ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 7, 2021

Mahabharata Tatparya Nirnaya Kannada 20: 238 - 245

             ದೈತ್ಯಾಶ್ಚ ನಾಗಾಶ್ಚ ಪಿಶಾಚಯಕ್ಷಾ ಹತಾಃ ಸರ್ವೇ ತದ್ವನಸ್ಥಾ ಹಿ ತಾಭ್ಯಾಮ್ ।

ಋತೇ ಚತುಷ್ಪಕ್ಷಿಣಶ್ಚಾಶ್ವಸೇನಂ ಮಯಂ ಚ ನಾನ್ಯತ್ ಕಿಞ್ಚಿದಾಸಾತ್ರ ಮುಕ್ತಮ್ ॥೨೦.೨೩೮॥

 

ಖಾಣ್ಡವವನದಲ್ಲಿ ಎಲ್ಲರೂ ಸುಟ್ಟುಹೋದರು. ಅಲ್ಲಿ ಅಡಗಿದ್ದ ದೈತ್ಯರು, ನಾಗರು, ಪಿಶಾಚಿಗಳು, ಯಕ್ಷರು, ಹೀಗೆ ಎಲ್ಲರೂ ಕೂಡಾ ಕೃಷ್ಣಾರ್ಜುನರಿಂದ ಸಾಯಿಸಲ್ಪಟ್ಟರು. ನಾಲ್ಕು ಪಕ್ಷಿಗಳು, ಅಶ್ವಸೇನ ಎನ್ನುವ ತಕ್ಷಕನ ಮಗ  ಮತ್ತು ದೈತ್ಯಶಿಲ್ಪಿ ಮಯ ಇವರನ್ನು ಬಿಟ್ಟರೆ ಉಳಿದ ಯಾವುದೇ ಪ್ರಾಣಿಯೂ ಅಲ್ಲಿ ಬದುಕುಳಿಯಲಿಲ್ಲ.

 

ಅಯಮಗ್ನೇ ಜರಿತೇತ್ಯಾದಿಮನ್ತ್ರೈಃ ಸ್ತುತ್ವಾ ವಹ್ನಿಂ ಪಕ್ಷಿಣೋ ನೋಪದಗ್ಧಾಃ ।

ಅಶ್ವಸೇನಃ ಪುತ್ರಕಸ್ತಕ್ಷಕಸ್ಯ ಮಾತ್ರಾ ಗ್ರಸ್ತಃ ಪ್ರಾತಿಲೋಮ್ಯೇನ ಕಣ್ಠೇ ॥೨೦.೨೩೯॥

 

ಅಯಮಗ್ನೇ ಜರಿತಾ (ಋಗ್ವೇದ ೧೦.೧೪೨. ೧-೮) ಇತ್ಯಾದಿ ಮಂತ್ರಗಳಿಂದ ಅಗ್ನಿಯ ಒಳಗಿರುವ ನಾರಾಯಣನನ್ನು ಸ್ತೋತ್ರಮಾಡಿದ ನಾಲ್ಕು ಪಕ್ಷಿಗಳು ಸುಡಲ್ಪಡಲಿಲ್ಲ. ತಕ್ಷಕನ ಮಗನಾಗಿರುವ ಅಶ್ವಸೇನನು ತಾಯಿಯಿಂದ ಪ್ರಾತಿಲೋಮ್ಯವಾಗಿ ನುಂಗಲ್ಪಟ್ಟು ಬದುಕುಳಿದನು (ಅಶ್ವಸೇನನನ್ನು ರಕ್ಷಿಸಲು ಅವನ ತಾಯಿ ಅವನನ್ನು ನುಂಗಿದಳು. ಆಗ ಅವನ ತಲೆ ಅವಳ ಬಾಲದಲ್ಲಿ, ಬಾಲ ಅವಳ ಬಾಯಿಯಲ್ಲಿ ಸೇರಿಕೊಂಡಿತು. ಹೀಗೆ ವ್ಯತ್ಯಸ್ತ್ಯವಾಗಿ ಕೊರಳಲ್ಲಿ ನುಂಗಲ್ಪಟ್ಟ ಅವನು ಬದುಕುಳಿದನು).   

 

ಛಿನ್ನೇsರ್ಜ್ಜುನೇನಾನ್ತರಿಕ್ಷೇ ಪತನ್ತ್ಯಾಸ್ತಸ್ಯಾಃ ಶಕ್ರೇಣಾವಿತಶ್ಛಿನ್ನಪುಚ್ಛಃ ।

ವಧಾನ್ಮಾತುಃ ಪುಚ್ಛಭಙ್ಗಾಚ್ಚ ರೋಷಾದ್ಧನ್ತುಂ ಪಾರ್ತ್ಥಂ ಕರ್ಣ್ಣತೂಣೀರಗೋsಭೂತ್ ॥೨೦.೨೪೦॥

 

ಆಕಾಶದಲ್ಲಿ ಹಾರುತ್ತಿರುವ ತಕ್ಷಕನ ಹೆಂಡತಿಯ ಕತ್ತು ಕತ್ತರಿಸಲ್ಪಡಲು, ಇಂದ್ರನಿಂದ ರಕ್ಷಿಸಲ್ಪಡುವವನಾಗಿ,  ಆದರೆ ಬಾಲವನ್ನು ಕಳೆದುಕೊಂಡವನಾಗಿ, ತಾಯಿಯ ಕೊಲೆ ಹಾಗೂ ತನ್ನ ಬಾಲ ಹೋಗಿದ್ದುದರಿಂದ ಸಿಟ್ಟುಗೊಂಡ ಅಶ್ವಸೇನ ಅರ್ಜುನನನ್ನು ಕೊಲ್ಲಲು ಕರ್ಣನ ಬತ್ತಳಿಕೆಯಲ್ಲಿ ಸೇರಿಕೊಂಡನು.

[ಮಹಾಭಾರತ :  ‘ತಕ್ಷಕಸ್ತು ನ ತತ್ರಾsಸಿನ್ನಾಗರಾಜೋ ಮಹಾಬಲಃ ।   ದಹ್ಯಮಾನೇ ವನೇ ತಸ್ಮಿನ್ ಕುರುಕ್ಷೇತ್ರಂ ಗತೋ ಹಿ ಸಃ ।  ಅಶ್ವಸೇನೋsಭವತ್  ತತ್ರ ತಕ್ಷಕಸ್ಯ  ಸುತೋ ಬಲಿ(ಆದಿಪರ್ವ ೨೫೩.೪-೫). ತಕ್ಷಕ ಆ ಸಂದರ್ಭದಲ್ಲಿ ಅಲ್ಲಿರಲಿಲ್ಲ, ಅವನು ಕುರುಕ್ಷೇತ್ರಕ್ಕೆ ಹೋಗಿದ್ದ. ಅಶ್ವಸೇನ ಎನ್ನುವ ತಕ್ಷಕನ ಮಗ ಅಲ್ಲಿದ್ದ.  ‘ ತಸ್ಮಿನ್ ವನೇ ದಹ್ಯಮಾನೇ ಷಡಗ್ನಿರ್ನ  ದದಾಹ ಚ ।  ಅಶ್ವಸೇನಂ ಮಯಂ ಚೈವ   ಚತುರಃ ಶಾರ್ಙ್ಗಕಾಂಸ್ತಥಾ’ (ಆದಿಪರ್ವ ೨೫೪.೪೭) ‘ಆ ಕಾಡು ಸುಡುತ್ತಿರಲು, ಅಶ್ವಸೇನ, ಮಯ, ಮತ್ತು ನಾಲ್ಕು ಶಾರ್ಙ್ಗಕಪಕ್ಷಿಗಳು ಮಾತ್ರ  ಸಾಯಲಿಲ್ಲ. ಈ ಶಾರ್ಙ್ಗಕ ಪಕ್ಷಿಗಳು ಜ್ಞಾನಿಗಳು’.

ಪಕ್ಷಿಗಳಿಗೆ ವಿದ್ಯೆಯಲ್ಲಿ ಅಧಿಕಾರವಿದೆಯೇ ಎನ್ನುವುದನ್ನು ವಿವರಿಸುತ್ತಾ ಆಚಾರ್ಯರು ಬ್ರಹ್ಮಸೂತ್ರಭಾಷ್ಯದಲ್ಲಿ ಮೇಲಿನ ಮಾತನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯರಿಗೆ ಮಾತ್ರ ವಿದ್ಯೆಯಲ್ಲಿ ಅಧಿಕಾರವೇ ಎಂದರೆ  ಅದಕ್ಕೆ ವೇದವ್ಯಾಸರ ಉತ್ತರ- ‘ಸಾಮಾನ್ಯವಾಗಿ ಮನುಷ್ಯರಿಗೆ.  ಆದರೆ ಯಾರಿಗೂ  ಕೂಡಾ ಅಧಿಕಾರ ಇರಬಹುದು’. ಅಂದರೆ ಮನುಷ್ಯರಿಗಿಂತ ಹೊರತಾಗಿಯೂ ಕೂಡಾ ಅಧಿಕಾರ ಇದೆ ಎಂದರ್ಥ. ಇಲ್ಲಿ ಶಾರ್ಙ್ಗಕಪಕ್ಷಿಗಳು ಜ್ಞಾನಿಗಳು. ಅವು ವೇದವನ್ನು ಕಂಡವು. ‘ಅಯಮಗ್ನೇ ಜರಿತಾ... ಎಂದು ಋಗ್ವೇದದಲ್ಲಿ  ಈ ಪಕ್ಷಿಗಳು ಕಂಡ ಮಂತ್ರವಿದೆ. ಹಾಗಾಗಿ ಕೇವಲ ಮನುಷ್ಯರಿಗೆ ಮಾತ್ರ ವೇದದಲ್ಲಿ ಅಧಿಕಾರ ಅಲ್ಲ].

 

[ಮಯನ ಕುರಿತು ಹೇಳುತ್ತಾರೆ:]

ಮಯಃ ಕೃಷ್ಣೇನಾsತ್ತಚಕ್ರೇಣ ದೃಷ್ಟೋ ಯಯೌ ಪಾರ್ತ್ಥಂ ಶರಣಂ ಜೀವನಾರ್ಥೀ ।

ಪಾರ್ತ್ಥಾರ್ತ್ಥಮೇನಂ ನ ಜಘಾನ ಕೃಷ್ಣಃ ಸ್ವಭಕ್ತಶ್ಚೇತ್ಯತಿಮಾಯಂ ಪರೇಶಃ ॥೨೦.೨೪೧

 

ಮಯನು ಚಕ್ರವನ್ನು ಹಿಡಿದಿರುವ ಕೃಷ್ಣನಿಂದ ನೋಡಲ್ಪಟ್ಟವನಾಗಿ, ಜೀವನ ಬೇಕು ಎನ್ನುವ ಬಯಕೆಯಿಂದ ಅರ್ಜುನನನ್ನು ಶರಣು ಹೊಂದಿದ. ಸರ್ವಸಮರ್ಥನಾದ ಕೃಷ್ಣನು ಅರ್ಜುನನಿಗಾಗಿ ಮತ್ತು ತನ್ನ ಭಕ್ತ ಎನ್ನುವ ಕಾರಣಕ್ಕೆ ಕಪಟವಿಲ್ಲದ ಮಯನನ್ನು ಕೊಲ್ಲಲಿಲ್ಲ.

 

[ಮಯ ನೇರವಾಗಿ  ಕೃಷ್ಣನಲ್ಲಿ ಶರಣುಹೊಂದಬಹುದಿತ್ತು. ಅರ್ಜುನನನ್ನು ಶರಣುಹೊಂದಿ, ಅರ್ಜುನನ ಮೂಲಕ ಕೃಷ್ಣನಿಂದ ಏಕೆ ಜೀವ ಉಳಿಸಿಕೊಂಡ ಎನ್ನುವುದನ್ನು ವಿವರಿಸುತ್ತಾರೆ:]

ದೇವಾರಿರಿತ್ಯೇವ ಮಯಿ ಪ್ರಕೋಪಃ ಕೃಷ್ಣಸ್ಯ ತೇನಾಹಮಿಮಂ ಪುರನ್ದರಮ್ ।

ಪಾರ್ತ್ಥಾತ್ಮಕಂ ಶರಣಂ ಯಾಮಿ ತೇನ ಕೃಷ್ಣಪ್ರಿಯಃ ಸ್ಯಾಮಿತಿ ತಸ್ಯ ಬುದ್ಧಿಃ ೨೦.೨೪೨

 

‘ದೇವತೆಗಳ ಶತ್ರು ಎಂದು ನನ್ನಲ್ಲಿ ಕೃಷ್ಣನಿಗೆ ಕೋಪವೇ ಇದೆ. ಆ ಕಾರಣದಿಂದ ನಾನು ಈ ಅರ್ಜುನನ ರೂಪದಲ್ಲಿರುವ ಇಂದ್ರನನ್ನೇ ರಕ್ಷಣೆಗಾಗಿ ಹೊಂದುತ್ತೇನೆ. ಅದರಿಂದ ಕೃಷ್ಣನಿಗೆ ಪ್ರಿಯನಾಗಬಹುದು’  ಎಂದುಕೊಡ ಮಯ  ಅರ್ಜುನನಲ್ಲಿ ಶರಣುಹೊಂದಿದ.

[ಮಹಾಭಾರತ ಆದಿಪರ್ವ: ‘ತಥಾsಸುರಂ ಮಯಂ ನಾಮ ತಕ್ಷಕಸ್ಯ ನಿವೇಶನಾತ್ । ವಿಪ್ರದ್ರವನ್ತಂ ಸಹಸಾ ದದರ್ಶ ಮಧುಸೂದನಃ(೨೫೪.೩) ‘ ‘ಜಿಘಾಂಸುರ್ವಾಸುದೇವಸ್ತಂ ಚಕ್ರಮುಧ್ಯಮ್ಯ ಧಿಷ್ಠಿತಃ । ಸ ಚಕ್ರಮುಧ್ಯತಂ ದೃಷ್ಟ್ವಾ  ದಿಧಕ್ಷನ್ತಂ ಚ ಪಾವಕಮ್ । ಅಭಿಧಾಯಾರ್ಜುನೇತ್ಯೇವಂ ಮಯಸ್ತ್ರಾಹೀತಿ ಚಾಬ್ರವೀತ್(೪೨).   ಕೃಷ್ಣ ಅವನನ್ನು ಕೊಲ್ಲಲು ಹೋದ ಎಂದು ಇಲ್ಲಿ ಹೇಳಿರುವುದು ದರ್ಶನ ಭಾಷೆ. ‘ಕೃಷ್ಣ ನನ್ನನ್ನು ಕೊಲ್ಲಲಿಕ್ಕೆ ಬರುತ್ತಿದ್ದಾನೆ ಎಂದು ಮಯ ತಿಳಿದುಕೊಂಡ. ಅವನ ಮಾನಸಿಕ ಪರಿಭಾಷೆಯನ್ನು ವೇದವ್ಯಾಸರು ‘ಜಿಘಾಂಸುರ್ವಾಸುದೇವಃ’ ಎಂದು ಹೇಳಿರುವುದೇ ಹೊರತು, ಅವನು ನನ್ನ ಭಕ್ತ ಎನ್ನುವುದು ಕೃಷ್ಣನಿಗೆ ಗೊತ್ತಿತ್ತು. ‘ತಂ ಪಾರ್ಥನಾಭಯೇ ದತ್ತೇ ನಮುಚೇರ್ಭ್ರಾತರಂ ಮಯಮ್ ।  ನ ಹನ್ತುಮೈಚ್ಛದ್  ದಾಶಾರ್ಹಃ ಪಾವಕೋ ನ ದದಾಹ ಚ । ತದ್ವನಂ ಪಾವಕೋ ಧೀಮಾನ್ ದಿನಾನಿ ದಶ ಪಞ್ಚ ಚ । ದದಾಹ ಕೃಷ್ಣಪಾರ್ಥಾಭ್ಯಾಂ ರಕ್ಷಿತಃ ಪಾಕಶಾಸನಾತ್’(೪೫-೪೬) ಅರ್ಜುನನಿಂದ ಅಭಯ ಕೊಡಲ್ಪಡಲು, ಮಯನನ್ನು ಕೊಲ್ಲಲು ಕೃಷ್ಣ ಬಯಸಲಿಲ್ಲ. ಹದಿನೈದು ದಿನಗಳ ಕಾಲ ನಿರಂತರವಾಗಿ ಖಾಣ್ಡವವನ್ನು ಸುಟ್ಟ ಅಗ್ನಿ ಮಯನನ್ನು ಸುಡಲು ಬಯಸಲಿಲ್ಲ].

 

ಪ್ರಾಣೋಪಕೃತ್  ಪ್ರತ್ಯುಪಕಾರಮಾಶು ಕಿಂ ತೇ ಕರೋಮೀತಿ ಸ ಪಾರ್ತ್ಥಮಾಹ ।

ಕೃಷ್ಣಪ್ರಸಾದಾದ್ಧಿ ಭವಾನ್ ವಿಮುಕ್ತಸ್ತಸ್ಮೈ ಕರೋತ್ವಿತ್ಯವದತ್ ಸ ಪಾರ್ತ್ಥಃ ॥೨೦.೨೪೩

 

‘ಪ್ರಾಣವನ್ನು ಉಳಿಸಿದ್ದೀಯ . ಅದರಿಂದ ನಿನಗೆ ಯಾವ ಪ್ರತ್ಯುಪಕಾರವನ್ನು ಮಾಡಲಿ’ ಎಂದು ಮಯನು ಅರ್ಜುನನನ್ನು ಕುರಿತು ಕೇಳಿದ. ಅರ್ಜುನನಾದರೋ – ‘ಎಲೈ ಮಯನೇ, ಕೃಷ್ಣನ ಅನುಗ್ರಹದಿಂದ ನೀನು ಬಿಡುಗಡೆಯಾದೆಯಷ್ಟೇ. ಹಾಗಾಗಿ ಕೃಷ್ಣ ಏನು ಹೇಳುತ್ತಾನೋ ಅದನ್ನು ಕೃಷ್ಣನಿಗಾಗಿ ಮಾಡು. (ನಿನಗೆ ಜೀವದಾನ ಮಾಡಿದುದು ಶ್ರೀಕೃಷ್ಣನೇ ಹೊರತು ನಾನಲ್ಲ)’ ಎಂದು ಹೇಳಿದ.

[ಮಹಾಭಾರತ ಸಭಾಪರ್ವದಲ್ಲಿ(೧.೧೯) ಈ ಘಟನೆಯನ್ನು ವಿವರಿಸಲಾಗಿದೆ: ‘ಕೃಷ್ಣಾಯ ಕ್ರಿಯತಾಂ ಕಿಞ್ಚಿತ್ ತಥಾ ಪ್ರತಿಕೃತಂ ಮಯಿ ಮಾಡುವುದಿದ್ದರೆ ಕೃಷ್ಣನಿಗೆ ಮಾಡು. ಅದು ಅವನಿಗೆ ಸ್ವಲ್ಪವೇ, ಆದರೂ ಮಾಡು. ಅವನಿಗೆ ಮಾಡಿದರೆ ಅದು ನನಗೆ ಮಾಡಿದ ಹಾಗೇ].

 

ಕೃಷ್ಣೋsಪಿ ರಾಜ್ಞೋsತಿವಿಚಿತ್ರರೂಪಸಭಾಕೃತಾವದಿಶತ್ ತಾಂ ಸ ಚಕ್ರೇ ।

ಅನಿರ್ಗ್ಗಮಂ ಪ್ರಾಣಿನಾಮರ್ತ್ಥಿತೌ ತೌ ಹುತಾಶನೇನಾಥ ವಿಧಾಯ ಜಗ್ಮತುಃ ॥೨೦.೨೪೪॥

 

‘ಯುದಿಷ್ಠಿರನಿಗಾಗಿ ಅತ್ಯಂತ ವಿಚಿತ್ರವಾದ ಸಭೆಯನ್ನು ಮಾಡು’ ಎಂದು ಶ್ರೀಕೃಷ್ಣ ಮಯನಿಗೆ ಆಜ್ಞೆ ಮಾಡಿದ. ಮಯನಾದರೋ, ಆ ವಿಚಿತ್ರವಾದ ಸಭೆಯನ್ನು ನಿರ್ಮಿಸಿದ. ತದನಂತರ ಅಗ್ನಿಯಿಂದ ಉಳಿದ ಪ್ರಾಣಿಗಳ ಹೊರ ಬರುವಿಕೆ ಆಗಬಾರದು ಎಂದು ಪ್ರಾರ್ಥಿತರಾಗಿ, ಹಾಗೆಯೇ ಮಾಡಿದ ಕೃಷ್ಣಾರ್ಜುನರು ಅಲ್ಲಿಂದ  ಹೊರಟರು.

[ಸಭಾಪರ್ವ: ಯಾಂ ಕ್ರಿಯಾಂ ನಾನುಕುರ್ಯುಸ್ತೇ ಮಾನವಾಃ ಪ್ರೇಕ್ಷ್ಯ ವಿಸ್ಮಿತಾಃ । ಮನುಷ್ಯಲೋಕೇ ಸಕಲೇ ತಾದೃಶೀಮ್ ಕುರು ವೈ ಸಭಾಮ್’ ಯಾವ ನಿನ್ನ ಸಭೆಯ ಮಾಡುವಿಕೆಯನ್ನು ಮನುಷ್ಯರ್ಯಾರೂ ಕೂಡಾ ಅನುಕರಣೆ ಮಾಡಲಾರರೋ, ಆ ರೀತಿಯ ಸಭೆಯನ್ನು ಧರ್ಮರಾಯನಿಗೆ ನಿರ್ಮಿಸಿಕೊಡು ಎಂದು ಕೃಷ್ಣ ಹೇಳಿದ].  

 

ದೃಷ್ಟ್ವಾ ಚ ತೌ ಪಾಣ್ಡವಾಃ ಸರ್ವ ಏವ ಮಹಾಮುದಂ ಪ್ರಾಪುರೇತನ್ನಿಶಮ್ಯ ।

ಕೃಷ್ಣೋsಪಿ ಪಾರ್ತ್ಥೈರ್ಮ್ಮುಮುದೇsನನ್ತಶಕ್ತಿಸುಖಜ್ಞಾನಪ್ರಾಭವೌದಾರ್ಯ್ಯವೀರ್ಯ್ಯಃ ॥೨೦.೨೪೫॥

 

ಈರೀತಿಯಾಗಿ ಇಂದ್ರನನ್ನು ಗೆದ್ದು, ಖಾಣ್ಡವವನವನ್ನು ಸುಟ್ಟು, ಮಯ ಮೊದಲಾದವರನ್ನು  ಉಳಿಸಿದ ಈ ಎಲ್ಲವನ್ನೂ ಕೇಳಿದ ಸಮಸ್ತ ಪಾಂಡವರೂ ಕೂಡಾ ಅತ್ಯಂತ ಸಂತೋಷವನ್ನು ಹೊಂದಿದರು. ಎಣಿಯಿರದ ಶಕ್ತಿ, ಸುಖ, ಜ್ಞಾನ, ಒಡೆತನ, ಔದಾರ್ಯ, ವೀರ್ಯ ಇವುಗಳಿಂದ ಕೂಡಿದವನಾದ ಶ್ರೀಕೃಷ್ಣನೂ ಕೂಡಾ  ಪಾಂಡವರೊಂದಿಗೆ ಕೂಡಿಕೊಂಡು ಸಂತೋಷಪಟ್ಟ.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಖಾಣ್ಡವದಾಹೋ ನಾಮ    ವಿಂಶೋsಧ್ಯಾಯಃ ॥

  

******************






No comments:

Post a Comment