ಗಾನ್ಧಾರರಾಜಸ್ಯ ಸುತಾಮುವಾಹ ಗಾನ್ಧಾರಿನಾಮ್ನೀಂ ಸುಬಲಸ್ಯ
ರಾಜಾ ।
ಜ್ಯೇಷ್ಠೋ ಜ್ಯೇಷ್ಠಾಂ ಶಕುನೇರ್ದ್ದ್ವಾಪರಸ್ಯ
ನಾಸ್ತಿಕ್ಯರೂಪಸ್ಯ ಕುಕರ್ಮ್ಮಹೇತೋಃ ॥೧೧.೧೪೭॥
ಧೃತರಾಷ್ಟ್ರನು ‘ಸುಬಲ’
ಎಂಬ ಹೆಸರಿನ ಗಾಂಧಾರ ರಾಜನ ಮಗಳಾದ, ಕುಕರ್ಮಕ್ಕೆ ಕಾರಣವಾದ ಮತ್ತು ನಾಸ್ತಿಕ್ಯದ ಅಭಿಮಾನಿಯಾದ
‘ದ್ವಾಪರ’ನೆಂಬ ಅಸುರನ ಅವತಾರವಾಗಿರುವ ಶಕುನಿಯ ಅಕ್ಕ ಗಾಂಧಾರಿಯನ್ನು ಮದುವೆಯಾಗುತ್ತಾನೆ.
[ಶಕುನಿ ‘ದ್ವಾಪರ’ ಎಂಬ ರಾಕ್ಷಸನ ರೂಪವಾಗಿದ್ದ. ಆ
ರಾಕ್ಷಸನಿಗೆ ದ್ವಾಪರ ಎನ್ನುವ ಹೆಸರು ಏಕೆ ಬಂತು ಎನ್ನುವುದನ್ನು ‘ದ್ವಾಪರ’ ಪದದ ಸಂಸ್ಕೃತ ನಿರ್ವಚನದಿಂದ
ತಿಳಿಯಬಹುದು. ದ್ವಾಭ್ಯಾಂ ಕೃತತ್ರೇತಾಭ್ಯಾಂ
ಪರಮಿತಿ ಚ ದ್ವಾಪರಮ್ । – ಕೃತ ಹಾಗ ತ್ರೇತಾ ಎನ್ನುವ ಎರಡು ಯುಗಗಳ ನಂತರ ಬರುವ ಮೂರನೇ
ಯುಗದ ಹೆಸರು ‘ದ್ವಾಪರ’. ಹಾಗಿದ್ದರೆ ಇಲ್ಲಿ ಅಸುರನಿಗೆ ‘ದ್ವಾಪರ’ ಎನ್ನುವ
ಹೆಸರು ಏಕೆ ಬಂತು ? ದ್ವಾವೇವ ಪರಮೌ ಯಸ್ಯ ಸ ತದಭಿಮಾನಿ ದ್ವಾಪರಃ । ಮುಖ್ಯವಾದ ಎರಡಕ್ಕೆ ಯಾರು
ಅಭಿಮಾನಿಯೋ ಅವನು ದ್ವಾಪರಃ. ಕೌ ದ್ವೌ? ಅವುಗಳು ಯಾವ ಎರಡು? ನಾಸ್ತಿಕ್ಯಮ್ ಕುಕರ್ಮ
ಚ । - ನಾಸ್ತಿಕ್ಯ ಮತ್ತು ಕೆಟ್ಟಕೆಲಸ . ತದಾಹ- ನಾಸ್ತಿಕ್ಯರೂಪಸ್ಯ
ಕುಕರ್ಮಹೇತೋಃ । ನಾಸ್ತಿಕ್ಯಮೇವ ಯಸ್ಯ ಸ್ವರೂಪಧರ್ಮಃ , ಯಶ್ಚ ಲೋಕೇ
ನಾಸ್ತಿಕ್ಯಂ ರೂಪಯತಿ ಸ ನಾಸ್ತಿಕ್ಯರೂಪಃ । ರೂಪ ರೂಪಕ್ರಿಯಾಯಾಮ್ । ರೂಪಸ್ಯ ಕರಣಂ ರುಪಕ್ರಿಯಾ । ವರ್ಧನಮತ್ಯೇತತ್ । ನಾಸ್ತಿಕ್ಯಕ್ಕೆ ರೂಪ ಕೊಡುವವನೇ ‘ದ್ವಾಪರ’
. ಅದರಿಂದಾಗಿ ನಾಸ್ತಿಕ್ಯ ರೂಪ ಎಂದರೆ: ನಾಸ್ತಿಕ್ಯವನ್ನು ಜಗತ್ತಿನಲ್ಲಿ ವರ್ಧಿಸುವವನು ಎಂದರ್ಥ.
ಅಂತಹ ಶಕುನಿಯ ಅಕ್ಕನಾದ ಗಾಂಧಾರಿಯನ್ನು
ಧೃತರಾಷ್ಟ್ರ ಮದುವೆಯಾದ. ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿ(೩೩.೧೦) ‘ಶಕುನಿಂ ದ್ವಾಪರಂ
ನೃಪಮ್’ ಎಂದು ಹೇಳುತ್ತಾರೆ. ಅಲ್ಲಿ ಬಂದ ವಿವರವನ್ನು ಆಚಾರ್ಯರು ಇಲ್ಲೇ ನಮಗೆ
ವಿವರಿಸಿದ್ದಾರೆ. ‘ಆದಿಪರ್ವದಲ್ಲಿ(೬೮.೧೬೦) ‘ಮತಿಸ್ತು
ಸುಬಲಾತ್ಮಜಾ’ ಎನ್ನುವ ಮಾತಿದೆ. ಅಲ್ಲಿ
‘ಮತಿ’ ಎನ್ನುವುದು ಗಾಂಧಾರಿಯ ಮೂಲರೂಪದ ಹೆಸರಾಗಿದೆ ಎನ್ನುವುದನ್ನು ನಾವು ತಿಳಿಯಬೇಕು.]
ಶೂರಸ್ಯ ಪುತ್ರೀ ಗುಣಶೀಲರೂಪಯುಕ್ತಾ ದತ್ತಾ ಸಖ್ಯುರೇವ
ಸ್ವಪಿತ್ರಾ ।
ನಾಮ್ನಾ ಪೃಥಾ ಕುನ್ತಿಭೋಜಸ್ಯ ತೇನ ಕುನ್ತೀ ಭಾರ್ಯ್ಯಾ
ಪೂರ್ವದೇಹೇsಪಿ ಪಾಣ್ಡೋಃ ॥೧೧.೧೪೮॥
ಶೂರನೆಂಬ ಯಾದವನಿಗೆ
ಗುಣ-ಶೀಲ-ರೂಪದಿಂದ ಕೂಡಿರುವ ಮಗಳೊಬ್ಬಳಿದ್ದಳು. ‘ಪೃಥಾ’ ಎಂದು ಅವಳ ಹೆಸರು. ಅವಳು ತನ್ನ ಅಪ್ಪನಾದ ಶೂರನಿಂದಲೇ,
ಗೆಳೆಯನಾದ ಕುಂತಿಭೋಜನಿಗೆ ದತ್ತುಕೊಡಲ್ಪಟ್ಟಳು.
ಆ ಕಾರಣದಿಂದ ಆಕೆ ಕುನ್ತೀ ಎಂಬ ಹೆಸರುಳ್ಳವಳಾದಳು. ಈಕೆ ಪೂರ್ವ ದೇಹದಲ್ಲಿಯೂ(ಮೂಲರೂಪದಲ್ಲಿಯೂ)
ಪಾಂಡುವಿನ(‘ಪರಾವಹ’ ಎಂಬ ಹೆಸರಿನ ಮರುತ್ದೇವತೆಯ) ಹೆಂಡತಿಯೇ ಆಗಿದ್ದಳು.
ಕೂರ್ಮ್ಮಶ್ಚ ನಾಮ್ನಾ
ಮರುದೇವ ಕುನ್ತಿಭೋಜೋsಥೈನಾಂ ವರ್ದ್ಧಯಾಮಾಸ ಸಮ್ಯಕ್ ।
ತತ್ರಾsಗಮಚ್ಛಙ್ಕರಾಂಶೋsತಿಕೋಪೋ ದುರ್ವಾಸಾಸ್ತಂ
ಪ್ರಾಹ ಮಾಂ ವಾಸಯೇತಿ ॥೧೧.೧೪೯॥
ಹೆಸರಿಂದ ‘ಕೂರ್ಮ’
ಎಂದೆನಿಸಿಕೊಂಡ ಮರುತ್ದೇವತೆಯೇ ಕುಂತಿಭೋಜನೆಂಬ
ಹೆಸರುಳ್ಳವನಾಗಿ ಹುಟ್ಟಿದ್ದ. ಈ ಕುಂತಿಭೋಜ ತಾನು ದತ್ತುಪಡೆದ ಪೃಥೆಯನ್ನು ಚನ್ನಾಗಿ ಸಾಕಿದ. ಹೀಗಿರುವಾಗ
ಒಮ್ಮೆ ರುದ್ರನ ಅವತಾರವಾಗಿರುವ, ಅತ್ಯಂತ ಕೋಪವುಳ್ಳ ದುರ್ವಾಸರು ಕುಂತಿಭೋಜನ ರಾಜ್ಯಕ್ಕೆ
ಆಗಮಿಸಿ, ‘ತಾನಿಲ್ಲಿ ವಾಸಮಾಡಬೇಕು, ಅದಕ್ಕೆ ತಕ್ಕನಾದ
ವ್ಯವಸ್ಥೆ ಮಾಡು’ ಎಂದು ಕುನ್ತಿಭೋಜನಿಗೆ
ಹೇಳಿದರು.
[ಮಹಾಭಾರತದ
ಆದಿಪರ್ವದಲ್ಲಿ(೧೨೦.೨-೩) ಹೇಳುವಂತೆ: ಪಿತೃಷ್ವಸ್ರೀಯಾಯ
ಸ ತಾಮನಪತ್ಯಾಯ ಭಾರತ। .....ಅಗ್ರಜಾಮಥ ತಾಂ ಕನ್ಯಾಂ ಶೂರೋsನುಗ್ರಹಕಾಂಕ್ಷಿಣೇ। ಪ್ರದದೌ ಕುಂತಿಭೋಜಾಯ ಸಖಾ
ಸಖ್ಯೇ ಮಹಾತ್ಮನೇ॥ ಈ ಕುಂತಿಭೋಜ ಬೇರೆಯಾರೂ ಅಲ್ಲ. ಆತ ಶೂರನ
ಸೋದರತ್ತೆಯ ಮಗ. ಅವನಿಗೆ ಮಕ್ಕಳಿರಲಿಲ್ಲ. ಹಾಗಾಗಿ ತನ್ನ ದೊಡ್ಡಮಗಳನ್ನು ಶೂರ ಕುಂತಿಭೋಜನಿಗೆ ದತ್ತುರೂಪದಲ್ಲಿ ಕೊಟ್ಟನು.
ಇನ್ನು
ಆದಿಪರ್ವದಲ್ಲೇ(೬೭.೧೩೦-೧) ‘ಅಗ್ರಮಗ್ರೇ
ಪ್ರತಿಜ್ಞಾಯ ಸ್ವಸ್ಯಾಪತ್ಯಸ್ಯ ವೈ ತದಾ॥ ಅಗ್ರಜಾತೇತಿ ತಾಂ ಕನ್ಯಾಂ ಶೂರೋsನುಗ್ರಹಕಾಂಕ್ಷಯಾ। ಅದದಾತ್ ಕುನ್ತಿಭೋಜಾಯ ಸ ತಾಂ ದುಹಿತರಂ ತದಾ’ ಎನ್ನುವ ವಿವರಣೆ
ಇರುವುದನ್ನು ಕೆಲವು ಕಡೆ ಕಾಣುತ್ತೇವೆ. ಇದು ಅಪಪಾಠ.]
ತಮಾಹ ರಾಜಾ ಯದಿ ಕನ್ಯಕಾಯಾಃ ಕ್ಷಮಿಷ್ಯಸೇ ಶಕ್ತಿತಃ ಕರ್ಮ್ಮ ಕರ್ತ್ರ್ಯಾಃ
।
ಸುಖಂ ವಸೇತ್ಯೋಮಿತಿ ತೇನ ಚೋಕ್ತೇ ಶುಶ್ರೂಷಣಾಯಾsದಿಶದಾಶು ಕುನ್ತೀಮ್॥೧೧. ೧೫೦॥
ಕುಂತಿಭೋಜ ರಾಜನು
ದುರ್ವಾಸರನ್ನು ಕುರಿತು “ಒಂದುವೇಳೆ, ಶಕ್ತ್ಯಾನುಸಾರವಾಗಿ ಸೇವೆಯನ್ನು ಮಾಡುವ ಬಾಲಕಿಯನ್ನು
ಸಹಿಸುವೆಯಾದರೆ ಸುಖವಾಗಿ ವಾಸಮಾಡಬಹುದು” ಎಂದು ಹೇಳುತ್ತಾನೆ. ಆಗ ದುರ್ವಾಸರಿಂದ ‘ಆಯಿತು’ ಎಂದು
ಹೇಳಲ್ಪಡಲು (ಓಂ ಎನ್ನುವುದು ಅಂಗೀಕಾರ ಸೂಚಕ), ಕುಂತಿಯನ್ನು ಅವರ ಸೇವೆಮಾಡಲು ಕುಂತಿಭೋಜ ಕೂಡಲೇ
ಆಜ್ಞೆಮಾಡುತ್ತಾನೆ.
No comments:
Post a Comment