ಸ್ಥೂಣಾಕರ್ಣ್ಣಾಭಿಧೇಯಸ್ತಾಮಪಶ್ಯದ್ ದೃಢಕರ್ಣ್ಣತಃ ।
ಸ ತಸ್ಯಾ ಅಖಿಲಂ ಶ್ರುತ್ವಾ ಕೃಪಾಂ ಚಕ್ರೇ ಮಹಾಮನಾಃ ॥೧೧.೧೧೧॥
ದೃಢಕರ್ಣ್ಣನಾದ್ದರಿಂದ(ಗಟ್ಟಿಯಾದ
ಕಿವಿ ಉಳ್ಳವನಾದ್ದರಿಂದ) ಸ್ಥೂಣಾಕರ್ಣಾ^ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಆ ತುಮ್ಬುರುವು, ಕಾಡಿನಲ್ಲಿ ಬರುತ್ತಿರುವ ಶಿಖಣ್ಡಿನೀಯನ್ನು
ಕಂಡ ಮತ್ತು ಆಕೆಯಿಂದ ಎಲ್ಲವನ್ನೂ ಕೇಳಿ ತಿಳಿದು, ಮಹಾಔಧಾರ್ಯ ಉಳ್ಳವನಾಗಿ, ಅವಳ ಮೇಲೆ
ಕರುಣೆಯನ್ನು ತೋರಿದ.
[ಕೆಲವೊಂದು ಕಡೆ ಶಿಖಣ್ಡಿನೀಗೆ
ಸ್ಥೂಣಾಕರ್ಣಾ ಪುಂಸ್ವತ್ವವನ್ನು ಕೊಟ್ಟ ಎಂದು ಹೇಳಿದರೆ, ಇನ್ನು ಕೆಲವೆಡೆ ತುಮ್ಬುರುವಿಂದ ಆಕೆ ಪುಂಸ್ವತ್ವ ಪಡೆದಳು ಎಂದಿದ್ದಾರೆ.
ಈ ಗೊಂದಲವನ್ನು ಆಚಾರ್ಯರು ಇಲ್ಲಿ ಪರಿಹರಿಸಿದ್ದಾರೆ. ದೃಢಕರ್ಣ್ಣನಾಗಿದ್ದ ತುಮ್ಬುರುವನ್ನು ಸ್ಥೂಣಾಕರ್ಣಾ
ಎಂದೂ ಕರೆಯುತ್ತಿದ್ದರು ಎನ್ನುವುದನ್ನು ನಾವಿಲ್ಲಿ ತಿಳಿಯುತ್ತೇವೆ.]
ಸ ತಸ್ಯೈ ಸ್ವಂ ವಪುಃ ಪ್ರಾದಾತ್ ತದೀಯಂ ಜಗೃಹೇ ತಥಾ ।
ಅಂಶೇನ ಪುಂಸ್ವಭಾವಾರ್ತ್ಥಂ ಪೂರ್ವದೇಹೇ ಸಮಾಸ್ಥಿತಃ ॥೧೧.೧೧೨॥
ಪುಂಸಾಂ ಸ್ತ್ರೀತ್ವಂ ಭವೇತ್ ಕ್ವಾಪಿ ತಥಾsಪ್ಯನ್ತೇ ಪುಮಾನ್ ಭವೇತ್ ।
ಸ್ತ್ರೀಣಾಂ ನೈವ ಹಿ ಪುಂಸ್ತ್ವಂ ಸ್ಯಾದ್ ಬಲವತ್ಕಾರಣೈರಪಿ ॥೧೧.೧೧೩॥
ಅತಃ ಶಿವವರೇsಪ್ಯೇಷಾ ಜಜ್ಞೇ ಯೋಷೈವ
ನಾನ್ಯಥಾ ।
ಪಶ್ಚಾತ್ ಪುಂದೇಹಮಪಿ ಸಾ ಪ್ರವಿವೇಶೈವ ಪುಂಯುತಮ್ ॥೧೧.೧೧೪॥
ನಾಸ್ಯಾ ದೇಹಃ ಪುಂಸ್ತ್ವಮಾಪ ನಚ ಪುಂಸಾsನಧಿಷ್ಠಿತೇ ।
ಪುಂದೇಹೇ ನ್ಯವಸತ್ ಸಾsಥ ಗನ್ಧರ್ವೇಣ
ತ್ವಧಿಷ್ಠಿತಮ್ ॥೧೧.೧೧೫॥
ತುಮ್ಬುರುವು ಶಿಖಂಡಿನೀಗೆ
ತನ್ನ ದೇಹವನ್ನು ಕೊಟ್ಟು, ಆಕೆಯ ದೇಹವನ್ನು ತಾನು ಸ್ವೀಕರಿಸಿದ. ನಂತರ ಅವಳ ದೇಹದಲ್ಲಿ
ಪುಂಸ್ವಭಾವ ಬರಲೆಂದು ಅವಳಿಗೆ ಕೊಟ್ಟ ಆ ದೇಹದಲ್ಲಿ ಒಂದಂಶದಿಂದ ತಾನೂ ಅಧಿಷ್ಠಿತನಾದ.
ಏಕೆ ತುಮ್ಬುರು ಆ
ದೇಹದಲ್ಲಿ ಅಧಿಷ್ಠಿತನಾದ ಎನ್ನುವುದನ್ನು ವಿವರಿಸುತ್ತಾ ಆಚಾರ್ಯರು ಹೇಳುತ್ತಾರೆ: ಗಂಡು ಮಕ್ಕಳಿಗೆ ಪಾಪ, ಶಾಪಾದಿ ದೋಷದಿಂದ ಸ್ತ್ರೀತ್ವ
ಬಂದೀತು. ಆದರೂ ಅಂತಹ ಜೀವ ಮುಕ್ತಿಯನ್ನು ಹೊಂದುವ ಕಾಲದಲ್ಲಿ ಪುರುಷನೇ ಆಗುತ್ತಾನೆ. ಆದರೆ ಸ್ತ್ರೀಯರಿಗೆ
ಪುಂಸ್ವ ಬರುವುದೇ ಇಲ್ಲಾ. ಎಷ್ಟೇ ಬಲಿಷ್ಟವಾದ ಕಾರಣ ಇದ್ದರೂ ಕೂಡಾ ಹೆಣ್ಣು ಗಂಡಾಗುವುದಿಲ್ಲಾ. ಈ
ಕಾರಣದಿಂದ ಶಿವನ ವರವಿದ್ದರೂ ಕೂಡಾ, ಆಕೆ ಹೆಣ್ಣೇ
ಆದಳು ಹೊರತು ಗಂಡಾಗಿ ಪರಿವರ್ತನೆಯಾಗಲಿಲ್ಲಾ. ಈರೀತಿ ತುಮ್ಬುರು ಒಂದಂಶದಿಂದ ಅಧಿಷ್ಠಿತವಾಗಿರುವ ಪುಂದೇಹವನ್ನು
ಶಿಖಂಡಿನೀ ಪ್ರವೇಶಿಸಿದಳು.
ಹೀಗೆ ಶಿಖಂಡಿನೀಯ ದೇಹವು
ಗಂಡಾಗಿ ಪರಿವರ್ತನೆ ಆಗಲಿಲ್ಲಾ ಮತ್ತು ಆಕೆ ಗಂಡಿನಿಂದ ಅಧಿಷ್ಠಿತವಲ್ಲದ ಗಂಡಿನ ದೇಹದಲ್ಲಿ ವಾಸ
ಮಾಡಲಿಲ್ಲಾ. ಪುಂದೇಹದಲ್ಲಿ ಪುರುಷನಿಂದ ಅಧಿಷ್ಠಿತವಾದ ನಂತರವೇ ಆಕೆ ಪ್ರವೇಶ ಮಾಡಿದಳು.
[ಶಿಖಂಡಿನೀ ಗಂಡಿನ
ದೇಹದಲ್ಲಿ ಸ್ವತಂತ್ರವಾಗಿರಲಿಲ್ಲಾ. ಆಕೆ ಮೊದಲು ಸ್ತ್ರೀಯಾಗಿದ್ದಳು. ಆನಂತರ ಪುರುಷ ಶರೀರವನ್ನು
ಪ್ರವೇಶ ಮಾಡಿದಳು. ಆ ದೇಹದಲ್ಲಿ ಒಂದಂಶದಲ್ಲಿ ಪುರುಷನಾದ ತುಮ್ಬುರು ಇದ್ದ. ಒಂದು ವೇಳೆ ಆ ದೇಹದೊಳಗೆ ಕೇವಲ ಶಿಖಂಡಿನೀ ಮಾತ್ರ
ಪ್ರವೇಶಿಸಿದ್ದರೆ ಅದು ಹೆಣ್ಣುದೇಹವಾಗಿಯೇ ಇರುತ್ತಿತ್ತು]
No comments:
Post a Comment