ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 11, 2018

Mahabharata Tatparya Nirnaya Kannada 11.139-11.142


ಅಯೋಗ್ಯಸಮ್ಪ್ರಾಪ್ತಿಕೃತಪ್ರಯತ್ನದೋಷಾತ್ ಸಮಾರೋಪಿತಮೇವ ಶೂಲೇ ।
ಚೋರೈರ್ಹೃತೆsರ್ತ್ಥೇsಪಿತು ಚೋರಬುದ್ಧ್ಯಾ ಮಕ್ಷೀವಧಾದಿತ್ಯವದದ್ ಯಮಸ್ತಮ್ ॥ ೧೧.೧೩೯

ಯಾವ ರೀತಿ ಯಮಧರ್ಮ ಮಾಂಡವ್ಯನಿಂದ ಶಾಪಗ್ರಸ್ಥನಾದ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮಾಂಡವ್ಯ ತನ್ನ ಯೋಗ್ಯತೆಗೆ ಮೀರಿದ ವಸಿಷ್ಠಸ್ಥಾನವನ್ನು ಹೊಂದಲು ಬಯಸಿ ತಪಸ್ಸನ್ನಾಚರಿಸಿದ ದೋಷದಿಂದ, ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ, ದ್ರವ್ಯವು ಕಳ್ಳರಿಂದ^ ಅಪಹರಿಸಲ್ಪಟ್ಟಿದ್ದರೂ ಕೂಡಾ, ಆ ದ್ರವ್ಯಚೌರ್ಯದ ಆಪಾದನೆಯನ್ನು ಹೊತ್ತು  ಶೂಲಕ್ಕೇರಿಸಲ್ಪಟ್ಟಿದ್ದ. ಆ ಸಂದರ್ಭದಲ್ಲಿ  ಯಮನು  “ಹಿಂದೆ ನೀನು  ಮಕ್ಷಿಕೆಯನ್ನು (ನೊಣವನ್ನು) ಚುಚ್ಚಿ  ಕೊಂದದ್ದರಿಂದ ನಿನಗೆ ಈ ಶಿಕ್ಷೆಯಾಯಿತು” ಎಂದು ಹೇಳುತ್ತಾನೆ.

[^ಒಮ್ಮೆ ಒಬ್ಬ ಧನಿಕನ ದ್ರವ್ಯವನ್ನು ಕಳ್ಳರು ಅಪಹರಿಸುತ್ತಾರೆ. ಆ ಕಳ್ಳರನ್ನು ಧನಿಕನ ಧೂತರು ಹಿಂಬಾಲಿಸುತ್ತಾರೆ. ಆಗ ಕಳ್ಳರು ಕದ್ದ ದ್ರವ್ಯವನ್ನು ತಪಸ್ಸನ್ನಾಚರಿಸುತ್ತಿದ್ದ ಮಾಂಡವ್ಯ ಮುನಿಯ ಮುಂಭಾಗದಲ್ಲಿ ಬಿಟ್ಟು ಧೂತರಿಂದ ತಪ್ಪಿಸಿಕೊಳ್ಳುತ್ತಾರೆ. ಕಳ್ಳರನ್ನು ಹಿಂಬಾಲಿಸಿ ಬಂದ ಧೂತರು ದ್ರವ್ಯವನ್ನೂ, ಋಷಿಯನ್ನೂ ಕಂಡು, ಈತನೇ ಕಳ್ಳ ಎಂದು ತಿಳಿದು, ಆತನನ್ನು ಶೂಲಕ್ಕೇರಿಸುತ್ತಾರೆ. ಈ ಕುರಿತು ಮಾಂಡವ್ಯ “ನನಗೇಕೆ ಈ ಶಿಕ್ಷೆ ಪ್ರಾಪ್ತವಾಯಿತು” ಎಂದು ಯಮನನ್ನು ಪ್ರಶ್ನಿಸುತ್ತಾನೆ. ಆತನ ಪ್ರಶ್ನೆಗೆ ಉತ್ತರಿಸುತ್ತಾ ಯಮಧರ್ಮ “ಮಕ್ಷಿಕೆಯನ್ನು ಚುಚ್ಚಿ  ಕೊಂದದ್ದರಿಂದ ನಿನಗೆ ಈ ಶಿಕ್ಷೆ ಪ್ರಾಪ್ತವಾಯಿತು” ಎನ್ನುತ್ತಾನೆ. ಆಗ ಕೋಪಗೊಂಡ ಮಾಂಡವ್ಯ ಯಮನಿಗೆ ಶಾಪವನ್ನು ನೀಡುತ್ತಾನೆ].

ನಾಸತ್ಯತಾ ತಸ್ಯ ಚ ತತ್ರ ಹೇತುತಃ ಶಾಪಂ ಗೃಹೀತುಂ ಸ ತಥೈವ ಚೋಕ್ತ್ವಾ ।
ಅವಾಪ ಶೂದ್ರತ್ವಮಥಾಸ್ಯ ನಾಮ ಚಕ್ರೇ ಕೃಷ್ಣಃ ಸರ್ವವಿತ್ತ್ವಂ ತಥಾsದಾತ್ ॥ ೧೧.೧೪೦

ನೊಣಕ್ಕೆ ಚುಚ್ಚಿದ್ದ ಪಾಪವೂ ಕೂಡಾ ಆ ಶಿಕ್ಷೆಗೆ ಒಂದು ಕಾರಣವಾದ್ದರಿಂದ, ಯಮಧರ್ಮನ ಮಾತಿಗೆ ಅಸತ್ಯತ್ತ್ವದ ದೋಷ ಬರಲಿಲ್ಲಾ. ಆದರೆ  ಯಮ ‘ನೊಣಕ್ಕೆ ಚುಚ್ಚಿದ್ದ ಪಾಪ’ವನ್ನು  ಮುಂದು ಮಾಡಿಕೊಂಡು ಹೇಳಿ,  ಕೋಪಗೊಂಡ ಮಾಂಡವ್ಯನಿಂದ  ಶಾಪವನ್ನು ಹೊಂದಿ ಶೂದ್ರನಾಗಿ ಹುಟ್ಟಿದ. ಹೀಗೆ ಶೂದ್ರಯೋನಿಯಲ್ಲಿ ಹುಟ್ಟಿದ ಈತನಿಗೆ  ವೇದವ್ಯಾಸರು  ಸರ್ವಜ್ಞತ್ವದ ವರವನ್ನು ನೀಡಿದರು.
[ಒಟ್ಟಿನಲ್ಲಿ ಹೇಳಬೇಕೆಂದರೆ:  ಮಾಂಡವ್ಯ ಎರಡು ದೋಷಗಳಿಂದಾಗಿ ಶೂಲಕ್ಕೇರಿಸಲ್ಪಟ್ಟವನಾಗಿದ್ದ. ೧. ನೊಣಕ್ಕೆ ಚುಚ್ಚಿದ್ದರಿಂದ. ೨. ತನಗೆ ಅಯೋಗ್ಯವಾದ  ವಸಿಷ್ಠಸ್ಥಾನವನ್ನು ಹೊಂದಲು ಬಯಸಿದ ದೋಷ. ಯಮ ಮೊದಲ ಕಾರಣವನ್ನು ಅವನ ಮುಂದೆ ಇಟ್ಟಾಗ, ಮುಖ್ಯವಾದ ಎರಡನೇ ಕಾರಣವನ್ನು ತಿಳಿಯುವ ಮೊದಲೇ ಕೋಪಗೊಂಡ ಆತ ಶಾಪ ಕೊಡುತ್ತಾನೆ. ಇಲ್ಲಿ ನೊಣಕ್ಕೆ ಚುಚ್ಚಿರುವುದೂ ಕೂಡಾ ಆ ಕಾಲದಲ್ಲಿ ಒಂದು ದೋಷವಾಗಿದ್ದುದರಿಂದ ಯಮನಿಗೆ ಅಸತ್ಯತ್ತ್ವದ ದೋಷ ಬರಲಿಲ್ಲಾ. ಆದರೆ ದುಡುಕಿ ದೊಡ್ಡವರಿಗೆ ಶಾಪ ಕೊಟ್ಟದ್ದರಿಂದ  ಮಾಂಡವ್ಯಋಷಿಯ ಅತಿರಿಕ್ತವಾದ ತಪಸ್ಸಿನ ಫಲ ಕಳೆದುಹೋಯಿತು. ಈ ಘಟನೆಯಿಂದ ‘ಹದಿನಾರು ವರ್ಷದ ತನಕ ಅಜ್ಞಾನದಿಂದ ಮಾಡುವ ಕರ್ಮಕ್ಕೆ ದೋಷವಿಲ್ಲಾ’ ಎಂಬ ಜಗತ್ತಿನ ಕಾನೂನಿನ ತಿದ್ದುಪಡಿಯೂ  ಮಾಂಡವ್ಯಮನಿಯ ಮುಖೇನವಾಯಿತು. ಹೀಗೆ  ತಪಸ್ಸು ಮಾಡಿದ್ದುದರಿಂದ ಬರಬೇಕಾಗಿರುವ ಕೀರ್ತಿಯೂ ಮಾಂಡವ್ಯರಿಗೆ ಬರುವಂತಾಯಿತು.]     

ವಿದ್ಯಾರತೇರ್ವಿದುರೋ ನಾಮಾ ಚಾಯಂ ಭವಿಷ್ಯತಿ ಜ್ಞಾನಬಲೋಪಪನ್ನಃ ।
ಮಹಾಧನುರ್ಬಾಹುಬಲಾಧಿಕಶ್ಚ ಸುನೀತಿಮಾನಿತ್ಯವದತ್ ಸ ಕೃಷ್ಣಃ ॥೧೧.೧೪೧

ಹೀಗೆ ದಾಸಿಯಲ್ಲಿ ವೇದವ್ಯಾಸರಿಂದ ಹುಟ್ಟಿದ ಯಮಧರ್ಮ, ಯಾವಾಗಲೂ ವಿದ್ಯೆಯಲ್ಲೇ ರಥನಾದ್ದರಿಂದ, ಮುಂದೆ ‘ವಿದುರ’ ಎಂಬ ಹೆಸರಿನಿಂದ ಜ್ಞಾನ ಹಾಗು ಬಲದಿಂದ ಉಪಪನ್ನನಾಗಿ ಚನ್ನಾಗಿ ಬೆಳಗುತ್ತಾನೆ. ‘ಈತ ಭವಿಷ್ಯದಲ್ಲಿ ಒಳ್ಳೆಯ ಧನುಸ್ಸುಳ್ಳವನಾಗಿಯೂ, ಬಾಹುಬಲಾಧಿಕನಾಗಿಯೂ, ಒಳ್ಳೆಯ ನೀತಿಶಾಸ್ತ್ರ ಪ್ರವೃತ್ತಕನಾಗಿಯೂ ಇರುತ್ತಾನೆ’ ಎಂಬ ವರವನ್ನು ವೇದವ್ಯಾಸರು ಅವನಿಗೆ ನೀಡುತ್ತಾರೆ.

ಜ್ಞಾತ್ವಾsಸ್ಯ ಶೂದ್ರತ್ವಮಥಾಸ್ಯ ಮಾತಾ ಪುನಶ್ಚ ಕೃಷ್ಣಂ ಪ್ರಣತಾ ಯಯಾಚೇ ।
ಅಮ್ಬಾಲಿಕಾಯಾಂ ಜನಯಾನ್ಯಮಿತ್ಯಥೋ ನೈಚ್ಛತ್ ಸ ಕೃಷ್ಣೋsಭವದಪ್ಯದೃಶ್ಯಃ ॥೧೧.೧೪೨

ವಿದುರ ಹುಟ್ಟಿದ ಮೇಲೆ, ಸತ್ಯವತಿಯು,  ಹುಟ್ಟಿದ ಮಗುವಿನ ಶೂದ್ರತ್ವವನ್ನು ತಿಳಿದು, ಮತ್ತೆ ವೇದವ್ಯಾಸರಿಗೆ  ನಮಸ್ಕರಿಸಿ, ‘ಅಂಬಾಲಿಕೆಯಲ್ಲಿ ಇನ್ನೊಬ್ಬನನ್ನು ಹುಟ್ಟಿಸು’ ಎಂದು ಬೇಡಿದಳು. ಆದರೆ ವೇದವ್ಯಾಸರು ಅದನ್ನು ಬಯಸಲಿಲ್ಲ. ಅವರು ಅಲ್ಲಿಂದ  ಅಂತರ್ಧಾನರಾದರು ಕೂಡಾ.

No comments:

Post a Comment