ತಾನೆ. 

 [ಶಕುನಿ ‘ದ್ವಾಪರ’ ಎಂಬ ರಾಕ್ಷಸನ ರೂಪವಾಗಿದ್ದ. ಆ ರಾಕ್ಷಸನಿಗೆ ದ್ವಾಪರ ಎನ್ನುವ ಹೆಸರು ಏಕೆ ಬಂತು ಎನ್ನುವುದನ್ನು ‘ದ್ವಾಪರ’ ಪದದ ಸಂಸ್ಕೃತ ನಿರ್ವಚನದಿಂದ ತಿಳಿಯಬಹುದು.  ದ್ವಾಭ್ಯಾಂ ಕೃತತ್ರೇತಾಭ್ಯಾಂ ಪರಮಿತಿ ಚ ದ್ವಾಪರಮ್ – ಕೃತ ಹಾಗ ತ್ರೇತಾ ಎನ್ನುವ ಎರಡು ಯುಗಗಳ ನಂತರ ಬರುವ ಮೂರನೇ ಯುಗದ ಹೆಸರು  ‘ದ್ವಾಪರ’.  ಹಾಗಿದ್ದರೆ ಇಲ್ಲಿ ಅಸುರನಿಗೆ ‘ದ್ವಾಪರ’ ಎನ್ನುವ ಹೆಸರು ಏಕೆ ಬಂತು ? ದ್ವಾವೇವ ಪರಮೌ ಯಸ್ಯ ಸ ತದಭಿಮಾನಿ ದ್ವಾಪರಃ ಮುಖ್ಯವಾದ ಎರಡಕ್ಕೆ ಯಾರು ಅಭಿಮಾನಿಯೋ ಅವನು ದ್ವಾಪರಃ. ಕೌ ದ್ವೌ? ಅವುಗಳು ಯಾವ ಎರಡು? ನಾಸ್ತಿಕ್ಯಮ್ ಕುಕರ್ಮ ಚ -  ನಾಸ್ತಿಕ್ಯ ಮತ್ತು ಕೆಟ್ಟಕೆಲಸ . ತದಾಹ- ನಾಸ್ತಿಕ್ಯರೂಪಸ್ಯ ಕುಕರ್ಮಹೇತೋಃ   ನಾಸ್ತಿಕ್ಯಮೇವ ಯಸ್ಯ ಸ್ವರೂಪಧರ್ಮಃ , ಯಶ್ಚ ಲೋಕೇ ನಾಸ್ತಿಕ್ಯಂ ರೂಪಯತಿ ಸ ನಾಸ್ತಿಕ್ಯರೂಪಃ ರೂಪ ರೂಪಕ್ರಿಯಾಯಾಮ್ ರೂಪಸ್ಯ ಕರಣಂ ರುಪಕ್ರಿಯಾ   ವರ್ಧನಮತ್ಯೇತತ್ ನಾಸ್ತಿಕ್ಯಕ್ಕೆ ರೂಪ ಕೊಡುವವನೇ ‘ದ್ವಾಪರ’ . ಅದರಿಂದಾಗಿ ನಾಸ್ತಿಕ್ಯ ರೂಪ ಎಂದರೆ: ನಾಸ್ತಿಕ್ಯವನ್ನು ಜಗತ್ತಿನಲ್ಲಿ ವರ್ಧಿಸುವವನು ಎಂದರ್ಥ. ಅಂತಹ ಶಕುನಿಯ ಅಕ್ಕನಾದ  ಗಾಂಧಾರಿಯನ್ನು ಧೃತರಾಷ್ಟ್ರ ಮದುವೆಯಾದ. ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿ(೩೩.೧೦) ‘ಶಕುನಿಂ ದ್ವಾಪರಂ ನೃಪಮ್’ ಎಂದು ಹೇಳುತ್ತಾರೆ. ಅಲ್ಲಿ ಬಂದ ವಿವರವನ್ನು ಆಚಾರ್ಯರು ಇಲ್ಲೇ ನಮಗೆ ವಿವರಿಸಿದ್ದಾರೆ.  ‘ಆದಿಪರ್ವದಲ್ಲಿ(೬೮.೧೬೦) ‘ಮತಿಸ್ತು ಸುಬಲಾತ್ಮಜಾ’ ಎನ್ನುವ ಮಾತಿದೆ. ಅಲ್ಲಿ  ‘ಮತಿ’ ಎನ್ನುವುದು ಗಾಂಧಾರಿಯ ಮೂಲರೂಪದ ಹೆಸರಾಗಿದೆ  ಎನ್ನುವುದನ್ನು ನಾವು ತಿಳಿಯಬೇಕು.]

ಶೂರಸ್ಯ ಪುತ್ರೀ ಗುಣಶೀಲರೂಪಯುಕ್ತಾ ದತ್ತಾ ಸಖ್ಯುರೇವ ಸ್ವಪಿತ್ರಾ ।
ನಾಮ್ನಾ ಪೃಥಾ ಕುನ್ತಿಭೋಜಸ್ಯ ತೇನ ಕುನ್ತೀ ಭಾರ್ಯ್ಯಾ ಪೂರ್ವದೇಹೇsಪಿ ಪಾಣ್ಡೋಃ     ೧೧.೧೪೮

ಶೂರನೆಂಬ ಯಾದವನಿಗೆ ಗುಣ-ಶೀಲ-ರೂಪದಿಂದ ಕೂಡಿರುವ ಮಗಳೊಬ್ಬಳಿದ್ದಳು. ಪೃಥಾ ಎಂದು ಅವಳ ಹೆಸರು. ಅವಳು ತನ್ನ ಅಪ್ಪನಾದ ಶೂರನಿಂದಲೇ, ಗೆಳೆಯನಾದ ಕುಂತಿಭೋಜನಿಗೆ ದತ್ತುಕೊಡಲ್ಪಟ್ಟಳು.  ಆ ಕಾರಣದಿಂದ ಆಕೆ ಕುನ್ತೀ ಎಂಬ ಹೆಸರುಳ್ಳವಳಾದಳು. ಈಕೆ ಪೂರ್ವ ದೇಹದಲ್ಲಿಯೂ(ಮೂಲರೂಪದಲ್ಲಿಯೂ) ಪಾಂಡುವಿನ(‘ಪರಾವಹಎಂಬ ಹೆಸರಿನ ಮರುತ್ದೇವತೆಯ)  ಹೆಂಡತಿಯೇ ಆಗಿದ್ದಳು.

ಕೂರ್ಮ್ಮಶ್ಚ ನಾಮ್ನಾ ಮರುದೇವ ಕುನ್ತಿಭೋಜೋsಥೈನಾಂ ವರ್ದ್ಧಯಾಮಾಸ ಸಮ್ಯಕ್ ।
ತತ್ರಾsಗಮಚ್ಛಙ್ಕರಾಂಶೋsತಿಕೋಪೋ ದುರ್ವಾಸಾಸ್ತಂ ಪ್ರಾಹ ಮಾಂ ವಾಸಯೇತಿ    ೧೧.೧೪೯

ಹೆಸರಿಂದ ‘ಕೂರ್ಮ’ ಎಂದೆನಿಸಿಕೊಂಡ  ಮರುತ್ದೇವತೆಯೇ ಕುಂತಿಭೋಜನೆಂಬ ಹೆಸರುಳ್ಳವನಾಗಿ ಹುಟ್ಟಿದ್ದ. ಈ ಕುಂತಿಭೋಜ ತಾನು ದತ್ತುಪಡೆದ ಪೃಥೆಯನ್ನು ಚನ್ನಾಗಿ ಸಾಕಿದ. ಹೀಗಿರುವಾಗ ಒಮ್ಮೆ ರುದ್ರನ ಅವತಾರವಾಗಿರುವ, ಅತ್ಯಂತ ಕೋಪವುಳ್ಳ ದುರ್ವಾಸರು ಕುಂತಿಭೋಜನ ರಾಜ್ಯಕ್ಕೆ ಆಗಮಿಸಿ, ‘ತಾನಿಲ್ಲಿ ವಾಸಮಾಡಬೇಕು, ಅದಕ್ಕೆ ತಕ್ಕನಾದ  ವ್ಯವಸ್ಥೆ ಮಾಡು’ ಎಂದು ಕುನ್ತಿಭೋಜನಿಗೆ  ಹೇಳಿದರು.
[ಮಹಾಭಾರತದ ಆದಿಪರ್ವದಲ್ಲಿ(೧೨೦.೨-೩) ಹೇಳುವಂತೆ:  ಪಿತೃಷ್ವಸ್ರೀಯಾಯ ಸ ತಾಮನಪತ್ಯಾಯ ಭಾರತ। .....ಅಗ್ರಜಾಮಥ ತಾಂ ಕನ್ಯಾಂ ಶೂರೋsನುಗ್ರಹಕಾಂಕ್ಷಿಣೇ। ಪ್ರದದೌ ಕುಂತಿಭೋಜಾಯ ಸಖಾ ಸಖ್ಯೇ ಮಹಾತ್ಮನೇ॥ ಕುಂತಿಭೋಜ ಬೇರೆಯಾರೂ ಅಲ್ಲ. ಆತ ಶೂರನ ಸೋದರತ್ತೆಯ ಮಗ. ಅವನಿಗೆ ಮಕ್ಕಳಿರಲಿಲ್ಲ. ಹಾಗಾಗಿ ತನ್ನ ದೊಡ್ಡಮಗಳನ್ನು  ಶೂರ  ಕುಂತಿಭೋಜನಿಗೆ ದತ್ತುರೂಪದಲ್ಲಿ ಕೊಟ್ಟನು.
ಇನ್ನು ಆದಿಪರ್ವದಲ್ಲೇ(೬೭.೧೩೦-೧)  ‘ಅಗ್ರಮಗ್ರೇ ಪ್ರತಿಜ್ಞಾಯ ಸ್ವಸ್ಯಾಪತ್ಯಸ್ಯ ವೈ ತದಾ॥ ಅಗ್ರಜಾತೇತಿ ತಾಂ ಕನ್ಯಾಂ ಶೂರೋsನುಗ್ರಹಕಾಂಕ್ಷಯಾ। ಅದದಾತ್ ಕುನ್ತಿಭೋಜಾಯ ಸ ತಾಂ ದುಹಿತರಂ ತದಾ’ ಎನ್ನುವ ವಿವರಣೆ ಇರುವುದನ್ನು ಕೆಲವು ಕಡೆ ಕಾಣುತ್ತೇವೆ. ಇದು ಅಪಪಾಠ.]

ತಮಾಹ ರಾಜಾ ಯದಿ ಕನ್ಯಕಾಯಾಃ ಕ್ಷಮಿಷ್ಯಸೇ ಶಕ್ತಿತಃ ಕರ್ಮ್ಮ ಕರ್ತ್ರ್ಯಾಃ ।
ಸುಖಂ ವಸೇತ್ಯೋಮಿತಿ ತೇನ ಚೋಕ್ತೇ ಶುಶ್ರೂಷಣಾಯಾsದಿಶದಾಶು ಕುನ್ತೀಮ್೧೧. ೧೫೦

ಕುಂತಿಭೋಜ ರಾಜನು ದುರ್ವಾಸರನ್ನು ಕುರಿತು “ಒಂದುವೇಳೆ, ಶಕ್ತ್ಯಾನುಸಾರವಾಗಿ ಸೇವೆಯನ್ನು ಮಾಡುವ ಬಾಲಕಿಯನ್ನು ಸಹಿಸುವೆಯಾದರೆ ಸುಖವಾಗಿ ವಾಸಮಾಡಬಹುದು” ಎಂದು ಹೇಳುತ್ತಾನೆ. ಆಗ ದುರ್ವಾಸರಿಂದ ‘ಆಯಿತು’ ಎಂದು ಹೇಳಲ್ಪಡಲು (ಓಂ ಎನ್ನುವುದು ಅಂಗೀಕಾರ ಸೂಚಕ), ಕುಂತಿಯನ್ನು ಅವರ ಸೇವೆಮಾಡಲು ಕುಂತಿಭೋಜ ಕೂಡಲೇ ಆಜ್ಞೆಮಾಡುತ್ತಾನೆ.

Thursday, December 13, 2018

Mahabharata Tatparya Nirnaya Kannada 11.143-11.146


ಯೋಗ್ಯಾನಿ ಕರ್ಮ್ಮಾಣಿ ತತಸ್ತು ತೇಷಾಂ ಚಕಾರ ಭೀಷ್ಮೋ ಮುನಿಭಿರ್ಯ್ಯಥಾವತ್ ।
ವಿದ್ಯಾಃ ಸಮಸ್ತಾ ಅದದಾಚ್ಚ ಕೃಷ್ಣಸ್ತೇಷಾಂ ಪಾಣ್ಡೋರಸ್ತ್ರಶಸ್ತ್ರಾಣಿ ಭೀಷ್ಮಃ ॥೧೧.೧೪೩

ತದನಂತರ, ಆ ಮೂವರಿಗೆ  ಭೀಷ್ಮಾಚಾರ್ಯರು, ಮುನಿಗಳೊಂದಿಗೆ ಕೂಡಿಕೊಂಡು, ಶಾಸ್ತ್ರದಲ್ಲಿ ಹೇಳಿದಂತೆ, ಅವರವರಿಗೆ ಯೋಗ್ಯವಾದ (ಮಾತೃಜಾತಿ-ಪಿತೃಗುಣ ಎಂಬಂತೆ, ಜಾತಕರ್ಮ, ನಾಮಕರಣ, ಇತ್ಯಾದಿ) ಕರ್ಮಗಳನ್ನು ಮಾಡಿಸಿದರು. ವೇದವ್ಯಾಸರು ಆ ಮೂವರಿಗೂ ಸಮಸ್ತವಿದ್ಯೆಗಳನ್ನು ಉಪದೇಶಿಸಿದರು. ವಿಶೇಷತಃ ಪಾಂಡುವಿಗೆ ಭೀಷ್ಮಾಚಾರ್ಯರೇ ಮುತುವರ್ಜಿವಹಿಸಿ, ಅಸ್ತ್ರ-ಶಸ್ತ್ರಗಳ ವಿದ್ಯೆಯನ್ನು ನೀಡಿದರು.

ತೇ ಸರ್ವವಿದ್ಯಾಪ್ರವರಾ ಬಭೂವುರ್ವಿಶೇಷತೋ ವಿದುರಃ ಸರ್ವವೇತ್ತಾ ।
ಪಾಣ್ಡುಃ ಸಮಸ್ತಾಸ್ತ್ರವಿದೇಕವೀರೋ ಜಿಗಾಯ ಪೃಥ್ವೀಮಖಿಲಾಂ ಧನುರ್ದ್ಧರಃ  ॥೧೧.೧೪೪

ಹೀಗೆ ಅವರೆಲ್ಲರೂ ಅಸ್ತ್ರ, ಶಸ್ತ್ರ, ವೇದ, ಮೊದಲಾದ ಎಲ್ಲಾ ವಿದ್ಯೆಗಳಲ್ಲಿ ಶ್ರೇಷ್ಠರಾದರು. ವಿಶೇಷವಾಗಿ ವಿದುರನು ಎಲ್ಲವನ್ನೂ ಬಲ್ಲ ಜ್ಞಾನಿಯಾದರೆ, ಪಾಂಡುವು ಎಲ್ಲಾ ಅಸ್ತ್ರಗಳನ್ನು ಬಲ್ಲ ಶೂರನಾದನು. ವೀರರಲ್ಲಿ ಮುಖ್ಯನಾದ ಪಾಂಡುವು ಧನುರ್ಧಾರಿಯಾಗಿ ಎಲ್ಲಾ ಭೂ-ಭಾಗವನ್ನೂ ಕೂಡಾ ಗೆದ್ದನು.

ಗವದ್ಗಣಾದಾಸ ತಥೈವ ಸೂತಾತ್ ಸಮಸ್ತಗನ್ಧರ್ವಪತಿಃ ಸ ತುಮ್ಬುರುಃ
ಯ ಉದ್ವಹೋ ನಾಮ ಮರುತ್ ತದಂಶಯುಕ್ತೋ ವಶೀ ಸಞ್ಜಯನಾಮಧೇಯಃ ॥೧೧.೧೪೫

ಸಮಸ್ತ ಗಂಧರ್ವರ ಒಡೆಯನಾದ ತುಮ್ಬುರುವು, ಮರುತ್ ದೇವತೆಗಳ ಗಣದಲ್ಲಿ ಒಬ್ಬನಾದ ‘ಉದ್ವಹ’ ಎಂಬುವವನ ಅಂಶದೊಂದಿಗೆ, ಜಿತೇನ್ದ್ರಿಯನಾಗಿ (ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಂಡವನಾಗಿ),  ‘ಗವದ್ಗಣ’ ಎಂಬ ವಿಚಿತ್ರವೀರ್ಯನ ಸಾರಥಿಯ ಮಗನಾಗಿ ಹುಟ್ಟಿದನು. ಹೀಗೆ ಹುಟ್ಟಿದ ಈ ಗಾವದ್ಗಣಿ, ಸಂಜಯ ಎನ್ನುವ ಹೆಸರಿನವನಾದನು.

ವಿಚಿತ್ರವೀರ್ಯ್ಯಸ್ಯ ಸ ಸೂತಪುತ್ರಃ ಸಖಾ ಚ ತೇಷಾಮಭವತ್ ಪ್ರಿಯಶ್ಚ ।
ಸಮಸ್ತವಿನ್ಮತಿಮಾನ್ ವ್ಯಾಸಶಿಷ್ಯೋ ವಿಶೇಷತೋ ಧೃತರಾಷ್ಟ್ರಾನುವರ್ತ್ತೀ  ॥೧೧.೧೪೬

ಎಲ್ಲವನ್ನೂ ಬಲ್ಲವನಾಗಿದ್ದ, ಪ್ರಜ್ಞಾವಂತನಾಗಿದ್ದ, ವೇದವ್ಯಾಸರ ಶಿಷ್ಯನಾಗಿದ್ದ  ವಿಚಿತ್ರವೀರ್ಯನ  ಸೂತನ ಮಗನಾದ ಸಂಜಯನು, ಆ ಮೂರೂ ಜನರಿಗೂ ಕೂಡಾ(ಧೃತರಾಷ್ಟ್ರ, ಪಾಂಡು ಮತ್ತು ವಿದುರ ಈ ಮೂವರಿಗೂ ಕೂಡಾ) ಪ್ರಿಯಸಖನಾಗಿದ್ದ. ವಿಶೇಷವಾಗಿ ಆತ ಧೃತರಾಷ್ಟ್ರನ ಅನುಸಾರಿಯಾಗಿದ್ದ.

Tuesday, December 11, 2018

Mahabharata Tatparya Nirnaya Kannada 11.139-11.142


ಅಯೋಗ್ಯಸಮ್ಪ್ರಾಪ್ತಿಕೃತಪ್ರಯತ್ನದೋಷಾತ್ ಸಮಾರೋಪಿತಮೇವ ಶೂಲೇ ।
ಚೋರೈರ್ಹೃತೆsರ್ತ್ಥೇsಪಿತು ಚೋರಬುದ್ಧ್ಯಾ ಮಕ್ಷೀವಧಾದಿತ್ಯವದದ್ ಯಮಸ್ತಮ್ ॥ ೧೧.೧೩೯

ಯಾವ ರೀತಿ ಯಮಧರ್ಮ ಮಾಂಡವ್ಯನಿಂದ ಶಾಪಗ್ರಸ್ಥನಾದ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮಾಂಡವ್ಯ ತನ್ನ ಯೋಗ್ಯತೆಗೆ ಮೀರಿದ ವಸಿಷ್ಠಸ್ಥಾನವನ್ನು ಹೊಂದಲು ಬಯಸಿ ತಪಸ್ಸನ್ನಾಚರಿಸಿದ ದೋಷದಿಂದ, ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ, ದ್ರವ್ಯವು ಕಳ್ಳರಿಂದ^ ಅಪಹರಿಸಲ್ಪಟ್ಟಿದ್ದರೂ ಕೂಡಾ, ಆ ದ್ರವ್ಯಚೌರ್ಯದ ಆಪಾದನೆಯನ್ನು ಹೊತ್ತು  ಶೂಲಕ್ಕೇರಿಸಲ್ಪಟ್ಟಿದ್ದ. ಆ ಸಂದರ್ಭದಲ್ಲಿ  ಯಮನು  “ಹಿಂದೆ ನೀನು  ಮಕ್ಷಿಕೆಯನ್ನು (ನೊಣವನ್ನು) ಚುಚ್ಚಿ  ಕೊಂದದ್ದರಿಂದ ನಿನಗೆ ಈ ಶಿಕ್ಷೆಯಾಯಿತು” ಎಂದು ಹೇಳುತ್ತಾನೆ.

[^ಒಮ್ಮೆ ಒಬ್ಬ ಧನಿಕನ ದ್ರವ್ಯವನ್ನು ಕಳ್ಳರು ಅಪಹರಿಸುತ್ತಾರೆ. ಆ ಕಳ್ಳರನ್ನು ಧನಿಕನ ಧೂತರು ಹಿಂಬಾಲಿಸುತ್ತಾರೆ. ಆಗ ಕಳ್ಳರು ಕದ್ದ ದ್ರವ್ಯವನ್ನು ತಪಸ್ಸನ್ನಾಚರಿಸುತ್ತಿದ್ದ ಮಾಂಡವ್ಯ ಮುನಿಯ ಮುಂಭಾಗದಲ್ಲಿ ಬಿಟ್ಟು ಧೂತರಿಂದ ತಪ್ಪಿಸಿಕೊಳ್ಳುತ್ತಾರೆ. ಕಳ್ಳರನ್ನು ಹಿಂಬಾಲಿಸಿ ಬಂದ ಧೂತರು ದ್ರವ್ಯವನ್ನೂ, ಋಷಿಯನ್ನೂ ಕಂಡು, ಈತನೇ ಕಳ್ಳ ಎಂದು ತಿಳಿದು, ಆತನನ್ನು ಶೂಲಕ್ಕೇರಿಸುತ್ತಾರೆ. ಈ ಕುರಿತು ಮಾಂಡವ್ಯ “ನನಗೇಕೆ ಈ ಶಿಕ್ಷೆ ಪ್ರಾಪ್ತವಾಯಿತು” ಎಂದು ಯಮನನ್ನು ಪ್ರಶ್ನಿಸುತ್ತಾನೆ. ಆತನ ಪ್ರಶ್ನೆಗೆ ಉತ್ತರಿಸುತ್ತಾ ಯಮಧರ್ಮ “ಮಕ್ಷಿಕೆಯನ್ನು ಚುಚ್ಚಿ  ಕೊಂದದ್ದರಿಂದ ನಿನಗೆ ಈ ಶಿಕ್ಷೆ ಪ್ರಾಪ್ತವಾಯಿತು” ಎನ್ನುತ್ತಾನೆ. ಆಗ ಕೋಪಗೊಂಡ ಮಾಂಡವ್ಯ ಯಮನಿಗೆ ಶಾಪವನ್ನು ನೀಡುತ್ತಾನೆ].

ನಾಸತ್ಯತಾ ತಸ್ಯ ಚ ತತ್ರ ಹೇತುತಃ ಶಾಪಂ ಗೃಹೀತುಂ ಸ ತಥೈವ ಚೋಕ್ತ್ವಾ ।
ಅವಾಪ ಶೂದ್ರತ್ವಮಥಾಸ್ಯ ನಾಮ ಚಕ್ರೇ ಕೃಷ್ಣಃ ಸರ್ವವಿತ್ತ್ವಂ ತಥಾsದಾತ್ ॥ ೧೧.೧೪೦

ನೊಣಕ್ಕೆ ಚುಚ್ಚಿದ್ದ ಪಾಪವೂ ಕೂಡಾ ಆ ಶಿಕ್ಷೆಗೆ ಒಂದು ಕಾರಣವಾದ್ದರಿಂದ, ಯಮಧರ್ಮನ ಮಾತಿಗೆ ಅಸತ್ಯತ್ತ್ವದ ದೋಷ ಬರಲಿಲ್ಲಾ. ಆದರೆ  ಯಮ ‘ನೊಣಕ್ಕೆ ಚುಚ್ಚಿದ್ದ ಪಾಪ’ವನ್ನು  ಮುಂದು ಮಾಡಿಕೊಂಡು ಹೇಳಿ,  ಕೋಪಗೊಂಡ ಮಾಂಡವ್ಯನಿಂದ  ಶಾಪವನ್ನು ಹೊಂದಿ ಶೂದ್ರನಾಗಿ ಹುಟ್ಟಿದ. ಹೀಗೆ ಶೂದ್ರಯೋನಿಯಲ್ಲಿ ಹುಟ್ಟಿದ ಈತನಿಗೆ  ವೇದವ್ಯಾಸರು  ಸರ್ವಜ್ಞತ್ವದ ವರವನ್ನು ನೀಡಿದರು.
[ಒಟ್ಟಿನಲ್ಲಿ ಹೇಳಬೇಕೆಂದರೆ:  ಮಾಂಡವ್ಯ ಎರಡು ದೋಷಗಳಿಂದಾಗಿ ಶೂಲಕ್ಕೇರಿಸಲ್ಪಟ್ಟವನಾಗಿದ್ದ. ೧. ನೊಣಕ್ಕೆ ಚುಚ್ಚಿದ್ದರಿಂದ. ೨. ತನಗೆ ಅಯೋಗ್ಯವಾದ  ವಸಿಷ್ಠಸ್ಥಾನವನ್ನು ಹೊಂದಲು ಬಯಸಿದ ದೋಷ. ಯಮ ಮೊದಲ ಕಾರಣವನ್ನು ಅವನ ಮುಂದೆ ಇಟ್ಟಾಗ, ಮುಖ್ಯವಾದ ಎರಡನೇ ಕಾರಣವನ್ನು ತಿಳಿಯುವ ಮೊದಲೇ ಕೋಪಗೊಂಡ ಆತ ಶಾಪ ಕೊಡುತ್ತಾನೆ. ಇಲ್ಲಿ ನೊಣಕ್ಕೆ ಚುಚ್ಚಿರುವುದೂ ಕೂಡಾ ಆ ಕಾಲದಲ್ಲಿ ಒಂದು ದೋಷವಾಗಿದ್ದುದರಿಂದ ಯಮನಿಗೆ ಅಸತ್ಯತ್ತ್ವದ ದೋಷ ಬರಲಿಲ್ಲಾ. ಆದರೆ ದುಡುಕಿ ದೊಡ್ಡವರಿಗೆ ಶಾಪ ಕೊಟ್ಟದ್ದರಿಂದ  ಮಾಂಡವ್ಯಋಷಿಯ ಅತಿರಿಕ್ತವಾದ ತಪಸ್ಸಿನ ಫಲ ಕಳೆದುಹೋಯಿತು. ಈ ಘಟನೆಯಿಂದ ‘ಹದಿನಾರು ವರ್ಷದ ತನಕ ಅಜ್ಞಾನದಿಂದ ಮಾಡುವ ಕರ್ಮಕ್ಕೆ ದೋಷವಿಲ್ಲಾ’ ಎಂಬ ಜಗತ್ತಿನ ಕಾನೂನಿನ ತಿದ್ದುಪಡಿಯೂ  ಮಾಂಡವ್ಯಮನಿಯ ಮುಖೇನವಾಯಿತು. ಹೀಗೆ  ತಪಸ್ಸು ಮಾಡಿದ್ದುದರಿಂದ ಬರಬೇಕಾಗಿರುವ ಕೀರ್ತಿಯೂ ಮಾಂಡವ್ಯರಿಗೆ ಬರುವಂತಾಯಿತು.]     

ವಿದ್ಯಾರತೇರ್ವಿದುರೋ ನಾಮಾ ಚಾಯಂ ಭವಿಷ್ಯತಿ ಜ್ಞಾನಬಲೋಪಪನ್ನಃ ।
ಮಹಾಧನುರ್ಬಾಹುಬಲಾಧಿಕಶ್ಚ ಸುನೀತಿಮಾನಿತ್ಯವದತ್ ಸ ಕೃಷ್ಣಃ ॥೧೧.೧೪೧

ಹೀಗೆ ದಾಸಿಯಲ್ಲಿ ವೇದವ್ಯಾಸರಿಂದ ಹುಟ್ಟಿದ ಯಮಧರ್ಮ, ಯಾವಾಗಲೂ ವಿದ್ಯೆಯಲ್ಲೇ ರಥನಾದ್ದರಿಂದ, ಮುಂದೆ ‘ವಿದುರ’ ಎಂಬ ಹೆಸರಿನಿಂದ ಜ್ಞಾನ ಹಾಗು ಬಲದಿಂದ ಉಪಪನ್ನನಾಗಿ ಚನ್ನಾಗಿ ಬೆಳಗುತ್ತಾನೆ. ‘ಈತ ಭವಿಷ್ಯದಲ್ಲಿ ಒಳ್ಳೆಯ ಧನುಸ್ಸುಳ್ಳವನಾಗಿಯೂ, ಬಾಹುಬಲಾಧಿಕನಾಗಿಯೂ, ಒಳ್ಳೆಯ ನೀತಿಶಾಸ್ತ್ರ ಪ್ರವೃತ್ತಕನಾಗಿಯೂ ಇರುತ್ತಾನೆ’ ಎಂಬ ವರವನ್ನು ವೇದವ್ಯಾಸರು ಅವನಿಗೆ ನೀಡುತ್ತಾರೆ.

ಜ್ಞಾತ್ವಾsಸ್ಯ ಶೂದ್ರತ್ವಮಥಾಸ್ಯ ಮಾತಾ ಪುನಶ್ಚ ಕೃಷ್ಣಂ ಪ್ರಣತಾ ಯಯಾಚೇ ।
ಅಮ್ಬಾಲಿಕಾಯಾಂ ಜನಯಾನ್ಯಮಿತ್ಯಥೋ ನೈಚ್ಛತ್ ಸ ಕೃಷ್ಣೋsಭವದಪ್ಯದೃಶ್ಯಃ ॥೧೧.೧೪೨

ವಿದುರ ಹುಟ್ಟಿದ ಮೇಲೆ, ಸತ್ಯವತಿಯು,  ಹುಟ್ಟಿದ ಮಗುವಿನ ಶೂದ್ರತ್ವವನ್ನು ತಿಳಿದು, ಮತ್ತೆ ವೇದವ್ಯಾಸರಿಗೆ  ನಮಸ್ಕರಿಸಿ, ‘ಅಂಬಾಲಿಕೆಯಲ್ಲಿ ಇನ್ನೊಬ್ಬನನ್ನು ಹುಟ್ಟಿಸು’ ಎಂದು ಬೇಡಿದಳು. ಆದರೆ ವೇದವ್ಯಾಸರು ಅದನ್ನು ಬಯಸಲಿಲ್ಲ. ಅವರು ಅಲ್ಲಿಂದ  ಅಂತರ್ಧಾನರಾದರು ಕೂಡಾ.

Monday, December 10, 2018

Mahabharata Tatparya Nirnaya Kannada 11.131-11.138


ಇತೀರಿತೇsಸ್ತ್ವಿತ್ಯುದಿತಸ್ತಯಾsಗಮತ್ ಕೃಷ್ಣೋsಮ್ಬಿಕಾಂ ಸಾ ತು ಭಿಯಾ ನ್ಯಮೀಲಯತ್ ।
ಅಭೂಚ್ಚ ತಸ್ಯಾಂ ಧೃತರಾಷ್ಟ್ರನಾಮಕೋ ಗನ್ಧರ್ವರಾಟ್ ಪವನಾವೇಶಯುಕ್ತಃ               ॥ ೧೧.೧೩೧

ಈರೀತಿಯಾಗಿ ಹೇಳಿ, ತಾಯಿ ಸತ್ಯವತಿಯಿಂದ ‘ಆಯಿತು’ ಎಂದು ಹೇಳಲ್ಪಟ್ಟ ಕೃಷ್ಣದ್ವೈಪಾಯನರು,  ಅಂಬಿಕೆಯನ್ನು ಕುರಿತು ತೆರಳಿದರು. ಅವಳಾದರೋ, ಆ ಅತಿಭಯಂಕರವಾಗಿ ಕಾಣುತ್ತಿದ್ದ ಅವರ ರೂಪವನ್ನು ಕಂಡು, ಭಯದಿಂದ ತನ್ನ ಕಣ್ಗಳನ್ನು ಮುಚ್ಚಿಕೊಂಡಳು. ಇದರಿಂದಾಗಿ ಅವಳಲ್ಲಿ ‘ಧೃತರಾಷ್ಟ್ರ’ ಎಂದೇ ಹೆಸರಿರುವ ಗಂಧರ್ವನು, ವಾಯುದೇವರ ಆವೇಶವುಳ್ಳವನಾಗಿ ಹುಟ್ಟಿದನು.

ಸ ಮಾರುತಾವೇಶಬಲಾದ್ ಬಲಾಧಿಕೋ ಬಭೂವ ರಾಜಾ ಧೃತರಾಷ್ಟ್ರನಾಮಾ।
ಅದಾದ್ ವರಂ ಚಾಸ್ಯ ಬಲಾಧಿಕತ್ವಂ ಕೃಷ್ಣೋsನ್ಧ ಆಸೀತ್ ಸ ತು ಮಾತೃದೋಷತಃ ॥ ೧೧.೧೩೨

ಹೀಗೆ  ಧೃತರಾಷ್ಟ್ರ; ಎಂದು ಹೆಸರನ್ನು ಪಡೆದ ಆ  ರಾಜನು, ಮುಖ್ಯಪ್ರಾಣನ ಆವೇಶದಿಂದಾಗಿ  ಬಲಾಧಿಕ್ಯವುಳ್ಳವನಾದನು. ಅವನಿಗೆ ವೇದವ್ಯಾಸರು ‘ಬಲಾಧಿಕತ್ವ ರೂಪವಾದ’  ವರವನ್ನೂ ಕೊಟ್ಟರು. ಅವನಾದರೋ, ತಾಯಿಯ ತಪ್ಪಿನಿಂದಾಗಿ (ವೇದವ್ಯಾಸರನ್ನು ಸೇರುವ ಸಮಯದಲ್ಲಿ ಕಣ್ಗಳನ್ನು ಮುಚ್ಚಿದ್ದರಿಂದ) ಕುರುಡನಾಗಿ ಹುಟ್ಟಿದನು.
[ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿ(೩೩.೮) ವೇದವ್ಯಾಸರು ಗಾಂಧಾರಿಯನ್ನು ಕುರಿತು ಮಾತನಾಡುತ್ತಾ, ‘ಧೃತರಾಷ್ಟ್ರ ಎಂಬ ಗಂಧರ್ವ  ಅಂಬಿಕೆಯಲ್ಲಿ ಅದೇ ಹೆಸರಿನಿಂದ ಹುಟ್ಟಿದ್ದಾನೆ ಎನ್ನುವ ಮಾತನ್ನು ಹೇಳುವುದನ್ನು ನಾವು ಕಾಣುತ್ತೇವೆ: ‘ಗಂಧರ್ವರಾಜೋ ಯೋ ಧೀಮಾನ್ ಧೃತರಾಷ್ಟ್ರ ಇತಿ ಶ್ರುತಃ। ಸ ಏವ ಮಾನುಷೇ ಲೋಕೇ ಧೃತರಾಷ್ಟ್ರಃ ಪತಿಸ್ತವ’ ಆದರೆ ಮಹಾಭಾರತದ ಆದಿಪರ್ವದಲ್ಲಿ(೬೮.೮೩-೮೪)  ಅರಿಷ್ಟಾಯಾಸ್ತು ಯಃ ಪುತ್ರೋ ಹಂಸ ಇತ್ಯಭಿವಿಶ್ರುತಃ । ಸ ಗಂಧರ್ವಪತಿರ್ಜಜ್ಞೇ ಕುರುವಂಶವಿವರ್ಧನಃ । ಧೃತರಾಷ್ಟ್ರ ಇತಿ ಖ್ಯಾತಃ ಕೃಷ್ಣದ್ವೈಪಾಯನಾತ್ಮಜಃ’ ಎಂದು ಹೇಳುತ್ತಾ, ಆ ಗಂಧರ್ವನ ಹೆಸರು ‘ಹಂಸ’ ಎಂದಿದ್ದಾರೆ.  ಇಲ್ಲಿ ನಾವು ತಿಳಿಯಬೇಕಾದ ಅಂಶ ಏನೆಂದರೆ: ಧೃತರಾಷ್ಟ್ರ ಎನ್ನುವುದು ಹಂಸದಲ್ಲಿ ಒಂದು ಜಾತಿಯಾಗಿರುವುದರಿಂದ  ಆದಿಪರ್ವದಲ್ಲಿ ಪರ್ಯಾಯ ಪದವಾಗಿ ಆತನನ್ನು ‘ಹಂಸ’ ಎಂದು ಕರೆದಿದ್ದಾರೆ. ಆದರೆ  ಮೂಲತಃ ಆ ಗಂಧರ್ವನ ಹೆಸರು ‘ಧೃತರಾಷ್ಟ್ರ’. ಹೀಗಾಗಿ  ಈ ಎರಡು ವಿವರಣೆ ಪರಸ್ಪರ ಅವಿರುದ್ಧ]

ಜ್ಞಾತ್ವಾ ತಮನ್ಧಂ ಪುನರೇವ ಕೃಷ್ಣಂ ಮಾತಾsಬ್ರವೀಜ್ಜನಯಾನ್ಯಂ ಗುಣಾಢ್ಯಮ್ ।
ಅಮ್ಬಾಲಿಕಾಯಾಮಿತಿ ತತ್ ತಥಾsಕರೋತ್ ಭಯಾತ್ತು ಸಾ ಪಾಣ್ಡುರಭೂನ್ಮೃಷಾದೃಕ್ ॥ ೧೧.೧೩೩

ಪರಾವಹೋ ನಾಮ ಮರುತ್ ತತೋsಭವದ್ ವರ್ಣ್ಣೇನ ಪಾಣ್ಡುಃ ಸ ಹಿ ನಾಮತಶ್ಚ ।
ಸ ಚಾsಸ ವೀರ್ಯ್ಯಾಧಿಕ ಏವ ವಾಯೋರಾವೇಶತಃ ಸರ್ವಶಸ್ತ್ರಾಸ್ತ್ರವೇತ್ತಾ                        ೧೧.೧೩೪

ಸತ್ಯವತಿಯು ಅಂಬಿಕೆಯ ಪುತ್ರ  ಕುರುಡ ಎಂಬುದನ್ನು ತಿಳಿದು, ಮತ್ತೆ ವೇದವ್ಯಾಸರನ್ನು ಕುರಿತು “ಇನ್ನೊಬ್ಬ ಗುಣವಂತನಾದ ಮಗನನ್ನು ಅಮ್ಬಾಲಿಕೆಯಲ್ಲಿ ಹುಟ್ಟಿಸು” ಎಂದು ಪ್ರಾರ್ಥಿಸಿದಳು. ವೇದವ್ಯಾಸರಾದರೋ, ತಾಯಿಯ ಮಾತಿಗೆ ಒಪ್ಪಿ ಮೊದಲಿನಂತೆಯೇ ಮಾಡಿದರು. ಕಣ್ಮುಚ್ಚಿ ಕುರುಡ ಮಗನನ್ನು ಅಂಬಿಕೆ ಪಡೆದಿರುವುದನ್ನು ತಿಳಿದಿರುವ  ಅಂಬಾಲಿಕೆ ವೇದವ್ಯಾಸರನ್ನು ಸೇರುವಾಗ ಕಣ್ಮುಚ್ಚಲಿಲ್ಲ. ಆದರೆ ಭಯದಿಂದ, ದೇವರ ಬಗ್ಗೆ ತಪ್ಪು ತಿಳಿದು, ಬಿಳಿಚಿಕೊಂಡಳು.
ಈ ರೀತಿ ಬಿಳಿಚಿಕೊಂಡ ಅಂಬಾಲಿಕೆಯಲ್ಲಿ  ‘ಪರಾವಹ’ ಎಂಬ ಹೆಸರುಳ್ಳ ಮರುತ್ದೇವತೆಯು ಹುಟ್ಟಿದನು. ಬಣ್ಣದಿಂದ ಪಾಣ್ಡುವಾಗಿದ್ದ (ಬಿಳಿಚಿದವನಾಗಿದ್ದ) ಆತ, ಪಾಣ್ಡುಃ ಎನ್ನುವ ಹೆಸರಿನವನಾದನು.  ಅವನು ಮುಖ್ಯಪ್ರಾಣನ ಆವೇಶದಿಂದ ವೀರ್ಯಾಧಿಕನೂ, ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಲ್ಲವನೂ ಆದನು.

ತಸ್ಮೈ ತಥಾ ಬಲವೀರ್ಯ್ಯಾಧಿಕತ್ವವರಂ ಪ್ರಾದಾತ್ ಕೃಷ್ಣ ಏವಾಥ ಪಾಣ್ಡುಮ್  
ವಿಜ್ಞಾಯ ತಂ ಪ್ರಾಹ ಪುನಶ್ಚ ಮಾತಾ ನಿರ್ದ್ದೋಷಮನ್ಯಂ ಜನಯೋತ್ತಮಂ ಸುತಮ್॥ ೧೧.೧೩೫

ಹೀಗೆ ಹುಟ್ಟಿ ಬಂದ  ಪಾಂಡುವಿಗೆ ಕೃಷ್ಣನು(ವೇದವ್ಯಾಸನು)  ಬಲ ಹಾಗೂ ವೀರ್ಯದಿಂದ ಅಧಿಕನಾಗಿರು ಎಂಬ ವರವನ್ನು ಕೊಟ್ಟನು. ತದನಂತರ, ಈತ ಬಿಳಿಚಿಕೊಂಡವನು ಎಂದು ತಿಳಿದ ಸತ್ಯವತಿಯು ಮತ್ತೆ ‘ದೋಷವಿಲ್ಲದ ಇನ್ನೊಬ್ಬ ಉತ್ಕೃಷ್ಟನಾದ ಮಗನನ್ನು ಹುಟ್ಟಿಸು’ ಎಂದು ಹೇಳಿದಳು.

ಉಕ್ತ್ವೇತಿ ಕೃಷ್ಣಂ ಪುನರೇವ ಚ ಸ್ನುಷಾಮಾಹ ತ್ವಯಾsಕ್ಷ್ಣೋರ್ಹಿ ನಿಮೀಲನಂ ಪುರಾ ।
ಕೃತಂ ತತಸ್ತೇ ಸುತ ಆಸ ಚಾನ್ಧಸ್ತತಃ ಪುನಃ ಕೃಷ್ಣಮುಪಾಸ್ವ ಭಕ್ತಿತಃ ॥ ೧೧.೧೩೬

ವೇದವ್ಯಾಸರನ್ನು ಪ್ರಾರ್ಥಿಸಿಕೊಂಡ ಸತ್ಯವತಿಯು, ಸೊಸೆಯನ್ನು ಕುರಿತು: “ಹಿಂದೆ ನಿನ್ನಿಂದ ಕಣ್ಣುಗಳ ಮುಚ್ಚುವಿಕೆಯು ಮಾಡಲ್ಪಟ್ಟಿತ್ತು. ಆ ಕಾರಣದಿಂದ ನಿನ್ನ ಮಗನು ಕುರುಡನಾಗುವಂತಾಯಿತು. ಇದೀಗ ಮತ್ತೆ ಭಕ್ತಿಯಿಂದ ವೇದವ್ಯಾಸರನ್ನು ನೀನು ಉಪಾಸನೆ ಮಾಡು” ಎಂದಳು.

ಇತೀರಿತಾsಪ್ಯಸ್ಯ ಹಿ ಮಾಯಯಾ ಸಾ ಭೀತಾ ಭುಜಿಷ್ಯಾಂ ಕುಮತಿರ್ನ್ನ್ಯಯೋಜಯತ್ ।
ಸಾ ತಂ ಪರಾನನ್ದತನುಂ ಗುಣಾರ್ಣ್ಣವಂ ಸಮ್ಪ್ರಾಪ್ಯ ಭಕ್ತ್ಯಾ ಪರಯೈವ ರೇಮೇ ॥ ೧೧.೧೩೭


ತಸ್ಯಾಂ ಸ ದೇವೋsಜನಿ ಧರ್ಮ್ಮರಾಜೋ ಮಾಣ್ಡವ್ಯಶಾಪಾದ್ ಯ ಉವಾಹ ಶೂದ್ರತಾಮ್ ।
ವಸಿಷ್ಠಸಾಮ್ಯಂ ಸಮಭೀಪ್ಸಮಾನಂ ಪ್ರಚ್ಯಾವಯನ್ನಿಚ್ಛಯಾ ಶಾಪಮಾಪ              ೧೧.೧೩೮

ಸತ್ಯವತಿಯಿಂದ ಸ್ಪಷ್ಟವಾಗಿ ಹೇಳಲ್ಪಟ್ಟರೂ ಕೂಡಾ, ವೇದವ್ಯಾಸರ ಮಾಯೆಯಿಂದ ಭಯಗೊಂಡ ಅಂಬಿಕೆಯು, ಕೆಟ್ಟಬುದ್ಧಿ ಉಳ್ಳವಳಾಗಿ, ತನ್ನ ಬದಲು ದಾಸಿಯನ್ನು ವಿನಿಯೋಗಿಸಿದಳು. ಅವಳಾದರೋ, ಉತ್ಕೃಷ್ಟವಾದ ಆನಂದವೇ ಮೈದಾಳಿ ಬಂದ, ಗುಣಗಳಿಗೆ ಕಡಲಿನಂತೆ ಇರುವವನನ್ನು ಉತ್ತಮವಾದ ಭಕ್ತಿಯಿಂದ ಹೊಂದಿ ಕ್ರೀಡಿಸಿದಳು.
ಆ ಪರಿಚಾರಿಣಿಯಲ್ಲಿ ಧರ್ಮದೇವತೆಯಾದ ಯಮಧರ್ಮರಾಜನೇ ಹುಟ್ಟಿ ಬಂದನು. ವಸಿಷ್ಠರಿಗೆ ಸಮನಾಗಬೇಕು ಎಂದು ಬಯಸುತ್ತಿದ್ದ ಮಾಂಡವ್ಯ ಋಷಿಯನ್ನು ಆ ಮಾರ್ಗದಿಂದ ದೂರ ಸರಿಸಿ, ಇಚ್ಛೆಪಟ್ಟು  ಶಾಪವನ್ನು ಹೊಂದಿ,  ಅದರಿಂದಲೇ ಶೂದ್ರನಾಗಿ ಇಲ್ಲಿ ಹುಟ್ಟಿ ಬಂದನು.

Friday, December 7, 2018

Mahabharata Tatparya Nirnaya Kannada 11.124-11.130


ವಿಚಿತ್ರವೀರ್ಯ್ಯಃ ಪ್ರಮದಾದ್ವಯಂ ತತ್ ಸಮ್ಪ್ರಾಪ್ಯ ರೇಮೇsಬ್ದಗಣಾನ್ ಸುಸಕ್ತಃ ।
ತತ್ಯಾಜ ದೇಹಂ ಚ ಸ ಯಕ್ಷ್ಮಣಾsರ್ದ್ದಿತಸ್ತತೋsಸ್ಯ ಮಾತಾsಸ್ಮರದಾಶು ಕೃಷ್ಣಮ್ ॥೧೧.೧೨೪

ಇತ್ತ ವಿಚಿತ್ರವೀರ್ಯನು ಅಂಬಿಕೆ ಹಾಗು ಅಂಬಾಲಿಕೆಯರನ್ನು ಹೊಂದಿ, ಅತ್ಯಂತ ಆಸಕ್ತನಾಗಿ ಸುಮಾರು ವರ್ಷಗಳ ಕಾಲ ಅವರೊಂದಿಗೆ ಕ್ರೀಡಿಸಿದ. ಆದರೆ ನಂತರ ಅವನು ಕ್ಷಯದಿಂದ ಪೀಡಿತನಾಗಿ ದೇಹವನ್ನು ಬಿಟ್ಟನು. ವಿಚಿತ್ರವೀರ್ಯನ ಸಾವಿನ ನಂತರ ತಕ್ಷಣ ತಾಯಿ ಸತ್ಯವತಿಯು ವೇದವ್ಯಾಸರನ್ನು ಸ್ಮರಣೆ ಮಾಡಿಕೊಳ್ಳುತ್ತಾಳೆ.

ಆವಿರ್ಬಭೂವಾsಶು ಜಗಜ್ಜನಿತ್ರೋ ಜನಾರ್ದ್ದನೋ ಜನ್ಮಜರಾಭಯಾಪಹಃ ।
ಸಮಸ್ತ ವಿಜ್ಞಾನತನುಃ ಸುಖಾರ್ಣ್ಣವಃ ಸಮ್ಪೂಜಯಾಮಾಸ ಚ ತಂ ಜನಿತ್ರೀ ॥೧೧.೧೨೫

ಜಗತ್ತಿನ ಹುಟ್ಟಿಗೆ ಕಾರಣನಾದ, ಮುದಿತನ-ಅಳುಕುಗಳನ್ನು ಪರಿಹಾರ ಮಾಡುವ, ಅರಿವೇ ಮೈವೆತ್ತು ಬಂದಿರುವ, ಸುಖಕ್ಕೆ ಕಡಲಿನಂತೆ ಇರುವ ವ್ಯಾಸರೂಪಿ ನಾರಾಯಣನು  ತತ್ ಕ್ಷಣದಲ್ಲಿ ಸತ್ಯವತಿಯ ಮುಂದೆ ಆವಿರ್ಭವಿಸುತ್ತಾನೆ. ಸತ್ಯವತಿಯು  ವೇದವ್ಯಾಸರನ್ನು ಭಕ್ತಿಪೂರ್ವಕವಾಗಿ ಗೌರವಿಸುತ್ತಾಳೆ.

ತಂ ಭೀಷ್ಮಪೂರ್ವೈಃ ಪರಮಾದರಾರ್ಚ್ಚಿತಂ ಸ್ವಭಿಷ್ಟುತಂ ಚಾವದದಸ್ಯ ಮಾತಾ ।
ಪುತ್ರೌ ಮೃತೌ ಮೇ ನತು ರಾಜ್ಯಮೈಚ್ಛದ್ ಭೀಷ್ಮೋ ಮಯಾ ನಿತರಾಮರ್ತ್ಥಿತೋsಪಿ॥೧೧.೧೨೬

ಕ್ಷೇತ್ರೇ ತತೋ ಭ್ರಾತುರಪತ್ಯಮುತ್ತಮಮುತ್ಪಾದಯಾಸ್ಮತ್ಪರಮಾದರಾರ್ತ್ಥಿತಃ ।
ಇತೀರಿತಃ ಪ್ರಣತಶ್ಚಾಪ್ಯಭಿಷ್ಟುತೋ ಭೀಷ್ಮಾದಿಭಿಷ್ಚಾsಹ ಜಗದ್ಗುರುರ್ವಚಃ         ॥೧೧.೧೨೭

ಭೀಷ್ಮಾಚಾರ್ಯರೇ ಮೊದಲಾದವರಿಂದ ಅತ್ಯಂತ ಆದರದಿಂದ ಪೂಜಿಸಲ್ಪಟ್ಟ, ತನ್ನಿಂದಲೂ ಸ್ತುತಿಸಲ್ಪಟ್ಟ ವ್ಯಾಸರನ್ನು ಕುರಿತು  ಸತ್ಯವತಿಯು ಮಾತನಾಡುತ್ತಾಳೆ:
“ನನ್ನ ಮಕ್ಕಳು ಸತ್ತಿದ್ದಾರೆ. ಭೀಷ್ಮನು ನನ್ನಿಂದ ಚನ್ನಾಗಿ ಪ್ರಾರ್ಥಿಸಲ್ಪಟ್ಟರೂ ಕೂಡಾ ರಾಜ್ಯವನ್ನು ಬಯಸಲಿಲ್ಲಾ. ಈ  ಕಾರಣದಿಂದ, ನಮ್ಮಿಂದ ಚನ್ನಾಗಿ ಪೂಜೆಗೊಂಡ ನೀನು, ನಮ್ಮಿಂದ ಬೇಡಲ್ಪಟ್ಟವನಾದ ನೀನು,  ನಿನ್ನ ಸಹೋದರನ ಹೆಂಡತಿಯಲ್ಲಿ ಉತ್ಕೃಷ್ಟವಾದ ಮಗುವನ್ನು ಹುಟ್ಟಿಸು”.
ಈರೀತಿ ಹೇಳಲ್ಪಟ್ಟ, ಭೀಷ್ಮಾದಿಗಳಿಂದ ಸ್ತೋತ್ರಮಾದಲ್ಪಟ್ಟವರಾಗಿರುವ ವೇದವ್ಯಾಸರು ತಾಯಿಯನ್ನು ಕುರಿತು  ಮಾತನ್ನು ಹೇಳಿದರು:

ಋತೇ ರಮಾಂ ಜಾತು ಮಮಾಙ್ಗಯೋಗಯೋಗ್ಯಾsಙ್ಗನಾ ನೈವ ಸುರಾಲಯೇsಪಿ ।
ತಥಾsಪಿ ತೇ ವಾಕ್ಯಮಹಂ ಕರಿಷ್ಯೇ ಸಾಂವತ್ಸರಂ ಸಾ ಚರತು ವ್ರತಂ ಚ ॥೧೧.೧೨೮

ಸಾ ಪೂತದೇಹಾsಥ ಚ ವೈಷ್ಣವವ್ರತಾನ್ಮತ್ತಃ ಸಮಾಪ್ನೋತು ಸುತಂ ವರಿಷ್ಠಮ್ ।
ಇತೀರಿತೇ ರಾಷ್ಟ್ರಮುಪೈತಿ ನಾಶಮಿತಿ ಬ್ರುವನ್ತೀಂ ಪುನರಾಹ ವಾಕ್ಯಮ್ ೧೧.೧೨೯

ಸೌಮ್ಯಸ್ವರೂಪೋsಪ್ಯತಿಭೀಷಣಂ ಮೃಷಾ ತಚ್ಚಕ್ಷುಷೋ ರೂಪಮಹಂ ಪ್ರದರ್ಶಯೇ ।
ಸಹೇತ ಸಾ ತದ್ ಯದಿ ಪುತ್ರಕೋsಸ್ಯಾ ಭವೇದ್ ಗುಣಾಢ್ಯೋ ಬಲವೀರ್ಯ್ಯಯುಕ್ತಃ ॥೧೧.೧೩೦

“ಲಕ್ಷ್ಮೀ ದೇವಿಯನ್ನು ಹೊರತುಪಡಿಸಿ ನನ್ನ ಅಂಗ-ಸಂಗವನ್ನು ಪಡೆಯುವ ಭಾಗ್ಯವುಳ್ಳ ಹೆಣ್ಣು ಸ್ವರ್ಗದಲ್ಲೂ (ಯಾವ ಲೋಕದಲ್ಲೂ) ಕೂಡಾ ಇಲ್ಲಾ. ಆದರೂ ಕೂಡಾ, ನಿನ್ನ ಮಾತನ್ನು ನಾನು ನಡೆಸಿಕೊಡುತ್ತೇನೆ.  ಅವಳು (ನಿನ್ನ ಸೊಸೆ) ಒಂದು ವರ್ಷದ ಕಾಲ ಇರುವ ವ್ರತವನ್ನು ನಡೆಸಲಿ.
ಈ ರೀತಿ ವೈಷ್ಣವ ವ್ರತ ಮಾಡಿಯಾದಮೇಲೆ, ಪವಿತ್ರವಾದ ದೇಹವುಳ್ಳ ಅವಳು, ನನ್ನಿಂದ ಶ್ರೇಷ್ಠನಾದ ಮಗನನ್ನು ಹೊಂದಲಿ”  ಎಂದು ಹೇಳಲ್ಪಡುತ್ತಿರಲು, “ದೇಶವು ರಾಜನಿಲ್ಲದೇ ನಾಶ ಹೊಂದುತ್ತದೆ. ಹಾಗಾಗಿ ಈಗಲೇ ಅವರು ಗರ್ಭಧರಿಸುವಂತೆ ಮಾಡು” ಎಂದು ಹೇಳುತ್ತಿರುವ ತನ್ನ ತಾಯಿಯನ್ನು ಕುರಿತು, ಮತ್ತೆ ಹೇಳುತ್ತಾರೆ: “ನಾನು ಸುಂದರವಾದ ರೂಪವುಳ್ಳವನಾದರೂ, ಸುಮ್ಮನೆ ಅವಳ ಕಣ್ಣಿಗೆ ಮಾತ್ರ ಅತಿಭಯಂಕರವಾದ ರೂಪವನ್ನು ತೋರಿಸುತ್ತೇನೆ.  ಒಂದು ವೇಳೆ ಅವಳು ಅದನ್ನು ಸಹಿಸಿದರೆ, ಅವಳಿಗೆ ಬಲವೀರ್ಯದಿಂದ ಹಾಗು ಯುಕ್ತವಾದ ಗುಣಗಳಿಂದ ತುಂಬಿದ ಮಗನು ಹುಟ್ಟುತ್ತಾನೆ” ಎಂದು. 

Thursday, December 6, 2018

Mahabharata Tatparya Nirnaya Kannada 11.116-11.123


ಗಾನ್ಧರ್ವಂ ದೇಹಮಾವಿಶ್ಯ ಸ್ವಕೀಯಂ ಭವನಂ ಯಯೌ
ತಸ್ಯಾಸ್ತದ್ದೇಹಸಾದೃಶ್ಯಂ ಗನ್ಧರ್ವಸ್ಯ ಪ್ರಸಾದತಃ ೧೧.೧೧೬

ಪ್ರಾಪ ಗನ್ಧರ್ವದೇಹೋsಪಿ ತಯಾ ಪಶ್ಚಾದಧಿಷ್ಠಿತಃ ।
ಶ್ವೋ ದೇಹಿ ಮಮ ದೇಹಂ ಮೇ ಸ್ವಂ ಚ ದೇಹಂ ಸಮಾವಿಶ     ೧೧.೧೧೭


ಗಂಧರ್ವನಿಗೆ ಸಂಬಂಧಪಟ್ಟ ದೇಹವನ್ನು ಪ್ರವೇಶ ಮಾಡಿದ ಶಿಖಂಡಿನೀ ತನ್ನ ಮನೆಯನ್ನು ಕುರಿತು ತೆರಳಿದಳು. ಗಂಧರ್ವನ ಅನುಗ್ರಹದಿಂದ ಅವಳಿಗೆ ಆ ದೇಹದ ಸಾದೃಶ್ಯವೂ ದೊರಕಿತ್ತು.
ಹೀಗೆ ಗಂಧರ್ವ ದೇಹವು ಅವಳಿಂದ ಅಧಿಷ್ಠಿತವಾಗಿದ್ದರೂ ಕೂಡಾ, ಹಿಂದೆ ಯಾವ ರೂಪದ ದೇಹವಿತ್ತೋ, ಅದೇ ರೀತಿಯ ದೇಹದ ಸಾದೃಶ್ಯ ಅಲ್ಲಿತ್ತು. 

ಇತ್ಯುಕ್ತ್ವಾ ಸ ತು ಗನ್ಧರ್ವಃ ಕನ್ಯಾದೇಹಂ ಸಮಾಸ್ಥಿತಃ ।
ಉವಾಸೈವ ವನೇ ತಸ್ಮಿನ್ ಧನದಸ್ತತ್ರ ಚಾsಗಮತ್                ೧೧.೧೧೮

ಅಪ್ರತ್ಯುತ್ಥಾಯಿನಂ ತನ್ತುಲೀಯಮಾನಂ ವಿಲಜ್ಜಯಾ ।
ಶಶಾಪ ಧನದೋ ದೇವಶ್ಚಿರಮಿತ್ಥಂ ಭವೇತಿ ತಮ್                ೧೧.೧೧೯

ಈರೀತಿಯಾಗಿ  ‘ನನಗೆ ನಾಳೆ ನನ್ನ ದೇಹವನ್ನು ನೀಡಿ,  ನಿನ್ನದಾಗಿರುವ ದೇಹವನ್ನು ನೀನು ಪ್ರವೇಶ ಮಾಡತಕ್ಕದ್ದು’ ಎನ್ನುವ ಒಪ್ಪಂದದಂತೆ  ಆ ಗಂಧರ್ವನು ಶಿಖಂಡಿನೀಯ ದೇಹವನ್ನು ಪ್ರವೇಶ ಮಾಡಿದ್ದನು.

ಶಿಖಂಡಿನೀ ತೆರಳಿದ ಮೇಲೆ, ಕನ್ಯಾದೇಹವನ್ನು ಹೊಂದಿದ  ತುಮ್ಬುರು ಆ ಕಾಡಿನಲ್ಲೇ ಇದ್ದನು. ಆ ಸಮಯದಲ್ಲೇ ಅಲ್ಲಿಗೆ ಕುಬೇರನ ಆಗಮನವಾಗುತ್ತದೆ. ತನ್ನನ್ನು ನೋಡಿಯೂ ಕೂಡಾ ಗೌರವ ಕೊಡದೆ, ಬಳ್ಳಿಯಂತೆ ನಾಚಿಕೆಯಿಂದ ಅಡಗಿಕೊಂಡ ತುಮ್ಬುರುವನ್ನು ಕಂಡ ಕುಬೇರ ಕೋಪಗೊಂಡು:  “ಬಹುಕಾಲ ಇದೇ ರೀತಿ ಸ್ತ್ರೀದೇಹವುಳ್ಳವನಾಗಿರು” ಎಂಬುದಾಗಿ ಶಪಿಸುತ್ತಾನೆ.

ಯದಾ ಯುದ್ಧೇ ಮೃತಿಂ ಯಾತಿ ಸಾ ಕನ್ಯಾ ಪುನ್ತನುಸ್ಥಿತಾ ।
ತದಾ ಪುಂಸ್ತ್ವಂ ಪುನರ್ಯ್ಯಾಸಿ ಚಪಲತ್ವಾದಿತೀರಿತಃ ॥೧೧.೧೨೦

ಕೋಪದಿಂದ ಶಾಪವನ್ನಿತ್ತಿದ್ದ  ಕುಬೇರ, ತದನಂತರ, ತನ್ನ ಶಾಪಕ್ಕೆ ಪರಿಹಾರವನ್ನು ತಿಳಿಸುತ್ತಾ ಹೇಳುತ್ತಾನೆ:   “ಎಂದು ಯುದ್ಧದಲ್ಲಿ ನಿನ್ನ ಗಂಡು ದೇಹದಲ್ಲಿ ಇರತಕ್ಕಂತಹ ಆ ಹೆಣ್ಣು ಸಾಯುತ್ತಾಳೋ, ಆಗ ಮತ್ತೆ ನೀನು ಗಂಡಾಗುತ್ತೀಯಾ” ಎಂದು. ಮುಂದುವರಿದು ಕುಬೇರ ಹೇಳುತ್ತಾನೆ: “ಚಪಲದಿಂದ ನೀನು ದೇಹ ಬದಲಿಸುವ ಈ ಕಾರ್ಯ ಮಾಡಿರುವುದರಿಂದ,  ಅಲ್ಲಿಯ ತನಕ ಈ ಶಾಪವನ್ನು ಅನುಭವಿಸಬೇಕು” ಎಂದು.

ತಥಾsವಸತ್ ಸ ಗನ್ಧರ್ವಃ ಕನ್ಯಾ ಪಿತ್ರೋರಶೇಷತಃ
ಕಥಯಾಮಾಸಾನುಭೂತಂ ತೌ ಭೃಶಂ ಮುದಮಾಪತುಃ           ೧೧.೧೨೧

ಕುಬೇರನ ಶಾಪದಂತೆ ಆ ಗಂಧರ್ವನು ಅದೇ ದೇಹಸ್ಥಿತಿಯಲ್ಲಿಯೇ ಕಾಡಿನಲ್ಲಿ  ವಾಸಮಾಡುವಂತಾಯಿತು. ಇತ್ತ, ಗಂಡಿನ ದೇಹದೊಂದಿಗೆ ಹಿಂದಿರುಗಿದ ಶಿಖಂಡಿನೀಯು, ತಂದೆ-ತಾಯಿಗಳಿಗೆ  ಕಾಡಿನಲ್ಲಿ  ನಡೆದ ಘಟನೆಯನ್ನು ಸಂಪೂರ್ಣವಾಗಿ ತಿಳಿಸುತ್ತಾಳೆ. ಆಗ  ದ್ರುಪದ  ದಂಪತಿಗಳು ಸಂತೋಷವನ್ನು ಹೊಂದುತ್ತಾರೆ.

ಪರೀಕ್ಷ್ಯ ತಾಮುಪಾಯೈಶ್ಚ ಶ್ವಶುರೋ ಲಜ್ಜಿತೋ ಯಯೌ
ಶ್ವೋಭೂತೇ ಸಾ ತು ಗನ್ಧರ್ವಂ ಪ್ರಾಪ್ಯ ತದ್ವಚನಾತ್ ಪುನಃ            ೧೧.೧೨೨

ನಂತರ ಹಿರಣ್ಯವರ್ಮನು ಶಿಖಂಡಿನೀಯ ಪೌರುಷಪರೀಕ್ಷೆಯನ್ನು ಎಲ್ಲಾ ಉಪಾಯಗಳಿಂದ ಪರೀಕ್ಷಿಸಿ, ಸೋತು, ನಾಚಿಕೊಂಡು ಹಿಂತಿರುಗುತ್ತಾನೆ. ಮಾರನೇದಿನ ಶಿಖಂಡಿನೀ ಕೊಟ್ಟ ಮಾತಿನಂತೆ ತುಮ್ಬುರುವಿದ್ದಲ್ಲಿಗೆ  ತಾನು ಅವನಿಂದ ಪಡೆದ ಗಂಡು ದೇಹವನ್ನು ಹಿಂತಿರುಗಿಸುವ ಸಲುವಾಗಿ ತೆರಳುತ್ತಾಳೆ.

ಯಯೌ ತೇನೈವ ದೇಹೇನ ಪುಂಸ್ತ್ವಮೇವ ಸಮಾಶ್ರಿತಾ ।
ಸ ಶಿಖಣ್ಡೀ ನಾಮತೋsಭೂದಸ್ತ್ರಶಸ್ತ್ರಪ್ರತಾಪವಾನ್ ॥೧೧.೧೨೩

ಹೀಗೆ ಹಿಂದಿರುಗಿ ಬಂದ ಶಿಖಂಡಿನೀಯನ್ನು ಕುರಿತು ತುಮ್ಬುರು ಹೇಳುತ್ತಾನೆ: “ನಾನು ನಿನಗೆ ಔಧಾರ್ಯದಿಂದ ನನ್ನ ದೇಹವನ್ನು ಕೊಟ್ಟಿದ್ದೇನೆ.  ನೀನು ಬದುಕಿರುವ ತನಕ ಈ ದೇಹ ನಿನ್ನಲ್ಲಿರುತ್ತದೆ” ಎಂದು.  ಅವನ ಮಾತಿನಂತೆ, ಅದೇ ದೇಹದಿಂದ ಪುರುಷತ್ತ್ವವನ್ನು ಹೊಂದಿದವಳಾಗಿ ಶಿಖಂಡಿನೀ ಹಿಂತಿರುಗುತ್ತಾಳೆ. ಹೀಗೆ ಗಂಡು ದೇಹವನ್ನು ಪಡೆದ  ಆಕೆ,  ‘ಶಿಖಣ್ಡೀ’ ಎಂಬ ಹೆಸರಿನವನಾಗಿ,  ಶಾಸ್ತ್ರಾರ್ಥ ಪ್ರವೀಣನಾಗುತ್ತಾನೆ.