ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 11, 2019

Mahabharata Tatparya Nirnaya Kannada 1387_1391



ಆರುಹ್ಯ ತದ್ರಥವರಂ ಭಗವತ್ಪದಾಬ್ಜಮಬ್ಜೋದ್ಭವಪ್ರಣತಮನ್ತರಮನ್ತರೇಣ ।
ಸಞ್ಚಿನ್ತಯನ್ ಪಥಿ ಜಗಾಮ ಸ ಗೋಷ್ಠಮಾರಾದ್ ದೃಷ್ಟ್ವಾ ಪದಾಙ್ಕಿತಭುವಂ ಮುಮುದೇ ಪರಸ್ಯ೮೭॥

ಶ್ರೀಕೃಷ್ಣನನ್ನು ಕರೆತರಲು ಕಂಸ ನೀಡಿದ ರಥವನ್ನು ಏರಿದ ಅಕ್ರೂರ,  ಬ್ರಹ್ಮದೇವರಿಂದಲೂ ನಮಸ್ಕೃತವಾದ ಶ್ರೀಕೃಷ್ಣನ ಪಾದವನ್ನು ಒಳಮನಸ್ಸಿನಿಂದ  ಧ್ಯಾನಿಸುತ್ತಾ ಸಾಗಿದ. ನಂದಗೋಕುಲದ ಸಮೀಪದಲ್ಲಿ ಶ್ರೀಕೃಷ್ಣನ ಪಾದದಿಂದ ಅಂಕಿತವಾದ ಭೂಮಿಯನ್ನು ದೂರದಿಂದಲೇ ನೋಡಿ ಅಕ್ರೂರ ಬಹಳ ಸಂತೋಷಪಟ್ಟ.

ಸೋsವೇಷ್ಟತಾತ್ರ ಜಗದೀಶಿತುರಙ್ಗಸಙ್ಗಲಭ್ದೋಚ್ಚಯೇನ ನಿಖಿಲಾಘವಿದಾರಣೇಷು ।
ಪಾಂಸುಷ್ವಜೇಶಪುರೂಹೂತಮುಖೋಚ್ಚವಿದ್ಯುದ್ಭ್ರಾಜದ್ಕಿರೀಟಮಣಿಲೋಚನಗೋಚರೇಷು ॥೧೩.೮೮॥

ಆ ಅಕ್ರೂರನು, ಪರಮಾತ್ಮನ ಅಂಗಸಂಗದಿಂದಾಗಿ ಎಲ್ಲಾ  ಪಾಪಗಳನ್ನೂ ವಿನಾಶಪಡಿಸತಕ್ಕಂತಹ ಉತ್ಕರ್ಷತೆಯನ್ನು ಹೊಂದಿದ,  ಬ್ರಹ್ಮದೇವರು-ರುದ್ರ-ಇಂದ್ರ ಮೊದಲಾದ ದೇವತೆಗಳ ಮಿಂಚಿನಂತೆ ಶೋಭಿಸುತ್ತಿರುವ ಕಿರೀಟದ ಮಣಿಗಳಿಗೆ ಹಾಗೂ ಅವರ ನಯನಗಳಿಗೆ ವಿಷಯವಾದ(ಬ್ರಹ್ಮ, ರುದ್ರ, ಇಂದ್ರ, ಮೊದಲಾದ ದೇವತೆಗಳು ಶಿರಸ್ಸಿನಿಂದ ನಮಸ್ಕರಿಸಲ್ಪಡುವ ಮತ್ತು ಅವರು ಆದರಪೂರ್ವಕವಾಗಿ ಕಾಣುವ) ಶ್ರೀಕೃಷ್ಣನ ಪಾದದಿಂದ ಅಂಕಿತವಾದ ಭೂಮಿಯ ದೂಳಿನಲ್ಲಿ ಹೊರಳಾಡಿಬಿಟ್ಟ.

ಸೋsಪಶ್ಯತಾಥ ಜಗದೇಕಗುರುಂ ಸಮೇತಮಗ್ರೋದ್ಭವೇನ ಭುವಿ ಗಾ ಅಪಿ ದೋಹಯನ್ತಮ್
ಆನನ್ದಸಾನ್ದ್ರತನುಮಕ್ಷಯಮೇನಮೀಕ್ಷ್ಯ ಹೃಷ್ಟಃ ಪಪಾತ ಪದಯೋಃ ಪುರುಷೋತ್ತಮಸ್ಯ೧೩.೮೯

ತದನಂತರ ಆ ಅಕ್ರೂರನು ಬಲರಾಮನಿಂದ ಕೂಡಿರುವ,  ಭೂಮಿಯಲ್ಲಿ ಹಸುಗಳನ್ನು ಕರೆಯುತ್ತಿರುವ, ಆನಂದವೇ ಮೈದಾಳಿಬಂದ, ಜಗತ್ತಿಗೇ ಮುಖ್ಯಗುರುವಾದ, ನಾಶವಿಲ್ಲದ ಶ್ರೀಕೃಷ್ಣನನ್ನು ಕಂಡು, ಅವನ   ಪಾದಗಳಲ್ಲಿ ಆನಂದ ತುಮ್ಬಿದವನಾಗಿ ಬಿದ್ದನು.

ಉತ್ಥಾಪ್ಯತಂ ಯದುಪತಿಃ ಸಬಲೋ ಗೃಹಂ ಸ್ವಂ ನೀತ್ವೋಪಚಾರಮಖಿಲಂ ಪ್ರವಿಧಾಯ ತಸ್ಮಿನ್ ।
ನಿತ್ಯೋದಿತಾಕ್ಷಯಚಿದಪ್ಯಖಿಲಂ ಚ ತಸ್ಮಾಚ್ಛುಶ್ರಾವ ಲೋಕಚರಿತಾನುವಿಡಮ್ಬನೇನ ॥೧೩.೯೦॥

ಯದುಪತಿ  ಶ್ರೀಕೃಷ್ಣನು ಬಲರಾಮನಿಂದ ಕೂಡಿಕೊಂಡು, ಕಾಲಿಗೆ ಬಿದ್ದ ಅಕ್ರೂರನನ್ನು ಎತ್ತಿ, ತನ್ನ ಮನೆಯನ್ನು ಕುರಿತು ಕರೆದುಕೊಂಡುಹೋಗಿ, ಎಲ್ಲಾ ಉಪಚಾರಗಳನ್ನೂ ಅವನಲ್ಲಿ ಮಾಡಿದನು. ಸದಾ ಉದಯಿಸಿರುವ, ನಾಶವಿಲ್ಲದ ಜ್ಞಾನವುಳ್ಳವನಾದರೂ, ಲೋಕದ ವಿಡಂಬನೆಗಾಗಿ ಅಕ್ರೂರನಲ್ಲಿ ಬಂದ ಕಾರಣವೆಲ್ಲವನ್ನೂ ಕೃಷ್ಣ ಕೇಳಿದನು.

ಶ್ರುತ್ವಾ ಸ ಕಂಸಹೃದಿ ಸಂಸ್ಥಿತಮಬ್ಜನಾಭಃ ಪ್ರಾತಸ್ತು ಗೋಪಸಹಿತೋ ರಥಮಾರುರೋಹ ।
ರಾಮಶ್ವಫಲ್ಕತನಯಾಭಿಯುತೋ ಜಗಾಮಯಾನೇನ ತೇನ ಯಮುನಾತಟಮವ್ಯಯಾತ್ಮಾ॥೧೩.೯೧॥

ಪದ್ಮನಾಭನಾಗಿರುವ ಶ್ರೀಕೃಷ್ಣನು ಕಂಸನ ಹೃದಯದಲ್ಲಿರುವ ಎಲ್ಲಾ ಸಂಗತಿಗಳನ್ನೂ ಅಕ್ರೂರನಿಂದ ಕೇಳಿ, ಮರುದಿನ ಮುಂಜಾನೆ ಎದ್ದು, ಗೋಪ-ಸಹಿತನಾಗಿ, ಅಕ್ರೂರ ತಂದ ರಥವನ್ನು ಏರಿದನು. ಬಲರಾಮನಿಂದಲೂ, ಶ್ವಫಲ್ಕನ ಮಗನಾದ ಅಕ್ರೂರನಿಂದಲೂ ಕೂಡಿಕೊಂಡವನಾಗಿ ರಥದಲ್ಲಿ ಯಮುನಾತೀರದತ್ತ ತೆರಳಿದನು.

No comments:

Post a Comment