ಗಾನ್ಧರ್ವಂ ದೇಹಮಾವಿಶ್ಯ ಸ್ವಕೀಯಂ ಭವನಂ ಯಯೌ ।
ತಸ್ಯಾಸ್ತದ್ದೇಹಸಾದೃಶ್ಯಂ ಗನ್ಧರ್ವಸ್ಯ ಪ್ರಸಾದತಃ ॥೧೧.೧೧೬॥
ಪ್ರಾಪ ಗನ್ಧರ್ವದೇಹೋsಪಿ ತಯಾ ಪಶ್ಚಾದಧಿಷ್ಠಿತಃ
।
ಶ್ವೋ ದೇಹಿ ಮಮ ದೇಹಂ ಮೇ ಸ್ವಂ ಚ ದೇಹಂ ಸಮಾವಿಶ ॥೧೧.೧೧೭॥
ಗಂಧರ್ವನಿಗೆ ಸಂಬಂಧಪಟ್ಟ
ದೇಹವನ್ನು ಪ್ರವೇಶ ಮಾಡಿದ ಶಿಖಂಡಿನೀ ತನ್ನ ಮನೆಯನ್ನು ಕುರಿತು ತೆರಳಿದಳು. ಗಂಧರ್ವನ
ಅನುಗ್ರಹದಿಂದ ಅವಳಿಗೆ ಆ ದೇಹದ ಸಾದೃಶ್ಯವೂ ದೊರಕಿತ್ತು.
ಹೀಗೆ ಗಂಧರ್ವ ದೇಹವು
ಅವಳಿಂದ ಅಧಿಷ್ಠಿತವಾಗಿದ್ದರೂ ಕೂಡಾ, ಹಿಂದೆ ಯಾವ ರೂಪದ ದೇಹವಿತ್ತೋ, ಅದೇ ರೀತಿಯ ದೇಹದ ಸಾದೃಶ್ಯ
ಅಲ್ಲಿತ್ತು.
ಇತ್ಯುಕ್ತ್ವಾ ಸ ತು ಗನ್ಧರ್ವಃ ಕನ್ಯಾದೇಹಂ ಸಮಾಸ್ಥಿತಃ ।
ಉವಾಸೈವ ವನೇ ತಸ್ಮಿನ್ ಧನದಸ್ತತ್ರ ಚಾsಗಮತ್ ॥೧೧.೧೧೮ ॥
ಅಪ್ರತ್ಯುತ್ಥಾಯಿನಂ ತನ್ತುಲೀಯಮಾನಂ ವಿಲಜ್ಜಯಾ ।
ಶಶಾಪ ಧನದೋ ದೇವಶ್ಚಿರಮಿತ್ಥಂ ಭವೇತಿ ತಮ್ ॥೧೧.೧೧೯॥
ಈರೀತಿಯಾಗಿ ‘ನನಗೆ ನಾಳೆ ನನ್ನ ದೇಹವನ್ನು ನೀಡಿ, ನಿನ್ನದಾಗಿರುವ ದೇಹವನ್ನು ನೀನು ಪ್ರವೇಶ ಮಾಡತಕ್ಕದ್ದು’
ಎನ್ನುವ ಒಪ್ಪಂದದಂತೆ ಆ ಗಂಧರ್ವನು ಶಿಖಂಡಿನೀಯ
ದೇಹವನ್ನು ಪ್ರವೇಶ ಮಾಡಿದ್ದನು.
ಶಿಖಂಡಿನೀ ತೆರಳಿದ ಮೇಲೆ, ಕನ್ಯಾದೇಹವನ್ನು
ಹೊಂದಿದ ತುಮ್ಬುರು ಆ ಕಾಡಿನಲ್ಲೇ ಇದ್ದನು. ಆ
ಸಮಯದಲ್ಲೇ ಅಲ್ಲಿಗೆ ಕುಬೇರನ ಆಗಮನವಾಗುತ್ತದೆ. ತನ್ನನ್ನು ನೋಡಿಯೂ ಕೂಡಾ ಗೌರವ ಕೊಡದೆ, ಬಳ್ಳಿಯಂತೆ
ನಾಚಿಕೆಯಿಂದ ಅಡಗಿಕೊಂಡ ತುಮ್ಬುರುವನ್ನು ಕಂಡ ಕುಬೇರ ಕೋಪಗೊಂಡು: “ಬಹುಕಾಲ ಇದೇ ರೀತಿ ಸ್ತ್ರೀದೇಹವುಳ್ಳವನಾಗಿರು” ಎಂಬುದಾಗಿ
ಶಪಿಸುತ್ತಾನೆ.
ಯದಾ ಯುದ್ಧೇ ಮೃತಿಂ ಯಾತಿ ಸಾ ಕನ್ಯಾ ಪುನ್ತನುಸ್ಥಿತಾ ।
ತದಾ ಪುಂಸ್ತ್ವಂ ಪುನರ್ಯ್ಯಾಸಿ ಚಪಲತ್ವಾದಿತೀರಿತಃ ॥೧೧.೧೨೦॥
ಕೋಪದಿಂದ ಶಾಪವನ್ನಿತ್ತಿದ್ದ
ಕುಬೇರ, ತದನಂತರ, ತನ್ನ ಶಾಪಕ್ಕೆ ಪರಿಹಾರವನ್ನು
ತಿಳಿಸುತ್ತಾ ಹೇಳುತ್ತಾನೆ: “ಎಂದು ಯುದ್ಧದಲ್ಲಿ ನಿನ್ನ ಗಂಡು ದೇಹದಲ್ಲಿ ಇರತಕ್ಕಂತಹ
ಆ ಹೆಣ್ಣು ಸಾಯುತ್ತಾಳೋ, ಆಗ ಮತ್ತೆ ನೀನು ಗಂಡಾಗುತ್ತೀಯಾ” ಎಂದು. ಮುಂದುವರಿದು ಕುಬೇರ
ಹೇಳುತ್ತಾನೆ: “ಚಪಲದಿಂದ ನೀನು ದೇಹ ಬದಲಿಸುವ ಈ ಕಾರ್ಯ ಮಾಡಿರುವುದರಿಂದ, ಅಲ್ಲಿಯ ತನಕ ಈ ಶಾಪವನ್ನು ಅನುಭವಿಸಬೇಕು” ಎಂದು.
ತಥಾsವಸತ್ ಸ ಗನ್ಧರ್ವಃ ಕನ್ಯಾ
ಪಿತ್ರೋರಶೇಷತಃ ।
ಕಥಯಾಮಾಸಾನುಭೂತಂ ತೌ ಭೃಶಂ ಮುದಮಾಪತುಃ ॥೧೧.೧೨೧॥
ಕುಬೇರನ ಶಾಪದಂತೆ ಆ
ಗಂಧರ್ವನು ಅದೇ ದೇಹಸ್ಥಿತಿಯಲ್ಲಿಯೇ ಕಾಡಿನಲ್ಲಿ ವಾಸಮಾಡುವಂತಾಯಿತು. ಇತ್ತ, ಗಂಡಿನ ದೇಹದೊಂದಿಗೆ
ಹಿಂದಿರುಗಿದ ಶಿಖಂಡಿನೀಯು, ತಂದೆ-ತಾಯಿಗಳಿಗೆ ಕಾಡಿನಲ್ಲಿ ನಡೆದ ಘಟನೆಯನ್ನು ಸಂಪೂರ್ಣವಾಗಿ ತಿಳಿಸುತ್ತಾಳೆ. ಆಗ ದ್ರುಪದ
ದಂಪತಿಗಳು ಸಂತೋಷವನ್ನು ಹೊಂದುತ್ತಾರೆ.
ಪರೀಕ್ಷ್ಯ ತಾಮುಪಾಯೈಶ್ಚ ಶ್ವಶುರೋ ಲಜ್ಜಿತೋ ಯಯೌ ।
ಶ್ವೋಭೂತೇ ಸಾ ತು ಗನ್ಧರ್ವಂ ಪ್ರಾಪ್ಯ ತದ್ವಚನಾತ್ ಪುನಃ ॥೧೧.೧೨೨॥
ನಂತರ ಹಿರಣ್ಯವರ್ಮನು
ಶಿಖಂಡಿನೀಯ ಪೌರುಷಪರೀಕ್ಷೆಯನ್ನು ಎಲ್ಲಾ ಉಪಾಯಗಳಿಂದ ಪರೀಕ್ಷಿಸಿ, ಸೋತು, ನಾಚಿಕೊಂಡು ಹಿಂತಿರುಗುತ್ತಾನೆ.
ಮಾರನೇದಿನ ಶಿಖಂಡಿನೀ ಕೊಟ್ಟ ಮಾತಿನಂತೆ ತುಮ್ಬುರುವಿದ್ದಲ್ಲಿಗೆ ತಾನು ಅವನಿಂದ ಪಡೆದ ಗಂಡು ದೇಹವನ್ನು ಹಿಂತಿರುಗಿಸುವ
ಸಲುವಾಗಿ ತೆರಳುತ್ತಾಳೆ.
ಯಯೌ ತೇನೈವ ದೇಹೇನ ಪುಂಸ್ತ್ವಮೇವ ಸಮಾಶ್ರಿತಾ ।
ಸ ಶಿಖಣ್ಡೀ ನಾಮತೋsಭೂದಸ್ತ್ರಶಸ್ತ್ರಪ್ರತಾಪವಾನ್
॥೧೧.೧೨೩॥
ಹೀಗೆ ಹಿಂದಿರುಗಿ ಬಂದ
ಶಿಖಂಡಿನೀಯನ್ನು ಕುರಿತು ತುಮ್ಬುರು ಹೇಳುತ್ತಾನೆ: “ನಾನು ನಿನಗೆ ಔಧಾರ್ಯದಿಂದ ನನ್ನ ದೇಹವನ್ನು
ಕೊಟ್ಟಿದ್ದೇನೆ. ನೀನು ಬದುಕಿರುವ ತನಕ ಈ ದೇಹ
ನಿನ್ನಲ್ಲಿರುತ್ತದೆ” ಎಂದು. ಅವನ ಮಾತಿನಂತೆ,
ಅದೇ ದೇಹದಿಂದ ಪುರುಷತ್ತ್ವವನ್ನು ಹೊಂದಿದವಳಾಗಿ ಶಿಖಂಡಿನೀ ಹಿಂತಿರುಗುತ್ತಾಳೆ. ಹೀಗೆ ಗಂಡು
ದೇಹವನ್ನು ಪಡೆದ ಆಕೆ, ‘ಶಿಖಣ್ಡೀ’ ಎಂಬ ಹೆಸರಿನವನಾಗಿ, ಶಾಸ್ತ್ರಾರ್ಥ ಪ್ರವೀಣನಾಗುತ್ತಾನೆ.
No comments:
Post a Comment