ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 3, 2018

Mahabharata Tatparya Nirnaya Kannada 11.103-11.110


ಏತಸ್ಮಿನ್ನೇವ ಕಾಲೇ ತು ಸುತಾರ್ತ್ಥಂ ದ್ರುಪದಸ್ತಪಃ ।
ಚಕಾರ ಶಮ್ಭವೇ ಚೈನಂ ಸೋsಬ್ರವೀತ್ ಕನ್ಯಕಾ ತವ                    ॥೧೧.೧೦೩

ಭೂತ್ವಾ ಭವಿಷ್ಯತಿ ಪುಮಾನಿತಿ ಸಾsಮ್ಬಾ ತತೋsಜನಿ ।
ನಾಮ್ನಾ ಶಿಖಣ್ಡಿನೀ ತಸ್ಯಾಃ ಪುಂವತ್ ಕರ್ಮ್ಮಾಣಿ ಚಾಕರೋತ್ ॥೧೧.೧೦೪

ಇದೇ ಕಾಲದಲ್ಲಿ ದ್ರುಪದನು ಮಕ್ಕಳನ್ನು ಬಯಸಿ ರುದ್ರ ದೇವರನ್ನು ಕುರಿತು ತಪಸ್ಸನ್ನು ಮಾಡುತ್ತಿದ್ದನು.  ರುದ್ರ ದೇವರು ದ್ರುಪದನಿಗೆ: “ನಿನಗೆ ಹೆಣ್ಣು ಮಗಳು ಹುಟ್ಟುತ್ತಾಳೆ ಮತ್ತು ಅವಳು ಕಾಲಾಂತರದಲ್ಲಿ ಪುರುಷನಾಗುತ್ತಾಳೆ” ಎನ್ನುವ ವರವನ್ನು ನೀಡಿದರು.  ಶಿವನ ವರಪ್ರಸಾದದಂತೆ  ಅಂಬೆಯೇ ಶಿಖಣ್ಡಿನೀ ^  ಎನ್ನುವ ಹೆಸರಿನಿಂದ ದ್ರುಪದನಲ್ಲಿ  ಹುಟ್ಟಿದಳು. ಪಾಂಚಾಲ ರಾಜನಾದ ದ್ರುಪದನು ಆಕೆಗೆ ಗಂಡು ಮಗುವಿನಂತೆ ಸಂಸ್ಕಾರಾದಿಗಳನ್ನು ಮಾಡಿ ಬೆಳೆಸಿದನು.
[^ಶಿಖಂಡೀ ಎನ್ನುವ ಪದಕ್ಕೆ ಸಾಮಾಜಿಕವಾಗಿ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ  ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು ಎಂದರ್ಥ. ಇದು ವಿಷ್ಣು ಸಹಸ್ರನಾಮದಲ್ಲಿ ಬರುವ ಭಗವಂತನ ಸಾವಿರ ನಾಮದಲ್ಲಿನ ಒಂದು ನಾಮ ಕೂಡಾ ಹೌದು. ಶಿಖ+ಅಂಡ ಎನ್ನುವಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು. ಈ ಕಾರಣಕ್ಕಾಗಿ ಆತನನ್ನೂ ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ. ಆ ಕಾರಣಕ್ಕಾಗಿ ಆತನನ್ನೂ ಶಿಖಂಡೀ ಎನ್ನುವುದು ವಾಡಿಕೆ.  ಇಲ್ಲಿ ಶಿಖಂಡ (ನವಿಲುಗರಿ) ತೊಟ್ಟವಳು ಶಿಖಣ್ಡಿನೀ]

ತಸ್ಯೈ ಪಾಞ್ಚಾಲರಾಜಃ ಸ ದಶಾರ್ಣ್ಣಾಧಿಪತೇಃ ಸುತಾಮ್ ।
ಉದ್ವಾಹಯಾಮಾಸ ಸಾ ತಾಂ ಪುಂವೇಷೇಣೈವ ಗೂಹಿತಾಮ್            ೧೧.೧೦೫

ಗಂಡಿನ ವೇಷದಿಂದ ಮುಚ್ಚಲ್ಪಟ್ಟ ಶಿಖಣ್ಡಿನೀಗೆ  ದ್ರುಪದನು, ದಶಾರ್ಣ ದೇಶದ ದೊರೆ ಹಿರಣ್ಯವರ್ಮನ ಮಗಳನ್ನು ಮದುವೆಮಾಡಿ ಕೊಡುತ್ತಾನೆ. 

ಅನ್ಯತ್ರ ಮಾತಾಪಿತ್ರೋಸ್ತು ನ ವಿಜ್ಞಾತಾಂ ಬುಬೋಧ ಹ
ಧಾತ್ರ್ಯೈನ್ಯವೇದಯತ್ ಸಾsಥ ತತ್ಪಿತ್ರೇ ಸಾ ನ್ಯವೇದಯತ್               ೧೧.೧೦೬

ತಂದೆ ತಾಯಿಗಳಿಗಿಂತ ಹೊರತಾಗಿ ಬೇರೆ ಯಾರಿಗೂ ಶಿಖಣ್ಡಿನೀ ‘ಹೆಣ್ಣು’ ಎನ್ನುವ ವಿಷಯ ತಿಳಿದಿರಲಿಲ್ಲಾ. ಆದರೆ ಈ ವಿಷಯ ಮದುವೆಯ ನಂತರ ದಶಾರ್ಣ ದೇಶದ ರಾಜನ ಮಗಳಿಗೆ ತಿಳಿಯುತ್ತದೆ. ಅವಳು ತನ್ನ ಸಾಕು ತಾಯಿಗೆ ಈ ವಿಷಯವನ್ನು ಹೇಳುತ್ತಾಳೆ. ಸ್ವಲ್ಪ ಕಾಲದ ನಂತರ, ಆ ಸಾಕು ತಾಯಿಯು ಹಿರಣ್ಯವರ್ಮನಿಗೆ ವಿಷಯವನ್ನು ತಿಳಿಸುತ್ತಾಳೆ.

ಸ ಕ್ರುದ್ಧಃ ಪ್ರೇಷಯಾಮಾಸ ನಿಹನ್ಮಿ ತ್ವಾಂ ಸಬಾನ್ಧವಮ್ ।
ಇತಿ ಪಾಞ್ಚಾಲರಾಜಾಯ ನಿರ್ಜ್ಜಗಾಮ ಚ ಸೇನಯಾ              ೧೧.೧೦೭

ವಿಷಯವನ್ನು ಕೇಳಿ ತಿಳಿದ ಹಿರಣ್ಯವರ್ಮ ಕೋಪದಿಂದ ಧೂತನ ಮೂಲಕ  ‘ನಿನ್ನನ್ನು ಬಂಧುಗಳ ಸಹಿತವಾಗಿ ಕೊಲ್ಲುತ್ತೇನೆ’  ಎಂಬ ಸಂದೇಶವನ್ನು ಪಾಂಚಾಲ ರಾಜನಿಗೆ ಕಳುಹಿಸುತ್ತಾನೆ. ಅಷ್ಟೇ ಅಲ್ಲಾ, ಸೇನೆಯಿಂದ ಕೂಡಿ  ಯುದ್ಧಕ್ಕೆ ಸಿದ್ಧನಾಗಿ ಹೊರಡುತ್ತಾನೆ.

ವಿಶ್ವಸ್ಯ ವಾಕ್ಯಂ ರುದ್ರಸ್ಯ ಪುಮಾನೇವೇತಿ ಪಾರ್ಷತಃ ।
ಪ್ರೇಷಯಾಮಾಸ ಧಿಗ್ ಬುದ್ಧಿರ್ಭಿನ್ನಾ ತೇ ಬಾಲವಾಕ್ಯತಃ        ೧೧.೧೦೮

ಅಪರೀಕ್ಷಕಸ್ಯ ತೇ ರಾಷ್ಟ್ರಂ ಕಥಮಿತ್ಯೇವ ನರ್ಮ್ಮಕೃತ್
ಅಥ ಭಾರ್ಯ್ಯಾಸಮೇತಂ ತಂ ಪಿತರಂ ಚಿನ್ತಯಾssಕುಲಮ್ ೧೧.೧೦೯

ದೃಷ್ಟ್ವಾ ಶಿಖಣ್ಡಿನೀ ದುಃಖಾನ್ಮನ್ನಿಮಿತ್ತಾನ್ನ ನಶ್ಯತು
ಇತಿ ಮತ್ವಾ ವನಾಯೈವ ಯಯೌ ತತ್ರ ಚ ತುಮ್ಬುರುಃ           ೧೧.೧೧೦

‘ನಿನ್ನ ಮಗಳು ಗಂಡಾಗುತ್ತಾಳೆ’ ಎನ್ನುವ  ಶಿವನ ಮಾತಿನಲ್ಲಿ ಪೂರ್ಣ ನಂಬಿಕೆ ಹೊಂದಿದ್ದ ದ್ರುಪದ, ‘ ಶಿಖಣ್ಡಿನೀ ಗಂಡೇ’ ಎಂದು ಹೇಳಿ ಧೂತನನ್ನುಹಿಂದೆ  ಕಳುಹಿಕೊಟ್ಟ. ಅಷ್ಟೇ ಅಲ್ಲ,  “ನಿನ್ನ ಬುದ್ಧಿಯು ಅಪ್ರಬುದ್ಧರ ಮಾತಿನಿಂದ ತಪ್ಪು ಹಾದಿ ಹಿಡಿದಿದೆ. ಒಂದು ವಿಷಯವನ್ನು ಪರೀಕ್ಷೆ ಮಾಡಿ ನಂಬಬೇಕು ಎನ್ನುವುದು ನಿನಗೆ ತಿಳಿದಿಲ್ಲ. ಪರೀಕ್ಷೆ ಮಾಡದೇ ಮಾತನಾಡುವ ನೀನು  ರಾಜ್ಯವನ್ನು ಹೇಗೆ ಆಳುತ್ತಿರುವೆ” ಎಂದು ಹಾಸ್ಯವನ್ನೂ ಮಾಡಿದ. ಆದರೆ ಧೂತನನ್ನು ಕಳುಹಿಕೊಟ್ಟ ನಂತರ ಹೆಂಡತಿಯಿಂದ ಕೂಡಿ ಆತ ಚಿಂತೆಗೆ ಒಳಗಾದ.
ಚಿಂತೆಯಿಂದ ಬೆಂದು ಹೋಗುತ್ತಿರುವ ತಂದೆಯನ್ನು ನೋಡಿದ ಶಿಖಣ್ಡಿನೀಯು, ‘ನನ್ನ ನಿಮಿತ್ತವಾಗಿರುವ ದುಃಖದಿಂದ ತಂದೆ ಸಾಯಬಾರದು’  ಎಂದು ನಿಶ್ಚಯಿಸಿ, ಕಾಡಿಗೆ ಓಡುತ್ತಾಳೆ. ಆಕೆ ಕಾಡಿನಲ್ಲಿ  ಎಲ್ಲಿ ತುಮ್ಬುರು ಎನ್ನುವ ಹೆಸರಿನ ಗಂಧರ್ವ ನೆಲೆಸಿದ್ದನೋ ಅಲ್ಲಿಗೆ ತೆರಳುತ್ತಾಳೆ.

No comments:

Post a Comment