ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 24, 2019

Mahabharata Tatparya Nirnaya Kannada 13127_13132


ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ ಕೃಷ್ಣಮ್ ।
ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ ವೀರಮ್೧೩.೧೨೭

ತನ್ನ ಸೈನ್ಯವು ಸಂಪೂರ್ಣವಾಗಿ ನಾಶವಾಗಲು ಕಂಸನು, ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ಕೃಷ್ಣನನ್ನು ಎದುರುಗೊಳ್ಳಲು ಇಚ್ಛಿಸಿದನು. ಆದರೆ ಆಗಲೇ ಶ್ರೀಕೃಷ್ಣನು ತನ್ನ ಮಂಚದ(ಆಸನದ) ಮೇಲ್ಗಡೆ ತನ್ನನ್ನು ಎದುರುಗೊಂಡು ಬರುತ್ತಿರುವುದನ್ನು ಆತ ಬೆದರುತ್ತಾ ಕಂಡನು. (ಯಾವಾಗ ಕಂಸ ಕತ್ತಿ-ಗುರಾಣಿಗಳನ್ನು ಹಿಡಿದು ಕೃಷ್ಣನ ಎದುರುಗಡೆ ಹೋಗಿ ಅವನನ್ನು ಕೊಲ್ಲಬೇಕು ಎಂದು ಯೋಚನೆ ಮಾಡುತ್ತಿದ್ದನೋ, ಆಗಲೇ ಕೃಷ್ಣ ಅವನ ಬಳಿ ಬಂದುಬಿಟ್ಟಿದ್ದ)

ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ ಭಗವಾನ್ ಪ್ರಸಹ್ಯ   ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ೧೩.೧೨೮

ಗಿಡುಗದ ವೇಗದಂತೆ ವೇಗವುಳ್ಳ, ಅವಿಚ್ಛಿನ್ನನಾಗಿ ತನ್ನೆದುರು ಹಾರಿಬರುತ್ತಿರುವ ಕಂಸನ ಎಲ್ಲಾ ವೇಗವನ್ನು ನಾಶಮಾಡಿದ ಪರಮಾತ್ಮನು, ಅವನ ತಲೆಯನ್ನು ಎಡಗೈಯಿಂದ ಹಿಡಿದು, ಕೇಶವನ್ನು ಸೆಳೆದು,  ಬಲಗೈಯಿಂದ ಕತ್ತಿನಲ್ಲಿ ಹೊಡೆದನು.

ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ ನರಸಿಂಹಕರಾಗ್ರಸಂಸ್ಥಃ ॥೧೩.೧೨೯

ಪುರುಷಶ್ರೇಷ್ಠನಾದ ಕೃಷ್ಣನ ಕೈಯ ಅಳತೆಯೊಳಗಡೆ ಇದ್ದ ಕಂಸನು, ಕುಂಡಲವನ್ನು ಕಳೆದುಕೊಂಡ ಕಿವಿಯುಳ್ಳವನಾಗಿ, ಎದೆಯಲ್ಲಿ ಧರಿಸಿದ ಆಭರಣವನ್ನೂ ಬಿಟ್ಟು, ಜಾರಿಹೋದ ಬಟ್ಟೆಯುಳ್ಳ ಕಟಿ-ಊರುಗಳ ಮಧ್ಯ ಪ್ರದೇಶದಿಂದಲೂ ಅತ್ಯಂತ ಶೋಚನೀಯ ರೂಪವುಳ್ಳವನಾದನು.

ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್ ।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ ಪ್ರಹಾರಮ್ ॥೧೩.೧೩೦॥

ದೇವತೆಗಳಿಗೂ ಒಡೆಯನಾದ, ಅನಂತ ಶಕ್ತಿಯುಳ್ಳ ಕೃಷ್ಣನು, ಬೇರೊಬ್ಬರಿಂದ ಗೆಲ್ಲಲಾಗದ, ಅತಿವೀರ್ಯ-ಬಲದಿಂದ ಕೂಡಿದವನಾಗಿರುವ, ಬ್ರಹ್ಮ-ರುದ್ರರ ವರದಿಂದ ಅವಧ್ಯನಾದ ಕಂಸನನ್ನು, ಉತ್ಕೃಷ್ಟವಾದ ಆ ಆಸನದಿಂದ ಸೆಳೆದು,  ಭೂಮಿಯಲ್ಲಿ ಬೀಳಿಸಿ ಕಾಲಿನಿಂದ ಒದ್ದನು.

ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು ಸುರೇಷ್ವನನ್ತಃ ॥೧೩.೧೩೧॥

ಆಗ ಕಂಸನ ಶರೀರದಲ್ಲಿ ಪರಮಾತ್ಮನ ಬಂಧುವಾಗಿರುವ ಯಾವ ಮುಖ್ಯಪ್ರಾಣನಿದ್ದನೋ, ಅಂತಹ ಮುಖ್ಯಪ್ರಾಣನು(ವಾಯುವು), ಭಗವಂತನ  ಶರೀರವನ್ನು ಆಶ್ರಯಿಸಿದ. ಬ್ರಹ್ಮಾದಿಗಳೆಲ್ಲರೂ ನೋಡುತ್ತಿರಲು, ಆ ದೇಹದಲ್ಲಿರತಕ್ಕಂತಹ ಪಾಪಿಷ್ಠನಾದ ದೈತ್ಯನನ್ನು ಪರಮಾತ್ಮನು ಸೆಳೆದನು.
[ಇದೆಲ್ಲವೂ ದೇವತೆಗಳಿಗೆ ಮಾತ್ರ ಗೋಚರವಾಯಿತು. ಉಳಿದವರಿಗಾಗಲಿಲ್ಲ. ಉಳಿದ ಸಾಮಾನ್ಯರು ಕಂಸ ಸಾಯುತ್ತಿರುವುದನ್ನಷ್ಟೇ ನೋಡಿದರು].

ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ ಸಹಿತಃ ಸಮಸ್ತೈಃ
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ ಚೈವಮುಪಯಾನ್ತಿ ಹರಾವಭಕ್ತಾಃ ೧೩.೧೩೨    

ಕೆಟ್ಟಬುದ್ಧಿಯುಳ್ಳ ಆ ಕಂಸನು, ಸರ್ವಜಗದೇಕಗುರುವಾಗಿರುವ ಪರಮಾತ್ಮನ ಮೇಲಿನ ದ್ವೇಷದಿಂದಾಗಿ, ಈಮೊದಲೇ ಪರಮಾತ್ಮನಿಂದ ಕೊಲ್ಲಲ್ಪಟ್ಟ (ಪೂತನಿ ಮೊದಲಾದ ಎಲ್ಲಾ)ಸ್ವಕೀಯರಿಂದ  ಕೂಡಿಕೊಂಡು, ಅನ್ಧಂತಮಸ್ಸನ್ನು ಕುರಿತು ತೆರಳಿದ. 
ಉಳಿದ, ಪರಮಾತ್ಮನಲ್ಲಿ ದ್ವೇಷ ಉಳ್ಳವರೂ ಕೂಡಾ, ಹೀಗೆಯೇ ಅನ್ಧಂತಮಸ್ಸಿಗೆ ಹೋಗುತ್ತಾರೆ.

No comments:

Post a Comment