ನಾಮ್ನಾsಪ್ಯರಿಷ್ಟ
ಉರುಗಾಯವಿಲೋಮಚೇಷ್ಟೋ ಗೋಷ್ಠಂ ಜಗಾಮ ವೃಷಭಾಕೃತಿರಪ್ಯವದ್ಧ್ಯಃ।
ಶಮ್ಭೋರ್ವರಾದನುಗತಶ್ಚ
ಸದೈವ ಕಂಸಂ ಗಾ ಭೀಷಯನ್ತಮಮುಮಾಹ್ವಯದಾಶು ಕೃಷ್ಣಃ ॥೧೩.೭೮॥
ಕಂಸನ ಭೃತ್ಯನಾಗಿ ಪರಮಾತ್ಮನಿಗೆ
ವಿರುದ್ಧವಾದ ಕ್ರಿಯೆಯನ್ನು ಮಾಡುತ್ತಿರುವ,
ಎತ್ತಿನ ವೇಷವನ್ನು ಧರಿಸಿರುವ, ರುದ್ರನ ವರದಿಂದ ಅವಧ್ಯನಾಗಿರುವ , ಹಸುಗಳನ್ನು ಹೆದರಿಸುತ್ತಿದ್ದ,
ಅರಿಷ್ಟನೆಂಬ ಹೆಸರುಳ್ಳ ದುಷ್ಟನನ್ನು ಕೃಷ್ಣನು ಶೀಘ್ರದಲ್ಲಿ ಕರೆದನು.
ಸೋsಪ್ಯಾಸಸಾದ
ಹರಿಮುಗ್ರವಿಷಾಣಕೋಟಿಮಗ್ರೇ ನಿಧಾಯ ಜಗೃಹೇsಸ್ಯ ವಿಷಾಣಮೀಶಃ ।
ಭೂಮೌ ನಿಪಾತ್ಯ ಚ
ವೃಷಾಸುರಮುಗ್ರವೀರ್ಯ್ಯಂ ಯಜ್ಞೇ ಯಥಾ ಪಶುಮಮಾರಯದಗ್ರ್ಯಶಕ್ತಿಃ॥೧೩.೭೯॥
ಅವನಾದರೋ, ಗಟ್ಟಿಯಾಗಿರುವ ತನ್ನ
ಕೊಂಬಿನ ತುದಿಯನ್ನು ಮುಂದೆ ಮಾಡಿಕೊಂಡು ಪರಮಾತ್ಮನನ್ನು ಹೊಂದಿದನು. ಸರ್ವಸಮರ್ಥನಾದ
ಶ್ರೀಕೃಷ್ಣನು ಅವನ ಎರಡೂ ಕೊಂಬುಗಳನ್ನು ಹಿಡಿದುಕೊಂಡು, ಭೂಮಿಯಲ್ಲಿ ಕೆಡವಿ, ಯಜ್ಞದ ಪಶುವೋ
ಎಂಬಂತೆ ಅವನನ್ನು ಕೊಂದು ಹಾಕಿದನು.
ಕೇಶೀ ಚ
ಕಂಸವಿಹಿತಸ್ತುರಗಸ್ವರೂಪೋ ಗಿರ್ಯ್ಯಾತ್ಮಜಾವರಮವಾಪ್ಯ ಸದಾ ವಿಮೃತ್ಯುಃ ।
ಪಾಪಃ ಸ ಕೇಶವಮವಾಪ ಮುಖೇsಸ್ಯ ಬಾಹುಂ ಪ್ರಾವೇಶಯತ್ ಸ
ಭಗವಾನ್ ವವೃಧೇsಥ ದೇಹೇ ॥೧೩.೮೦॥
ತತ್ಖಾದನಾಯ ಕುಮತಿಃ ಸ
ಕೃತಪ್ರಯಾಸಃ ಶೀರ್ಣ್ಣಾಸ್ಯದನ್ತದಶನಚ್ಚದರುದ್ಧವಾಯುಃ ।
ದೀರ್ಣ್ಣ ಪಪಾತ ಚ ಮೃತೋ ಹರಿರಪ್ಯಶೇಷೈರ್ಬ್ರಹ್ಮೇಶಶಕ್ರದಿನಕೃತ್ಪ್ರಮುಖೈಃ
ಸ್ತುತೋsಭೂತ್ ॥೧೩.೮೧॥
ಕಂಸನಿಂದ ಕಳುಹಿಸಲ್ಪಟ್ಟ,
ಕುದುರೆಯ ಸ್ವರೂಪವುಳ್ಳ, ಬೆಟ್ಟದ ಮಗಳಿಂದ (ಪಾರ್ವತಿಯಿಂದ) ಮರಣವಿಲ್ಲದ ವರವನ್ನು ಹೊಂದಿರುವ, ಪಾಪಿಷ್ಠನಾದ ಕೇಶೀ ನಾಮಕ ಅಸುರನು ಕೇಶವನನ್ನು
ಹೊಂದಿದನು. ಆಗ ಶ್ರೀಕೃಷ್ಣನು ಅವನ ಮುಖದಲ್ಲಿ(ಬಾಯೊಳಗೆ) ತನ್ನ ಕೈಯನ್ನು ಇಟ್ಟನು. ಆ ಬಾಹುವು ಅಸುರನ ಶರೀರದಲ್ಲಿ ಬೆಳೆಯಿತು.
ಕೃಷ್ಣನ ಕೈಯನ್ನು
ತಿನ್ನಲೆಂದು ಕೆಟ್ಟ ಬುದ್ಧಿ ಇರುವ ಆ ಅಸುರ ಬಹಳ ಪ್ರಯಾಸಪಟ್ಟ. ಆದರೆ ಅವನ ಮುಖವು ಸೀಳಲ್ಪಟ್ಟಿತು. ಹಲ್ಲುಗಳೆಲ್ಲವೂ
ಮುರಿದುಬಿದ್ದು, ಉಸಿರಾಡುವುದು ಕಷ್ಟವಾಗಿ ದೇಹವೆಲ್ಲಾ ಒಡೆದುಹೋಗಿ ಆತ ಕೆಳಗೆ ಬಿದ್ದ (ಮೃತನಾದ).
ಪರಮಾತ್ಮನಾದರೋ ಬ್ರಹ್ಮ, ರುದ್ರ, ಇಂದ್ರ, ಸೂರ್ಯ ಮೊದಲಾದ ಎಲ್ಲಾ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟವನಾದ.
[ಇಲ್ಲಿ ‘ಪಾರ್ವತಿಯ ವರ’ ಎಂದು
ಹೇಳಿದ್ದಾರೆ. ಇದಕ್ಕೆ ಪೂರಕವಾಗಿರುವ ವಿವರಣೆ ನೇರವಾಗಿ ನಮಗೆ ಕಾಣಸಿಗದಿದ್ದರೂ ಕೂಡಾ, ಪುರಾಣಗಳಲ್ಲಿ
ಬಂದಿರುವ ಪರೋಕ್ಷ ವಿವರಣೆಯನ್ನು ಜೋಡಿಸಿ ನೋಡಿದಾಗ
ಇದು ಸ್ಪಷ್ಟವಾಗುತ್ತದೆ.
ಹರಿವಂಶದ
ವಿಷ್ಣುಪರ್ವದಲ್ಲಿ(೨೪.೬೩) ಹೇಳುವಂತೆ: ‘ಹಯಾದಸ್ಮಾನ್ಮಹೇಂದ್ರೋsಪಿ ಬಿಭೇತಿ ಬಲಸೂದನಃ’ ಅಂದರೆ
‘ಇಂದ್ರನೂ ಕೂಡಾ ಈ ಕುದುರೆಯನ್ನು ಕಂಡರೆ ಭಯಪಡುತ್ತಾನೆ’ ಎಂದರ್ಥ. ಇನ್ನು ಬ್ರಹ್ಮಪುರಾಣದಲ್ಲಿ ‘ತುರಗಸ್ಯಾಸ್ಯ ಶಕ್ರೋsಪಿ ಕೃಷ್ಣ ದೇವಾಶ್ಚ ಬಿಭ್ಯತಿ’ ಎಂದಿದ್ದಾರೆ. ಈ ಮಾತಿನಿಂದ
ಅಸುರನಾದ ಕೇಶೀ ವರವನ್ನು ಪಡೆದಿರುವುದು ಇಂದ್ರನಿಗಿಂತ ಎತ್ತರದಲ್ಲಿರುವ ದೇವತೆಯಿಂದ ಎನ್ನುವುದು ಸ್ಪಷ್ಟವಾಗುತ್ತದೆ.
ವಿಷ್ಣುಪರ್ವದಲ್ಲೇ(೨೪.೬೦)
ಹೇಳುವಂತೆ: ‘ತದಿದಂ
ದುಷ್ಕರಂ ಕರ್ಮ ಕೃತಂ ಕೇಶಿವಿಘಾತನಮ್ । ತ್ವಯ್ಯೇವ ಕೇವಲಂ ಯುಕ್ತಂ ತ್ರಿದಿವೇ ತ್ರ್ಯಂಬಕಸ್ಯ ವಾ’ . ಇಲ್ಲಿ “ಕೇಶಿಯನ್ನು
ಕೊಲ್ಲುವಿಕೆ ಎಂಬ ಬಹಳ ದುಷ್ಕರವಾದ ಕರ್ಮವನ್ನು ಮಾಡಿದ್ದೀಯ, ಇದು ಒಂದೋ ನಿನಗೆ ಅಥವಾ ಶಿವನಿಂದ ಮಾತ್ರ ಸಾಧ್ಯ” ಎನ್ನುವ ಮಾತನ್ನು ಹೇಳಿರುವುದನ್ನು ಕಾಣುತ್ತೇವೆ. ಈ ಮಾತಿನಿಂದ
ಶಿವನಿಗಿಂತ ಕೆಳಗಿನ ಕಕ್ಷೆಯಲ್ಲಿರುವ ದೇವತೆಯ ವರವಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ಅಸುರರು ಐದು
ದೇವತೆಗಳಿಂದ ವರವನ್ನು ಕೇಳುತ್ತಾರೆ: ೧. ಬ್ರಹ್ಮ(೩ನೇ ಕಕ್ಷೆ), ೨. ಶಿವ(೫ನೇ ಕಕ್ಷೆ), ೩. ಪಾರ್ವತಿ(೭ನೇ
ಕಕ್ಷೆ), ೪. ಸ್ಕಂದ(೮ನೇ ಕಕ್ಷೆ), ೫. ವಿನಾಯಕ(೧೮ನೇ ಕಕ್ಷೆ). ಇಲ್ಲಿ ರುದ್ರ ಕೇಶೀಯನ್ನು ಕೊಲ್ಲಬಲ್ಲ ಎಂದು ಹೇಳಿರುವುದರಿಂದ
ಇದು ರುದ್ರನ ಅಥವಾ ಬ್ರಹ್ಮನ ವರ ಅಲ್ಲಾ ಎನ್ನುವುದು
ಸ್ಪಷ್ಟವಾಗುತ್ತದೆ. (ಯಾರಿಗೆ ಯಾವ ದೇವತೆ ವರವನ್ನು ನೀಡಿರುತ್ತಾನೋ, ಅವನೇ ಅದನ್ನು
ಮುರಿಯುವುದಿಲ್ಲ. ತಮ್ಮಿಂದ ಎತ್ತರದಲ್ಲಿರುವ ದೇವತೆಯ
ವರವನ್ನು ಕೆಳಗಿನ ಕಕ್ಷೆಯ ದೇವತೆ ಮುರಿಯಲು ಶಕ್ತನಾಗಿರುವುದಿಲ್ಲ).
ಸ್ಕಂದ ಇಂದ್ರನಿಗೆ ಸಮಾನ(ಎಂಟನೇ
ಕಕ್ಷೆ). ಹೀಗಾಗಿ ಇಂದ್ರನಿಂದ ಕೊಲ್ಲಲು ಅಸಾಧ್ಯ ಎಂದಾಗ, ಸ್ಕಂದನಿಗೂ ಅದು ಅಸಾಧ್ಯ ಎಂದಾಗುತ್ತದೆ. ಇನ್ನು ವಿನಾಯಕ ಹದಿನೆಂಟನೇ
ಕಕ್ಷೆಯಲ್ಲಿದ್ದಾನೆ. ಈ ಎಲ್ಲಾ ವಿವರವನ್ನು ನೋಡಿದಾಗ ಕೀಶೀ ಪಾರ್ವತೀದೇವಿಯಿಂದ ವರವನ್ನು ಪಡೆದಿದ್ದ
ಎನ್ನುವುದು ಸ್ಪಷ್ಟವಾಗುತ್ತದೆ.
ವಿಷ್ಣುಪರ್ವದಲ್ಲಿ(೨೪.೬೫)
ಹೇಳುವಂತೆ: ‘ಯಸ್ಮಾತ್ ತ್ವಯಾ ಹತಃ ಕೇಶೀ
ತಸ್ಮಾನ್ಮಚ್ಛಾಸನಂ ಶ್ರುಣು । ಕೇಶವೋ ನಾಮ ನಾಮ್ನಾ ತ್ವಂ ಖ್ಯಾತೋ ಲೋಕೇ ಭವಿಷ್ಯಸಿ’ ಅಂದರೆ: ‘ಕೇಶೀಯನ್ನು ಕೊಂದಿದ್ದುದರಿಂದಾಗಿ ನಿನಗೆ ಕೇಶವ
ಎನ್ನುವ ನಾಮ ಬರಲಿ’ . ಈ ಎಲ್ಲಾ ಮಾತಿನ ಒಟ್ಟಾರೆ
ತಾತ್ಪರ್ಯವನ್ನು ಆಚಾರ್ಯರು ಮೇಲಿನಶ್ಲೋಕದಲ್ಲಿ ಸೆರೆ ಹಿಡಿದು ನಮಗೆ ನೀಡಿದ್ದಾರೆ].
No comments:
Post a Comment