ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 30, 2021

Mahabharata Tatparya Nirnaya Kannada 21: 23-28

 [ದೇವರು ಅರ್ಜುನನ ಜೊತೆಗೆ ಬಲರಾಮ-ಪ್ರದ್ಯುಮ್ನ-ಅನಿರುದ್ಧ ಇವರನ್ನು ಏಕೆ ಕಳುಹಿಸಲಿಲ್ಲ ಎಂದರೆ:]

 

ನ್ಯಯೋಜಯತ್ ತತ್ಸಹಾಯೇ ಯಶಸ್ತೇಷ್ವಭಿರಕ್ಷಿತುಮ್ ।  

ಪ್ರಿಯೋ ಹಿ ನಿತರಾಂ ರಾಮಃ  ಕೃಷ್ಣಸ್ಯಾನು ಚ ತಂ ಸುತಃ          ॥೨೧.೨೩॥

 

ಅನಿರುದ್ಧಃ  ಕಾರ್ಷ್ಣ್ಣಿಮನು ಪ್ರದ್ಯುಮ್ನಾದ್ ಯೋsಜನಿಷ್ಟ ಹಿ ।

ರುಗ್ಮಿಪುತ್ರ್ಯಾಂ ರುಗ್ಮವತ್ಯಾಮಾಹೃತಾಯಾಂ ಸ್ವಯಮ್ಬರೇ      ॥೨೧.೨೪॥

 

ರಾಮ, ಪ್ರದ್ಯುಮ್ನ, ಅನಿರುದ್ಧ ಇವರಿಗೆ ಅಪಕೀರ್ತಿ ಬರಬಾರದು ಎನ್ನುವ ಉದ್ದೇಶದಿಂದ, ಅವರ ಯಶಸ್ಸನ್ನು ರಕ್ಷಿಸುವುದಕ್ಕಾಗಿ ಶ್ರೀಕೃಷ್ಣ ಅವರನ್ನು ಅರ್ಜುನನೊಂದಿಗೆ ಕಳುಹಿಸಲಿಲ್ಲ.  ಬಲರಾಮನು ಕೃಷ್ಣನಿಗೆ ಬಹಳ ಪ್ರಿಯ. ಬಲರಾಮನ ನಂತರ ಮಗನಾದ ಪ್ರದ್ಯುಮ್ನ ಹಾಗೂ ಪ್ರದ್ಯುಮ್ನನ ನಂತರ ಅನಿರುದ್ಧ ಪ್ರಿಯನಷ್ಟೇ. ಅನಿರುದ್ಧ ಪ್ರದ್ಯುಮ್ನನಿಂದ ಸ್ವಯಮ್ಬರದಲ್ಲಿ ಅಪಹರಿಸಲ್ಪಟ್ಟ ರುಗ್ಮರಾಜನ ಮಗಳಾದ ರುಗ್ಮವತಿಯಲ್ಲಿ ಹುಟ್ಟಿದ್ದ.

[ಹಿಂದೆ ಸ್ವಯಮ್ಬರದಲ್ಲಿ ತನ್ನ ತಂದೆ(ಶ್ರೀಕೃಷ್ಣ) ರುಗ್ಮಿಣಿಯನ್ನು ಹೇಗೆ ತಂದಿದ್ದನೋ, ಅದೇ ರೀತಿ ರುಗ್ಮವತಿ(ಶುಭಾಙ್ಗೀ)ಯನ್ನು ಪ್ರದ್ಯುಮ್ನ ತಂದಿದ್ದ. ಅವರಿಬ್ಬರ ದಾಂಪತ್ಯದಲ್ಲಿ ಹುಟ್ಟಿದವನೇ ಅನಿರುದ್ಧ.  ಹರಿವಂಶದಲ್ಲಿ(ವಿಷ್ಣುಪರ್ವ ೬೧.೪-೫) ಈ ಕುರಿತಾದ ವಿವರ ಕಾಣಸಿಗುತ್ತದೆ : ಶುಭಾಙ್ಗೀ ನಾಮ ವೈದರ್ಭೀ ಕಾನ್ತಿಧ್ಯುತಿಸಮನ್ವಿತಾ । ಪೃಥಿವ್ಯಾಮಭವತ್ ಖ್ಯಾತಾ ರುಗ್ಮಿಣಸ್ತನಯಾ ತದಾ ।  ಉಪವಿಷ್ಟೇಷು ಸರ್ವೇಷು ಪಾರ್ಥಿವೇಷು ಮಹಾತ್ಮಸು । ವೈದರ್ಭೀ ವರಯಾಮಾಸ  ಪ್ರದ್ಯುಮ್ನಮರಿಸೂದನಮ್]

 

ರತಿರೇವ ಹಿ ಯಾ ತಸ್ಯಾಂ ಜಾತೋsಸೌ ಕಾಮನನ್ದನಃ ।

ಪೂರ್ವಮಪ್ಯನಿರುದ್ಧಾಖ್ಯೋ ವಿಷ್ಣೋಸ್ತನ್ನಾಮ್ನ ಏವಚ  ॥೨೧.೨೫॥

 

ಆವೇಶಯುಕ್ತೋ ಬಲವಾನ್ ರೂಪವಾನ್ ಸರ್ವಶಾಸ್ತ್ರವಿತ್ ।

ತಸ್ಮಾತ್ ತಾಂಸ್ತ್ರಿನೃತೇ ಕೃಷ್ಣಃ ಪಾರ್ತ್ಥಸಾಹಾಯ್ಯಕಾರಣಾತ್   ॥೨೧.೨೬॥

 

ನ್ಯಯೋಜಯತ್ ಸೂತಿಕಾಲೇ ಬ್ರಾಹ್ಮಣ್ಯಾಃ ಸ ಚ ಫಲ್ಗುನಃ ।

ಅಸ್ತ್ರೈಶ್ಚಕಾರ ದಿಗ್ಬನ್ಧಂ ಕುಮಾರೋsಥಾಪಿತು ಕ್ಷಣಾತ್             ॥೨೧.೨೭॥

 

ಅದರ್ಶನಂ ಯಯೌ ಪಾರ್ತ್ಥೋ ವಿಷಣ್ಣಃ ಸಹ ಯಾದವೈಃ ।

ಅಧಿಕ್ಷಿಪ್ತೋ ಬ್ರಾಹ್ಮಣೇನ ಯಯೌ ಯತ್ರ ಶ್ರಿಯಃಪತಿಃ                ॥೨೧.೨೮॥

 

ಯಾರು ಸಾಕ್ಷಾತ್ ರತಿಯೋ, ಅವಳಲ್ಲಿ ಮೂಲರೂಪದಲ್ಲಿಯೂ ಕಾಮನ ಮಗನಾಗಿರುವ ಇವನು  ಮೊದಲೂ ಕೂಡಾ ಅದೇ(‘ಅನಿರುದ್ಧ’ ಎನ್ನುವ)  ಹೆಸರಿನವನಾಗಿದ್ದ. ಈತ ‘ಅನಿರುದ್ಧ ಎನ್ನುವ ಪರಮಾತ್ಮನ ಆವೇಶದಿಂದ ಕೂಡಿದ್ದು, ಬಲಿಷ್ಠನಾಗಿಯೂ, ರೂಪವಂತನಾಗಿಯೂ, ಎಲ್ಲಾ ಶಾಸ್ತ್ರಗಳನ್ನು ಬಲ್ಲವನಾಗಿಯೂ ಇದ್ದ.

ಹೀಗೆ ಅರ್ಜುನನಿಗೆ ಸಹಾಯ ಮಾಡಲೆಂದು ಈ ಮೂವರನ್ನು ಬಿಟ್ಟು ಇತರ ಎಲ್ಲರನ್ನೂ ಕೃಷ್ಣ ನಿಯೋಗಿಸಿದ. ಅರ್ಜುನನಾದರೋ, ಬ್ರಾಹ್ಮಣ ಪತ್ನಿಯ ಪ್ರಸವಕಾಲದಲ್ಲಿ  ಅಸ್ತ್ರಗಳಿಂದ ದಿಗ್ಬನ್ಧನವನ್ನು ಮಾಡಿದ. ಆದರೂ ಒಂದು ಕ್ಷಣದಲ್ಲಿ ಹುಟ್ಟಿದ ಮಗುವು ಕಾಣಲಿಲ್ಲ. ಆಗ ಬ್ರಾಹ್ಮಣನಿಂದ ಚೆನ್ನಾಗಿ ನಿಂದಿತನಾದ ಪಾರ್ಥ, ವಿಷಾದದಿಂದ, ಯಾದವರಿಂದ ಕೂಡಿಕೊಂಡು ಎಲ್ಲಿ ಕೃಷ್ಣನಿದ್ದನೋ ಅಲ್ಲಿಗೆ ಹೋದ.

[ಭಾಗವತದಲ್ಲಿ(೧೦.೧೦೦.೪೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಪ್ರದ್ಯುಮ್ನೋsಥಾನಿರುದ್ಧೋ ವಾ ನ ರಾಮೋ ನಚ ಕೇಶವಃ । ಯಸ್ಯ ಶೇಕುಃ  ಪರಿತ್ರಾತುಂ ಕೋsನ್ಯಸ್ತದಧಿಕೇಶ್ವರಃ’ . ಇನ್ನು ಹರಿವಂಶದಲ್ಲಿ(ವಿಷ್ಣುಪರ್ವ: ೧೧೨.೨೧) ಹೀಗೆ ಹೇಳಿದ್ದಾರೆ:  ನ ಪ್ರದ್ಯುಮ್ನೋ ನಾನಿರುದ್ಧೋ ನ ರಾಮೋ ನಚ ಕೇಶವಃ । ಯತ್ರ ಶಕ್ತಾಃ ಪರಿತ್ರಾತುಂ ಕೋsನ್ಯಸ್ತದವನೇಶ್ವರಃ’ ]

Thursday, October 28, 2021

Mahabharata Tatparya Nirnaya Kannada 21: 17-22

ನ ಕೃಷ್ಣರಾಮಕಾರ್ಷ್ಣಿಭಿಃ ಸುತಾ ನು ಮೇsತ್ರ ಪಾಲಿತಾಃ ।

ಕ್ವ ತೇsತ್ರ ಶಕ್ತಿರಿತ್ಯಮುಂ ಜಗಾದ ಸೋsರ್ಜ್ಜುನಮ್  ದ್ವಿಜಃ ॥೨೧.೧೭॥

 

ಯಾವಾಗ ಅರ್ಜುನ ತಾನು ರಕ್ಷಿಸುತ್ತೇನೆಂದು ಹೇಳಿದನೋ, ಆಗ ಆ ಬ್ರಾಹ್ಮಣನು ಅವನನ್ನು ಕುರಿತು: ‘ಕೃಷ್ಣನಿಂದಲೂ, ಬಲರಾಮನಿಂದಲೂ, ಪ್ರದ್ಯುಮ್ನರಿಂದಲೂ ನನ್ನ ಮಕ್ಕಳು ರಕ್ಷಿಸಲ್ಪಡಲಿಲ್ಲ(ರಕ್ಷಿಸುತ್ತೇವೆ ಎಂದು ಅವರು ಹೇಳಿಲ್ಲ), ಹೀಗಿರುವಾಗ ನಿನಗೆ ಈ ವಿಚಾರದಲ್ಲಿ ಎಲ್ಲಿದೆ ಶಕ್ತಿ’ ಎಂದು ಕೇಳಿದ.

 

ತದಾ ಜಗಾದ ಫಲ್ಗುನೋsಸುರೈರ್ವಿದೂಷಿತಾತ್ಮನಾ ।

ನ ವಿಪ್ರ ತಾದೃಶೋsಸ್ಮ್ಯಹಂ ಯಥೈವ ಕೇಶವಾದಯಃ ॥೨೧.೧೮॥

 

ಆಗ ಅರ್ಜುನನು ಅಸುರರಿಂದ ಕದಡಿದ ಮನಸ್ಸುಳ್ಳವನಾಗಿ(ಅಸುರಾವೇಶದಿಂದ) ಹೇಳುತ್ತಾನೆ: ‘ಹೇ ಬ್ರಾಹ್ಮಣ, ನಾನು ಕೃಷ್ಣ ಮೊದಲಾದವರಂತಲ್ಲ ಎಂದು.

 

ಮಯಾ ಜಿತಾ ಹಿ ಖಾಣ್ಡವೇ ಸುರಾಸ್ತಥಾsಸುರಾನಹಮ್ ।

ನಿವಾತವರ್ಮ್ಮನಾಮಕಾನ್  ವಿಜೇಷ್ಯ ಉತ್ತರತ್ರ ಹಿ ॥೨೧.೧೯॥

 

‘ನನ್ನಿಂದ ಖಾಣ್ಡವದಾಹ ಪ್ರಸಂಗದಲ್ಲಿ ಎಲ್ಲಾ ದೇವತೆಗಳೂ ಗೆಲ್ಲಲ್ಪಟ್ಟಿದ್ದಾರೆ. ಅದೇ ರೀತಿ ಮುಂದೆ ನಿವಾತವರ್ಮ ಹೆಸರಿನವರನ್ನೂ  (ನಿವಾತಕವಚ ಎನ್ನುವ ಹೆಸರಿನ ದೈತ್ಯರನ್ನೂ) ನಾನು ಗೆಲ್ಲುತ್ತೇನೆ

[ಭಾಗವತದಲ್ಲಿ ಅರ್ಜುನನ ಮಾತು ‘ಈಗಾಗಲೇ ಗೆದ್ದಿದ್ದೇನೆ’ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಮುಂದೆ ನಡೆಯುವುದು ನಿಶ್ಚಿತವಾಗಿದ್ದರೆ ಅದನ್ನು ‘ಭೂತಕಾಲದಲ್ಲೇ ಆಗಿ ಹೋಗಿದೆ ಎಂಬಂತೆ  ಹೇಳುವುದು ಪುರಾಣದ ಪರಿಭಾಷೆ. ‘ ನಾಹಂ ಸಙ್ಕರ್ಷಣೋ` ಬ್ರಹ್ಮನ್ ನ ಕೃಷ್ಣಃ ಕಾರ್ಷ್ಣಿರೇವ ಚ  । ಅಹಂ ಧನಞ್ಜಯೋ  ನಾಮ ಗಾಣ್ಡೀವಂ ಯಸ್ಯ ಕಾರ್ಮುಕಮ್’ (ಭಾಗವತ ೧೦.೧೦೦.೨೭)ನಿವಾತಕವಚಾಶ್ಚೈವ ವಾಸವೇನಾಪಿ ದುರ್ಜಯಾಃ ।  ಮಯೈವ ನಿಹತಾಃ ಸಙ್ಖೇ ಹಿರಣ್ಯಪುರವಾಸಿನಃ (೧೦.೧೦೦.೩೩) ಇಲ್ಲಿ ‘ನಿಹತಾಃ ಎನ್ನುವುದು ಖಂಡಿತ ಕೊಲ್ಲಲ್ಪಡುತ್ತಾರೆ ಎನ್ನುವ ಅಭಿಪ್ರಾಯ ಅಷ್ಟೇ. ಆದರೆ ಈ ರೀತಿ ವಿಶ್ಲೇಷಣೆ ಮಾಡಿದಾಗ ‘ಈ ವಿಷಯ ಅರ್ಜುನನಿಗೆ ನಿಶ್ಚಿತವಾಗಿ ಹೇಗೆ ಗೊತ್ತಿತ್ತು’ ಎನ್ನುವ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಮಹಾಭಾರತದಲ್ಲೇ(ಆದಿಪರ್ವ-೧೩೨.೧೨) ಕಾಣಸಿಗುತ್ತದೆ:  ‘ಸೂತಕೇ ವರ್ತಮಾನಾಂ ತಾಂ ವಾಗುವಾಚಾಶರೀರಿಣೀ’ ಕುಂತಿಗೆ ಅಶರೀರವಾಣಿಯಿಂದ ಇದೆಲ್ಲವೂ ಮೊದಲೇ ತಿಳಿದಿತ್ತು. ‘ಏತಸ್ಯ ಭುಜವೀರ್ಯೇಣ ಖಾಣ್ಡವೇ ಹವ್ಯವಾಹನಃ ಮೇದಸಾ ಸರ್ವಭೂತಾನಾಂ ತೃಪ್ತಿಂ ಯಾಸ್ಯತಿ ವೈ ಪರಾಮ್’ (೨೩) ‘ನಿವಾತಕವಚಾ ನಾಮ ದೈತ್ಯಾ ವಿಬುಧವಿದ್ವಿಷಃ । ಶಕ್ರಾಜ್ಞಯಾ ಮಹಾಬಾಹುಸ್ತಾನ್ ವಧಿಷ್ಯತಿ ತೇ ಸುತಃ’ (೨೭). ಅಶರೀರವಾಣಿ ಹೇಳಿರುವುದನ್ನು ಕುಂತಿ ಅರ್ಜುನನಿಗೆ ಹೇಳಿದ್ದಳು. ಆದ್ದರಿಂದ ಅವನಿಗೆ ‘ನಾನು ಕೊಂದೇ ಕೊಲ್ಲುತ್ತೇನೆ’ ಎಂದು ತಿಳಿದಿತ್ತು. ನಿಶ್ಚಿತವಾದ್ದರಿಂದ ಪುರಾಣ ಈ ರೀತಿ ಅನುವಾದ ಮಾಡಿದೆ. ಆಚಾರ್ಯರ ನಿರ್ಣಯ ಇದನ್ನು ಸ್ಪಷ್ಟಪಡಿಸುತ್ತದೆ].

 

ಉದೀರ್ಯ್ಯ ಚೇತಿ ಕೇಶವಂ ಸ ಊಚಿವಾನ್ ವ್ರಜಾಮ್ಯಹಮ್ ।

ಇತೀರಿತೋsವದದ್ಧರಿಸ್ತವಾತ್ರ ಶಕ್ಯತೇ ನು ಕಿಮ್ ॥೨೧.೨೦॥

 

ಕೃಷ್ಣನನ್ನು ಕುರಿತು ಈರೀತಿಯಾಗಿ ಮಾತನಾಡಿದ ಅರ್ಜುನ ‘ನಾನು ತೆರಳುತ್ತೇನೆ’ ಎಂದ.  ಅರ್ಜುನನಿಂದ ಈರೀತಿಯಾಗಿ ಹೇಳಲ್ಪಟ್ಟ ಕೃಷ್ಣನು ‘ನಿನಗೆ ಸಾಮರ್ಥ್ಯವಿದೆಯೇ‘ ಎಂದು ಕೇಳಿದ.

[ಭಾಗವತದಲ್ಲಿ(೧೦.೧೦೦.೩೧) ‘ಅಹಮೇವ ಗಮಿಷ್ಯಾಮಿ ನ ತ್ವಯಾ ಶಕ್ಯತೇsರ್ಜುನ’ ‘ನಾನೇ ಹೋಗುತ್ತೇನೆ, ನಿನ್ನಿಂದ ಆಗುವುದಿಲ್ಲ’ ಎಂದು ಕೃಷ್ಣ ಅರ್ಜುನನಿಗೆ ಹೇಳಿದ ಎಂದಿದ್ದಾರೆ. ಇನ್ನು ಹರಿವಂಶದಲ್ಲಿ ಹೇಳುವಂತೆ: ‘ರಕ್ಷಸೀತ್ಯೇವಮುಕ್ತಸ್ತು  ವ್ರೀಡಿತೋsಸ್ಮಿ ನರಾಧಿಪ(ವಿಷ್ಣುಪರ್ವ ೧೧೧.೧೫)- ‘ರಕ್ಷಣೆ ಮಾಡುತ್ತೇನೆ ಎನ್ನುವ ನಿನ್ನ ಮಾತನ್ನು ಕೇಳಿ ನನಗೆ ನಾಚಿಕೆಯಾಗುತ್ತಿದೆ’ ಎಂದು ಅರ್ಜುನ ಹೇಳಿದ  ಎಂದಿದ್ದಾರೆ. ಈ ಮೇಲಿನ ಎರಡೂ ಮಾತನ್ನೂ ಸಮನ್ವಯ ಮಾಡಿ ನೋಡಿದಾಗ ವ್ಯಂಗ್ಯವಾಗಿ (ತಮಾಷೆಗಾಗಿ) ಶ್ರೀಕೃಷ್ಣ ‘ರಕ್ಷಸಿ’ ಎಂದು ನುಡಿದಿದ್ದ ಎನ್ನುವುದು ತಿಳಿಯುತ್ತದೆ].

 

ವಿಲಜ್ಜಮಾನಮೀಕ್ಷ್ಯ ತಂ ಜಗಾದ ಕೇಶವೋsರಿಹಾ ।

ವ್ರಜೇತಿ ಸ ಪ್ರತಿಶ್ರವಂ ಚಕಾರ ಹಾಪ್ಯರಕ್ಷಣೇ ॥೨೧.೨೧॥

 

ವಹ್ನಿಂ ಪ್ರವೇಕ್ಷ್ಯೆsಶಕ್ತಶ್ಚೇದಿತ್ಯುಕ್ತ್ವಾ ಸರ್ವಯಾದವೈಃ ।

ಯಯೌ ನ ರಾಮಪ್ರದ್ಯುಮ್ನಾವನಿರುದ್ಧಂ ಚ ಕೇಶವಃ ೨೧.೨೨

 

ಭಗವಂತನ ಮಾತನ್ನು ಕೇಳಿ ನಾಚಿಕೊಳ್ಳುತ್ತಿರುವ ಅರ್ಜುನನನ್ನು ಕಂಡು, ಶತ್ರುಗಳನ್ನು ನಿಗ್ರಹಿಸುವ ನಾರಾಯಣನು ‘ಹೊರಡು’ ಎಂದು ಹೇಳಿದನು. ಅರ್ಜುನನಾದರೋ, ‘ನಾನು ಬ್ರಾಹ್ಮಣನ ಮಕ್ಕಳನ್ನು ರಕ್ಷಿಸದೇ ಹೋದರೆ, ಈ ಕಾರ್ಯದಲ್ಲಿ ನಾನು ಆಶಕ್ತನಾದರೆ ಅಗ್ನಿಪ್ರವೇಶ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ. ಈರೀತಿಯಾಗಿ ಹೇಳಿ, ಎಲ್ಲಾ ಯಾದವರಿಂದ ಕೂಡಿ ಅರ್ಜುನ ಹೊರಟ. (ಆದರೆ ಕೆಲವರು ಮಾತ್ರ ಅವನ ಜೊತೆಗೆ ಹೋಗಿರಲಿಲ್ಲ).  ಕೃಷ್ಣನು ಬಲರಾಮ-ಪ್ರದ್ಯುಮ್ನರನ್ನು ಹಾಗೂ ಅನಿರುದ್ಧನನ್ನೂ ಕೂಡಾ  ಅರ್ಜುನನಿಗೆ ಸಹಾಯಮಾಡಿ ಎನ್ನುವ ವಿಚಾರದಲ್ಲಿ ನಿಯೋಜಿಸಲಿಲ್ಲ.

[ಹರಿವಂಶದಲ್ಲಿ ಈ ಮಾತು ಬರುತ್ತದೆ: ‘ ತ್ವತ್ಪುರೋಗಾಶ್ಚ ರಕ್ಷನ್ತು ವೃಷ್ಣ್ಯನ್ಧಕಮಹಾರಥಾಃ  ಋತೇ ರಾಮಂ ಮಹಾಬಾಹುಂ ಪ್ರದ್ಯುಮ್ನಂ ಚ ಮಹಾಬಲಮ್’(೧೭). ಇಲ್ಲಿ ರಾಮನನ್ನು, ಪ್ರದ್ಯುಮ್ನನನ್ನೂ ಕೂಡಾ ಎಂದಿದ್ದಾರೆ. ಇಲ್ಲಿ ಬಳಕೆಯಾದ ಚ-ಕಾರ ಅನಿರುದ್ಧನನ್ನು ಸೂಚಿಸುತ್ತದೆ ಎನ್ನುವುದು ಆಚಾರ್ಯರ ನಿರ್ಣಯದಿಂದ ತಿಳಿಯುತ್ತದೆ.] 

Tuesday, October 26, 2021

Mahabharata Tatparya Nirnaya Kannada 21: 12-16

                                    ಹಯಂ ಸಭೀಮಫಲ್ಗುನಾ  ಹರೇ ರಥಂ ಸಮಾಸ್ಥಿತಾಃ ।

ವ್ಯಚಾರಯನ್ ಹರೇಃ ಸುತಾ ದಿನಸ್ಯ ಪಾದಮಾತ್ರತಃ ॥೨೧.೧೨॥

 

ಭೀಮಸೇನ, ಅರ್ಜುನ, ಮೊದಲಾದವರೊಂದಿಗೆ ಪರಮಾತ್ಮನ ರಥವನ್ನು ಏರಿದ ಶ್ರೀಕೃಷ್ಣನ ಮಕ್ಕಳು, ದಿನದ ಕಾಲು ಭಾಗದಲ್ಲಿ  ಕುದುರೆಯೊಂದಿಗೆ ಎಲ್ಲಾಕಡೆ ತಿರುಗಾಡಿಕೊಂಡು ಬಂದರು.

 

ಜಿತಾಃ ಸಮಸ್ತಭೂಭೃತೋ ಜರಾಸುತಾದಯಃ ಕ್ಷಣಾತ್ ।

ವೃಕೋದರಾದಿಭಿಸ್ತು ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥

 

ಜರಾಸಂಧ ಮೊದಲಾಗಿರುವ ಎಲ್ಲಾ ರಾಜರೂ ಕೂಡಾ ಒಂದೇ ಕ್ಷಣದಲ್ಲಿ ಭೀಮಸೇನ ಮೊದಲಾದವರಿಂದ ಸೋಲಿಸಲ್ಪಟ್ಟರು. ಹೀಗೆ ಆ ಅಲೌಕಿಕವಾದ ಕುದುರೆ ದಿನದ ಕಾಲುಭಾಗದಲ್ಲೇ ಎಲ್ಲಾ ಕಡೆ ತಿರುಗಿ ಹಿಂತಿರುಗಿ ಬಂತು. 

ಹಯಃ ಸ ಕೃಷ್ಣನಿರ್ಮ್ಮಿತೋ ದಿನೇನ ಲಕ್ಷಯೋಜನಮ್ ।

ಕ್ಷಮೋ ಹಿ ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥

 

ಒಂದು ದಿನದಲ್ಲಿ ಅಶ್ವಮೇಧವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಕೃಷ್ಣನಿಂದ ನಿರ್ಮಿಸಲ್ಪಟ್ಟ ಕುದುರೆಯು ಒಂದು ದಿನದಲ್ಲಿ ಲಕ್ಷ ಯೋಜನ ಸಂಚರಿಸಲು ಸಮರ್ಥವಾಗಿತ್ತು.  

 

ಪರಾಶರಾತ್ಮಜೋ ಹರಿರ್ಹರಿಂ ಯದಾ ತ್ವದೀಕ್ಷಯತ್ ।

ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥

 

ಯಾವಾಗ ಪರಾಶರರ ಮಗನಾದ ವೇದವ್ಯಾಸರೂಪಿ ನಾರಾಯಣನು ಕೃಷ್ಣನನ್ನು ದೀಕ್ಷಿತನಾಗುವಂತೆ  ಮಾಡಿದನೋ,(ವೇದವ್ಯಾಸರೇ ಶ್ರೀಕೃಷ್ಣನಿಗೆ ಪೌರೋಹಿತ್ಯ ಮಾಡಿದರು). ಆಗ ಒಂದಿಷ್ಟು ಹುಲ್ಲನ್ನು ಹಿಡಿದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದ ಮತ್ತು ಅತ್ತನು ಕೂಡಾ.

[ಭಾಗವತದಲ್ಲಿ(೧೦.೧೦೦.೧೩) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತೃಣಮೂಲಧರಃ ಕಶ್ಚಿದ್ ಬ್ರಾಹ್ಮಣೋsಭ್ಯೇತ್ಯ ಸತ್ವರಃ । ಚುಕ್ರೋಶ ಆರ್ತ ಉದ್ಬಾಹುರ್ಯಜ್ಞವಾಟಮುಖೇ ಸ್ಥಿತಃ]

 

ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।

ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥

 

ನನ್ನ ಮಕ್ಕಳೆಲ್ಲರೂ ಕೂಡಾ ಹುಟ್ಟಿದ ಕೂಡಲೇ ಅದೃಶ್ಯರಾಗಿಬಿಡುತ್ತಾರೆ ಎಂದು ಆ ಬ್ರಾಹ್ಮಣ  ಹೇಳಲ್ಪಡುತ್ತಿರಲು, ಅರ್ಜುನನು ಹೇಳಿದ: ‘ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ’ ಎಂದು.

[ ‘ಜಾತೋಜಾತೋ ಮಹಾಬಾಹೋ  ಪುತ್ರೋ ಮೇ ಹ್ರೀಯತೇsನಘ । ತ್ರಯೋ ಹತಾಶ್ಚತುರ್ಥಂ ತ್ವಂ ಕೃಷ್ಣ ರಕ್ಷಿತುಮರ್ಹಸಿ’ – ನನ್ನ ಮಕ್ಕಳು ಹುಟ್ಟಿದ ತಕ್ಷಣ ಕಾಣೆಯಾಗುತ್ತಿದ್ದಾರೆ,   ಮೂರುಮಂದಿ ಸತ್ತು ಹೋಗಿದ್ದಾರೆ. ನಾಲ್ಕನೆಯವನನ್ನು ಓ ಕೃಷ್ಣಾ, ನೀನು ರಕ್ಷಿಸಲು ತೊಡಗಬೇಕು’ ಎಂದು ಆ ಬ್ರಾಹ್ಮಣ ಬೇಡುವುದನ್ನು ಹರಿವಂಶದಲ್ಲಿ (ವಿಷ್ಣುಪರ್ವ ೧೧.೧೧)  ವಿವರಿಸಿರುವುದನ್ನು ಕಾಣುತ್ತೇವೆ.]

Sunday, October 24, 2021

Mahabharata Tatparya Nirnaya Kannada 21: 07-11

                        ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।

ವಸಿಷ್ಠವೃಷ್ಣಿನನ್ದನಂ ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥

 

ಯಾರು ಪರಮಾತ್ಮನಿಗೆ ಪ್ರಿಯರಾಗಿದ್ದಾರೋ(ಯಾರು ಭಗವದ್ಭಕ್ತರೋ), ಅವರೆಲ್ಲರೂ ವಸಿಷ್ಠ ವಂಶದಲ್ಲಿ ಬಂದಿರುವ ವೇದವ್ಯಾಸರು, ಯಾದವ ವಂಶದಲ್ಲಿ ಬಂದಿರುವ ವಾಸುದೇವ(ಶ್ರೀಕೃಷ್ಣ) ಮತ್ತು ಭೃಗು ವಂಶದಲ್ಲಿ ಬಂದಿರುವ ಪರಶುರಾಮ- ಈ ಮೂರು ರೂಪದಲ್ಲಿರುವ ಪರಮಾತ್ಮನನ್ನು ಹೊಂದಿ ಚೆನ್ನಾಗಿ ಪೂಜಿಸಿದರು.

 

ಕೃತಾರ್ತ್ಥತಾಂ ಚ ತೇ ಯಯೂ ರಮೇಶಪಾದದರ್ಶನಾತ್ ।

ರವಿಗ್ರಹೇ ಸಮಾಪ್ಲುತಾ ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥

 

ಪರಶುರಾಮನಿಂದ ನಿರ್ಮಿತವಾದ ತೀರ್ಥದಲ್ಲಿ(ಸಮಂತಪಂಚಕದಲ್ಲಿ) ಸ್ನಾನಮಾಡಿದ ಅವರೆಲ್ಲರೂ, ಪರಮಾತ್ಮನ ಪಾದ ದರ್ಶನದಿಂದ ಧನ್ಯತೆಯನ್ನು ಹೊಂದಿದರು.

 

ಅನುಗ್ರಹಂ ವಿಧಾಯ ಸಸ್ವಕೇಷು ಕೇಶವಸ್ತ್ರಿವೃತ್ ।

ಅಯಾಜಯಚ್ಚ ಶೂರಜಂ ಮಖೈಃ ಸಮಾಪ್ತದಕ್ಷಿಣೈಃ ॥೨೧.೦೯॥

 

ಆ ಕೇಶವನು ಮೂರು ರೂಪಗಳಿಂದ ಕೂಡಿದವನಾಗಿ, ತನ್ನವರಿಗೆ ಅನುಗ್ರಹವನ್ನು ಮಾಡಿ, ಶೂರಸೇನ ಪುತ್ರನಾದ ವಸುದೇವ ಪರಿಪೂರ್ಣವಾದ ದಕ್ಷಿಣೆಯುಳ್ಳ ಯಾಗಗಳನ್ನು ಮಾಡಲು ಕಾರಣನಾದನು.

 

ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ ಸಃ ।

ಸುಕಾಲದರ್ಶನಾತ್ ಪರಂ ವ್ಯಧಾದನುಗ್ರಹಂ ಹರಿಃ ॥೨೧.೧೦॥

 

ಪರಮಾತ್ಮನು ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆ, ಈ ಪುಣ್ಯಕಾಲದಲ್ಲಿ ದರ್ಶನವನ್ನು ನೀಡಿ  ವಿಶೇಷವಾದ ಅನುಗ್ರಹವನ್ನು ಮಾಡಿದನು.

 

ತತೋ ಯಯೌ ಸ್ವಕಾಂ ಪುರೀಂ ಪೃಥಾಸುತೈಃ ಸಹಾಚ್ಯುತಃ ।

ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥

 

ತದನಂತರ, ಕುಂತಿಯ ಮಕ್ಕಳಾದ ಪಾಂಡವರಿಂದ ಕೂಡಿಕೊಂಡು ತನ್ನ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣ, ತನ್ನ ಪಟ್ಟಣದಲ್ಲಿ ಒಂದು ದಿನದ ಅಶ್ವಮೇಧ ಎನ್ನುವ ಯಾಗವನ್ನು ಮಾಡಿದನು.

[ಭಾಗವತ ಮತ್ತು ಹರಿವಂಶದಲ್ಲಿ ಈ ಅಶ್ವಮೇಧಯಾಗದ ಕುರಿತು ಹೇಳಿರುವುದನ್ನು ಕಾಣಬಹುದು:   ಕದಾಚಿದ್ ವಾಜಿಮೇಧೇನ ಯಷ್ಟುಮುದ್ಯಮ್ಯ ಕೇಶವಃ । ಮಹೀಮ್ ಪ್ರದಕ್ಷಿಣಂ ಕರ್ತುಂ ಪ್ರಾಹಿಣೋತ್ ಪ್ರೋಕ್ಷಿತಂ  ಹಯಂ’ [ಭಾಗವತ ೧೦.೧೦೦.೧] ಶ್ರೀಕೃಷ್ಣನು ಅಶ್ವಮೇಧಯಾಗ ಮಾಡಲು ಸಿದ್ಧನಾಗಿ, ಇಡೀ ಭೂಮಿಯನ್ನು ಸುತ್ತಿ ಬರಲು, ಮಂತ್ರದಿಂದ ಸಂಸ್ಕೃತವಾದ ಕುದುರೆಯನ್ನು ಕಳುಹಿಸಿದ.  ತತಃ ಕದಾಚಿದ್ ಧರ್ಮಾತ್ಮಾ ದೀಕ್ಷಿತೋ ಮಧುಸೂದನಃ । ಏಕಾಹೇನ ಮಹಾಬಾಹುಃ ಶಾಸ್ತ್ರೇ ದೃಷ್ಟೇನ ಕರ್ಮಣಾ’ (ಹರಿವಂಶ-ವಿಷ್ಣುಪರ್ವ ೧೧೧.೭) ಇಲ್ಲಿ ಏಕಾಹೇನ ಎಂದಿದೆ. ಅಂದರೆ ಅದು ಒಂದು ದಿನದ ಯಾಗವಾಗಿತ್ತು].

Friday, October 22, 2021

Mahabharata Tatparya Nirnaya Kannada 21: 01-06

 

೨೧. ಪಾಣ್ಡವವನಪ್ರವೇಶಃ

ಓಂ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

 

ಮಯನು ಕೃಷ್ಣನ ಆಜ್ಞೆಯಂತೆ ಎಲ್ಲಾ ರೀತಿಯ ಅಚ್ಚರಿಯಿಂದ ಕೂಡಿರುವ,  ಎಲ್ಲಕ್ಕೂ ಮಿಗಿಲಾಗಿರುವ ಸಭೆಯನ್ನು ಯುಧಿಷ್ಠಿರನಿಗಾಗಿ ನಿರ್ಮಿಸಿಕೊಟ್ಟು, ಭೀಮಸೇನನಿಗೆ ಗದೆಯನ್ನು ಒಪ್ಪಿಸಿದನು.

 

[ಇಲ್ಲಿ ‘ವೃಕೋದರಾಯ ಗದಾಂ ದದೌ’ ಎಂದು ಚತುರ್ಥೀ ವಿಭಕ್ತಿಯಲ್ಲಿ ಹೇಳಬೇಕಿತ್ತು. ಆದರೆ ಹಾಗೇ ಹೇಳದೇ  ಸಪ್ತಮೀ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆ ಹೀಗೆ ಎನ್ನುವುದರ ಹಿನ್ನೆಲೆ ನಮಗೆ ಮಹಾಭಾರತವನ್ನು ನೋಡಿದಾಗ ತಿಳಿಯುತ್ತದೆ. ‘ಅಸ್ತಿ ಬಿನ್ದುಸರಸ್ಯುಗ್ರಾ ಗದಾ ಚ ಕುರುನನ್ದನ । ನಿಹಿತಾ ಯೌವನಾಶ್ವೇನ ರಾಜ್ಞಾ ಹತ್ವಾ ರಣೇ ರಿಪೂನ್’ (ಸಭಾಪರ್ವ: ೩.೬) ಬಿನ್ದುಸರಸು ಎನ್ನುವ ಸರೋವರದಲ್ಲಿ ಯೌವನಾಶ್ವನ(ಮುಚುಕುನ್ದನ) ಗದೆ ಇತ್ತು. (ಯುವನಾಶ್ವ ಎನ್ನುವ ರಾಜನ ಮಗ ಮಾನ್ಧಾತ. ಮಾನ್ಧಾತನ ಮಗ ಮುಚುಕುನ್ದ). ಅದನ್ನು ಮಯ ಭೀಮಸೇನನಿಗೆ ಕೊಟ್ಟ. ಆದರೆ ಇಲ್ಲಿ ಸಪ್ತಮಿ ವಿಭಕ್ತಿ ಪ್ರಯೋಗ ಏಕೆ ಎನ್ನುವುದು ಮುಂದಿನ ಶ್ಲೋಕದಲ್ಲಿ ತಿಳಿಯುತ್ತದೆ:]

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

 

ಮುಚುಕುನ್ದ ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನ ಅನುಗ್ರಹದಿಂದ ಧರಿಸಿದ್ದ. ಆ ತನ್ನ ಗದೆಯನ್ನು ಭೀಮಸೇನ ಮಯನ ಮೂಲಕ ಪಡೆದು ಸಂತಸವನ್ನು ಹೊಂದಿದ.

[ಹೀಗಾಗಿ ಆ ಗದೆ ಭೀಮಸೇನನಿಗೆ ಮಯನ ಕಾಣಿಕೆ ಅಲ್ಲ. ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನಿಗೆ(ಭೀಮನಿಗೆ) ಮಯ ಒಪ್ಪಿಸಿದ್ದು ಅಷ್ಟೇ. ಹೀಗಾಗಿ ಆಚಾರ್ಯರು ಸಪ್ತಮೀ ವಿಭಕ್ತಿ ಪ್ರಯೋಗ ಮಾಡಿರುವುದು]. 

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥


ಮತ್ತೆ (ಖಾಣ್ಡವದಾಹ ಆದಮೇಲೆ) ಎರಡು ವರ್ಷಗಳ ಕಾಲ ಇಂದ್ರಪ್ರಸ್ಥದಲ್ಲಿಯೇ ವಾಸಮಾಡಿದ ಶ್ರೀಕೃಷ್ಣನು, ತನ್ನಿಂದ ದೂರದಲ್ಲಿರುವುದನ್ನು ಸಹಿಸುವುದರಲ್ಲಿ ಅಸಮರ್ಥರಾದ ಪಾಂಡವರಿಂದ ಚೆನ್ನಾಗಿ ಅರ್ಚಿಸಲ್ಪಟ್ಟವನಾಗಿ, ತನ್ನ ಪಟ್ಟಣವಾದ ದ್ವಾರಕೆಗೆ ತೆರಳಿದನು.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

 

ತದನಂತರ, ಎಂದೂ ಹುಟ್ಟದ ಶ್ರೀಕೃಷ್ಣನು, ತನ್ನ ಪಟ್ಟಣದಲ್ಲಿ ವಾಸಮಾಡುತ್ತಾ, ಒಂದಾನೊಂದು ಸೂರ್ಯಗ್ರಹಣದ ಸಂದರ್ಭದಲ್ಲಿ ತನ್ನ ಬಾಂಧವರು, ಮಕ್ಕಳು ಮತ್ತು ಹೆಂಡತಿಯರೊಡಗೂಡಿ ಸಮಂತಪಂಚಕಕ್ಕೆ (ಕುರುಕ್ಷೇತ್ರಕ್ಕೆ) ಬಂದನು.  

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

 

ಪೃಥೆಯ ಮಕ್ಕಳಾದ ಪಾಂಡವರೂ ಕೂಡಾ ತಮ್ಮ ಹೆಂಡತಿ, ಮಕ್ಕಳು ಮತ್ತು ತಾಯಿಯೊಂದಿಗೆ ಅಲ್ಲಿಗೆ ಬಂದರು. ಪರಮಾತ್ಮನಿಗೆ ಪ್ರಿಯರಾದವರು, ಅಪ್ರಿಯರಾದವರು, ಹೀಗೆ ಎಲ್ಲಾ ರಾಜರೂ ಕೂಡಾ ಅಲ್ಲಿಗೆ ಬಂದರು.

 

ತಥೈವ ನನ್ದಗೋಪಕಃ ಸದಾರಗೋಪಗೋಪಿಕಃ ।

ಮುನೀಶ್ವರಾಶ್ಚ ಸರ್ವತಃ ಸಮೀಯುರತ್ರ ಚ ಪ್ರಜಾಃ ॥೨೧.೦೬॥

 

ಹಾಗೆಯೇ ನಂದಗೋಪನೂ ಕೂಡಾ ತನ್ನ ಹೆಂಡತಿ, ಗೋಪ-ಗೋಪಿಕೆಯರಿಂದ ಒಡಗೂಡಿ ಅಲ್ಲಿಗೆ ಬಂದ. ಮುನೀಶ್ವರರೂ ಕೂಡಾ ಬಂದರು. ಪರಮಾತ್ಮನ ಭಕ್ತರಾಗಿರುವ ಪ್ರಜೆಗಳೂ ಕೂಡಾ ಅಲ್ಲಿಗೆ ಬಂದರು.