ನಿತ್ಯಾತಿದುಃಖಮನಿವೃತ್ತಿ
ಸುಖವ್ಯಪೇತಮನ್ಧಂ ತಮೋ ನಿಯತಮೇತಿ ಹರಾವಭಕ್ತಃ ।
ಭಕ್ತೋsಪಿ ಕಞ್ಜಜಗಿರೀಶಮುಖೇಷು
ಸರ್ವಧರ್ಮ್ಮಾರ್ಣ್ಣವೋsಪಿ ನಿಖಿಲಾಗಮನಿರ್ಣ್ಣಯೇನ ॥೧೩.೧೩೩॥
ಪರಮಾತ್ಮನಲ್ಲಿ
ಭಕ್ತನಾಗದೇ, ಪರಮಾತ್ಮನನ್ನು ದ್ವೇಷಮಾಡಿ, ಬ್ರಹ್ಮಾ, ರುದ್ರ, ಮೊದಲಾದವರಲ್ಲಿ ಭಕ್ತನಾದರೂ, ಪುಣ್ಯಕೆಲಸಗಳನ್ನು ಮಾಡುತ್ತಿದ್ದರೂ ಕೂಡಾ, ಸಮಸ್ತ ವೇದಗಳ ನಿರ್ಣಯದಂತೆ, ನಿಶ್ಚಯವಾಗಿ ಮರಳಿ
ಬರಲಾಗದ, ಆತ್ಯಂತಿಕವಾಗಿರುವ ದುಃಖವುಳ್ಳ ಅನ್ಧಂತಮಸ್ಸನ್ನು ಖಂಡಿತವಾಗಿ ಹೊಂದುತ್ತಾನೆ.
[ಪರಮಾತ್ಮನಲ್ಲಿ ಅಭಕ್ತನಾಗಿ,
ಪರಮಾತ್ಮನನ್ನು ದ್ವೇಷಮಾಡಿ, ಉಳಿದ ಯಾರಲ್ಲಿ
ಭಕ್ತನಾದರೂ ಕೂಡಾ, ಅದು ಪ್ರಯೋಜನಕ್ಕೆ ಬರುವುದಿಲ್ಲ, ಅಂತವರು ಕೊನೆಗೆ ಅನ್ಧಂತಮಸ್ಸನ್ನೇ
ಹೊಂದುತ್ತಾರೆ].
ಯೋ ವೇತ್ತಿ
ನಿಶ್ಚಿತಮತಿರ್ಹರಿಮಬ್ಜಜೇಶಪೂರ್ವಾಖಿಲಸ್ಯ ಜಗತಃ ಸಕಲೇsಪಿ ಕಾಲೇ ।
ಸೃಷ್ಟಿಸ್ಥತಿಪ್ರಳಯಮೋಕ್ಷದಮಾತ್ಮತನ್ತ್ರಂ
ಲಕ್ಷ್ಮ್ಯಾ ಅಪೀಶಮತಿಭಕ್ತಿಯುತಃ ಸ ಮುಚ್ಯೇತ್ ॥೧೩.೧೩೪॥
ಯಾರು ಪರಮಾತ್ಮನನ್ನು ಬ್ರಹ್ಮ-ರುದ್ರರೇ ಮೊದಲಾಗಿರುವ ಈ ಪ್ರಪಂಚಕ್ಕೆ, ಎಲ್ಲಾ ಕಾಲದಲ್ಲೂ, ಸೃಷ್ಟಿ-ಸ್ಥಿತಿ-ಪ್ರಳಯ-ಮೋಕ್ಷ
ಇವುಗಳನ್ನು ಕೊಡುವಂತಹ ‘ಸ್ವತಂತ್ರ’ ಎಂದೂ, ಲಕ್ಷ್ಮಿಗೂ ಕೂಡಾ ‘ಈಶಾ’ ಎಂದೂ, ನಿಶ್ಚಯವಾದ
ಬುದ್ಧಿಯುಳ್ಳವನಾಗಿ ತಿಳಿಯುತ್ತಾನೋ, ಅಂತಹ, ಪರಮಾತ್ಮನಲ್ಲಿ ಭಕ್ತಿಯುಳ್ಳವನು
ಮುಕ್ತನಾಗುತ್ತಾನೆ.
ತಸ್ಮಾದನನ್ತಗುಣಪೂರ್ಣ್ಣಮಮುಂ ರಮೇಶಂ ನಿಶ್ಚಿತ್ಯ ದೋಷರಹಿತಂ
ಪರಯೈವ ಭಕ್ತ್ಯಾ ।
ವಿಜ್ಞಾಯ ದೈವತಗಣಾಶ್ಚ ಯಥಾ ಕ್ರಮೇಣ ಭಕ್ತಾ ಹರೇರಿತಿ ಸದೈವ
ಭಜೇತ ಧೀರಃ ॥೧೩.೧೩೫॥
ಆ ಕಾರಣದಿಂದ,
ಬುದ್ಧಿವಂತನು, ರಮಾಪತಿಯಾದ ಈ ಶ್ರೀಕೃಷ್ಣನನ್ನು,
ಅನಂತ ಗುಣಗಳಿಗೆ ಪೂರ್ಣನಾಗಿರುವ ಲಕ್ಷ್ಮಿಗೂ ಒಡೆಯ ಎಂದೂ, ದೋಷಗಳಿಂದ ರಹಿತ ಎಂದೂ ನಿಶ್ಚಯಿಸಿ,
ಸರ್ವೋತ್ಕೃಷ್ಟವಾದ ಭಕ್ತಿಯಿಂದ, ಎಲ್ಲಾ ದೇವತೆಗಳನ್ನೂ ಕ್ರಮವಾಗಿ(ತಾರತಮ್ಯಕ್ರಮದಲ್ಲಿ) ತಿಳಿದು,
ಅವರೂ ಯಾವಾಗಲೂ ಪರಮಾತ್ಮನ ಭಕ್ತರೇ ಎಂದು ತಿಳಿದು ಹೊಂದಬೇಕು.
( ಈ ಕಥೆಯಿಂದ ನಮಗೆ ತಿಳಿದುಬರುವುದೇನೆಂದರೆ
: ದೇವರು ಎಲ್ಲರ ಒಡೆಯ. ಉಳಿದ ಸಮಸ್ತ ದೇವತೆಗಳೂ ಕೂಡಾ ಭಗವಂತನ ಭಕ್ತರು ಎನ್ನುವ ಸತ್ಯ).
ನಿಹತ್ಯ ಕಂಸಮೋಜಸಾ ವಿಧಾತೃಶಮ್ಭುಪೂರ್ವಕೈಃ ।
ಸ್ತುತಃ ಪ್ರಸೂನವರ್ಷಿಭಿರ್ಮ್ಮುಮೋದ ಕೇಶವೋsಧಿಕಮ್ ॥೧೩.೧೩೬॥
ಹೀಗೆ ಕಂಸನನ್ನು ತನ್ನ
ಶಕ್ತಿಯಿಂದ ಸಂಹಾರ ಮಾಡಿ, ಹೂವಿನ ಮಳೆಗರೆಯುವ ಬ್ರಹ್ಮ-ರುದ್ರ ಮೊದಲಾಗಿರುವ ದೇವತೆಗಳಿಂದ
ಸ್ತೋತ್ರಮಾಡಲ್ಪಟ್ಟ ಕೇಶವನು ಅತ್ಯಂತ ಸಂತಸಪಟ್ಟ.
ಸದೈವ ಮೋದರೂಪಿಣೋ ಮುದೋಕ್ತಿರಸ್ಯ ಲೌಕಿಕೀ ।
ಯಥೋದಯೋ ರವೇರ್ಭವೇತ್ ಸದೋದಿತಸ್ಯ ಲೋಕತಃ ॥೧೩.೧೩೭॥
ಆನಂದವೇ ಮೈವೆತ್ತು ಬಂದಿರುವ
ಪರಮಾತ್ಮ ‘ಸಂತೋಷಗೊಂಡ’ ಎಂದು ಹೇಳುವ ಮಾತು ಕೇವಲ ಲೌಕಿಕ. ಹೇಗೆ ಯಾವಾಗಲೂ ಉದಿಸಿಕೊಂಡೇ ಇರುವ ಸೂರ್ಯನಿಗೆ
ಲೋಕದ ದೃಷ್ಟಿಯಲ್ಲಷ್ಟೇ ಉದಯವೋ ಹಾಗೆ.
[ಇಲ್ಲಿ ಆಚಾರ್ಯರು ‘ಸೂರ್ಯ
ಎಂದೂ ಮುಳುಗುವುದಿಲ್ಲ, ಆದರೆ ಭೂಮಿಯಲ್ಲಿರುವ ನಮಗೆ ಮಾತ್ರ ಸೂರ್ಯ ಉದಯಿಸಿದಂತೆ ಹಾಗು
ಮುಳುಗಿದಂತೆ ಕಾಣುತ್ತಾನೆ’ ಎಂಬ ಮಾತನ್ನು ೮೦೦ ವರ್ಷಗಳ ಹಿಂದೆಯೇ ಹೇಳಿರುವುದನ್ನು ಓದುಗರು ಗಮನಿಸಬೇಕು.
ಭಗವಂತ ಸದಾ ಆನಂದ ಸ್ವರೂಪ.
ಅವನ ಆನಂದ ಯಾವುದೋ ಒಂದು ಕ್ರಿಯೆಯ ಮಿತಿಯಲ್ಲಿರುವುದಿಲ್ಲ.
ಆದರೆ ಮಾನವರಾಗಿರುವ ನಮಗೆ ಹಾಗೆ ಕಾಣುತ್ತದೆ ಅಷ್ಟೇ].
ಅನನ್ತಚಿತ್ಸುಖಾರ್ಣ್ಣವಃ ಸದೋದಿತೈಕರೂಪಕಃ ।
ಸಮಸ್ತದೋಷವರ್ಜ್ಜಿತೋ ಹರಿರ್ಗ್ಗುಣಾತ್ಮಕಃ ಸದಾ ॥೧೩.೧೩೮॥
ಭಗವಂತನು ಎಣೆಯಿರದ ಜ್ಞಾನ-ಆನಂದಗಳಿಗೆ
ಕಡಲಿನಂತಿರುವವನು. ಯಾವಾಗಲೂ ಒಂದೇ ತರನಾಗಿರುವ, ಸಮಸ್ತ ದೋಷ ರಹಿತನಾಗಿರುವ ಶ್ರೀಹರಿಯು,
ಯಾವಾಗಲೂ ಗುಣವೇ ಮೈವೆತ್ತುಬಂದವನಾಗಿದ್ದಾನೆ.
॥ ಇತಿ
ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಕಂಸವಧೋ ನಾಮ ತ್ರಯೋದಶೋsಧ್ಯಾಯಃ ॥