ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 15, 2019

Mahabharata Tatparya Nirnaya Kannada 13103_13111


ಪೂರ್ಣ್ಣೇನ್ದುವೃನ್ದನಿವಹಾಧಿಕಕಾನ್ತಶಾನ್ತಸೂರ್ಯ್ಯಾಮಿತೋರುಪರಮದ್ಯುತಿಸೌಖ್ಯದೇಹಃ ।
ಪೀತಾಮ್ಬರಃ ಕನಕಭಾಸುರಗನ್ಧಮಾಲ್ಯಃ ಶೃಙ್ಗಾರವಾರಿಧಿರಗಣ್ಯಗುಣಾರ್ಣ್ಣವೋsಗಾತ್ ॥೧೩.೧೦೩

ಪೂರ್ಣವಾಗಿರುವ ಚಂದ್ರರ ಸಮೂಹಗಳಿಗಿಂತಲೂ ಕೂಡಾ ಮಿಗಿಲಾದ, ಮನೋಹರವಾದ, ಸುಖಪೂರ್ಣವಾದ, ಸೂರ್ಯನಿಗಿಂತಲೂ ಕೂಡಾ ಅಮಿತವಾದ ಕಾಂತಿಯುಳ್ಳ(ತಂಪಾದ ಬೆಳಕುಳ್ಳ), ಸುಖವೇ ಮೈವೆತ್ತು ಬಂದಿರುವ, ಹಳದಿ ಬಟ್ಟೆಯನ್ನುಟ್ಟ, ಬಂಗಾರದಂತಿರುವ ಗಂಧವನ್ನೂ, ಹೂವಿನ ಮಾಲೆಯನ್ನೂ ಧರಿಸಿಕೊಂಡ, ಸೌಂದರ್ಯಸಾಗರನಾದ, ಎಣಿಸಲಾಗದ ಗುಣಗಳಿಗೆ ಕಡಲಿನಂತೆ ಇರುವ ನಾರಾಯಣನು ಅಲ್ಲಿಂದ ಮುನ್ನಡೆದನು.

ಪ್ರಾಪ್ಯಾಥ ಚಾsಯುಧಗೃಹಂ ಧನುರೀಶದತ್ತಂ ಕೃಷ್ಣಃ ಪ್ರಸಹ್ಯ ಜಗೃಹೇ ಸಕಲೈರಭೇದ್ಯಮ್
ಕಾಂಸಂ ಸ ನಿತ್ಯಪರಿಪೂರ್ಣ್ಣಸಮಸ್ತಶಕ್ತಿರಾರೋಪ್ಯ ಚೈನಮನುಕೃಷ್ಯ ಬಭಞ್ಜ ಮದ್ಧ್ಯೇ ॥೧೩.೧೦೪ ॥

ತದನಂತರ, ಆಯುಧದ ಮನೆಯನ್ನು ಹೊಂದಿ, (ಅಲ್ಲಿರುವವರನ್ನೆಲ್ಲಾ ಓಡಿಸಿ),  ರುದ್ರದೇವರು ಕಂಸನಿಗೆ ಕೊಟ್ಟ, ಎಲ್ಲರಿಂದಲೂ ಅಭೇದ್ಯವಾದ ಧನುಸ್ಸನ್ನು ಕೃಷ್ಣ ಎತ್ತಿದ , ಕಂಸನಿಗೆ ಸಂಬಂಧಪಟ್ಟ ಆ ಧನುಸ್ಸನ್ನು, ನಿತ್ಯಪರಿಪೂರ್ಣನೂ, ಸಮಸ್ತಶಕ್ತಿ ಉಳ್ಳವನೂ ಆದ  ಆ ನಾರಾಯಣನು ಹೆದೆಯೇರಿಸಲೆಂದು ಎಳೆದು, ಮುರಿದುಹಾಕಿದ.

ತಸ್ಮಿನ್ ಸುರಾಸುರಗಣೈರಖಿಲೈರಭೇದ್ಯೇ ಭಗ್ನೇ ಬಭೂವ ಜಗದಣ್ಡವಿಭೇದಭೀಮಃ ।
ಶಬ್ದಃ ಸ ಯೇನ ನಿಪಪಾತ ಭುವಿ ಪ್ರಭಗ್ನಸಾರೋsಸುರೋ ಧೃತಿಯುತೋsಪಿ ತದೈವ ಕಂಸಃ॥೧೩.೧೦೫॥

ದೇವತೆಗಳಿಂದಾಗಲೀ, ದೈತ್ಯಗಣದಿಂದಾಗಲೀ, ಯಾರಿಂದಲೂ ಮುರಿಯಲಾಗದ ಆ ಧನುಸ್ಸು ಮುರಿಯುತ್ತಿದ್ದಂತೇ,  ಜಗತ್ತೇ ಮುರಿದರೆ  ಯಾವರೀತಿ ಶಬ್ದ ಆಗಬಹುದೋ ಆ ರೀತಿಯ ಶಬ್ದವಾಯಿತು. ಈ ಶಬ್ದ ಕೇಳುತ್ತಿದ್ದಂತೆಯೇ ಕಂಸನು,  ಎಷ್ಟೇ ಧೈರ್ಯಉಳ್ಳವನಾಗಿದ್ದರೂ ಕೂಡಾ,  ದೇಹದ ಸಾರವೆಲ್ಲಾ ಕುಸಿದುಹೋದಂತಾಗಿ ಭೂಮಿಯಲ್ಲಿ ಬಿದ್ದನು.

ಆದಿಷ್ಟಮಪ್ಯುರು ಬಲಂ ಭಗವಾನ್ ಸ ತೇನ ಸರ್ವಂ ನಿಹತ್ಯ ಸಬಲಃ ಪ್ರಯಯೌ ಪುನಶ್ಚ
ನನ್ದಾದಿಗೋಪಸಮಿತಿಂ ಹರಿರತ್ರ ರಾತ್ರೌ ಭುಕ್ತ್ವಾ ಪಯೋsನ್ವಿತಶುಭಾನ್ನಮುವಾಸ ಕಾಮಮ್ ೧೩.೧೦೬

ಕಂಸನಿಂದ ಆದೇಶಿಸಲ್ಪಟ್ಟು ಮೊದಲೇ ತಯಾರಿಯಲ್ಲಿದ್ದ  ಆತನ ಎಲ್ಲಾ ಉತ್ಕೃಷ್ಟವಾದ ಬಲವನ್ನು(ಸೈನ್ಯವನ್ನು),  ಮುರಿದ ಬಿಲ್ಲಿನಿಂದಲೇ,  ಬಲರಾಮನಿಂದ ಕೂಡಿಕೊಂಡು ಸಂಹರಿಸಿದ ಕೃಷ್ಣ,  ತದನಂತರ ನಂದಾದಿಗಳು ಇರುವ ಜಾಗಕ್ಕೆ ತೆರಳಿದ. ಶ್ರೀಕೃಷ್ಣನು ಆ ರಾತ್ರಿ ಹಾಲಿನಿಂದ ಕೂಡಿದ ಮನೋಹರವಾದ  ಅನ್ನವನ್ನು ಸೇವಿಸಿ, ಅಲ್ಲೇ ತನ್ನ ಇಚ್ಛಾನುಸಾರ ಆವಾಸಮಾಡಿದ.

ಕಂಸೋsಪ್ಯತೀವ ಭಯಕಮ್ಪಿತಹೃತ್ಸರೋಜಃ ಪ್ರಾತರ್ನ್ನರೇನ್ದ್ರಗಣಮದ್ಧ್ಯಗತೋsಧಿಕೋಚ್ಚಮ್ ।
ಮಞ್ಚಂ ವಿವೇಶ ಸಹ ಜಾನಪದೈಶ್ಚ ಪೌರೈರ್ನ್ನಾನಾsನುಮಞ್ಚಕಗತೈರ್ಯ್ಯುವತೀಸಮೇತೈಃ ॥೧೩.೧೦೭॥

ಕಂಸನೂ ಕೂಡಾ ಆತ್ಯಂತಿಕವಾದ ಭಯದಿಂದ ನಡುಗಿದ ಎದೆಯುಳ್ಳವನಾಗಿ, ಬೆಳಗ್ಗೆ, ಯುವತಿಯರಿಂದಲೂ, ಹಳ್ಳಿಗರಿಂದಲೂ, ಪಟ್ಟಣಿಗರಿಂದಲೂ ಕೂಡಿಕೊಂಡು, ಅವರವರಿಗೆ ಯೋಗ್ಯವಾದ ಆಸನದಲ್ಲಿ ಇರುವವರಾದ ಎಲ್ಲಾ ಸಾಮಂತರಾಜರ ಮಧ್ಯದಲ್ಲಿ ತನ್ನ ಪರಿವಾರದೊಂದಿಗೆ, ಎಲ್ಲಕ್ಕಿಂತ ಎತ್ತರವಾದ ಆಸನವನ್ನು ಅಲಂಕರಿಸಿದ.(ಪ್ರವೇಶ ಮಾಡಿದ)

ಸಂಸ್ಥಾಪ್ಯ ನಾಗಮುರುರಙ್ಗಮುಖೇ ಕುವಲ್ಯಾಪೀಡಂ ಗಿರೀನ್ದ್ರಸದೃಶಂ ಕರಿಸಾದಿಯುಕ್ತಮ್
ಚಾಣೂರಮುಷ್ಟಿಕಮುಖಾನಪಿ ಮಲ್ಲವೀರಾನ್ ರಙ್ಗೇ ನಿಧಾಯ ಹರಿಸಂಯಮನಂ ಕಿಲೈಚ್ಛತ್ ೧೩.೧೦೮

ಪ್ರವೇಶಮಾಡುವ ರಂಗದ (stadium, ಕ್ರೀಡಾಂಗಣ ) ದ್ವಾರದಲ್ಲಿ,  ದೊಡ್ಡ ಬೆಟ್ಟದಂತೆ ಇರುವ, ಮಾವುತನಿಂದ ಕೂಡಿರುವ, ಕುವಲ್ಯಾಪೀಡವೆನ್ನುವ ಆನೆಯನ್ನು ಇರಿಸಿದ ಕಂಸ, ರಂಗದ ಒಳಗೆ ಚಾಣೂರ, ಮುಷ್ಟಿಕ,ಇವರೇ ಪ್ರಧಾನವಾಗಿರುವ ಎಲ್ಲಾ ಮಲ್ಲವೀರರನ್ನು ಇಟ್ಟು, ಪರಮಾತ್ಮನ ಸಂಯಮನವನ್ನು ಇಚ್ಛಿಸಿದನು.

ಅಕ್ಷೋಹಿಣೀಗಣಿತಮಸ್ಯ ಬಲಂ ಚ ವಿಂಶದಾಸೀದಸಹ್ಯಮುರುವೀರ್ಯ್ಯಮನನ್ಯವದ್ಧ್ಯಮ್
ಶಮ್ಭೋರ್ವರಾದಪಿ ಚ ತಸ್ಯ ಸುನೀಥನಾಮಾ ಯಃ ಪೂರ್ವಮಾಸ ವೃಕ ಇತ್ಯಸುರೋsನುಜೋsಭೂತ್ ೧೩.೧೦೯

ಉತ್ಕೃಷ್ಟವಾದ ವೀರ್ಯವುಳ್ಳ , ರುದ್ರನ ವರದಿಂದ ಕೃಷ್ಣನಲ್ಲದೆ ಇನ್ಯಾರಿಗೂ ಕೊಲ್ಲಲು ಅಸಾಧ್ಯವಾದ, ಇಪ್ಪತ್ತು ಅಕ್ಷೋಹಿಣಿ ಸೈನ್ಯ ಕಂಸನಲ್ಲಿತ್ತು. ಆ ಬಲಕ್ಕೆ ಸುನೀಥ ನಾಮಕ  ಕಂಸನ ತಮ್ಮನೇ ಸೇನಾಧಿಪತಿಯಾಗಿದ್ದ. (ಯಾರಾತ?) ಯಾರು ವ್ರಕನೆಂಬ(ವ್ರಕಾಸುರ/ಭಸ್ಮಾಸುರ) ಅಸುರನಿದ್ದನೋ, ಆ ಅಸುರನೇ ಕಂಸನ ತಮ್ಮನಾಗಿ ಹುಟ್ಟಿದ್ದ.

ಸಪ್ತಾನುಜಾ ಅಪಿ ಹಿ ತಸ್ಯ ಪುರಾತನಾ ಯೇ ಸರ್ವೇsಪಿ ಕಂಸಪೃತನಾಸಹಿತಾಃ ಸ್ಮ ರಙ್ಗೇ ।
ತಸ್ಥುಃ ಸರಾಮಮಭಿಯಾನ್ತಮುದೀಕ್ಷ್ಯ ಕೃಷ್ಣಮಾತ್ತಾಯುಧಾ ಯುಧಿ ವಿಜೇತುಮಜಂ ಸುಪಾಪಾಃ ॥೧೩.೧೧೦

ಸುನೀಥನಿಗೆ ಪೂರ್ವಜನ್ಮದಲ್ಲಿಯೂ   ಸಹೋದರರಾಗಿದ್ದ ಏಳು ಮಂದಿ, ಈ ಜನ್ಮದಲ್ಲಿಯೂ ಕೂಡಾ ಸಹೋದರರಾಗಿ  ಕಂಸನ ಸೇನೆಯೊಂದಿಗಿದ್ದರು. ಅತ್ಯಂತ ಪಾಪಿಷ್ಠರಾಗಿದ್ದ ಅವರು, ರಾಮನನ್ನು  ಕೂಡಿಕೊಂಡು ಬರುತ್ತಿರುವ,  ಎಂದೂ ಹುಟ್ಟದೇ ಇರುವ ಶ್ರೀಕೃಷ್ಣನನ್ನು ಯುದ್ಧದಲ್ಲಿ ಗೆಲ್ಲಲು, ಆಯುಧವನ್ನು ಹಿಡಿದು ನಿಂತಿದ್ದರು. (ಹುಟ್ಟದೇ ಇರುವವನನ್ನು ಸಾಯಿಸಲೆಂದು ನಿಂತಿದ್ದರು!)

ಕೃಷ್ಣೋsಪಿ ಸೂರ ಉದಿತೇ ಸಬಲೋ ವಯಸ್ಯೈಃ ಸಾರ್ದ್ಧಂ ಜಗಾಮ ವರರಙ್ಗಮುಖಂ ಸುರೇಶೈಃ ।
ಸಂಸ್ತೂಯಮಾನ ಉರುವಿಕ್ರಮ ಆಸುರಾಣಾಂ ನಿರ್ಮ್ಮೂಲನಾಯ ಸಕಳಾಚಲಿತೋರುಶಕ್ತಿಃ ॥೧೩.೧೧೧॥

ಸೂರ್ಯೋದಯವಾಗುತ್ತಿದ್ದಂತೆಯೇ,  ಉತ್ಕೃಷ್ಟವಾದ ಶಕ್ತಿಯುಳ್ಳ ಶ್ರೀಕೃಷ್ಣನೂ ಕೂಡಾ, ಬಲರಾಮನಿಂದ ಹಾಗೂ ತನ್ನ ಗೆಳೆಯರೊಂದಿಗೆ ಕೂಡಿಕೊಂಡು,  ಅಸುರರ ವಿನಾಶಕ್ಕಾಗಿ, ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವವನಾಗಿ, ಕಂಸನ ರಂಗಕ್ಕೆ ಅಭಿಮುಖವಾಗಿ ಹೊರಟನು.

No comments:

Post a Comment