ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 14, 2019

Mahabharata Tatparya Nirnaya Kannada 1396_13102


ಅಗ್ರೇsಥ ದಾನಪತಿಮಕ್ಷಯಪೌರುಷೋsಸಾವೀಶೋ ವಿಸೃಜ್ಯ ಸಬಲಃ ಸಹಿತೋ ವಯಸ್ಯೈಃ
ದ್ರಷ್ಟುಂ ಪುರೀಮಭಿಜಗಾಮ ನರೇನ್ದ್ರಮಾರ್ಗ್ಗೇ ಪೌರೈಃ ಕುತೂಹಲಯುತೈರಭಿಪೂಜ್ಯಮಾನಃ॥೧೩.೯೬

ಮಧುರೆಯನ್ನು ತಲುಪಿದಮೇಲೆ, ದಾನಪತಿ ಎನ್ನುವ ಹೆಸರುಳ್ಳ ಅಕ್ರೂರನನ್ನು  ಮುಂದೆ ಕಳುಹಿಸಿಕೊಟ್ಟ ಎಂದೂ ನಾಶವಾಗದ ಕಸುವುಳ್ಳ ಶ್ರೀಕೃಷ್ಣನು, ಬಲರಾಮ ಹಾಗೂ ಸಮಸ್ತ ಗೆಳೆಯರಿಂದ ಕೂಡಿಕೊಂಡು ಪಟ್ಟಣವನ್ನು ನೋಡಲೆಂದು ತೆರಳಿದನು. ಹೀಗೆ ಹೋಗುತ್ತಿರುವಾಗ,  ರಾಜಮಾರ್ಗದಲ್ಲಿ ಕುತೂಹಲದಿಂದ ನೋಡುತ್ತಿರುವ  ಪಟ್ಟಣಿಗರಿಂದ, ತನ್ನ ಗುಣ-ಮೊದಲಾದವುಗಳಿಂದ ಹೊಗಳಿಸಲ್ಪಟ್ಟವನಾಗಿ ಕೃಷ್ಣ ತಿರುಗಾಡಿದ.

ಆಸಾದ್ಯ ಕುಞ್ಜರಗತಂ ರಜತಂ ಯಯಾಚೇ ವಸ್ತ್ರಾಣಿ ಕಂಸದಯಿತಂ ಗಿರಿಶಾವರೇಣ ।
ಮೃತ್ಯೂಜ್ಝಿತಂ ಸಪದಿ ತೇನ ದುರುಕ್ತಿವಿದ್ಧಃ ಪಾಪಂ ಕರಾಗ್ರಮೃದಿತಂ ವ್ಯನಯದ್ ಯಮಾಯ॥೧೩.೯೭

ಮಧುರೆಯಲ್ಲಿ ತಿರುಗಾಡುತ್ತಿರುವಾಗ ಶ್ರೀಕೃಷ್ಣ ಕಂಸನಿಗೆ ಪ್ರಿಯನಾಗಿರುವ,   ಆನೆಯಮೇಲೆ ಕುಳಿತಿರತಕ್ಕ, ಪಾರ್ವತಿಯ ವರದಿಂದ ಅವಧ್ಯನಾಗಿರುವ ಅಗಸನೊಬ್ಬನಲ್ಲಿ  ಬಟ್ಟೆಗಳನ್ನು ಕೇಳಿದ. ಆಗ ಆ ಅಗಸನಿಂದ ಕೆಟ್ಟ ವಚನಗಳಿಂದ ನಿಂದಿಸಲ್ಪಟ್ಟು ಸಿಟ್ಟುಗೊಂಡವನಾದ ಕೃಷ್ಣ, ಆ ಪಾಪಿಷ್ಠನಾದ ಅಗಸನನ್ನು ತನ್ನ ಹಸ್ತತಲದಿಂದ   ಹೊಡೆದು, ಯಮಲೋಕಕ್ಕಟ್ಟಿದ.

ಹತ್ವಾ ತಮಕ್ಷತಬಲೋ ಭಗವಾನ್ ಪ್ರಗೃಹ್ಯ ವಸ್ತ್ರಾಣಿ ಚಾsತ್ಮಸಮಿತಾನಿ ಬಲಸ್ಯ ಚಾsದಾತ್
ದತ್ವಾsಪರಾಣಿ ಸಖಿಗೋಪಜನಸ್ಯ ಶಿಷ್ಟಾನ್ಯಾಸ್ತೀರ್ಯ್ಯ ತತ್ರ ಚ ಪದಂ ಪ್ರಣಿಧಾಯ ಚಾsಗಾತ್॥೧೩.೯೮॥

ಎಂದೂ ನಾಶವಾಗದ ಬಲವುಳ್ಳ ನಾರಾಯಣನು ಆ ರಜಕನನ್ನು ಕೊಂದು, ತನಗೆ ಯೋಗ್ಯವಾದ ವಸ್ತ್ರಗಳನ್ನು ಹಿಡಿದುಕೊಂಡು,  ಬಲರಾಮನಿಗೂ ಮತ್ತು ಗೋಪಾಲಕರಿಗೂ ಕೂಡಾ ಯೋಗ್ಯವಾದ ಬಟ್ಟೆಗಳನ್ನು ಕೊಟ್ಟು, ಉಳಿದ ಬಟ್ಟೆಗಳನ್ನು ಮಾರ್ಗದಮೇಲೆ ಹಾಸಿ, ಆ ಬಟ್ಟೆಯಮೇಲೆ ಕಾಲುಗಳನ್ನು ಇಡುತ್ತಾ ಮುನ್ನೆಡೆದ.

ಗ್ರಾಹ್ಯಾಪಹೇಯರಿಹಿತೈಕಚಿದಾತ್ಮಸಾನ್ದ್ರಸ್ವಾನನ್ದಪೂರ್ಣ್ಣವಪುರಪ್ಯಯಶೋಷಹೀನಃ ।
ಲೋಕಾನ್ ವಿಡಮ್ಬ್ಯ ನರವತ್ಸಮಲಕ್ತಕಾದ್ಯೈರ್ವಪ್ತ್ರಾವಿಭೂಷಿತ ಇವಾಭವದಪ್ರಮೇಯಃ ॥೧೩.೯೯॥

ಸ್ವೀಕಾರ್ಯ, ಅಪಹೇಹ್ಯ, ತ್ಯಾಜ್ಯ ಮೊದಲಾದವುಗಳಿಂದ ರಹಿತನಾಗಿರುವ, ಕೇವಲ ಘನೀಭರಿಸಿದ ಆನಂದವೇ ಮೈದಾಳಿಬಂದಿರುವ ನಾರಾಯಣನು, ಸಮಸ್ತ ದೋಷಗಳಿಂದ ವಿಹಿತನಾದರೂ ಕೂಡಾ,  ಮನುಷ್ಯನಂತೆ ಲೋಕವನ್ನು ಮೋಹಗೊಳಿಸಿ, ಗಂಧ ಮೊದಲಾದವುಗಳಿಂದ,  ಕ್ಷೌರಿಕನಿಂದಲೂ ಕೂಡಾ ಭೂಷಿತನಾದನೋ ಎಂಬಂತೆ ತೋರಿಸುತ್ತಾನೆ.

ಮಾಲಾ ಅವಾಪ್ಯ ಚ ಸುದಾಮತ ಆತ್ಮತನ್ತ್ರಸ್ತಾವಕ್ಷಯೋsನುಜಗೃಹೇ ನಿಜಪಾರ್ಷದೌ ಹಿ ।
ಪೂರ್ವಂ ವಿಕುಣ್ಠಸದನಾದ್ಧರಿಸೇವನಾಯ ಪ್ರಾಪ್ತೌ ಭುವಂ ಮೃಜನಪುಷ್ಪಕರೌ ಪುರಾsಪಿ ॥೧೩.೧೦೦

ನಾಶವಿಲ್ಲದ ನಾರಾಯಣನು ಸರ್ವಸ್ವತಂತ್ರನಾದರೂ,  ಸುದಾಮನೆಂಬ ಮಾಲಾಕಾರನಿಂದ ಮಾಲೆಯನ್ನು ಹೊಂದಿ ಅವನನ್ನು ಅನುಗ್ರಹಿಸಿದ.
ಭಗವಂತನ ಸೇವೆ ಮಾಡುವುದಕ್ಕಾಗಿಯೇ ಭೂಮಿಯಲ್ಲಿ ಹುಟ್ಟಿದ ಆ ಕ್ಷೌರಿಕ-ಮಾಲಾಕಾರರು,  ಪೂರ್ವದಲ್ಲಿ   ವೈಕುಂಠದಲ್ಲೂ ಅದೇ ಸೇವೆಯನ್ನು  ಮಾಡುವವರಾಗಿರುವವರು.

ಸರ್ವೇಷ್ಟಪುಷ್ಟಿಮಿಹ ತತ್ರ ಸರೂಪತಾಂ ಚ ಕೃಷ್ಣಸ್ತಯೋರ್ವರಮದಾದಥ ರಾಜಮಾರ್ಗ್ಗೇ ।
ಗಚ್ಛನ್ ದದರ್ಶ ವನಿತಾಂ ನರದೇವಯೋಗ್ಯಮಾದಾಯ ಗನ್ಧಮಧಿಕಂ ಕುಟಿಲಾಂ ವ್ರಜನ್ತೀಮ್ ೧೩.೧೦೧

ಶ್ರೀಕೃಷ್ಣನು ಅಲ್ಲಿಯೇ, ಅವರಿಬ್ಬರಿಗೂ ಎಲ್ಲಾ ಇಷ್ಟಪುಷ್ಟಿಯನ್ನೂ, ಮೋಕ್ಷದಲ್ಲಿ ಸ್ವಾರೂಪ್ಯವನ್ನೂ ವರವಾಗಿ ಕೊಟ್ಟ.
ತದನಂತರ ರಾಜಮಾರ್ಗದಲ್ಲಿ ಮುಂದೆ ಸಾಗುತ್ತಾ ಶ್ರೀಕೃಷ್ಣ, ಕಂಸನಿಗೆ ಯೋಗ್ಯವಾಗಿರುವ ಗಂಧವನ್ನು ತೆಗೆದುಕೊಂಡು ಹೋಗುತ್ತಿರುವ, ಕುಟಿಲವಾದ ಅಂಗವುಳ್ಳ(ವಕ್ರ ದೇಹವುಳ್ಳ) ಸ್ತ್ರೀಯನ್ನು ಕಂಡ.

ತೇನಾರ್ತ್ಥಿತಾ ಸಪದಿ ಗನ್ಧಮದಾತ್ ತ್ರಿವಕ್ರಾ ತೇನಾಗ್ರಜೇನ ಸಹಿತೋ ಭಗವಾನ್ ಲಿಲಿಮ್ಪೇ ।
ತಾಂ ಚಾsಶ್ವೃಜುತ್ವಮನಯತ್ ಸ ತಯಾsರ್ತ್ಥಿತೋsಲಮಾಯಾಮಿ ಕಾಲತ ಇತಿ ಪ್ರಹಸನ್ನಮುಞ್ಚತ್॥೧೩.೧೦೨॥

ಶ್ರೀಕೃಷ್ಣನಿಂದ ಪ್ರಾರ್ಥಿತಳಾದ ಆ ತ್ರಿವಕ್ರೆ, ತಕ್ಷಣ ತನ್ನಲ್ಲಿದ್ದ ಗಂಧವನ್ನು ಕೃಷ್ಣನಿಗೆ ಅರ್ಪಿಸಿದಳು. ಅವನಾದರೋ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಮೈಗೆ ಗಂಧವನ್ನು ಹಚ್ಚಿಕೊಂಡನು. ಅಷ್ಟೇ ಅಲ್ಲ, ಅವಳನ್ನು ಕೂಡಲೇ ನೆಟ್ಟಗೆ ಮಾಡಿದ ಕೂಡಾ (ಅವಳ ಕುಟಿಲಾಂಗವನ್ನು ನಿವಾರಿಸಿದ). ತದನಂತರ ಅವಳಿಂದ (ನಿನ್ನ ಸಂಗವಾಗಬೇಕು ಎಂದು)ಬೇಡಲ್ಪಟ್ಟವನಾಗಿ, ಸ್ವಲ್ಪ ಕಾಲ ಕಳೆದ ನಂತರ ಬರುತ್ತೇನೆ ಎಂದು ನಗುತ್ತಾ ಆಕೆಯನ್ನು ಕೃಷ್ಣ ಬೀಳ್ಕೊಟ್ಟ.

No comments:

Post a Comment