ಅಸ್ತ್ರೈಸ್ತು ವೃಷ್ಟಿಂ ವಿನಿವಾರ್ಯ್ಯ ಕೃಷ್ಣಃ ಪಾರ್ತ್ಥಶ್ಚ ಶಕ್ರಂ ಸುರಪೂಗಯುಕ್ತಮ್ ।
ಅಯುದ್ಧ್ಯತಾಂ ಸೋsಪಿ ಪರಾಜಿತೋsಭೂತ್ ಪ್ರೀತಶ್ಚ
ದೃಷ್ಟ್ವಾ ಬಲಮಾತ್ಮನಸ್ತತ್ ॥೨೦.೨೩೩॥
ಕೃಷ್ಣನೂ ಅರ್ಜುನನೂ ಕೂಡಾ ಅಸ್ತ್ರಗಳಿಂದ ಮಳೆಯನ್ನು ತಡೆದು, ದೇವತೆಗಳ ಸಮೂಹಗಳಿಂದ ಕೂಡಿದ ಇಂದ್ರನೊಂದಿಗೆ ಯುದ್ಧಮಾಡಿದರು.
ಆ ಯುದ್ಧದಲ್ಲಿ ಸೋತ ಇಂದ್ರನು ತನ್ನ ಮಗನ ಬಲವನ್ನು ಕಂಡು ಪ್ರೀತನಾದನು(ಸಂತುಷ್ಟನಾದನು).
[ಮಹಾಭಾರತದಲ್ಲಿ ‘ಇಂದ್ರ ತನ್ನ ಬಲವನ್ನು ಕಂಡು ಸಂತೋಷಪಟ್ಟ’ ಎಂದಿದೆ. ಆ ಶ್ಲೋಕವನ್ನು ಹೇಗೆ ವ್ಯಾಖ್ಯಾನ
ಮಾಡಬೇಕು ಎನ್ನುವುದು ಆಚಾರ್ಯರ ಈ ವಿವರಣೆಯಿಂದ ಸ್ಪಷ್ಟವಾಗುತ್ತದೆ]
ಸ್ನೇಹಂ ಚ ಕೃಷ್ಣಸ್ಯ ತದಾsರ್ಜ್ಜುನೇ
ಧೃತಂ ವಿಲೋಕ್ಯ ಪಾರ್ತ್ಥಸ್ಯ ಬಲಂ ಚ ತಾದೃಶಮ್ ।
ನಿವರ್ತ್ತ್ಯ
ಮೇಘಾನತಿತುಷ್ಟಚಿತ್ತಃ ಪ್ರಣಮ್ಯ ಕೃಷ್ಣಂ ತನಯಂ ಸಮಾಶ್ಲಿಷತ್ ॥೨೦.೨೩೪॥
ಅರ್ಜುನನಲ್ಲಿ ಶ್ರೀಕೃಷ್ಣನಿರಿಸಿದ್ದ ಪ್ರೀತಿಯನ್ನು, ಅರ್ಜುನನ
ಬಲವನ್ನು ಕಂಡು ಅತ್ಯಂತ ಸಂತಸಗೊಂಡ ಬಗೆಯುಳ್ಳವನಾದ ಇಂದ್ರ, ಮೋಡಗಳನ್ನು ಹಿಂದೆ ಕಳುಹಿಸಿ, ಕೃಷ್ಣನಿಗೆ ನಮಸ್ಕರಿಸಿ, ಮಗನನ್ನು ಆಲಂಗಿಸಿದ.
ವಿಷ್ಣುಶ್ಚ ಶಕ್ರೇಣ
ಸಹೇತ್ಯ ಕೇಶವಂ ಸಮಾಶ್ಲಿಷನ್ನಿರ್ವಿಶೇಷೋsಪ್ಯನನ್ತಮ್ ।
ಸ ಕೇವಲಂ ಕ್ರೀಡಮಾನಃ
ಸಶಕ್ರಃ ಸ್ಥಿತೋ ಹಿ ಪೂರ್ವಂ ಯುಯುಧೇ ನ ಕಿಞ್ಚಿತ್ ॥೨೦.೨೩೫॥
ವಿಷ್ಣುವು(ಸ್ವರ್ಗದಲ್ಲಿರುವ ಉಪೇಂದ್ರರೂಪಿ ಭಗವಂತನೂ) ಕೂಡಾ ಇಂದ್ರನೊಂದಿಗೆ
ಬಂದು ಕೇಶವನನ್ನು ಆಲಂಗಿಸಿದ. ಈ ವಿಷ್ಣು ಮತ್ತು ಶ್ರೀಕೃಷ್ಣನ ನಡುವೆ ಯಾವುದೇ ವ್ಯತ್ಯಾಸ
ಇಲ್ಲದಿದ್ದರೂ, ಇಂದ್ರನಿಂದ ಕೂಡಿಕೊಂಡು, ಕ್ರೀಡಿಸುತ್ತಾ ಈ ರೀತಿಯ ಕ್ರಿಯೆಗಳನ್ನು ಭಗವಂತ ಮಾಡಿ
ತೋರಿಸಿದ. ಇಂದ್ರ ಯುದ್ಧ ಮಾಡುತ್ತಿರುವಾಗ ಉಪೇಂದ್ರ ಯುದ್ಧ ಮಾಡಲಿಲ್ಲ ಆದರೆ ಆಲಂಗಿಸಲು ಮಾತ್ರ ಬಂದ.
ಬ್ರಹ್ಮಾ ಚ ಶರ್ವಶ್ಚ
ಸಮೇತ್ಯ ಕೃಷ್ಣಂ ಪ್ರಣಮ್ಯ ಪಾರ್ತ್ಥಸ್ಯ ಚ ಕೃಷ್ಣನಾಮ ।
ಸಞ್ಚಕ್ರತುಶ್ಚಾಪಿ
ಶಿಕ್ಷಾಪ್ರಕರ್ಷಾಚ್ಚಕ್ರುಶ್ಚ ಸರ್ವೇ ಸ್ವಾಸ್ತ್ರದಾನೇ ಪ್ರತಿಜ್ಞಾಮ್ ॥೨೦.೨೩೬॥
ಬ್ರಹ್ಮ, ಸದಾಶಿವನೂ ಕೂಡಾ ಕೃಷ್ಣನ ಬಳಿ ಬಂದು ನಮಸ್ಕರಿಸಿ
ಅರ್ಜುನನಿಗೆ ‘ಕೃಷ್ಣ’ ಎಂದು ನಾಮಕರಣ ಮಾಡಿದರು. ಅರ್ಜುನನ ಅತ್ಯಂತ ಉತ್ಕೃಷ್ಟವಾದ ಧನುರ್ವಿದ್ಯಾಭ್ಯಾಸಕ್ಕಾಗಿ
ಅವರು ಅವನಿಗೆ ಈ ರೀತಿಯ ನಾಮಕರಣ ಮಾಡಿದರು. ಮುಂದೆ ಕಾಡಿಗೆ ಬಂದಾಗ ನಮ್ಮ ಅಸ್ತ್ರಗಳನ್ನು ನಿನಗೆ
ಕೊಡುತ್ತೇವೆ ಎನ್ನುವ ಪ್ರತಿಜ್ಞೆಯನ್ನೂ ಅವರು ಇಲ್ಲಿ ಮಾಡಿದರು.
ಅನುಜ್ಞಾತಾಸ್ತೇ ಪ್ರಯಯುಃ ಕೇಶವೇನ ಕ್ರೀಡಾರ್ತ್ಥಮಿನ್ದ್ರೋ
ಯಯುಧೇ ಹಿ ತತ್ರ ।
ಪ್ರೀತ್ಯಾ ಕೀರ್ತ್ತಿಂ ದಾತುಮಪ್ಯರ್ಜ್ಜುನಸ್ಯ ತತಸ್ತುಷ್ಟಃ ಸಹ ದೇವೈಸ್ತಯೋಃ ಸಃ ॥೨೦.೨೩೭॥
ಬ್ರಹ್ಮಾದಿಗಳು ಶ್ರೀಕೃಷ್ಣನ ಅನುಜ್ಞೆಯನ್ನು ಪಡೆದು ಹಿಂತಿರುಗಿದರು.
ಇಂದ್ರ ಕೇವಲ ಕ್ರೀಡೆಗಾಗಿ ಹಾಗೂ ಅರ್ಜುನನಿಗೆ ಕೀರ್ತಿಯನ್ನು
ಕೊಡುವುದಕ್ಕಾಗಿ ಯುದ್ಧಮಾಡಿದ್ದ. ತದನಂತರ ಸಂತುಷ್ಟನಾದ ಇಂದ್ರ ಇತರ ದೇವತೆಗಳೊಂದಿಗೆ
ಸ್ವರ್ಗಲೋಕವನ್ನು ಕುರಿತು ತೆರಳಿದ.
No comments:
Post a Comment