ಸ ತತ್ರ ಜಜ್ಞಿವಾನ್ ಸ್ವಯಂ ದ್ವಿತೀಯರೂಪಕೋ ವಿಭುಃ ।
ಸವರ್ಮ್ಮದಿವ್ಯಕುಣ್ಡಲೋ ಜ್ವಲನ್ನಿವ ಸ್ವತೇಜಸಾ ॥೧೧.೧೫೫ ॥
ಸೂರ್ಯನು ಕುಂತಿಯಲ್ಲಿ
ಎರಡನೆಯ ರೂಪವುಳ್ಳವನಾಗಿ ಹುಟ್ಟಿದನು. ಹುಟ್ಟುತ್ತಲೇ ಕವಚವನ್ನೂ, ದಿವ್ಯವಾಗಿರುವ ಕುಂಡಲವನ್ನೂ ಜೊತೆಗಿರಿಸಿಕೊಂಡೇ ತನ್ನ ಕಾಂತಿಯಿಂದ ಬೆಳಗುತ್ತಾ, ಹುಟ್ಟಿದನು.
[ಮಹಾಭಾರತದ ಆಶ್ರಮವಾಸಿಕ
ಪರ್ವದಲ್ಲಿ(೩೩.೧೨) ಸೂರ್ಯನೇ ಕರ್ಣನಾಗಿ ಬಂದಿದ್ದಾನೆ ಎನ್ನುವುದನ್ನು ವೇದವ್ಯಾಸರೇ ಹೇಳಿರುವುದನ್ನು ಕಾಣುತ್ತೇವೆ: ದ್ವಿಧಾ
ಕೃತ್ತ್ವಾsತ್ಮನೋ ದೇಹಮಾದಿತ್ಯಂ ತಪತಾಂ ವರಂ । ಲೋಕಾಂಶ್ಚ ತಾಪಯಾನಂ ವೈ ಕರ್ಣಂ ವಿದ್ಧಿ ಪೃಥಾಸುತಮ್ ’ ]
ಪುರಾ ಸ ವಾಲಿಮಾರಣಪ್ರಭೂತದೋಷಕಾರಣಾತ್ ।
ಸಹಸ್ರವರ್ಮ್ಮನಾಮಿನಾsಸುರೇಣ ವೇಷ್ಟಿತೋsಜನಿ ॥೧೧.೧೫೬॥
ಹಿಂದೆ ಅವನು ವಾಲಿಯನ್ನು
ಕೊಲ್ಲಿಸಿದ್ದರಿಂದ ಉಂಟಾದ ದೋಷದ ಕಾರಣದಿಂದ ಸಹಸ್ರವರ್ಮ ಎಂಬ ಹೆಸರುಳ್ಳ ಅಸುರನಿಂದ
ಸುತ್ತುವರಿಯಲ್ಪಟ್ಟು ಹುಟ್ಟಿದನು. (ಸಹಸ್ರವರ್ಮನೆಂಬ
ಅಸುರನ ಆವೇಶದೊಂದಿಗೆ ಹುಟ್ಟಿದನು).
[ಆಚಾರ್ಯರ ಈ ಮೇಲಿನ
ವಿವರಣೆಯನ್ನು ನೋಡಿದಮೇಲೆ ನಮಗೆ ಮಹಾಭಾರತದ ಆಶ್ರಮವಾಸಿಕಪರ್ವದಲ್ಲಿನ (೩೩.೧೩) ಈ ಮಾತು ಅರ್ಥವಾಗುತ್ತದೆ: ‘ಯಃ ಸ
ವೈರಾರ್ಥಮುದ್ಭೂತಃ ಸಙ್ಘರ್ಷಜನನಸ್ತಥಾ । ತಮ್ ಕರ್ಣಂ ವಿದ್ಧಿ ಕಲ್ಯಾಣಿ ಭಾಸ್ಕರಂ ಶುಭದರ್ಶನೇ’ ಅಂದರೆ ವೈರವನ್ನು
ನಿಮಿತ್ತೀಕರಿಸಿಕೊಂಡು ಹುಟ್ಟಿದವ, ಸಂಘರ್ಷಕ್ಕೆ ಕಾರಣನಾದವನು ಯಾರೋ ಅವನೇ ಕರ್ಣ.
‘ವಾಲಿಯ ಮಾರಣದಿಂದ ಉಂಟಾದ
ಬಹಳ ದೋಷದಿಂದ ಕರ್ಣನಾಗಿ ಹುಟ್ಟುವಾಗ ಸೂರ್ಯನು ಸಹಸ್ರವರ್ಮ ಎಂಬ ಹೆಸರುಳ್ಳ ಅಸುರನ ಆವೇಶದೊಂದಿಗೆ
ಹುಟ್ಟಬೇಕಾಯಿತು.’ ಈ ಮಾತು ಮಾಧ್ವ
ಸಿದ್ಧಾಂತದಲ್ಲಿ ಹೇಳುವ ಶಾಸ್ತ್ರಕ್ಕೇ ವಿರುದ್ದ ಎನ್ನುವುದು
ಕೆಲವರ ಆಕ್ಷೇಪ. ಏಕೆಂದರೆ: ಮುಂದೆ ಬರುವ ಪಾಪ , ಹಿಂದೆ ಆದ ಪಾಪ ಎರಡೂ ಕೂಡಾ ನಾಶವಾಗಿ,
ಅಪರೋಕ್ಷಜ್ಞಾನವಾಗುತ್ತದೆ. ಹೀಗೆ ಅಪರೋಕ್ಷ ಜ್ಞಾನವಾದ ಮೇಲೆಯೇ ದೇವತಾ ಪದವಿ ಪ್ರಾಪ್ತವಾಗುತ್ತದೆ ಎನ್ನುವುದು
ಸಿದ್ಧಾಂತ. ಅಂದಮೇಲೆ ದೇವತೆಗಳ ಪದವಿ ಬಂದ ಮೇಲೆ
ಅವರಿಗೆ ಪಾಪದ ಲೇಪ ಹೇಗೆ? ಇದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವನ್ನು ತಿಳಿಯಲು ನಾವು
ಕರ್ಮಸಿದ್ಧಾಂತವನ್ನೊಮ್ಮೆ ನೋಡಬೇಕಾಗುತ್ತದೆ. ಕರ್ಮವೆಂಬುದು ಒಂದು ಪ್ರವಾಹದಂತೆ. ಅದು ಅವ್ಯವಹಿತವಾಗಿ, ಅಂದರೆ, ತಡೆಯಿಲ್ಲದಂತೆ
ಹರಿಯುತ್ತಿರುವ ನೀರಿನಂತೆ. ‘ಎಂದೋ ಶುರುವಾಗಿದ್ದು’ ಎಂದು ಅದಕ್ಕೆ ‘ಪ್ರಾರಬ್ಧ’ ಎಂದು
ಕರೆಯುತ್ತಾರೆ.
ಪಾಪ ಹಾಗೂ ಪುಣ್ಯ ಇವೆರಡೂ
ಅಭಿಮಾನದಿಂದ ಉಂಟಾಗುವ ಅಂಟು. ಈ ಅಂಟನ್ನು ‘ಬಿಂಬ’ ತೆಗೆಯುತ್ತಾನೆ. ಅದೇ ಅಪರೋಕ್ಷದ ಮಹತ್ವ. ಅಪರೋಕ್ಷವಾದಮೇಲೆ
ಅಂಟಿಲ್ಲ ಅಷ್ಟೇ, ಆದರೆ ಕರ್ಮಪ್ರವಾಹ ಇನ್ನೂ ಇದ್ದೇ ಇರುತ್ತದೆ.
ದೇವತೆಗಳು ಹೀಗೆ
ಅಂಟಿಲ್ಲದೆ ಕರ್ಮ ಮಾಡುವವರು. ಅಂತಹ ದೇವತೆಗಳ ಪ್ರಾರಬ್ಧಭೋಗ ಮಾತ್ರ ನಮಗೆ ಕಾಣುತ್ತದೆ.
ಕರ್ಣನಲ್ಲಿ ಸಹಸ್ರವರ್ಮ
ಎಂಬ ದೈತ್ಯನ ಆವೇಶವೂ ಹಿಂದೆ ವಾಲಿಯನ್ನು ಕೊಲ್ಲಿಸಿದ ಪ್ರಾರಬ್ಧಕ್ಕೇ ಅಂದರೆ, ಅವನು ವಾಲಿಯನ್ನು ಯಾವ
ಪ್ರಾರಬ್ಧದ ಹಿನ್ನೆಲೆಯಲ್ಲಿ ಕೊಲ್ಲಿಸಿದ ಎಂದು ಕೇಳಬೇಕಾಗುತ್ತದೆ. ಕರ್ಮಗಳ ಸರಪಳಿಯೇ ಇಲ್ಲಿ
ಉತ್ತರ.
ಈ ಪ್ರಾರಬ್ಧವು
ಅಪರೋಕ್ಷವಾದರೂ ಹೋಗದೆಂಬ ಸಿದ್ಧಾಂತ ನಮ್ಮದು. ಅದನ್ನು
ಅನುಭವಿಸಿಯೇ ತೀರಬೇಕು. ಪ್ರಾರಬ್ಧಕ್ಕೆ ನಿಮಿತ್ತ ಮಾತ್ರ ಇರುತ್ತದೆ ಅಷ್ಟೇ. ಇಲ್ಲಿ ಅಸುರನ
ಆವೇಶವೆಂಬ ಪ್ರಾರಬ್ಧ ವಾಲಿಯನ್ನು ಕೊಲ್ಲಿಸಿದ ನೆವವಿಟ್ಟುಕೊಂಡು ಅಂಟಿತು. ಹೀಗಾಗಿ ಇಲ್ಲಿ
ಸಿದ್ಧಾಂತ ವಿರೋಧವೇನೂ ಇಲ್ಲಾ. ಒಬ್ಬ ವಿಷವನ್ನು ಕುಡಿಸುತ್ತಾನೆ. ತಿಂದವನು ಸಾಯುತ್ತಾನೆ.
ಲೋಕದಲ್ಲಿ ವಿಷಪ್ರಾಷನದಿಂದ ಆತ ಸತ್ತ ಎಂದು ಹೇಳಲಾಗುತ್ತದೆ. ವಸ್ತುತಃ ಅದು ಮೂಲ ಕಾರಣ ಅಲ್ಲವೇ ಅಲ್ಲ. ಮೊದಲು ಮಾಡಿದ ಪಾಪಕರ್ಮದಿಂದಲೇ ಈ ರೀತಿ ಸತ್ತ ಎನ್ನುವುದು
ವಸ್ತುಸ್ಥಿತಿ. ಆದರೆ ಅದಕ್ಕೆ ಅವ್ಯವಹಿತ ಅಥವಾ ನಿಮಿತ್ತಕಾರಣ ವಿಷಪ್ರಾಷನವಾಗುತ್ತದೆ ಅಷ್ಟೇ. ಇದೇ
ಸಿದ್ಧಾಂತ. ಇಲ್ಲಿ ಗೊಂದಲವಿಲ್ಲ]
ಯಥಾ ಗ್ರಹೈರ್ವಿದೂಷ್ಯತೇ ಮತಿರ್ನ್ನೃಣಾಂ ತಥೈವ ಹಿ ।
ಅಭೂಚ್ಚ ದೈತ್ಯದೂಷಿತಾ ಮತಿರ್ದ್ದಿವಾಕರಾತ್ಮನಃ ॥೧೧.೧೫೭॥
ಹೇಗೆ ಮನುಷ್ಯರ ಬುದ್ಧಿಯು
ಸೂರ್ಯಾದಿ ಗ್ರಹಗಳಿಂದ ಕೆಡುತ್ತದೋ ಹಾಗೆಯೇ ದಿವಾಕರನ ಬುದ್ಧಿಯು ದೈತ್ಯರಿಂದ ಕೆಟ್ಟಿತು.
(ಅದರಿಂದಾಗಿ ಅವನು ಸಾಮಾನ್ಯ ಸೌಜನ್ಯವನ್ನೂ ತೋರುವುದಿಲ್ಲ. “ನನ್ನನ್ನು ವ್ಯರ್ಥವಾಗಿ ಹೀಗೆ
ಕರೆದುದು ಸರಿಯಲ್ಲ. ಈಗಲೇ ನಾನು ನಿನ್ನನ್ನು ಮತ್ತು ನಿನಗೆ ಮಂತ್ರವನ್ನು ಕೊಟ್ಟ ಆ ಬ್ರಾಹ್ಮಣನನ್ನು ದಹಿಸಿಬಿಡುತ್ತೇನೆ”
ಎಂದು ಉಗ್ರವಾಗಿ ಮಾತನ್ನಾಡಿದನು)