ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 2, 2021

Mahabharata Tatparya Nirnaya Kannada 20: 215 - 220

ತತಃ ಕದಾಚಿತ್ ಖಾಣ್ಡವಂ ಕೃಷ್ಣಪಾರ್ತ್ಥೌ ಚಿಕ್ರೀಡಿಷೂ ಸತ್ಯಭಾಮಾಸುಭದ್ರೇ

ಆದಾಯ ಯಾತೌಪರಿಚಾರಕೈಶ್ಚ ರಥೇನ ಗನ್ಧರ್ವವರಾನುಗೀತೌ ೨೦.೨೧೫

 

ತದನಂತರ ಒಮ್ಮೆ ಕೃಷ್ಣಾರ್ಜುನರು ಕ್ರೀಡಾರ್ಥವಾಗಿ, ಸತ್ಯಭಾಮೆ ಹಾಗೂ ಸುಭದ್ರೆಯರೊಂದಿಗೆ,  ಪರಿಚಾರಕರಿಂದ ಕೂಡಿದವರಾಗಿ, ಗಂಧರ್ವರ ಗಾನದೊಂದಿಗೆ, ರಥದಿಂದ ಖಾಣ್ಡವವನಕ್ಕೆ ತೆರಳಿದರು.

 

ಸ್ವೈರಂ ತಯೋಸ್ತತ್ರ ವಿಕ್ರೀಡತೋಶ್ಚ ಸ್ತ್ರೀರತ್ನಾಭ್ಯಾಂ ಮನ್ದವಾತಾನುಜುಷ್ಟೇ ।

ವನೇ ಪ್ರಸೂನಸ್ತಬಕೋರುರಾಜಿತೇ ಜಲೇ ಚ ತಿಗ್ಮದ್ಯುತಿಕನ್ಯಕಾಯಾಃ ೨೦.೨೧೬

 

ಸೂರ್ಯನ ಮಗಳಾದ ಯಮುನಾನದಿಯ ನೀರಿನಲ್ಲಿ, ಹೂ-ಚಿಗುರುಗಳಿಂದ ತುಂಬಿರುವ ಕಾಡಿನಲ್ಲಿ, ಸ್ತ್ರೀಶ್ರೇಷ್ಠರಾದ ಸತ್ಯಾಭಾಮೆ ಸುಭದ್ರೆಯರ ಜೊತೆಗೆ, ತಂಗಾಳಿಯಿಂದ ಕೂಡಿರುವ ಆ ವನದಲ್ಲಿ ಅವರು ವಿಹರಿಸುತ್ತಿದ್ದರು.

 

ಭೂತ್ವಾ ವಿಪ್ರಸ್ತೌ ಯಯಾಚೇsನ್ನಮೇತ್ಯ ಕೃಶಾನುರೂಚೇ ಚ ಮತೇ ರಮೇಶಿತುಃ ।

ಪಾರ್ತ್ಥಃ ಕೀದೃಕ್ ತೇsನ್ನಮಿಷ್ಟಂ ವದೇತಿ ಸ ಚಾವಾದೀದ್ ವಹ್ನಿರಹಂ ವನಾರ್ತ್ಥೀ ೨೦.೨೧೭

 

ಆಗ ಅಗ್ನಿದೇವನು ಬ್ರಾಹ್ಮಣರೂಪನಾಗಿ ಅವರಲ್ಲಿಗೆ ಬಂದು ಅರ್ಜುನನಲ್ಲಿ ಅನ್ನವನ್ನು ಬೇಡಿದನು. ಅರ್ಜುನನು ಶ್ರೀಕೃಷ್ಣನ ಅನುಜ್ಞೆಯಂತೆ ‘ನಿನಗೆ ಯಾವರೀತಿಯ ಅನ್ನಬೇಕು’ ಎಂದು ಕೇಳಿದನು. ಆಗ ಅವನು : ‘ನಾನು ಅಗ್ನಿ, ನನಗೆ ಬೇಕಾಗಿರುವ ಅನ್ನ ಕಾಡು’ ಎಂದನು. 


[ಅಗ್ನಿ ಏಕೆ ಖಾಣ್ಡವವನವನ್ನು ಅನ್ನವಾಗಿ ಬೇಡಿದ ಎಂದರೆ:]

ಪ್ರಯಾಜಾನ್ ದೇವಾನನುಯಾಜಾಂಶ್ಚ ಶುಲ್ಕಂ ಹವಿರ್ದ್ದಾನೇ ದೇವತಾನಾಮಯಾಚಿಷಮ್ ।

ಬಲಹ್ರಾಸಸ್ತವ ಭೂಯಾದಿತಿ ಸ್ಮ ಶಪ್ತ್ವೈವ ತೇ ತಾಂಶ್ಚ ದದುಃ ಪುರಾ ಮಮ ೨೦.೨೧೮

 

‘ಹಿಂದೆ ದೇವತೆಗಳಿಗೆ ನಾನು ನನ್ನಲ್ಲಿ ಹೋಮಿಸಿದ ಹವಿಸ್ಸನ್ನು ತಂದುಕೊಡುವ ವಿಷಯದಲ್ಲಿ ಪ್ರಯಾಜ ಮತ್ತು  ಅನುಯಾಜ ಎನ್ನುವ ಆಹುತಿ ವಿಶೇಷಗಳನ್ನು ಶುಲ್ಕವಾಗಿ ಬೇಡಿದೆ. ಆಗ ದೇವತೆಗಳು “ನಿನಗೆ ಬಲಹ್ರಾಸವಾಗಲಿ” ಎನ್ನುವ ಶಾಪ ಕೊಟ್ಟೇ, ಪ್ರಯಾಜ ಮತ್ತು  ಅನುಯಾಜ ಆಹುತಿ ವಿಶೇಷವನ್ನು ಕೊಟ್ಟರು’.  

[ ಪ್ರಯಾಜ ಮಂತ್ರಗಳು ಐದು: ‘ಯೇಯಜಾಮಹೇ ಸಮಿಧಃ ಸಮಿಧೋ ಅಗ್ನ ಆಜ್ಯಸ್ಯ ವ್ಯಂತೂ ವೌಷಟ್’  ಮತ್ತು ಅನುಯಾಜ ಮಂತ್ರಗಳು ಮೂರು: ‘ದೇವಂ ಬರ್ಹಿರ್ವಸುವನೇ ವಸುಧೇಯಸ್ಯ ವೇತು’ ಇತ್ಯಾದಿಯಾಗಿ ಹೇಳುತ್ತಾರೆ. ‘ಪ್ರಯಾಜ ಮತ್ತು ಅನುಯಾಜ ಮಂತ್ರಗಳಿಂದ ಆಹುತಿಯನ್ನು ಬ್ರಾಹ್ಮಣರು ನನಗೆ ಕೊಟ್ಟರೆ, ನನ್ನಲ್ಲಿ ಹೊಮಿಸಿದ ಹವಿಸ್ಸನ್ನು ನಿಮಗೆ ತಂದು ತಲುಪಿಸುತ್ತೇನೆ. ಯಜ್ಞ ಪದ್ಧತಿಯಲ್ಲಿ ಈ ರೀತಿ ಪರಿಷ್ಕಾರ ಆಗಬೇಕು’ ಎಂದು ಅಗ್ನಿ ಬೇಡಿದ್ದ. ಆಗ ದೇವತೆಗಳು: ‘ನೀನು ಹೆಚ್ಚಿನ ಶುಲ್ಕ ಅಪೇಕ್ಷಿಸುತ್ತಿದ್ದೀಯ. ಕೊಡುತ್ತೇವೆ, ಆದರೆ ನಿನ್ನ ಬಲಹ್ರಾಸವಾಗಲಿ’ ಎಂದು ಶಾಪ ಕೊಟ್ಟರು].

 

ಪುನಃ ಪೂರ್ತ್ತಿಃ ಕೇನ ಮೇ ಸ್ಯಾದ್ ಬಲಸ್ಯೇತ್ಯಬ್ಜೋದ್ಭವಂ ಪೃಷ್ಟವಾನಸ್ಮಿ ನತ್ವಾ ।

ಯದಾ ವನಂ ಖಾಣ್ಡವಂ ಹಿ ತ್ವಮತ್ಸಿ ತದಾ ಬಲಂ ತೇ ಭವತೀತಿ ಸೋsಬ್ರವೀತ್ ॥೨೦.೨೧೯॥

 

‘ಆಗ ನಾನು ಚತುರ್ಮುಖನಿಗೆ ನಮಿಸಿ,  “ಮತ್ತೆ ಯಾವುದರಿಂದ ನನ್ನ ಬಲ ಮರಳಿ ಬರುವಂತಾಗುತ್ತದೆ” ಎಂದು ಕೇಳಿದಾಗ, ಅವನು  “ನೀನು ಖಾಣ್ಡವವನವನ್ನು ತಿಂದಾಗ ನಿನಗೆ ನಿನ್ನ ಬಲವು ಮರಳಿ ಬರುತ್ತದೆ” ಎಂದು ಹೇಳಿದ’.

 

ಶಕ್ರಸ್ಯೇದಂ ಖಾಣ್ಡವಂ ತೇನ ವಿಘ್ನಂ ಕರೋತ್ಯಸೌ ತೇನ ವಾಂ ಪ್ರಾರ್ತ್ಥಯಾಮಿ ।

ಇತ್ಯುಕ್ತೇ ತಂ ಪಾರ್ತ್ಥ ಊಚೇ ಯದಿ ಸ್ಯಾದ್ ರಥೋ ಧನುಶ್ಚಾಥ ಶಕ್ರಂ ನಿರೋತ್ಸ್ಯೇ ॥೨೦.೨೨೦

 

‘ಈ ಖಾಣ್ಡವ ವನವು ಇಂದ್ರನಿಗೆ ಸಂಬಂಧಪಟ್ಟಿದೆ. ಹಾಗಾಗಿ ಇಂದ್ರನು ಅಡ್ಡಿ ಉಂಟು ಮಾಡುತ್ತಾನೆ. ಆ ಕಾರಣದಿಂದ ನಿಮ್ಮಿಬ್ಬರನ್ನೂ ಬೇಡುತ್ತಿದ್ದೇನೆ’ ಎಂದು ಅಗ್ನಿ ಹೇಳಲು, ಅವನನ್ನು ಕುರಿತು ಅರ್ಜುನನು ಹೇಳುತ್ತಾನೆ:  ‘ಒಂದು ವೇಳೆ ಒಳ್ಳೆಯ ರಥ ಮತ್ತು ಧನುಸ್ಸು ನನಗೆ ಸಿಕ್ಕರೆ ನಾನು ಇಂದ್ರನನ್ನು ತಡೆಯುತ್ತೇನೆ’ ಎಂದು.

No comments:

Post a Comment