ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 10, 2018

Mahabharata Tatparya Nirnaya Kannada 11.131-11.138


ಇತೀರಿತೇsಸ್ತ್ವಿತ್ಯುದಿತಸ್ತಯಾsಗಮತ್ ಕೃಷ್ಣೋsಮ್ಬಿಕಾಂ ಸಾ ತು ಭಿಯಾ ನ್ಯಮೀಲಯತ್ ।
ಅಭೂಚ್ಚ ತಸ್ಯಾಂ ಧೃತರಾಷ್ಟ್ರನಾಮಕೋ ಗನ್ಧರ್ವರಾಟ್ ಪವನಾವೇಶಯುಕ್ತಃ               ॥ ೧೧.೧೩೧

ಈರೀತಿಯಾಗಿ ಹೇಳಿ, ತಾಯಿ ಸತ್ಯವತಿಯಿಂದ ‘ಆಯಿತು’ ಎಂದು ಹೇಳಲ್ಪಟ್ಟ ಕೃಷ್ಣದ್ವೈಪಾಯನರು,  ಅಂಬಿಕೆಯನ್ನು ಕುರಿತು ತೆರಳಿದರು. ಅವಳಾದರೋ, ಆ ಅತಿಭಯಂಕರವಾಗಿ ಕಾಣುತ್ತಿದ್ದ ಅವರ ರೂಪವನ್ನು ಕಂಡು, ಭಯದಿಂದ ತನ್ನ ಕಣ್ಗಳನ್ನು ಮುಚ್ಚಿಕೊಂಡಳು. ಇದರಿಂದಾಗಿ ಅವಳಲ್ಲಿ ‘ಧೃತರಾಷ್ಟ್ರ’ ಎಂದೇ ಹೆಸರಿರುವ ಗಂಧರ್ವನು, ವಾಯುದೇವರ ಆವೇಶವುಳ್ಳವನಾಗಿ ಹುಟ್ಟಿದನು.

ಸ ಮಾರುತಾವೇಶಬಲಾದ್ ಬಲಾಧಿಕೋ ಬಭೂವ ರಾಜಾ ಧೃತರಾಷ್ಟ್ರನಾಮಾ।
ಅದಾದ್ ವರಂ ಚಾಸ್ಯ ಬಲಾಧಿಕತ್ವಂ ಕೃಷ್ಣೋsನ್ಧ ಆಸೀತ್ ಸ ತು ಮಾತೃದೋಷತಃ ॥ ೧೧.೧೩೨

ಹೀಗೆ  ಧೃತರಾಷ್ಟ್ರ; ಎಂದು ಹೆಸರನ್ನು ಪಡೆದ ಆ  ರಾಜನು, ಮುಖ್ಯಪ್ರಾಣನ ಆವೇಶದಿಂದಾಗಿ  ಬಲಾಧಿಕ್ಯವುಳ್ಳವನಾದನು. ಅವನಿಗೆ ವೇದವ್ಯಾಸರು ‘ಬಲಾಧಿಕತ್ವ ರೂಪವಾದ’  ವರವನ್ನೂ ಕೊಟ್ಟರು. ಅವನಾದರೋ, ತಾಯಿಯ ತಪ್ಪಿನಿಂದಾಗಿ (ವೇದವ್ಯಾಸರನ್ನು ಸೇರುವ ಸಮಯದಲ್ಲಿ ಕಣ್ಗಳನ್ನು ಮುಚ್ಚಿದ್ದರಿಂದ) ಕುರುಡನಾಗಿ ಹುಟ್ಟಿದನು.
[ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿ(೩೩.೮) ವೇದವ್ಯಾಸರು ಗಾಂಧಾರಿಯನ್ನು ಕುರಿತು ಮಾತನಾಡುತ್ತಾ, ‘ಧೃತರಾಷ್ಟ್ರ ಎಂಬ ಗಂಧರ್ವ  ಅಂಬಿಕೆಯಲ್ಲಿ ಅದೇ ಹೆಸರಿನಿಂದ ಹುಟ್ಟಿದ್ದಾನೆ ಎನ್ನುವ ಮಾತನ್ನು ಹೇಳುವುದನ್ನು ನಾವು ಕಾಣುತ್ತೇವೆ: ‘ಗಂಧರ್ವರಾಜೋ ಯೋ ಧೀಮಾನ್ ಧೃತರಾಷ್ಟ್ರ ಇತಿ ಶ್ರುತಃ। ಸ ಏವ ಮಾನುಷೇ ಲೋಕೇ ಧೃತರಾಷ್ಟ್ರಃ ಪತಿಸ್ತವ’ ಆದರೆ ಮಹಾಭಾರತದ ಆದಿಪರ್ವದಲ್ಲಿ(೬೮.೮೩-೮೪)  ಅರಿಷ್ಟಾಯಾಸ್ತು ಯಃ ಪುತ್ರೋ ಹಂಸ ಇತ್ಯಭಿವಿಶ್ರುತಃ । ಸ ಗಂಧರ್ವಪತಿರ್ಜಜ್ಞೇ ಕುರುವಂಶವಿವರ್ಧನಃ । ಧೃತರಾಷ್ಟ್ರ ಇತಿ ಖ್ಯಾತಃ ಕೃಷ್ಣದ್ವೈಪಾಯನಾತ್ಮಜಃ’ ಎಂದು ಹೇಳುತ್ತಾ, ಆ ಗಂಧರ್ವನ ಹೆಸರು ‘ಹಂಸ’ ಎಂದಿದ್ದಾರೆ.  ಇಲ್ಲಿ ನಾವು ತಿಳಿಯಬೇಕಾದ ಅಂಶ ಏನೆಂದರೆ: ಧೃತರಾಷ್ಟ್ರ ಎನ್ನುವುದು ಹಂಸದಲ್ಲಿ ಒಂದು ಜಾತಿಯಾಗಿರುವುದರಿಂದ  ಆದಿಪರ್ವದಲ್ಲಿ ಪರ್ಯಾಯ ಪದವಾಗಿ ಆತನನ್ನು ‘ಹಂಸ’ ಎಂದು ಕರೆದಿದ್ದಾರೆ. ಆದರೆ  ಮೂಲತಃ ಆ ಗಂಧರ್ವನ ಹೆಸರು ‘ಧೃತರಾಷ್ಟ್ರ’. ಹೀಗಾಗಿ  ಈ ಎರಡು ವಿವರಣೆ ಪರಸ್ಪರ ಅವಿರುದ್ಧ]

ಜ್ಞಾತ್ವಾ ತಮನ್ಧಂ ಪುನರೇವ ಕೃಷ್ಣಂ ಮಾತಾsಬ್ರವೀಜ್ಜನಯಾನ್ಯಂ ಗುಣಾಢ್ಯಮ್ ।
ಅಮ್ಬಾಲಿಕಾಯಾಮಿತಿ ತತ್ ತಥಾsಕರೋತ್ ಭಯಾತ್ತು ಸಾ ಪಾಣ್ಡುರಭೂನ್ಮೃಷಾದೃಕ್ ॥ ೧೧.೧೩೩

ಪರಾವಹೋ ನಾಮ ಮರುತ್ ತತೋsಭವದ್ ವರ್ಣ್ಣೇನ ಪಾಣ್ಡುಃ ಸ ಹಿ ನಾಮತಶ್ಚ ।
ಸ ಚಾsಸ ವೀರ್ಯ್ಯಾಧಿಕ ಏವ ವಾಯೋರಾವೇಶತಃ ಸರ್ವಶಸ್ತ್ರಾಸ್ತ್ರವೇತ್ತಾ                        ೧೧.೧೩೪

ಸತ್ಯವತಿಯು ಅಂಬಿಕೆಯ ಪುತ್ರ  ಕುರುಡ ಎಂಬುದನ್ನು ತಿಳಿದು, ಮತ್ತೆ ವೇದವ್ಯಾಸರನ್ನು ಕುರಿತು “ಇನ್ನೊಬ್ಬ ಗುಣವಂತನಾದ ಮಗನನ್ನು ಅಮ್ಬಾಲಿಕೆಯಲ್ಲಿ ಹುಟ್ಟಿಸು” ಎಂದು ಪ್ರಾರ್ಥಿಸಿದಳು. ವೇದವ್ಯಾಸರಾದರೋ, ತಾಯಿಯ ಮಾತಿಗೆ ಒಪ್ಪಿ ಮೊದಲಿನಂತೆಯೇ ಮಾಡಿದರು. ಕಣ್ಮುಚ್ಚಿ ಕುರುಡ ಮಗನನ್ನು ಅಂಬಿಕೆ ಪಡೆದಿರುವುದನ್ನು ತಿಳಿದಿರುವ  ಅಂಬಾಲಿಕೆ ವೇದವ್ಯಾಸರನ್ನು ಸೇರುವಾಗ ಕಣ್ಮುಚ್ಚಲಿಲ್ಲ. ಆದರೆ ಭಯದಿಂದ, ದೇವರ ಬಗ್ಗೆ ತಪ್ಪು ತಿಳಿದು, ಬಿಳಿಚಿಕೊಂಡಳು.
ಈ ರೀತಿ ಬಿಳಿಚಿಕೊಂಡ ಅಂಬಾಲಿಕೆಯಲ್ಲಿ  ‘ಪರಾವಹ’ ಎಂಬ ಹೆಸರುಳ್ಳ ಮರುತ್ದೇವತೆಯು ಹುಟ್ಟಿದನು. ಬಣ್ಣದಿಂದ ಪಾಣ್ಡುವಾಗಿದ್ದ (ಬಿಳಿಚಿದವನಾಗಿದ್ದ) ಆತ, ಪಾಣ್ಡುಃ ಎನ್ನುವ ಹೆಸರಿನವನಾದನು.  ಅವನು ಮುಖ್ಯಪ್ರಾಣನ ಆವೇಶದಿಂದ ವೀರ್ಯಾಧಿಕನೂ, ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಲ್ಲವನೂ ಆದನು.

ತಸ್ಮೈ ತಥಾ ಬಲವೀರ್ಯ್ಯಾಧಿಕತ್ವವರಂ ಪ್ರಾದಾತ್ ಕೃಷ್ಣ ಏವಾಥ ಪಾಣ್ಡುಮ್  
ವಿಜ್ಞಾಯ ತಂ ಪ್ರಾಹ ಪುನಶ್ಚ ಮಾತಾ ನಿರ್ದ್ದೋಷಮನ್ಯಂ ಜನಯೋತ್ತಮಂ ಸುತಮ್॥ ೧೧.೧೩೫

ಹೀಗೆ ಹುಟ್ಟಿ ಬಂದ  ಪಾಂಡುವಿಗೆ ಕೃಷ್ಣನು(ವೇದವ್ಯಾಸನು)  ಬಲ ಹಾಗೂ ವೀರ್ಯದಿಂದ ಅಧಿಕನಾಗಿರು ಎಂಬ ವರವನ್ನು ಕೊಟ್ಟನು. ತದನಂತರ, ಈತ ಬಿಳಿಚಿಕೊಂಡವನು ಎಂದು ತಿಳಿದ ಸತ್ಯವತಿಯು ಮತ್ತೆ ‘ದೋಷವಿಲ್ಲದ ಇನ್ನೊಬ್ಬ ಉತ್ಕೃಷ್ಟನಾದ ಮಗನನ್ನು ಹುಟ್ಟಿಸು’ ಎಂದು ಹೇಳಿದಳು.

ಉಕ್ತ್ವೇತಿ ಕೃಷ್ಣಂ ಪುನರೇವ ಚ ಸ್ನುಷಾಮಾಹ ತ್ವಯಾsಕ್ಷ್ಣೋರ್ಹಿ ನಿಮೀಲನಂ ಪುರಾ ।
ಕೃತಂ ತತಸ್ತೇ ಸುತ ಆಸ ಚಾನ್ಧಸ್ತತಃ ಪುನಃ ಕೃಷ್ಣಮುಪಾಸ್ವ ಭಕ್ತಿತಃ ॥ ೧೧.೧೩೬

ವೇದವ್ಯಾಸರನ್ನು ಪ್ರಾರ್ಥಿಸಿಕೊಂಡ ಸತ್ಯವತಿಯು, ಸೊಸೆಯನ್ನು ಕುರಿತು: “ಹಿಂದೆ ನಿನ್ನಿಂದ ಕಣ್ಣುಗಳ ಮುಚ್ಚುವಿಕೆಯು ಮಾಡಲ್ಪಟ್ಟಿತ್ತು. ಆ ಕಾರಣದಿಂದ ನಿನ್ನ ಮಗನು ಕುರುಡನಾಗುವಂತಾಯಿತು. ಇದೀಗ ಮತ್ತೆ ಭಕ್ತಿಯಿಂದ ವೇದವ್ಯಾಸರನ್ನು ನೀನು ಉಪಾಸನೆ ಮಾಡು” ಎಂದಳು.

ಇತೀರಿತಾsಪ್ಯಸ್ಯ ಹಿ ಮಾಯಯಾ ಸಾ ಭೀತಾ ಭುಜಿಷ್ಯಾಂ ಕುಮತಿರ್ನ್ನ್ಯಯೋಜಯತ್ ।
ಸಾ ತಂ ಪರಾನನ್ದತನುಂ ಗುಣಾರ್ಣ್ಣವಂ ಸಮ್ಪ್ರಾಪ್ಯ ಭಕ್ತ್ಯಾ ಪರಯೈವ ರೇಮೇ ॥ ೧೧.೧೩೭


ತಸ್ಯಾಂ ಸ ದೇವೋsಜನಿ ಧರ್ಮ್ಮರಾಜೋ ಮಾಣ್ಡವ್ಯಶಾಪಾದ್ ಯ ಉವಾಹ ಶೂದ್ರತಾಮ್ ।
ವಸಿಷ್ಠಸಾಮ್ಯಂ ಸಮಭೀಪ್ಸಮಾನಂ ಪ್ರಚ್ಯಾವಯನ್ನಿಚ್ಛಯಾ ಶಾಪಮಾಪ              ೧೧.೧೩೮

ಸತ್ಯವತಿಯಿಂದ ಸ್ಪಷ್ಟವಾಗಿ ಹೇಳಲ್ಪಟ್ಟರೂ ಕೂಡಾ, ವೇದವ್ಯಾಸರ ಮಾಯೆಯಿಂದ ಭಯಗೊಂಡ ಅಂಬಿಕೆಯು, ಕೆಟ್ಟಬುದ್ಧಿ ಉಳ್ಳವಳಾಗಿ, ತನ್ನ ಬದಲು ದಾಸಿಯನ್ನು ವಿನಿಯೋಗಿಸಿದಳು. ಅವಳಾದರೋ, ಉತ್ಕೃಷ್ಟವಾದ ಆನಂದವೇ ಮೈದಾಳಿ ಬಂದ, ಗುಣಗಳಿಗೆ ಕಡಲಿನಂತೆ ಇರುವವನನ್ನು ಉತ್ತಮವಾದ ಭಕ್ತಿಯಿಂದ ಹೊಂದಿ ಕ್ರೀಡಿಸಿದಳು.
ಆ ಪರಿಚಾರಿಣಿಯಲ್ಲಿ ಧರ್ಮದೇವತೆಯಾದ ಯಮಧರ್ಮರಾಜನೇ ಹುಟ್ಟಿ ಬಂದನು. ವಸಿಷ್ಠರಿಗೆ ಸಮನಾಗಬೇಕು ಎಂದು ಬಯಸುತ್ತಿದ್ದ ಮಾಂಡವ್ಯ ಋಷಿಯನ್ನು ಆ ಮಾರ್ಗದಿಂದ ದೂರ ಸರಿಸಿ, ಇಚ್ಛೆಪಟ್ಟು  ಶಾಪವನ್ನು ಹೊಂದಿ,  ಅದರಿಂದಲೇ ಶೂದ್ರನಾಗಿ ಇಲ್ಲಿ ಹುಟ್ಟಿ ಬಂದನು.

No comments:

Post a Comment