ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।
ವಸಿಷ್ಠವೃಷ್ಣಿನನ್ದನಂ
ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥
ಯಾರು ಪರಮಾತ್ಮನಿಗೆ ಪ್ರಿಯರಾಗಿದ್ದಾರೋ(ಯಾರು ಭಗವದ್ಭಕ್ತರೋ),
ಅವರೆಲ್ಲರೂ ವಸಿಷ್ಠ ವಂಶದಲ್ಲಿ ಬಂದಿರುವ ವೇದವ್ಯಾಸರು, ಯಾದವ ವಂಶದಲ್ಲಿ
ಬಂದಿರುವ ವಾಸುದೇವ(ಶ್ರೀಕೃಷ್ಣ) ಮತ್ತು ಭೃಗು ವಂಶದಲ್ಲಿ ಬಂದಿರುವ ಪರಶುರಾಮ- ಈ ಮೂರು
ರೂಪದಲ್ಲಿರುವ ಪರಮಾತ್ಮನನ್ನು ಹೊಂದಿ ಚೆನ್ನಾಗಿ ಪೂಜಿಸಿದರು.
ಕೃತಾರ್ತ್ಥತಾಂ ಚ ತೇ
ಯಯೂ ರಮೇಶಪಾದದರ್ಶನಾತ್ ।
ರವಿಗ್ರಹೇ ಸಮಾಪ್ಲುತಾ
ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥
ಪರಶುರಾಮನಿಂದ ನಿರ್ಮಿತವಾದ ತೀರ್ಥದಲ್ಲಿ(ಸಮಂತಪಂಚಕದಲ್ಲಿ) ಸ್ನಾನಮಾಡಿದ ಅವರೆಲ್ಲರೂ, ಪರಮಾತ್ಮನ
ಪಾದ ದರ್ಶನದಿಂದ ಧನ್ಯತೆಯನ್ನು ಹೊಂದಿದರು.
ಅನುಗ್ರಹಂ ವಿಧಾಯ ಸಸ್ವಕೇಷು
ಕೇಶವಸ್ತ್ರಿವೃತ್ ।
ಅಯಾಜಯಚ್ಚ ಶೂರಜಂ ಮಖೈಃ
ಸಮಾಪ್ತದಕ್ಷಿಣೈಃ ॥೨೧.೦೯॥
ಆ ಕೇಶವನು ಮೂರು ರೂಪಗಳಿಂದ ಕೂಡಿದವನಾಗಿ, ತನ್ನವರಿಗೆ
ಅನುಗ್ರಹವನ್ನು ಮಾಡಿ, ಶೂರಸೇನ ಪುತ್ರನಾದ ವಸುದೇವ ಪರಿಪೂರ್ಣವಾದ ದಕ್ಷಿಣೆಯುಳ್ಳ
ಯಾಗಗಳನ್ನು ಮಾಡಲು ಕಾರಣನಾದನು.
ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ
ಸಃ ।
ಸುಕಾಲದರ್ಶನಾತ್ ಪರಂ
ವ್ಯಧಾದನುಗ್ರಹಂ ಹರಿಃ ॥೨೧.೧೦॥
ಪರಮಾತ್ಮನು ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆ, ಈ ಪುಣ್ಯಕಾಲದಲ್ಲಿ ದರ್ಶನವನ್ನು ನೀಡಿ ವಿಶೇಷವಾದ ಅನುಗ್ರಹವನ್ನು ಮಾಡಿದನು.
ತತೋ ಯಯೌ ಸ್ವಕಾಂ
ಪುರೀಂ ಪೃಥಾಸುತೈಃ ಸಹಾಚ್ಯುತಃ ।
ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥
ತದನಂತರ, ಕುಂತಿಯ ಮಕ್ಕಳಾದ ಪಾಂಡವರಿಂದ ಕೂಡಿಕೊಂಡು ತನ್ನ
ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣ, ತನ್ನ
ಪಟ್ಟಣದಲ್ಲಿ ಒಂದು ದಿನದ ಅಶ್ವಮೇಧ ಎನ್ನುವ ಯಾಗವನ್ನು ಮಾಡಿದನು.
[ಭಾಗವತ ಮತ್ತು ಹರಿವಂಶದಲ್ಲಿ ಈ ಅಶ್ವಮೇಧಯಾಗದ ಕುರಿತು
ಹೇಳಿರುವುದನ್ನು ಕಾಣಬಹುದು: ‘ಕದಾಚಿದ್
ವಾಜಿಮೇಧೇನ ಯಷ್ಟುಮುದ್ಯಮ್ಯ ಕೇಶವಃ । ಮಹೀಮ್ ಪ್ರದಕ್ಷಿಣಂ ಕರ್ತುಂ ಪ್ರಾಹಿಣೋತ್
ಪ್ರೋಕ್ಷಿತಂ ಹಯಂ’ [ಭಾಗವತ ೧೦.೧೦೦.೧] ಶ್ರೀಕೃಷ್ಣನು
ಅಶ್ವಮೇಧಯಾಗ ಮಾಡಲು ಸಿದ್ಧನಾಗಿ, ಇಡೀ ಭೂಮಿಯನ್ನು ಸುತ್ತಿ ಬರಲು, ಮಂತ್ರದಿಂದ ಸಂಸ್ಕೃತವಾದ
ಕುದುರೆಯನ್ನು ಕಳುಹಿಸಿದ. ‘ತತಃ ಕದಾಚಿದ್ ಧರ್ಮಾತ್ಮಾ ದೀಕ್ಷಿತೋ ಮಧುಸೂದನಃ । ಏಕಾಹೇನ ಮಹಾಬಾಹುಃ
ಶಾಸ್ತ್ರೇ ದೃಷ್ಟೇನ ಕರ್ಮಣಾ’ (ಹರಿವಂಶ-ವಿಷ್ಣುಪರ್ವ ೧೧೧.೭) ಇಲ್ಲಿ ಏಕಾಹೇನ ಎಂದಿದೆ. ಅಂದರೆ ಅದು
ಒಂದು ದಿನದ ಯಾಗವಾಗಿತ್ತು].
No comments:
Post a Comment