ರಙ್ಗಪ್ರವಿಷ್ಟಮಭಿವೀಕ್ಷ್ಯ
ಜಗಾದ ಮಲ್ಲಃ ಕಂಸಪ್ರಿಯಾರ್ತ್ಥಮಭಿಭಾಷ್ಯ ಜಗನ್ನಿವಾಸಮ್ ।
ಚಾಣೂರ ಇತ್ಯಭಿಹಿತೋ
ಜಗತಾಮವದ್ಧ್ಯಃ ಶಮ್ಬುಪ್ರಸಾದತ ಇದಂ ಶೃಣು ಮಾಧವೇತಿ ॥೧೩.೧೧೭॥
ರಂಗದ ಒಳಹೊಕ್ಕ ಶ್ರೀಕೃಷ್ಣನನ್ನು
ಎದುರುಗೊಂಡ ಚಾಣೂರ ಎಂದು ಪ್ರಖ್ಯಾತನಾದ, ಶಿವನ ವರದಿಂದಾಗಿ ಅವಧ್ಯನಾದ ಮಲ್ಲನು, ಕಂಸನ ಪ್ರೀತಿಗಾಗಿ, ‘ಮಾಧವಾ’
ಎಂದು ಶ್ರೀಕೃಷ್ಣನನ್ನು ಸಂಬೋಧಿಸಿ, “ಇದನ್ನು
ಕೇಳು’’ ಎಂದು ಮಾತನಾಡುತ್ತಾನೆ. (ಮಧುವಿನ
ವಂಶದಲ್ಲಿ ಬಂದವರನ್ನು ಮಾಧವರು ಎಂದು ಕರೆಯುತ್ತಾರೆ. ಇಲ್ಲಿ ‘ಮಾಧವಾ’ ಎಂದು ಸಂಬೋಧಿಸುವುದರ ಹಿಂದಿನ ಕಾರಣ ‘ನಾವು ನಿನ್ನನ್ನು ಈಗಾಗಲೇ ಗುರುತಿಸಿದ್ದೇವೆ’ ಎಂದು ತೋರಿಸುವುದೇ
ಆಗಿದೆ).
ರಾಜೈವ ದೈವತಮಿತಿ
ಪ್ರವದನ್ತಿ ವಿಪ್ರಾ ರಾಜ್ಞಃ ಪ್ರಿಯಂ ಕೃತವತಃ ಪರಮಾ ಹಿ ಸಿದ್ಧಿಃ ।
ಯೋತ್ಸ್ಯಾವ ತೇನ
ನೃಪತಿಪ್ರಿಯಕಾಮ್ಯಯಾssವಾಂ ರಾಮೋsಭಿಯುದ್ಧ್ಯತು ಬಲೀ ಸಹ
ಮುಷ್ಟಿಕೇನ ॥೧೩.೧೧೮॥
“ಬ್ರಾಹ್ಮಣರು ‘ರಾಜನೇ
ದೇವತೆ’ ಎಂದು ಹೇಳುತ್ತಾರೆ. ರಾಜನಿಗೆ ಪ್ರಿಯವಾದುದ್ದನ್ನು
ಮಾಡುವವನಿಗೆ ಉತ್ಕೃಷ್ಟವಾದ ಸಿದ್ಧಿಯಷ್ಟೇ? ಆ ಕಾರಣದಿಂದ ನಾವಿಬ್ಬರು ಕಂಸನಿಗೆ ಪ್ರೀತಿಯನ್ನು
ಉಂಟುಮಾಡುವ ಸಲುವಾಗಿ ಯುದ್ಧಮಾಡೋಣ. ಬಲಿಷ್ಠನಾದ ಬಲರಾಮನು
ಮುಷ್ಟಿಕನೊಂದಿಗೆ ಯುದ್ಧಮಾಡಲಿ” ಎನ್ನುತ್ತಾನೆ ಚಾಣೂರ.
[ಈ ಚಾಣೂರ ಮತ್ತು ಮುಷ್ಟಿಕರ ಪರಾಕ್ರಮದ ಕುರಿತು ಹರಿವಂಶಪರ್ವದಲ್ಲಿ(೫೪.೭೬)
ಹೀಗೆ ಹೇಳಿದ್ದಾರೆ: ವಾರಾಹಶ್ಚ ಕಿಶೋರಶ್ಚ
ದಾನವೌ ಯೌ ಮಹಾಬಲೌ । ಮಲ್ಲೌ ರಙ್ಗಗತೌ ತೌ ತು
ಜಾತೌ ಚಾಣೂರಮುಷ್ಟಿಕೌ’. ಇದಲ್ಲದೆ ದೇವೀ
ಭಾಗವತದಲ್ಲಿ (೪.೨೨.೪೫) ‘ವಾರಾಹಶ್ಚ ಕಿಶೋರಶ್ಚ ದೈತೌ ಪರಮದಾರುಣೌ । ಮಲ್ಲೌ ತಾವೇವ ಸಞ್ಜಾತೌ ಖ್ಯಾತೌ ಚಾಣೂರಮುಷ್ಟಿಕೌ’ ಎಂದು ಹೇಳಿರುವುದನ್ನು ಕಾಣುತ್ತೇವೆ. ಹಿಂದೆ ವಾರಾಹ ಹಾಗೂ ಕಿಶೋರ ಎಂದೇ ಖ್ಯಾತರಾಗಿದ್ದ ಇಬ್ಬರು
ಮಹಾಬಲಶಾಲಿ ದಾನವರು, ಈಗ ಚಾಣೂರ ಹಾಗೂ ಮುಷ್ಟಿಕ ಎಂಬ ಹೆಸರಿನಿಂದ ಹುಟ್ಟಿ ಬಂದರು].
ಇತ್ಯುಕ್ತ ಆಹ ಭಗವಾನ್
ಪರಿಹಾಸಪೂರ್ವಮೇವಂ ಭವತ್ವಿತಿ ಸ ತೇನ ತದಾsಭಿಯಾತಃ ।
ಸನ್ದರ್ಶ್ಯ ದೈವತಪತಿರ್ಯ್ಯುಧಿ
ಮಲ್ಲಲೀಲಾಂ ಮೌಹೂರ್ತ್ತಿಕೀಮಥ ಪದೋರ್ಜ್ಜಗೃಹೇ ಸ್ವಶತ್ರುಮ್ ॥೧೩.೧೧೯॥
ಚಾಣೂರನ ಮಾತನ್ನು ಕೇಳಿದ ಶ್ರೀಕೃಷ್ಣನು
ಮುಗುಳುನಗುತ್ತಾ, ‘ಹಾಗೇ ಆಗಲಿ’ ಎಂದು ಹೇಳಿ, ಅವನನ್ನು ಎದುರುಗೊಂಡ. ದೇವತಾಪತಿಯಾದ ಶ್ರೀಕೃಷ್ಣನು ಯುದ್ಧದಲ್ಲಿ ಒಂದು
ಮುಹೂರ್ತಕಾಲ ಮಲ್ಲ ಲೀಲೆಯನ್ನು ತೋರಿಸಿ, ನಂತರ ತನ್ನ ಶತ್ರುವನ್ನು(ಚಾಣೂರನನ್ನು) ಕಾಲುಗಳಲ್ಲಿ
ಹಿಡಿದನು.
ಉತ್ಕ್ಷಿಪ್ಯ ತಂ ಗಗನಗಂ
ಗಿರಿಸನ್ನಿಕಾಶಮುದ್ಭ್ರಾಮ್ಯ ಚಾಥ ಶತಶಃ ಕುಲಿಶಾಕ್ಷತಾಙ್ಗಮ್ ।
ಆವಿದ್ಧ್ಯ ದುರ್ದ್ಧರಬಲೋ ಭುವಿ ನಿಷ್ಪಿಪೇಷ ಚೂರ್ಣ್ಣೀಕೃತಃ ಸ ನಿಪಪಾತ ಯಥಾ ಗಿರೀನ್ದ್ರಃ ॥೧೩.೧೨೦॥
ಬೆಟ್ಟದಂತಿರುವ ಅವನನ್ನು
ಮೇಲೆತ್ತಿದ, ಯಾರಿಗೂ ಮೀರಲು ಸಾಧ್ಯವಿಲ್ಲದ ಬಲವುಳ್ಳವನಾದ ಶ್ರೀಕೃಷ್ಣನು, ಅವನನ್ನು ನೂರುಬಾರಿ(ಅನೇಕ
ಬಾರಿ) ಆಕಾಶದಲ್ಲಿ ಗಿರಗಿರನೆ ತಿರುಗಿಸಿ, ವಜ್ರಾಯುಧದಿಂದಲೂ ಭೇದಿಸಲಾಗದ ಅಂಗವುಳ್ಳ ಅವನನ್ನು
ಭೂಮಿಗೆ ಅಪ್ಪಳಿಸಿ ಪುಡಿಪುಡಿಮಾಡಿದನು. ಅವನಾದರೋ,
ಒಂದು ದೊಡ್ಡ ಬೆಟ್ಟವೋ ಎಂಬಂತೆ ಪುಡಿಪುಡಿಯಾಗಿ ಭೂಮಿಯಲ್ಲಿ ಬಿದ್ದನು.
ಕೃಷ್ಣಂ ಚ ತುಷ್ಟುವುರಥೋ
ದಿವಿ ದೇವಸಙ್ಘಾ ಮರ್ತ್ತ್ಯಾ ಭುವಿ ಪ್ರವರಮುತ್ತಮಪೂರುಷಾಣಾಮ್ ।
ತದ್ವದ್ ಬಲಸ್ಯ
ದೃಡಮುಷ್ಟಿನಿಪಿಷ್ಟಮೂರ್ದ್ಧಾ ಭ್ರಷ್ಟಸ್ತದೈವ ನಿಪಪಾತ ಸ ಮುಷ್ಟಿಕೋsಪಿ ॥೧೩.೧೨೧॥
ಚಾಣೂರನ ನಿಗ್ರಹವಾಗುತ್ತಿದ್ದಂತೇ,
ಆಕಾಶದಲ್ಲಿರುವ ದೇವತೆಗಳು ಕೃಷ್ಣನನ್ನು ಹಾಡಿಹೊಗಳಿದರು. ಸಾತ್ವಿಕರಾದ ಮನುಷ್ಯರೂ ಕೂಡಾ
ಉತ್ತಮಪುರುಷರಲ್ಲಿ ಶ್ರೇಷ್ಠನಾದ ನಾರಾಯಣನನ್ನು ಭೂಮಿಯಲ್ಲಿದ್ದುಕೊಂಡು ಸ್ತೋತ್ರ ಮಾಡಿದರು.
ಹಾಗೆಯೇ ಬಲರಾಮನ ದೃಢವಾದ
ಮುಷ್ಟಿಯಿಂದ ಪುಡಿಮಾಡಲ್ಪಟ್ಟ ತಲೆಯುಳ್ಳವನಾದ ಮುಷ್ಟಿಕನೂ ಕೂಡಾ ಪ್ರಾಣದಿಂದ ಭ್ರಷ್ಟನಾಗಿ(ಸತ್ತು)
ಬಿದ್ದನು.
ಕೂಟಶ್ಚ ಕೋಸಲ ಉತ
ಚ್ಛಲನಾಮಧೇಯೋ ದ್ವೌ ತತ್ರ ಕೃಷ್ಣನಿಹತಾವಪರೋ ಬಲೇನ ।
ಕಂಸಸ್ಯ ಯೇ ತ್ವವರಜಾಶ್ಚ
ಸುನೀಥಮುಖ್ಯಾಃ ಸರ್ವೇ ಬಲೇನ ನಿಹತಾಃ ಪರಿಘೇಣ ವೀರಾಃ ॥೧೩.೧೨೨॥
ಒಬ್ಬ ಕೂಟ(ಯುದ್ಧದಲ್ಲಿ ಕುಟಿಲನೀತಿಯಿಂದ
ಮಲ್ಲರನ್ನು ಗೆಲ್ಲುತ್ತಿದ್ದರಿಂದ ಕೂಟ ಎಂದು ಹೆಸರಾದವ) ಹಾಗು ಇನ್ನೊಬ್ಬ ಕೋಸಲ(ಕುಸ್ಯಂತಿ, ಕುಸ್
ಶ್ಲೇಷಣೆ, ಶ್ಲಿಷ್ಯನ್ತೀತಿ ಕೋಸಲ ನಾಮ). ಈ ಇಬ್ಬರನ್ನು ಕೃಷ್ಣ ಸಂಹಾರ ಮಾಡಿದರೆ, ಇನ್ನೊಬ್ಬ ಛಲ ನಾಮಕನನ್ನು
ಬಲರಾಮ ಸಂಹಾರಮಾಡಿದ. ಕಂಸನ ತಮ್ಮಂದಿರರಾದ ಸುನೀತನೇ ಮೊದಲಾದ ಎಲ್ಲರೂ ಕೂಡಾ ಬಲರಾಮನ ಪರಿಘದಿಂದ(ಮುಸಲಾಯುಧದಿಂದ) ಕೊಲ್ಲಲ್ಪಟ್ಟರು.
No comments:
Post a Comment