ವಿಶೇಷತೋ ಧ್ವಜಸಂಸ್ಥೇ
ಹನೂಮತ್ಯಜೇಯತಾ ಸ್ಯಾಜ್ಜಯರೂಪೋ ಯತೋsಸೌ ।
ಸರ್ವಂ ಚ ತದ್
ದಿವ್ಯಮಭೇದ್ಯಮೇವ ವಿದ್ಯುತ್ಪ್ರಭಾ ಜ್ಯಾ ಚ ಗಾಣ್ಡೀವಸಂಸ್ಥಾ ॥೨೦.೨೨೮॥
ಯಾವ ಕಾರಣದಿಂದ ಎಲ್ಲರನ್ನೂ ಗೆದೆಯಬಲ್ಲ ಆ ಮುಖ್ಯಪ್ರಾಣನು ಜಯರೂಪನೇ ಆಗಿದ್ದಾನೋ, ಅಂತಹ ಹನುಮಂತನು ವಿಶೇಷವಾಗಿ ಧ್ವಜದಲ್ಲಿ ಇರತ್ತಿರಲು, ಈ
ರಥಿಕನನ್ನು ಇನ್ನೊಬ್ಬರು ಜಯಿಸಲು ಅಶಕ್ಯರು. ಮಿಂಚಿನಂತೆ ಕಾಂತಿಯುಳ್ಳ ನೇಣಿರುವ ಗಾಣ್ಡೀವ ಹಾಗೂ ಸಮಸ್ತವೂ
ಅಲೌಕಿಕವಾದದ್ದು ಹಾಗೂ ಅಭೇದ್ಯವಾದುದು.
[ಮೇಲಿನ ಮಾತಿಗೆ ವಿರೋಧವೆಂಬಂತೆ ಮಹಾಭಾರತದಲ್ಲಿ ಅಶ್ವತ್ಥಾಮ ಗಾಣ್ಡೀವವನ್ನು
ಭೇದಿಸಿದ ಎಂದು ಹೇಳಿದಂತೆ ಕಾಣುತ್ತೇದೆ. ‘ಅಥಾನ್ಯಾ ಜ್ಯಾssಸೀತ್ ತಯಾ ಗಾಣ್ಡಿವಂ ಸೋsಪ್ಯಯುಙ್ಕ್ತ’ ಆದರೆ ಅಲ್ಲಿ
ಮುಂದೆ ‘ಅಥಾನ್ಯಯಾ ಜ್ಯಯಾ ಪುನರ್ಗಾಣ್ಡಿವಂ ಸೋsಪ್ಯಯುಙ್ಕ್ತ’
ಎಂದು ಹೇಳಬೇಕಿತ್ತು. ಆದರೆ ಅಲ್ಲಿ ಹಾಗೆ ಹೇಳದೇ ‘ಸಂಧಾಯ
ಚಾಪರಾಮ್’ ಎಂದು ಹೇಳಿದ್ದಾರೆ. ಅಂದರೆ ‘ಇನ್ನೊಮ್ಮೆ ನೇಣನ್ನು ಕಟ್ಟಿದ’ ಎಂದು ಹೇಳಿದ್ದಾರೆ.
ಹೀಗಾಗಿ ಅಶ್ವತ್ಥಾಮ ಗಾಣ್ಡೀವ ಬಿಲ್ಲಿನ ನೇಣಿನ ಸಂಪರ್ಕವನ್ನಷ್ಟೇ ಕತ್ತರಿಸಿದ ಎನ್ನುವುದು ತಿಳಿಯುತ್ತದೆ.
ಹೀಗಾಗಿ ಗಾಣ್ಡೀವ ಅಭೇದ್ಯ ಎನ್ನುವ ಮಾತಿಗೆ ಇದು ವಿರೋಧವನ್ನು ಹೇಳುವುದಿಲ್ಲ.]
ಗಾಣ್ಡೀವಮಪ್ಯಾಸ
ಕೃಷ್ಣಪ್ರಸಾದಾಚ್ಛಕ್ಯಂ ಧರ್ತ್ತುಂ ಪಾಣ್ಡವಸ್ಯಾಪ್ಯಧಾರ್ಯ್ಯಮ್ ।
ದೇವೈಶ್ಚ
ತೈರ್ಬ್ರಹ್ಮವರಾದ್ ಧೃತಂ ತದ್ ಬ್ರಹ್ಮೈವ ಸಾಕ್ಷಾತ್ ಪ್ರಭುರಸ್ಯ ಧಾರಣೇ ॥೨೦.೨೨೯॥
ಬ್ರಹ್ಮನನ್ನು ಹೊರತುಪಡಿಸಿ ಉಳಿದವರಿಗೆ ಗಾಣ್ಡೀವವನ್ನು ಧರಿಸಲು ಸಾಧ್ಯವಿಲ್ಲ. ಆದರೆ ಕೃಷ್ಣನ
ಅನುಗ್ರಹದಿಂದ ಅರ್ಜುನನಿಗೆ ಗಾಣ್ಡೀವ ಧರಿಸಲು ಸಾಧ್ಯವಾಯಿತು. ಇತರ ದೇವತೆಗಳಿಗೂ ಬ್ರಹ್ಮನ ವರದಿಂದಲೇ
ಗಾಣ್ಡೀವ ಧರಿಸಲು ಸಾಧ್ಯವಾಗಿರುವುದು.
ಇನ್ದ್ರಸ್ಯ ದತ್ತಶ್ಚ
ವರಃ ಸ್ವಯಮ್ಭುವಾ ತೇನಾಪಿ ಪಾರ್ತ್ಥಸ್ಯ ಬಭೂವ ಧಾರ್ಯ್ಯಮ್ ।
ಇನ್ದ್ರೋ ಹ್ಯಸೌ
ಫಲ್ಗುನತ್ವೇನ ಜಾತಸ್ತತತಃ ಸೋsಸ್ತ್ರೈಃ ಶರಶಾಲಾಂ ಚಕಾರ ॥೨೦.೨೩೦॥
ಗಾಣ್ಡೀವ ಧರಿಸಲು ಇತರ ದೇವತೆಗಳಂತೆ ಇಂದ್ರನಿಗೂ ಬ್ರಹ್ಮದೇವರ ವರವಿತ್ತು.
ಅದರಿಂದಲೂ ಕೂಡಾ ಅರ್ಜುನನಾಗಿ ಹುಟ್ಟಿದ ಇಂದ್ರನಿಗೆ ಅದನ್ನು ಧರಿಸಲು
ಸಾಧ್ಯವಾಯಿತು.
ತದನಂತರ ಅಸ್ತ್ರಗಳಿಂದ ಅರ್ಜುನ ಖಾಣ್ಡವವನಕ್ಕೆ ಆವರಣವಾಗಿ ಶರಶಾಲೆಯನ್ನು
ನಿರ್ಮಾಣ ಮಾಡಿದ.
ಸ ಯೋಜನದ್ವಾದಶಕಾಭಿವಿಸ್ತೃತಂ
ಪುರಂ ಚಕಾರಾsಶು ಪುರನ್ದರಾತ್ಮಜಃ ।
ಹುತಾಶನೋsಪ್ಯಾಶು ವನಂ ಪ್ರಗೃಹ್ಯ
ಪ್ರಭಕ್ಷಯಾಮಾಸ ಸಮುದ್ಧತಾರ್ಚ್ಚಿಃ ॥೨೦.೨೩೧॥
ಇಂದ್ರನ ಮಗನಾಗಿರುವ ಅರ್ಜುನನು ಹನ್ನೆರಡು ಯೋಜನ
ವಿಸ್ತೃತವಾಗಿರುವ ಖಾಣ್ಡವವನಕ್ಕೆ ಶರಶಾಲೆಯನ್ನು ನಿರ್ಮಿಸುತ್ತಿದ್ದಂತೇ, ಅಗ್ನಿ ಜಾಜ್ವಲ್ಯಮಾನನಾಗಿ ಕಾಡನ್ನು ತಿನ್ನಲಾರಂಭಿಸಿದ.
ಪ್ರಭಕ್ಷ್ಯಮಾಣಂ ನಿಜಕಕ್ಷಮೀಕ್ಷ್ಯ
ಸನ್ಧುಕ್ಷಯಾಮಾಸ ತದಾssಶುಶುಕ್ಷಣಿಮ್ ।
ಅಕ್ಷೋಪಮಾಭಿರ್ಬಹುಲೇಕ್ಷಣೋsಮ್ಭಸಾಂ
ಧಾರಾಭಿರಾಕ್ಷುಬ್ಧಮನಾಃ ಕ್ಷಯಾಯ ॥೨೦.೨೩೨॥
ತಿನ್ನಲ್ಪಡುತ್ತಿರುವ ತನ್ನ ವನವನ್ನು ಕಂಡು, ಬಹಳ
ಕಣ್ಣುಗಳುಳ್ಳ ಇಂದ್ರನು ಅಗ್ನಿಯನ್ನು ಬಹಳ ದೊಡ್ಡದಾಗಿರುವ ನೀರಿನ ಧಾರೆಗಳಿಂದ ಶಮನಮಾಡಲು ಬಯಸಿದ.
[ಮಹಾಭಾರತದಲ್ಲಿ(ಆದಿಪರ್ವ ೨೫೨.೧೯) ಈಕುರಿತ
ವಿವರವನ್ನು ಕಾಣಬಹುದು. ‘ತತೋsಕ್ಷಮಾತ್ರಾ ವ್ಯಸೃಜನ್ ಧಾರಾಃ ಶತಸಹಸ್ರಶಃ । ಚೋದಿತಾ ದೇವರಾಜೇನ ಜಲದಾಃ ಖಾಣ್ಡವಂ ಪ್ರತಿ’ ಒಂದು ಒನಕೆಯಷ್ಟು ದಪ್ಪನಾದ ಹನಿಗಳಿಂದ ಕೂಡಿದ ಧಾರಾಕಾರ ಮಳೆಯನ್ನು
ಇಂದ್ರ ಸುರಿಸಿದ.
ಇಲ್ಲಿ ಆಚಾರ್ಯರು ಲಾಟಾನುಪ್ರಾಸ ಪ್ರಯೋಗ ಮಾಡಿರುವುದನ್ನು
ಕಾಣುತ್ತೇವೆ. ಜೊತೆಗೆ ಇಲ್ಲಿ ಒಂಬತ್ತು ‘ಕ್ಷ-ಕಾರ’ ಪ್ರಯೋಗವಾಗಿರುವುದನ್ನು
ಓದುಗರು ಗಮನಿಸಬೇಕು. ‘ಕ್ಷಕಾರೋ ನೃಸಿಂಹವಚನಃ’.
ಆ ನರಸಿಂಹನ ಆವೇಶ ಆಗ ಅಗ್ನಿಯಲ್ಲಿತ್ತು. ಆದ್ದರಿಂದ ಅವನು ಎಲ್ಲವನ್ನೂ ನುಂಗಲು
ಸಾಧ್ಯವಾಯಿತು. ಅಗ್ನಿಯಲ್ಲಿರುವ ನರಸಿಂಹನೇ ಆ ಕಾಡನ್ನು ನಾಶ ಮಾಡಿದ ಎನ್ನುವ ಸೂಕ್ಷ್ಮ ಈ
ಮಂತ್ರದಲ್ಲಡಗಿದೆ. ಇದೇ ರೀತಿಯ ಪ್ರಯೋಗವನ್ನು ಆಚಾರ್ಯರು ಅಣು-ವ್ಯಾಖ್ಯಾನದಲ್ಲಿ ಬಳಸಿರುವುದನ್ನು
ಕಾಣುತ್ತೇವೆ- ‘ಪ್ರತ್ಯಕ್ಷೇಕ್ಷಾಕ್ಷಮಃ ಸಾಕ್ಷಾತ್ ಕಂ ಪಕ್ಷಮವಲಮ್ಬತೇ । ತಸ್ಮಾದಕ್ಷಮಪಕ್ಷತ್ವಾನ್ಮೋಕ್ಷಶಾಸ್ತ್ರೇsಭ್ಯುಪೇಕ್ಷಿತಃ’ ನವವಿಧವಾದ ಭಕ್ತಿ, ನವವಿಧವಾಗಿರುವ ದ್ವೇಷ ಎರಡನ್ನೂ ಕೂಡಾ ಗಮನಿಸಿ, ಅದಕ್ಕೆ ಅನುಕೂಲವಾಗಿರುವ ಫಲವನ್ನು ನರಸಿಂಹ ಆಯಾ ಪಕ್ಷಗಳಿಗೆ ಕೊಡುತ್ತಾನೆ ಎನ್ನುವುದು
ಅಣುವ್ಯಾಖ್ಯಾನದಲ್ಲಿ ಸೂಚಿತವಾದ ಅರ್ಥ. ಅದೇ ರೀತಿ ಇಲ್ಲಿಯೂ ಕೂಡಾ ಅಂತಹುದೇ ಅರ್ಥವನ್ನು
ಮಾಡಬೇಕು ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ. ಖಾಣ್ಡವವನದಲ್ಲಿ ದೈತ್ಯರು, ನಾಗರು, ಪಿಶಾಚಿಗಳು, ಯಕ್ಷರೇ ಮೊದಲಾದ ನವ ವಿಧದ ಜೀವಸಂಕುಲಗಳಿದ್ದವು.
ಅವರೊಬ್ಬರನ್ನೂ ಬಿಡದೆ ಅಗ್ನಿ ಸುಟ್ಟಿದ್ದಾನೆ ಎಂದು ಹೇಳುವುದಕ್ಕೆ ಇಲ್ಲಿ ಒಂಬತ್ತು ಕ್ಷ-ಕಾರ
ಪ್ರಯೋಗ ಮಾಡಲಾಗಿದೆ].
No comments:
Post a Comment