ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 10, 2019

Mahabharata Tatparya Nirnaya Kannada 1382_1386


ವ್ಯೋಮಶ್ಚ[1] ನಾಮ ಮಯಸೂನುರಜಪ್ರಸಾದಾಲ್ಲಬ್ಧಾಮಿತಾಯುರಖಿಲಾನ್ ವಿದಧೇ ಬಿಲೇ ಸಃ
ತಂ ಶ್ರೀಪತಿಃ ಪಶುಪತಿಃ ಪಶುವದ್ ವಿಶಸ್ಯ ನಿಃಸಾರಿತಾನ್ ಬಿಲಮುಖಾದಖಿಲಾಂಶ್ಚಕಾರ ॥೧೩.೮೨

ವ್ಯೋಮನೆಂಬ ಹೆಸರಿನ ಮಯನ ಮಗನು, ಬ್ರಹ್ಮನ ಅನುಗ್ರಹದಿಂದ, ಅಮಿತವಾದ ಆಯುಸ್ಸನ್ನು ಪಡೆದು, ಎಲ್ಲಾ ಗೊಲ್ಲರನ್ನು  ಗುಹೆಯಲ್ಲಿ ಬಂಧಿಸಿಟ್ಟನು.  ಆ ಅಸುರನನ್ನು ಶ್ರೀಪತಿಯೂ, ಪಶುಪತಿಯೂ ಆದ ಶ್ರೀಕೃಷ್ಣನು  ಪಶುವಂತೆ ಕೊಂದು, ಬಿಲದಿಂದ ಎಲ್ಲರನ್ನು ಬಿಡುಗಡೆ ಮಾಡಿದನು.

ಕುರ್ವತ್ಯನನ್ಯವಿಷಯಾಣಿ ದುರನ್ತಶಕ್ತೌ ಕರ್ಮ್ಮಾಣಿ ಗೋಕುಲಗತೇsಖಿಲಲೋಕನಾಥೇ ।
ಕಂಸಾಯ ಸರ್ವಮವದತ್ ಸುರಕಾರ್ಯ್ಯಹೇತೋರ್ಬ್ರಹ್ಮಾಙ್ಕಜೋ ಮುನಿರಕಾರಿ ಯದೀಶಪಿತ್ರಾ ೧೩.೮೩

ಈರೀತಿಯಾಗಿ ಗೋಕುಲದಲ್ಲಿರುವ, ಸಮಸ್ತಲೋಕದ ಒಡೆಯನಾದ, ಅಮಿತ ಪರಾಕ್ರಮಿಯಾದ ಶ್ರೀಕೃಷ್ಣನು, ಯಾರಿಗೂ ಸಾಧ್ಯವಾಗದ ಕರ್ಮಗಳನ್ನು ಮಾಡುತ್ತಿರುವಾಗಲೇ, ಸುರರ ಕಾರ್ಯ ಶೀಘ್ರ ನೆರವೇರಲಿ ಎನ್ನುವ ಉದ್ದೇಶಕ್ಕಾಗಿ ಬ್ರಹ್ಮಾಙ್ಕಜ(ಬ್ರಹ್ಮನ ತೊಡೆಯಿಂದ ಹುಟ್ಟಿದ) ನಾರದ ಮುನಿಯು ಕಂಸನಿಗೆ ಎಲ್ಲವನ್ನೂ ಹೇಳಿದರು. (ದೇವಕಿಯ ಅಷ್ಟಮಗರ್ಭದಲ್ಲಿ ಹುಟ್ಟಿದ ಮಗು ಹೇಗೆ ಗೋಕುಲದಲ್ಲಿ ಬೆಳೆಯುತ್ತಿದೆ, ಇತ್ಯಾದಿ ಎಲ್ಲಾ ರಹಸ್ಯವನ್ನು ಕಂಸನಿಗೆ, ದೇವಕಾರ್ಯವನ್ನು ಶೀಘ್ರವಾಗಿ ನೆರವೇರಿಸುವ ನಿಮಿತ್ತವಾಗಿ ಹೇಳಿದರು).

ಶ್ರುತ್ವಾsತಿಕೋಪರಭಸೋಚ್ಚಲಿತಃ ಸ ಕಂಸೋ ಬಧ್ವಾ ಸಭಾರ್ಯ್ಯಮಥ ಶೂರಜಮುಗ್ರಕರ್ಮ್ಮಾ
ಅಕ್ರೂರಮಾಶ್ವದಿಶದಾನಯನಾಯ ವಿಷ್ಣೋ ರಾಮಾನ್ವಿತಸ್ಯ ಸಹ ಗೋಪಗಣೈ ರಥೇನ ॥೧೩.೮೪

ನಾರದರ ಮಾತನ್ನು ಕೇಳಿದ ಕಂಸ, ರಭಸವಾದ ಕೋಪದಿಂದ ಪ್ರವೃತ್ತನಾದವನಾಗಿ, ವಸುದೇವ-ದೇವಕಿಯರನ್ನು ಕಟ್ಟಿಹಾಕಿದನು.  ಉಗ್ರವಾದ ಕರ್ಮವುಳ್ಳ ಆ ಕಂಸನು, ಗೋಪಗಣದೊಂದಿಗೆ ಬಲರಾಮನಿಂದ ಕೂಡಿರುವ ವಿಷ್ಣುವನ್ನು ತನ್ನ ರಥದಲ್ಲಿ ತಕ್ಷಣ ಕೊಂಡೊಯ್ದು ಬರಲು  ಅಕ್ರೂರನಿಗೆ ಆಜ್ಞಾಪಿಸಿದನು.

ಸಂಸೇವನಾಯ ಸ ಹರೇರಭವತ್ ಪುರೈವ ನಾಮ್ನಾ ಕಿಶೋರ ಇತಿ ಯಃ ಸುರಗಾಯನೋsಭೂತ್ ।
ಸ್ವಾಯಮ್ಭುವಸ್ಯ ಚ ಮನೋಃ ಪರಮಾಂಶಯುಕ್ತ ಆವೇಶಯುಕ್ ಕಮಲಜಸ್ಯ ಬಭೂವ ವಿದ್ವಾನ್ ॥೧೩.೮೫

(ಇಲ್ಲಿ ಅಕ್ರೂರನ ಮೂಲರೂಪದ ಕುರಿತಾದ ವಿವರವನ್ನು ನೀಡಿದ್ದಾರೆ:) ಮೂಲತಃ ಯಾರು ‘ಕಿಶೋರ’ ಎಂಬ ಹೆಸರಿನ ದೇವತೆಗಳ ಹಾಡುಗಾರನೋ(ಗಂಧರ್ವನೋ) ಅವನೇ ಪರಮಾತ್ಮನ ಸೇವೆಗಾಗಿ ಭೂಮಿಯಲ್ಲಿ ಜನಿಸಿದ್ದ. ಈತ ಸ್ವಾಯಮ್ಭುವ ಮನುವಿನ ಅಂಶದೊಂದಿಗೆ, ಬ್ರಹ್ಮದೇವರ ಆವೇಶದಿಂದ ಕೂಡಿದ ಜ್ಞಾನಿಯಾಗಿದ್ದ.

ಸೋsಕ್ರೂರ ಇತ್ಯಭವದುತ್ತಮಪೂಜ್ಯಕರ್ಮ್ಮಾ ವೃಷ್ಣಿಷ್ವಥಾsಸ ಸ ಹಿ ಭೋಜಪತೇಶ್ಚ ಮನ್ತ್ರೀ
ಆದಿಷ್ಟ ಏವ ಜಗದೀಶ್ವರದೃಷ್ಟಿಹೇತೋರಾನನ್ದಪೂರ್ಣ್ಣಸುಮನಾ ಅಭವತ್ ಕೃತಾರ್ತ್ಥಃ ॥೧೩.೮೬॥

ಉತ್ಕೃಷ್ಟರಿಂದಲೂ ಪೂಜ್ಯವಾದ ಕರ್ಮವುಳ್ಳವನಾದ, ವೃಷ್ಣಿಗಳಲ್ಲಿ ಹುಟ್ಟಿದ, ಕಂಸನ ಮಂತ್ರಿಯಾದ ಅವನು ಅಕ್ರೂರನೆಂಬ ಹೆಸರಿನವನಾಗಿದ್ದ. ಆತ ಕಂಸನ ಆಜ್ಞೆಯನ್ನು ಕೇಳಿ,  ಪರಮಾತ್ಮನನ್ನು ನೋಡುವೆನಲ್ಲಾ ಎಂಬ ಕಾರಣದಿಂದ ಆನಂದತುಂಬಿದ ಮನಸ್ಸುಳ್ಳವನಾಗಿ ಧನ್ಯನಾದ(ಕೃತಕತ್ಯನಾದ).




[1] ಪ್ರಾಚೀನ ಪಾಠದಲ್ಲಿ ವ್ಯಾಮಶ್ಚ ಎಂದಿದೆ. ಆದರೆ ವ್ಯಾಮಶ್ಚ ಎನ್ನುವ ಪಾಠ ಬೇರೆಲ್ಲೂ ಉಪಲಬ್ಧವಾಗಿಲ್ಲ. ಅದರಿಂದಾಗಿ ಪ್ರಾಯಃ ಇದು ವ್ಯೋಮಶ್ಚಇರಬಹುದು. ಭಾಗವತದಲ್ಲಿ – ‘ ಮಯಪುತ್ರೇ ಮಹಾಮಾಯೋ ವ್ಯೋಮೋ ಗೋಪಾಲವೇಷಧೃಕ್ ’ (೧೦.೩೫.೨೯) ಎಂದಿದೆ. ಆದ್ದರಿಂದ ಸರ್ವತ್ರಪ್ರಚಲಿತ ಪಾಠದಂತೆ ಇಲ್ಲಿ ವ್ಯೋಮಶ್ಚ ಎಂದು ಬಳಸಲಾಗಿದೆ.

No comments:

Post a Comment