ಹಯಂ ಸಭೀಮಫಲ್ಗುನಾ ಹರೇ ರಥಂ ಸಮಾಸ್ಥಿತಾಃ ।
ವ್ಯಚಾರಯನ್ ಹರೇಃ ಸುತಾ
ದಿನಸ್ಯ ಪಾದಮಾತ್ರತಃ ॥೨೧.೧೨॥
ಭೀಮಸೇನ, ಅರ್ಜುನ, ಮೊದಲಾದವರೊಂದಿಗೆ ಪರಮಾತ್ಮನ ರಥವನ್ನು ಏರಿದ
ಶ್ರೀಕೃಷ್ಣನ ಮಕ್ಕಳು, ದಿನದ ಕಾಲು ಭಾಗದಲ್ಲಿ ಕುದುರೆಯೊಂದಿಗೆ
ಎಲ್ಲಾಕಡೆ ತಿರುಗಾಡಿಕೊಂಡು ಬಂದರು.
ಜಿತಾಃ ಸಮಸ್ತಭೂಭೃತೋ
ಜರಾಸುತಾದಯಃ ಕ್ಷಣಾತ್ ।
ವೃಕೋದರಾದಿಭಿಸ್ತು
ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥
ಜರಾಸಂಧ ಮೊದಲಾಗಿರುವ ಎಲ್ಲಾ ರಾಜರೂ ಕೂಡಾ ಒಂದೇ ಕ್ಷಣದಲ್ಲಿ ಭೀಮಸೇನ ಮೊದಲಾದವರಿಂದ ಸೋಲಿಸಲ್ಪಟ್ಟರು. ಹೀಗೆ ಆ ಅಲೌಕಿಕವಾದ ಕುದುರೆ ದಿನದ ಕಾಲುಭಾಗದಲ್ಲೇ ಎಲ್ಲಾ ಕಡೆ ತಿರುಗಿ ಹಿಂತಿರುಗಿ ಬಂತು.
ಹಯಃ ಸ ಕೃಷ್ಣನಿರ್ಮ್ಮಿತೋ
ದಿನೇನ ಲಕ್ಷಯೋಜನಮ್ ।
ಕ್ಷಮೋ ಹಿ
ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥
ಒಂದು ದಿನದಲ್ಲಿ ಅಶ್ವಮೇಧವನ್ನು ಮಾಡಬೇಕು ಎನ್ನುವ ಉದ್ದೇಶದಿಂದ
ಕೃಷ್ಣನಿಂದ ನಿರ್ಮಿಸಲ್ಪಟ್ಟ ಕುದುರೆಯು ಒಂದು ದಿನದಲ್ಲಿ ಲಕ್ಷ ಯೋಜನ ಸಂಚರಿಸಲು ಸಮರ್ಥವಾಗಿತ್ತು.
ಪರಾಶರಾತ್ಮಜೋ
ಹರಿರ್ಹರಿಂ ಯದಾ ತ್ವದೀಕ್ಷಯತ್ ।
ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥
ಯಾವಾಗ ಪರಾಶರರ ಮಗನಾದ ವೇದವ್ಯಾಸರೂಪಿ ನಾರಾಯಣನು ಕೃಷ್ಣನನ್ನು ದೀಕ್ಷಿತನಾಗುವಂತೆ ಮಾಡಿದನೋ,(ವೇದವ್ಯಾಸರೇ ಶ್ರೀಕೃಷ್ಣನಿಗೆ ಪೌರೋಹಿತ್ಯ ಮಾಡಿದರು). ಆಗ
ಒಂದಿಷ್ಟು ಹುಲ್ಲನ್ನು ಹಿಡಿದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದ ಮತ್ತು ಅತ್ತನು ಕೂಡಾ.
[ಭಾಗವತದಲ್ಲಿ(೧೦.೧೦೦.೧೩) ಈ ಕುರಿತ ವಿವರಣೆ ಕಾಣಸಿಗುತ್ತದೆ:
‘ತೃಣಮೂಲಧರಃ ಕಶ್ಚಿದ್ ಬ್ರಾಹ್ಮಣೋsಭ್ಯೇತ್ಯ
ಸತ್ವರಃ । ಚುಕ್ರೋಶ ಆರ್ತ ಉದ್ಬಾಹುರ್ಯಜ್ಞವಾಟಮುಖೇ ಸ್ಥಿತಃ’]
ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।
ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥
‘ನನ್ನ ಮಕ್ಕಳೆಲ್ಲರೂ ಕೂಡಾ ಹುಟ್ಟಿದ ಕೂಡಲೇ
ಅದೃಶ್ಯರಾಗಿಬಿಡುತ್ತಾರೆ’ ಎಂದು ಆ ಬ್ರಾಹ್ಮಣ ಹೇಳಲ್ಪಡುತ್ತಿರಲು, ಅರ್ಜುನನು ಹೇಳಿದ: ‘ನಾನು ನಿನ್ನ
ಮಕ್ಕಳನ್ನು ರಕ್ಷಿಸುತ್ತೇನೆ’ ಎಂದು.
[ ‘ಜಾತೋಜಾತೋ ಮಹಾಬಾಹೋ ಪುತ್ರೋ ಮೇ ಹ್ರೀಯತೇsನಘ । ತ್ರಯೋ
ಹತಾಶ್ಚತುರ್ಥಂ ತ್ವಂ ಕೃಷ್ಣ ರಕ್ಷಿತುಮರ್ಹಸಿ’ – ನನ್ನ ಮಕ್ಕಳು ಹುಟ್ಟಿದ
ತಕ್ಷಣ ಕಾಣೆಯಾಗುತ್ತಿದ್ದಾರೆ, ಮೂರುಮಂದಿ ಸತ್ತು ಹೋಗಿದ್ದಾರೆ. ನಾಲ್ಕನೆಯವನನ್ನು ಓ ಕೃಷ್ಣಾ, ನೀನು
ರಕ್ಷಿಸಲು ತೊಡಗಬೇಕು’ ಎಂದು ಆ ಬ್ರಾಹ್ಮಣ ಬೇಡುವುದನ್ನು ಹರಿವಂಶದಲ್ಲಿ (ವಿಷ್ಣುಪರ್ವ ೧೧.೧೧) ವಿವರಿಸಿರುವುದನ್ನು ಕಾಣುತ್ತೇವೆ.]
No comments:
Post a Comment