೨೧. ಪಾಣ್ಡವವನಪ್ರವೇಶಃ
ಓಂ ॥
ಜನಾರ್ದ್ದನಾಜ್ಞಯಾ ಮಯಃ
ಸಮಸ್ತಕೌತುಕೋತ್ತರಾಮ್ ।
ಸಭಾಂ ವಿಧಾಯ ಭೂಭೃತೇ
ದದೌ ಗದಾಂ ವೃಕೋದರೇ ॥೨೧.೦೧॥
ಮಯನು ಕೃಷ್ಣನ ಆಜ್ಞೆಯಂತೆ ಎಲ್ಲಾ ರೀತಿಯ ಅಚ್ಚರಿಯಿಂದ
ಕೂಡಿರುವ, ಎಲ್ಲಕ್ಕೂ ಮಿಗಿಲಾಗಿರುವ ಸಭೆಯನ್ನು ಯುಧಿಷ್ಠಿರನಿಗಾಗಿ ನಿರ್ಮಿಸಿಕೊಟ್ಟು, ಭೀಮಸೇನನಿಗೆ ಗದೆಯನ್ನು ಒಪ್ಪಿಸಿದನು.
[ಇಲ್ಲಿ ‘ವೃಕೋದರಾಯ ಗದಾಂ ದದೌ’ ಎಂದು ಚತುರ್ಥೀ
ವಿಭಕ್ತಿಯಲ್ಲಿ ಹೇಳಬೇಕಿತ್ತು. ಆದರೆ ಹಾಗೇ ಹೇಳದೇ ಸಪ್ತಮೀ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆ ಹೀಗೆ ಎನ್ನುವುದರ
ಹಿನ್ನೆಲೆ ನಮಗೆ ಮಹಾಭಾರತವನ್ನು ನೋಡಿದಾಗ ತಿಳಿಯುತ್ತದೆ. ‘ಅಸ್ತಿ ಬಿನ್ದುಸರಸ್ಯುಗ್ರಾ ಗದಾ ಚ
ಕುರುನನ್ದನ । ನಿಹಿತಾ ಯೌವನಾಶ್ವೇನ ರಾಜ್ಞಾ ಹತ್ವಾ ರಣೇ ರಿಪೂನ್’ (ಸಭಾಪರ್ವ: ೩.೬) ಬಿನ್ದುಸರಸು
ಎನ್ನುವ ಸರೋವರದಲ್ಲಿ ಯೌವನಾಶ್ವನ(ಮುಚುಕುನ್ದನ) ಗದೆ ಇತ್ತು. (ಯುವನಾಶ್ವ ಎನ್ನುವ ರಾಜನ ಮಗ
ಮಾನ್ಧಾತ. ಮಾನ್ಧಾತನ ಮಗ ಮುಚುಕುನ್ದ). ಅದನ್ನು ಮಯ ಭೀಮಸೇನನಿಗೆ ಕೊಟ್ಟ. ಆದರೆ ಇಲ್ಲಿ ಸಪ್ತಮಿ
ವಿಭಕ್ತಿ ಪ್ರಯೋಗ ಏಕೆ ಎನ್ನುವುದು ಮುಂದಿನ ಶ್ಲೋಕದಲ್ಲಿ ತಿಳಿಯುತ್ತದೆ:]
ಸ ವಾಯುಧಾರಿತಾಂ ಗದಾಂ
ಹಿ ಯೌವನಾಶ್ವಭೂಭೃತಾ ।
ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥
ಮುಚುಕುನ್ದ ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನ ಅನುಗ್ರಹದಿಂದ ಧರಿಸಿದ್ದ. ಆ ತನ್ನ ಗದೆಯನ್ನು
ಭೀಮಸೇನ ಮಯನ ಮೂಲಕ ಪಡೆದು ಸಂತಸವನ್ನು ಹೊಂದಿದ.
[ಹೀಗಾಗಿ ಆ ಗದೆ ಭೀಮಸೇನನಿಗೆ ಮಯನ ಕಾಣಿಕೆ ಅಲ್ಲ. ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನಿಗೆ(ಭೀಮನಿಗೆ)
ಮಯ ಒಪ್ಪಿಸಿದ್ದು ಅಷ್ಟೇ. ಹೀಗಾಗಿ ಆಚಾರ್ಯರು ಸಪ್ತಮೀ ವಿಭಕ್ತಿ ಪ್ರಯೋಗ ಮಾಡಿರುವುದು].
ಪುನಶ್ಚ ವತ್ಸರದ್ವಯಂ
ಸಮುಷ್ಯ ಕೇಶವೋ ಯಯೌ ।
ಸಮರ್ಚ್ಚಿತಶ್ಚ
ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥
ಮತ್ತೆ (ಖಾಣ್ಡವದಾಹ ಆದಮೇಲೆ) ಎರಡು ವರ್ಷಗಳ ಕಾಲ
ಇಂದ್ರಪ್ರಸ್ಥದಲ್ಲಿಯೇ ವಾಸಮಾಡಿದ ಶ್ರೀಕೃಷ್ಣನು, ತನ್ನಿಂದ ದೂರದಲ್ಲಿರುವುದನ್ನು
ಸಹಿಸುವುದರಲ್ಲಿ ಅಸಮರ್ಥರಾದ ಪಾಂಡವರಿಂದ ಚೆನ್ನಾಗಿ ಅರ್ಚಿಸಲ್ಪಟ್ಟವನಾಗಿ, ತನ್ನ ಪಟ್ಟಣವಾದ
ದ್ವಾರಕೆಗೆ ತೆರಳಿದನು.
ತತೋ ವಸನ್ ಸ್ವಪುರ್ಯ್ಯಜಃ
ಕ್ವಚಿದ್ ರವಿಗ್ರಹೇ ಹರಿಃ ।
ಸದಾರಪುತ್ರಬಾನ್ಧವಃ
ಸಮನ್ತಪಞ್ಚಕಂ ಯಯೌ ॥೨೧.೦೪॥
ತದನಂತರ, ಎಂದೂ ಹುಟ್ಟದ ಶ್ರೀಕೃಷ್ಣನು, ತನ್ನ ಪಟ್ಟಣದಲ್ಲಿ
ವಾಸಮಾಡುತ್ತಾ, ಒಂದಾನೊಂದು ಸೂರ್ಯಗ್ರಹಣದ ಸಂದರ್ಭದಲ್ಲಿ ತನ್ನ ಬಾಂಧವರು, ಮಕ್ಕಳು ಮತ್ತು
ಹೆಂಡತಿಯರೊಡಗೂಡಿ ಸಮಂತಪಂಚಕಕ್ಕೆ (ಕುರುಕ್ಷೇತ್ರಕ್ಕೆ) ಬಂದನು.
ಪೃಥಾಸುತಾಶ್ಚ ಸರ್ವಶಃ
ಸದಾರಪುತ್ರಮಾತೃಕಾಃ ।
ಕ್ಷಿತೀಶ್ವರಾಶ್ಚ
ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥
ಪೃಥೆಯ ಮಕ್ಕಳಾದ ಪಾಂಡವರೂ ಕೂಡಾ ತಮ್ಮ ಹೆಂಡತಿ, ಮಕ್ಕಳು ಮತ್ತು ತಾಯಿಯೊಂದಿಗೆ ಅಲ್ಲಿಗೆ ಬಂದರು. ಪರಮಾತ್ಮನಿಗೆ
ಪ್ರಿಯರಾದವರು, ಅಪ್ರಿಯರಾದವರು, ಹೀಗೆ ಎಲ್ಲಾ ರಾಜರೂ ಕೂಡಾ ಅಲ್ಲಿಗೆ
ಬಂದರು.
ತಥೈವ ನನ್ದಗೋಪಕಃ
ಸದಾರಗೋಪಗೋಪಿಕಃ ।
ಮುನೀಶ್ವರಾಶ್ಚ ಸರ್ವತಃ
ಸಮೀಯುರತ್ರ ಚ ಪ್ರಜಾಃ ॥೨೧.೦೬॥
ಹಾಗೆಯೇ ನಂದಗೋಪನೂ ಕೂಡಾ ತನ್ನ ಹೆಂಡತಿ, ಗೋಪ-ಗೋಪಿಕೆಯರಿಂದ ಒಡಗೂಡಿ ಅಲ್ಲಿಗೆ ಬಂದ. ಮುನೀಶ್ವರರೂ
ಕೂಡಾ ಬಂದರು. ಪರಮಾತ್ಮನ ಭಕ್ತರಾಗಿರುವ ಪ್ರಜೆಗಳೂ ಕೂಡಾ ಅಲ್ಲಿಗೆ ಬಂದರು.
No comments:
Post a Comment