ಯೋಗ್ಯಾನಿ ಕರ್ಮ್ಮಾಣಿ ತತಸ್ತು ತೇಷಾಂ ಚಕಾರ ಭೀಷ್ಮೋ
ಮುನಿಭಿರ್ಯ್ಯಥಾವತ್ ।
ವಿದ್ಯಾಃ ಸಮಸ್ತಾ ಅದದಾಚ್ಚ ಕೃಷ್ಣಸ್ತೇಷಾಂ
ಪಾಣ್ಡೋರಸ್ತ್ರಶಸ್ತ್ರಾಣಿ ಭೀಷ್ಮಃ ॥೧೧.೧೪೩॥
ತದನಂತರ, ಆ ಮೂವರಿಗೆ ಭೀಷ್ಮಾಚಾರ್ಯರು, ಮುನಿಗಳೊಂದಿಗೆ ಕೂಡಿಕೊಂಡು, ಶಾಸ್ತ್ರದಲ್ಲಿ
ಹೇಳಿದಂತೆ, ಅವರವರಿಗೆ ಯೋಗ್ಯವಾದ (ಮಾತೃಜಾತಿ-ಪಿತೃಗುಣ
ಎಂಬಂತೆ, ಜಾತಕರ್ಮ, ನಾಮಕರಣ, ಇತ್ಯಾದಿ) ಕರ್ಮಗಳನ್ನು ಮಾಡಿಸಿದರು. ವೇದವ್ಯಾಸರು ಆ ಮೂವರಿಗೂ ಸಮಸ್ತವಿದ್ಯೆಗಳನ್ನು
ಉಪದೇಶಿಸಿದರು. ವಿಶೇಷತಃ ಪಾಂಡುವಿಗೆ ಭೀಷ್ಮಾಚಾರ್ಯರೇ ಮುತುವರ್ಜಿವಹಿಸಿ, ಅಸ್ತ್ರ-ಶಸ್ತ್ರಗಳ
ವಿದ್ಯೆಯನ್ನು ನೀಡಿದರು.
ತೇ ಸರ್ವವಿದ್ಯಾಪ್ರವರಾ ಬಭೂವುರ್ವಿಶೇಷತೋ ವಿದುರಃ
ಸರ್ವವೇತ್ತಾ ।
ಪಾಣ್ಡುಃ ಸಮಸ್ತಾಸ್ತ್ರವಿದೇಕವೀರೋ ಜಿಗಾಯ ಪೃಥ್ವೀಮಖಿಲಾಂ ಧನುರ್ದ್ಧರಃ ॥೧೧.೧೪೪॥
ಹೀಗೆ ಅವರೆಲ್ಲರೂ ಅಸ್ತ್ರ,
ಶಸ್ತ್ರ, ವೇದ, ಮೊದಲಾದ ಎಲ್ಲಾ ವಿದ್ಯೆಗಳಲ್ಲಿ ಶ್ರೇಷ್ಠರಾದರು. ವಿಶೇಷವಾಗಿ ವಿದುರನು
ಎಲ್ಲವನ್ನೂ ಬಲ್ಲ ಜ್ಞಾನಿಯಾದರೆ, ಪಾಂಡುವು ಎಲ್ಲಾ ಅಸ್ತ್ರಗಳನ್ನು ಬಲ್ಲ ಶೂರನಾದನು. ವೀರರಲ್ಲಿ
ಮುಖ್ಯನಾದ ಪಾಂಡುವು ಧನುರ್ಧಾರಿಯಾಗಿ ಎಲ್ಲಾ ಭೂ-ಭಾಗವನ್ನೂ ಕೂಡಾ ಗೆದ್ದನು.
ಗವದ್ಗಣಾದಾಸ ತಥೈವ ಸೂತಾತ್ ಸಮಸ್ತಗನ್ಧರ್ವಪತಿಃ ಸ ತುಮ್ಬುರುಃ ।
ಯ ಉದ್ವಹೋ ನಾಮ ಮರುತ್ ತದಂಶಯುಕ್ತೋ ವಶೀ ಸಞ್ಜಯನಾಮಧೇಯಃ ॥೧೧.೧೪೫॥
ಸಮಸ್ತ ಗಂಧರ್ವರ ಒಡೆಯನಾದ
ತುಮ್ಬುರುವು, ಮರುತ್ ದೇವತೆಗಳ ಗಣದಲ್ಲಿ ಒಬ್ಬನಾದ ‘ಉದ್ವಹ’ ಎಂಬುವವನ ಅಂಶದೊಂದಿಗೆ, ಜಿತೇನ್ದ್ರಿಯನಾಗಿ
(ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಂಡವನಾಗಿ), ‘ಗವದ್ಗಣ’
ಎಂಬ ವಿಚಿತ್ರವೀರ್ಯನ ಸಾರಥಿಯ ಮಗನಾಗಿ ಹುಟ್ಟಿದನು. ಹೀಗೆ ಹುಟ್ಟಿದ ಈ ಗಾವದ್ಗಣಿ, ಸಂಜಯ ಎನ್ನುವ
ಹೆಸರಿನವನಾದನು.
ವಿಚಿತ್ರವೀರ್ಯ್ಯಸ್ಯ ಸ ಸೂತಪುತ್ರಃ ಸಖಾ ಚ ತೇಷಾಮಭವತ್
ಪ್ರಿಯಶ್ಚ ।
ಸಮಸ್ತವಿನ್ಮತಿಮಾನ್ ವ್ಯಾಸಶಿಷ್ಯೋ ವಿಶೇಷತೋ ಧೃತರಾಷ್ಟ್ರಾನುವರ್ತ್ತೀ
॥೧೧.೧೪೬॥
ಎಲ್ಲವನ್ನೂ ಬಲ್ಲವನಾಗಿದ್ದ,
ಪ್ರಜ್ಞಾವಂತನಾಗಿದ್ದ, ವೇದವ್ಯಾಸರ ಶಿಷ್ಯನಾಗಿದ್ದ ವಿಚಿತ್ರವೀರ್ಯನ ಸೂತನ ಮಗನಾದ ಸಂಜಯನು, ಆ ಮೂರೂ ಜನರಿಗೂ ಕೂಡಾ(ಧೃತರಾಷ್ಟ್ರ,
ಪಾಂಡು ಮತ್ತು ವಿದುರ ಈ ಮೂವರಿಗೂ ಕೂಡಾ) ಪ್ರಿಯಸಖನಾಗಿದ್ದ. ವಿಶೇಷವಾಗಿ ಆತ ಧೃತರಾಷ್ಟ್ರನ
ಅನುಸಾರಿಯಾಗಿದ್ದ.
No comments:
Post a Comment