[ಯಾವ ಇಂದ್ರ ಅಗ್ನಿಗೆ ಖಾಣ್ಡವ ಕೊಡಬಾರದು ಎಂದು ವಿರೋಧ ಮಾಡುತ್ತಿದ್ದನೋ, ಅವನೇ ಅರ್ಜುನನಾಗಿ ಬಂದಿದ್ದಾನೆ. ಅವನು ತನಗೆ ತಾನೇ ಹೇಗೆ ವಿರೋಧ ಮಾಡಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾರೆ:]
ನರಾವೇಶಾದನ್ನದಾನಪ್ರತಿಶ್ರವಾತ್
ಸ್ವಸ್ಯಾಪಿ ಶಕ್ರಸ್ಯ ವಿರೋಧಮೈಚ್ಛತ್ ।
ಪಾರ್ತ್ಥಃ ಕೃಷ್ಣಸ್ಯ
ಪ್ರೇರಣಾಚ್ಚೈವ ವಹ್ನಿಃ ಪಾರ್ತ್ಥಂ ಯಯಾಚೇ ಶಕ್ರವಿರೋಧಶಾನ್ತ್ಯೈಃ ॥೨೦.೨೨೧॥
ನರನೆಂಬ ಶೇಷನ ಆವೇಶ ಇದ್ದುದರಿಂದ, “ನಾನು ನಿನಗೆ ಅನ್ನವನ್ನು
ಕೊಡುತ್ತೇನೆ” ಎಂದು ಪ್ರತಿಜ್ಞೆ ಮಾಡಿರುವುದರಿಂದ, ಕೃಷ್ಣನ ಪ್ರೇರಣೆಯಿಂದ, ತಾನೇ ಆಗಿರುವ
ಇಂದ್ರನಿಗೆ ಅರ್ಜುನ ವಿರೋಧವನ್ನು ಬಯಸಿದ. ಅದರಿಂದಾಗಿಯೇ ಅಗ್ನಿಯು ಇಂದ್ರನ ವಿರೋಧ
ಪರಿಹಾರಕ್ಕಾಗಿ ಅರ್ಜುನನನ್ನು ಬೇಡಿದನು.
ನಹಿ ಸ್ವದತ್ತಸ್ಯ ಪುನಃ
ಸ ವೈರಂ ಶಕ್ರಃ ಕುರ್ಯ್ಯಾತ್ ಸ್ವಯಮಿನ್ದ್ರೋ ಹಿ ಪಾರ್ತ್ಥಃ ।
ನಾಪ್ರೇರಿತೋ ವಿಷ್ಣುನಾ
ತಸ್ಯ ರೋಧಂ ಪಾರ್ತ್ಥಃ ಕುರ್ಯ್ಯಾದಿತಿ ಕೃಷ್ಣಂ ಯಯಾಚೇ ॥೨೦.೨೨೨॥
ತಾನೇ ಅರ್ಜುನನಾಗಿರುವ ಇಂದ್ರನು ತನ್ನಿಂದಲೇ ಕೊಡಲ್ಪಟ್ಟುದ್ದರ
ವಿರುದ್ಧವಾಗಿ ಶತ್ರುತ್ವವನ್ನು ಮಾಡುವುದಿಲ್ಲವಷ್ಟೇ.
‘ನಾರಾಯಣನಿಂದ ಪ್ರೇರಿತನಾಗದೇ ಇಂದ್ರನ ತಡೆಯುವಿಕೆಯನ್ನು ಅರ್ಜುನನು ಮಾಡಲಾರ’ ಎಂದು
ತಿಳಿದ ಅಗ್ನಿ ಕೃಷ್ಣನನ್ನೂ ಕೂಡಾ ಬೇಡಿದ.
ನಚಾಯುಕ್ತಃ ಕೇಶವೇನೈಷ ಶಕ್ತ ಇತಿ ಕೃಷ್ಣಾದಾಪ ಭೂಯೋsಪ್ಯನುಜ್ಞಾಮ್ ।
ಯಯೌ ಸಮೀಪಂ ಚ ಹರೇರ್ಬದರ್ಯ್ಯಾಮಾದಾಯ ಚಕ್ರಂ ಚಾಮುತಃ
ಕೇಶವೇsದಾತ್ ॥೨೦.೨೨೩॥
ಕೇಶವನಿಂದ ಕೂಡದಿದ್ದರೆ ಕೇವಲ ಅರ್ಜುನನು ಶಕ್ತನಲ್ಲವೆಂದು
ಅಗ್ನಿ ಕೃಷ್ಣನಿಂದ ಮತ್ತೆ ಅಣತಿಯನ್ನು ಬೇಡಿದ. ಹೀಗೆ ಕೃಷ್ಣನಿಂದ ಅನುಜ್ಞೆಯನ್ನು ಪಡೆದ ಅಗ್ನಿ
ಬದರಿ ನಾರಾಯಣನ ಸಮೀಪಕ್ಕೆ ತೆರಳಿ, ಆ ನಾರಾಯಣರೂಪಿ ಪರಮಾತ್ಮನಿಂದ ಚಕ್ರವನ್ನು ತೆಗೆದುಕೊಂಡು
ಬಂದು ಕೇಶವನಿಗೆ ಕೊಟ್ಟ.
[ಜರಾಸಂಧನೊಂದಿಗೆ ಯುದ್ಧಮಾಡುವಾಗ ಚಕ್ರ ಇಳಿದು ಬಂತು ಎಂದು
ಭಾಗವತದಲ್ಲಿ ಹೇಳಿದ್ದಾರೆ. ಆದರೆ ಖಾಣ್ಡವವನ ದಾಹ
ಕಾಲದಲ್ಲಿ ಅಗ್ನಿ ಬದರೀನಾರಾಯಣನಿಂದ ಚಕ್ರವನ್ನು
ತಂದು ಕೃಷ್ಣನಿಗೆ ಕೊಟ್ಟ ಎನ್ನುತ್ತದೆ ಮಹಾಭಾರತ. ಯಾವುದು ಸರಿ ಎಂದರೆ:]
ಚಕ್ರಂ ಗೋಮನ್ತೇ
ಕೃಷ್ಣಮಾಪಾಪಿ ಪೂರ್ವಂ ಭಕ್ತ್ಯಾ ವಹ್ನಿಃ ಕೇಶವೇsದಾತ್ ಪುನಸ್ತತ್ ।
ಚಕ್ರಂ ಚ
ವಿಷ್ಣೋರ್ಬಹುಧಾ ವ್ಯವಸ್ಥಿತಂ ತದಗ್ನಿದತ್ತಂ ಪ್ರಾಕ್ತನಂ ಚೈಕಧಾssಸೀತ್ ॥೨೦.೨೨೪॥
ಗೋಮಂತಪರ್ವತದಲ್ಲಿ ಚಕ್ರವು ಕೃಷ್ಣನ ಬಳಿ ಬಂದಿತು. ಭಕ್ತಿಯಿಂದ
ವಹ್ನಿಯು ಪುನಃ ಮತ್ತೆ ನಾರಾಯಣನಿಂದ ಪಡೆದ ಅದನ್ನು ಕೇಶವನಿಗೆ ಕೊಟ್ಟನು. ಭಗವಂತನ ಚಕ್ರವು
ಬಹುರೂಪವಾಗಿರುವುದು. ಅದರಿಂದ ಅಗ್ನಿ ಕೊಟ್ಟ
ಚಕ್ರವೂ, ಮೊದಲಿದ್ದ ಚಕ್ರವೂ ಒಂದೇ ಆಗಿತ್ತು. (ಹೀಗಾಗಿ ವಿರೋಧವಿಲ್ಲ).
ಧನುಶ್ಚ ಗಾಣ್ಡೀವಮಥಾಬ್ಜಜಸ್ಯ
ಕರೋತಿ ಯೇನಾಖಿಲಸಂಹೃತಿಂ ಸಃ ।
ಅಂಶೇನ ದತ್ತಂ
ತದುಮಾಪತೇಶ್ಚ ಶಕ್ರಸ್ಯ ಸೋಮಸ್ಯ ಜಲೇಶಿತುಶ್ಚ ॥೨೦.೨೨೫॥
ತದನಂತರ ಯಾವುದರಿಂದ ಬ್ರಹ್ಮನು ಎಲ್ಲರ ಸಂಹಾರವನ್ನು
ಮಾಡುತ್ತಾನೋ, ಅಂತಹ ಬ್ರಹ್ಮನಿಗೆ ಸೇರಿದ ಗಾಣ್ಡೀವ ಎನ್ನುವ ಧನುಸ್ಸನ್ನು ಅಗ್ನಿ ಅರ್ಜುನನಿಗೆ ಕೊಟ್ಟ. ಈ ಗಾಣ್ಡೀವ
ಆಂಶಿಕವಾಗಿ ಶಿವನಿಗೆ ಕೊಡಲ್ಪಟ್ಟಿತ್ತು. ಹಾಗೆಯೇ ಇಂದ್ರ, ಚಂದ್ರ ಹಾಗೂ ವರುಣನಿಗೂ ಕೊಡಲ್ಪಟ್ಟಿತ್ತು.
ತೇನೈವ ತೇ ಜಿಗ್ಯುರಥೋ
ಜಗತ್ ತ್ರಯಂ ಪ್ರಸಾದತಸ್ತೇ ಕ್ರಮಶೋsಬ್ಜಯೋನೇಃ ।
ಅನನ್ಯಧಾರ್ಯ್ಯಂ
ವಿಜಯಾವಹಂ ಚ ಭಾರೇಣ ಲಕ್ಷಸ್ಯ ಸಮಂ ಶುಭಾವಹಮ್ ॥೨೦.೨೨೬ ॥
ಧನುಸ್ಸನ್ನು ಹೊಂದಿರುವುದರಿಂದಲೇ ರುದ್ರಾದಿಗಳು ಕ್ರಮವಾಗಿ ಮೂರು
ಲೋಕಗಳನ್ನು ಗೆದ್ದರು. ಬ್ರಹ್ಮನ ಅನುಗ್ರಹದಿಂದ ಅವರೆಲ್ಲರೂ ಯಾರಿಗೂ ಧರಿಸಲು ಅಸಾಧ್ಯವಾದ, ವಿಜಯವನ್ನು
ತಂದುಕೊಡುವ, ಇಪ್ಪತ್ತುಲಕ್ಷ ತೊಲೆಗೆ(ಭಾರ=೨೦ ತೊಲೆ) ಸಮವಾಗಿರುವ, ಮಂಗಳವನ್ನು ನೀಡುವ ಆ ಗಾಣ್ಡೀವ ಬಿಲ್ಲನ್ನು ಧರಿಸಿದರು, ಗೆದ್ದರು ಕೂಡಾ.
ರಥಂ ಚ ಶುಭ್ರಾಶ್ವಯುತಂ
ಜಯಾವಹಂ ತೂಣೌ ತಥಾ ಚಾಕ್ಷಯಸಾಯಕೌ ಶುಭೌ ।
ಧ್ವಜಂ ಚ ರಾಮಸ್ಯ
ಹನೂಮದಙ್ಕಮಾದಾಯ ಸರ್ವಂ ವರುಣಾದರ್ಜ್ಜುನೇsದಾತ್ ॥೨೦.೨೨೭॥
ಬಿಳಿ ಕುದುರೆಗಳುಳ್ಳ ಜಯವನ್ನು ತರುವ ರಥವನ್ನೂ, ಮುಗಿಯದ
ಬಾಣಗಳುಳ್ಳ ಮಂಗಳಕರವಾದ ಬತ್ತಳಿಕೆಗಳನ್ನೂ, ಹನುಮಂತನ ಚಿಹ್ನೆಯುಳ್ಳ ರಾಮಚಂದ್ರನಿಗೆ ಸೇರಿದ ಧ್ವಜನ್ನೂ,
ಹೀಗೆ ಎಲ್ಲವನ್ನೂ ಅಗ್ನಿ ವರುಣನಿಂದ ತಂದು
ಅರ್ಜುನನಿಗೆ ಕೊಟ್ಟ.
No comments:
Post a Comment