ಸಂಸ್ಥಾಪ್ಯತೌ ರಥವರೇ ಜಗತಾsಭಿವನ್ದ್ಯೌ ಶ್ವಾಫಲ್ಕಿರಾಶ್ವವತತಾರ
ಯಮಸ್ವಸಾರಮ್ ।
ಸ್ನಾತ್ವ ಸ ತತ್ರ ವಿಧಿನೈವ
ಕೃತಾಘಮರ್ಷಃ ಶೇಷಾಸನಂ ಪರಮಪೂರುಷಮತ್ರ ಚೈಕ್ಷತ್ ॥೧೩.೯೨॥
ಜಗತ್ತಿನಿಂದ
ನಮಸ್ಕಾರ್ಯರಾದ ಅವರಿಬ್ಬರನ್ನು ಶ್ರೇಷ್ಠವಾದ ಆ
ರಥದಲ್ಲಿ ಕುಳ್ಳಿರಿಸಿ, ಶ್ವಫಲ್ಕಪುತ್ರ ಅಕ್ರೂರನು ಕೂಡಲೇ ಯಮುನಾನದಿಗಿಳಿದನು. ಅವನು ಅಲ್ಲಿ
ಶಾಸ್ತ್ರಪೂರ್ವಕವಾಗಿ ಅಘಮರ್ಷಣ ಸೂಕ್ತವನ್ನು ಪಠಿಸುತ್ತಾ, ಸ್ನಾನಮಾಡಿ, ಅಲ್ಲಿಯೇ(ಜಲದಲ್ಲಿರುವಾಗಲೇ)
ಶೇಷಾಸನನಾದ ಪರಮಾತ್ಮನನ್ನು ಕಂಡನು.
ನಿತ್ಯಂ ಹಿ ಶೇಷಮಭಿಪಶ್ಯತಿ
ಸಿದ್ಧಮನ್ತ್ರೋ ದಾನೇಶ್ವರಃ ಸ ತು ತದಾ ದದೃಶೇ ಹರಿಂ ಚ ।
ಅಗ್ರೇ ಹಿ ಬಾಲತುನುಮೀಕ್ಷ್ಯ
ಸ ಕೃಷ್ಣಮತ್ರ ಕಿಂ ನಾಸ್ತಿ ಯಾನ ಇತಿ ಯಾನಮುಖೋ ಬಭೂವ॥೧೩.೯೩॥
ಅಘಮರ್ಷಣ ಮಂತ್ರದ
ಸಿದ್ಧಿಯನ್ನು ಮಾಡಿಕೊಂಡಿದ್ದ ಅಕ್ರೂರನು ಯಾವಾಗಲೂ ಶೇಷನನ್ನು ಕಾಣುತ್ತಿದ್ದ. ಆದರೆ ಈ
ಸಂದರ್ಭದಲ್ಲಿ ಆತ ಭಗವಂತನ ದರ್ಶನವನ್ನೂ ಪಡೆದ. ತನ್ನ ಮುಂದೆ ಬಾಲಕ ಶರೀರವುಳ್ಳ ಶ್ರೀಕೃಷ್ಣನನ್ನು
ನದಿಯಲ್ಲೇ ಕಂಡ ಅಕ್ರೂರ, ರಥದಲ್ಲಿ ಕೃಷ್ಣ ಇರುವನೋ-ಇಲ್ಲವೋ ಎಂದು ರಥದತ್ತ ನೋಡುತ್ತಾನೆ.
ತತ್ರಾಪಿ ಕೃಷ್ಣಮಭಿವೀಕ್ಷ್ಯ
ಪುನರ್ನ್ನಿಮಜ್ಜ್ಯ ಶೇಷೋರುಭೋಗಶಯನಂ ಪರಮಂ ದದರ್ಶ ।
ಬ್ರಹ್ಮೇಶಶಕ್ರಮುಖದೇವಮುನೀನ್ದ್ರವೃನ್ದಸಂವನ್ದಿತಾಙ್ಘ್ರಿಯುಗಮಿನ್ದಿರಯಾ
ಸಮೇತಮ್ ॥೧೩.೯೪॥
ರಥದಲ್ಲೂ ಕೂಡಾ ಕೃಷ್ಣನನ್ನು ಕಂಡ ಅಕ್ರೂರ, ಮತ್ತೆ ಯಮುನೆಯಲ್ಲಿ ಮುಳುಗಿ, ಶೇಷನ ಉತ್ಕೃಷ್ಟವಾದ
ಶರೀರದ ಮೇಲೆ ಮಲಗಿರುವ, ಬ್ರಹ್ಮ-ರುದ್ರ-ಇಂದ್ರ ಮೊದಲಾದ
ದೇವತೆಗಳು, ಮುನಿಶ್ರೇಷ್ಠರು, ಇವರೆಲ್ಲರ ಸಮೂಹಗಳಿಂದ ವಂದಿತವಾದ ಪಾದಗಳೆರಡನ್ನು ಹೊಂದಿರುವ, ಲಕ್ಷ್ಮಿಯಿಂದ ಕೂಡಿರುವ, ಉತ್ಕೃಷ್ಟನಾದ ಪರಮಾತ್ಮನನ್ನು
ಕಾಣುತ್ತಾನೆ.
ಸ್ತುತ್ವಾ
ವರಸ್ತುತಿಭಿರವ್ಯಯಮಬ್ಜನಾಭಂ ಸೋsನ್ತರ್ಹಿತೇ ಭಗವತಿ
ಸ್ವಕಮಾರುರೋಹ ।
ಯಾನಂ ಚ ತೇನ ಸಹಿತೋ
ಭಗವಾನ್ ಜಗಾಮ ಸಾಯಂ ಪುರೀಂ ಸಹಬಲೋ ಮಧುರಾಮನನ್ತಃ ॥೧೩.೯೫॥
ಆ ಅಕ್ರೂರನು ಉತ್ಕೃಷ್ಟವಾದ
ಸ್ತೋತ್ರಗಳಿಂದ, ಎಂದೂ ನಾಶವಾಗದ, ಪದ್ಮನಾಭನಾಗಿರುವ ಪರಮಾತ್ಮನನ್ನು ಸ್ತೋತ್ರಮಾಡಿ, ಪರಮಾತ್ಮ
ಕಾಣದಂತಾಗಲು ನದಿಯಿಂದ ಮೇಲೆಬಂದು ತನ್ನ ರಥವನ್ನು ಏರಿದ.
ಹೀಗೆ ಅಕ್ರೂರ ಹಾಗೂ ಬಲರಾಮನಿಂದ
ಕೂಡಿಕೊಂಡ, ಗುಣಗಳಲ್ಲಿ ಎಣಿಯಿರದ ನಾರಾಯಣನು ಸಂಜೆಯ
ಸುಮಾರಿಗೆ ಪಟ್ಟಣವನ್ನು ತಲುಪಿದ.
No comments:
Post a Comment