ನ
ಕೃಷ್ಣರಾಮಕಾರ್ಷ್ಣಿಭಿಃ ಸುತಾ ನು ಮೇsತ್ರ ಪಾಲಿತಾಃ ।
ಕ್ವ ತೇsತ್ರ ಶಕ್ತಿರಿತ್ಯಮುಂ ಜಗಾದ ಸೋsರ್ಜ್ಜುನಮ್ ದ್ವಿಜಃ ॥೨೧.೧೭॥
ಯಾವಾಗ ಅರ್ಜುನ ತಾನು ರಕ್ಷಿಸುತ್ತೇನೆಂದು ಹೇಳಿದನೋ, ಆಗ ಆ
ಬ್ರಾಹ್ಮಣನು ಅವನನ್ನು ಕುರಿತು: ‘ಕೃಷ್ಣನಿಂದಲೂ, ಬಲರಾಮನಿಂದಲೂ, ಪ್ರದ್ಯುಮ್ನರಿಂದಲೂ ನನ್ನ
ಮಕ್ಕಳು ರಕ್ಷಿಸಲ್ಪಡಲಿಲ್ಲ(ರಕ್ಷಿಸುತ್ತೇವೆ ಎಂದು ಅವರು ಹೇಳಿಲ್ಲ), ಹೀಗಿರುವಾಗ ನಿನಗೆ ಈ
ವಿಚಾರದಲ್ಲಿ ಎಲ್ಲಿದೆ ಶಕ್ತಿ’ ಎಂದು ಕೇಳಿದ.
ತದಾ ಜಗಾದ ಫಲ್ಗುನೋsಸುರೈರ್ವಿದೂಷಿತಾತ್ಮನಾ ।
ನ ವಿಪ್ರ ತಾದೃಶೋsಸ್ಮ್ಯಹಂ ಯಥೈವ ಕೇಶವಾದಯಃ ॥೨೧.೧೮॥
ಆಗ ಅರ್ಜುನನು ಅಸುರರಿಂದ ಕದಡಿದ ಮನಸ್ಸುಳ್ಳವನಾಗಿ(ಅಸುರಾವೇಶದಿಂದ)
ಹೇಳುತ್ತಾನೆ: ‘ಹೇ ಬ್ರಾಹ್ಮಣ, ನಾನು ಕೃಷ್ಣ ಮೊದಲಾದವರಂತಲ್ಲ’ ಎಂದು.
ಮಯಾ ಜಿತಾ ಹಿ ಖಾಣ್ಡವೇ
ಸುರಾಸ್ತಥಾsಸುರಾನಹಮ್ ।
ನಿವಾತವರ್ಮ್ಮನಾಮಕಾನ್ ವಿಜೇಷ್ಯ ಉತ್ತರತ್ರ ಹಿ ॥೨೧.೧೯॥
‘ನನ್ನಿಂದ ಖಾಣ್ಡವದಾಹ ಪ್ರಸಂಗದಲ್ಲಿ ಎಲ್ಲಾ
ದೇವತೆಗಳೂ ಗೆಲ್ಲಲ್ಪಟ್ಟಿದ್ದಾರೆ. ಅದೇ ರೀತಿ ಮುಂದೆ ನಿವಾತವರ್ಮ ಹೆಸರಿನವರನ್ನೂ (ನಿವಾತಕವಚ ಎನ್ನುವ ಹೆಸರಿನ ದೈತ್ಯರನ್ನೂ) ನಾನು
ಗೆಲ್ಲುತ್ತೇನೆ’
[ಭಾಗವತದಲ್ಲಿ ಅರ್ಜುನನ ಮಾತು ‘ಈಗಾಗಲೇ ಗೆದ್ದಿದ್ದೇನೆ’ ಎಂದು
ಹೇಳಿದಂತೆ ಕಾಣುತ್ತದೆ. ಆದರೆ ಮುಂದೆ ನಡೆಯುವುದು ನಿಶ್ಚಿತವಾಗಿದ್ದರೆ ಅದನ್ನು ‘ಭೂತಕಾಲದಲ್ಲೇ
ಆಗಿ ಹೋಗಿದೆ’ ಎಂಬಂತೆ ಹೇಳುವುದು ಪುರಾಣದ ಪರಿಭಾಷೆ. ‘ ನಾಹಂ ಸಙ್ಕರ್ಷಣೋ`
ಬ್ರಹ್ಮನ್ ನ ಕೃಷ್ಣಃ ಕಾರ್ಷ್ಣಿರೇವ ಚ । ಅಹಂ ಧನಞ್ಜಯೋ ನಾಮ ಗಾಣ್ಡೀವಂ ಯಸ್ಯ ಕಾರ್ಮುಕಮ್’ (ಭಾಗವತ ೧೦.೧೦೦.೨೭) ‘ನಿವಾತಕವಚಾಶ್ಚೈವ ವಾಸವೇನಾಪಿ ದುರ್ಜಯಾಃ । ಮಯೈವ ನಿಹತಾಃ ಸಙ್ಖೇ ಹಿರಣ್ಯಪುರವಾಸಿನಃ’ (೧೦.೧೦೦.೩೩) ಇಲ್ಲಿ ‘ನಿಹತಾಃ’ ಎನ್ನುವುದು ಖಂಡಿತ ಕೊಲ್ಲಲ್ಪಡುತ್ತಾರೆ ಎನ್ನುವ ಅಭಿಪ್ರಾಯ ಅಷ್ಟೇ.
ಆದರೆ ಈ ರೀತಿ ವಿಶ್ಲೇಷಣೆ ಮಾಡಿದಾಗ ‘ಈ ವಿಷಯ ಅರ್ಜುನನಿಗೆ ನಿಶ್ಚಿತವಾಗಿ ಹೇಗೆ ಗೊತ್ತಿತ್ತು’
ಎನ್ನುವ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಮಹಾಭಾರತದಲ್ಲೇ(ಆದಿಪರ್ವ-೧೩೨.೧೨) ಕಾಣಸಿಗುತ್ತದೆ:
‘ಸೂತಕೇ ವರ್ತಮಾನಾಂ ತಾಂ ವಾಗುವಾಚಾಶರೀರಿಣೀ’
ಕುಂತಿಗೆ ಅಶರೀರವಾಣಿಯಿಂದ ಇದೆಲ್ಲವೂ ಮೊದಲೇ ತಿಳಿದಿತ್ತು. ‘ಏತಸ್ಯ ಭುಜವೀರ್ಯೇಣ ಖಾಣ್ಡವೇ
ಹವ್ಯವಾಹನಃ । ಮೇದಸಾ ಸರ್ವಭೂತಾನಾಂ ತೃಪ್ತಿಂ
ಯಾಸ್ಯತಿ ವೈ ಪರಾಮ್’ (೨೩) ‘ನಿವಾತಕವಚಾ ನಾಮ ದೈತ್ಯಾ ವಿಬುಧವಿದ್ವಿಷಃ । ಶಕ್ರಾಜ್ಞಯಾ
ಮಹಾಬಾಹುಸ್ತಾನ್ ವಧಿಷ್ಯತಿ ತೇ ಸುತಃ’ (೨೭). ಅಶರೀರವಾಣಿ ಹೇಳಿರುವುದನ್ನು ಕುಂತಿ ಅರ್ಜುನನಿಗೆ ಹೇಳಿದ್ದಳು. ಆದ್ದರಿಂದ ಅವನಿಗೆ ‘ನಾನು
ಕೊಂದೇ ಕೊಲ್ಲುತ್ತೇನೆ’ ಎಂದು ತಿಳಿದಿತ್ತು. ನಿಶ್ಚಿತವಾದ್ದರಿಂದ ಪುರಾಣ ಈ ರೀತಿ ಅನುವಾದ ಮಾಡಿದೆ.
ಆಚಾರ್ಯರ ನಿರ್ಣಯ ಇದನ್ನು ಸ್ಪಷ್ಟಪಡಿಸುತ್ತದೆ].
ಉದೀರ್ಯ್ಯ ಚೇತಿ ಕೇಶವಂ ಸ
ಊಚಿವಾನ್ ವ್ರಜಾಮ್ಯಹಮ್ ।
ಇತೀರಿತೋsವದದ್ಧರಿಸ್ತವಾತ್ರ ಶಕ್ಯತೇ ನು ಕಿಮ್ ॥೨೧.೨೦॥
ಕೃಷ್ಣನನ್ನು ಕುರಿತು ಈರೀತಿಯಾಗಿ ಮಾತನಾಡಿದ ಅರ್ಜುನ ‘ನಾನು ತೆರಳುತ್ತೇನೆ’
ಎಂದ. ಅರ್ಜುನನಿಂದ ಈರೀತಿಯಾಗಿ ಹೇಳಲ್ಪಟ್ಟ
ಕೃಷ್ಣನು ‘ನಿನಗೆ ಸಾಮರ್ಥ್ಯವಿದೆಯೇ‘ ಎಂದು ಕೇಳಿದ.
[ಭಾಗವತದಲ್ಲಿ(೧೦.೧೦೦.೩೧) ‘ಅಹಮೇವ ಗಮಿಷ್ಯಾಮಿ ನ ತ್ವಯಾ
ಶಕ್ಯತೇsರ್ಜುನ’ ‘ನಾನೇ ಹೋಗುತ್ತೇನೆ, ನಿನ್ನಿಂದ
ಆಗುವುದಿಲ್ಲ’ ಎಂದು ಕೃಷ್ಣ ಅರ್ಜುನನಿಗೆ ಹೇಳಿದ ಎಂದಿದ್ದಾರೆ. ಇನ್ನು ಹರಿವಂಶದಲ್ಲಿ ಹೇಳುವಂತೆ:
‘ರಕ್ಷಸೀತ್ಯೇವಮುಕ್ತಸ್ತು ವ್ರೀಡಿತೋsಸ್ಮಿ ನರಾಧಿಪ’(ವಿಷ್ಣುಪರ್ವ ೧೧೧.೧೫)- ‘ರಕ್ಷಣೆ ಮಾಡುತ್ತೇನೆ
ಎನ್ನುವ ನಿನ್ನ ಮಾತನ್ನು ಕೇಳಿ ನನಗೆ ನಾಚಿಕೆಯಾಗುತ್ತಿದೆ’ ಎಂದು ಅರ್ಜುನ ಹೇಳಿದ ಎಂದಿದ್ದಾರೆ. ಈ ಮೇಲಿನ ಎರಡೂ ಮಾತನ್ನೂ ಸಮನ್ವಯ ಮಾಡಿ
ನೋಡಿದಾಗ ವ್ಯಂಗ್ಯವಾಗಿ (ತಮಾಷೆಗಾಗಿ) ಶ್ರೀಕೃಷ್ಣ ‘ರಕ್ಷಸಿ’ ಎಂದು ನುಡಿದಿದ್ದ ಎನ್ನುವುದು
ತಿಳಿಯುತ್ತದೆ].
ವಿಲಜ್ಜಮಾನಮೀಕ್ಷ್ಯ ತಂ
ಜಗಾದ ಕೇಶವೋsರಿಹಾ ।
ವ್ರಜೇತಿ ಸ
ಪ್ರತಿಶ್ರವಂ ಚಕಾರ ಹಾಪ್ಯರಕ್ಷಣೇ ॥೨೧.೨೧॥
ವಹ್ನಿಂ ಪ್ರವೇಕ್ಷ್ಯೆsಶಕ್ತಶ್ಚೇದಿತ್ಯುಕ್ತ್ವಾ
ಸರ್ವಯಾದವೈಃ ।
ಯಯೌ ನ
ರಾಮಪ್ರದ್ಯುಮ್ನಾವನಿರುದ್ಧಂ ಚ ಕೇಶವಃ ॥೨೧.೨೨॥
ಭಗವಂತನ ಮಾತನ್ನು ಕೇಳಿ ನಾಚಿಕೊಳ್ಳುತ್ತಿರುವ ಅರ್ಜುನನನ್ನು ಕಂಡು, ಶತ್ರುಗಳನ್ನು ನಿಗ್ರಹಿಸುವ ನಾರಾಯಣನು ‘ಹೊರಡು’
ಎಂದು ಹೇಳಿದನು. ಅರ್ಜುನನಾದರೋ, ‘ನಾನು ಬ್ರಾಹ್ಮಣನ ಮಕ್ಕಳನ್ನು ರಕ್ಷಿಸದೇ ಹೋದರೆ, ಈ
ಕಾರ್ಯದಲ್ಲಿ ನಾನು ಆಶಕ್ತನಾದರೆ ಅಗ್ನಿಪ್ರವೇಶ ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ.
ಈರೀತಿಯಾಗಿ ಹೇಳಿ, ಎಲ್ಲಾ ಯಾದವರಿಂದ ಕೂಡಿ ಅರ್ಜುನ ಹೊರಟ. (ಆದರೆ
ಕೆಲವರು ಮಾತ್ರ ಅವನ ಜೊತೆಗೆ ಹೋಗಿರಲಿಲ್ಲ).
ಕೃಷ್ಣನು ಬಲರಾಮ-ಪ್ರದ್ಯುಮ್ನರನ್ನು ಹಾಗೂ ಅನಿರುದ್ಧನನ್ನೂ ಕೂಡಾ ಅರ್ಜುನನಿಗೆ ಸಹಾಯಮಾಡಿ ಎನ್ನುವ ವಿಚಾರದಲ್ಲಿ ನಿಯೋಜಿಸಲಿಲ್ಲ.
[ಹರಿವಂಶದಲ್ಲಿ ಈ ಮಾತು ಬರುತ್ತದೆ: ‘ ತ್ವತ್ಪುರೋಗಾಶ್ಚ
ರಕ್ಷನ್ತು ವೃಷ್ಣ್ಯನ್ಧಕಮಹಾರಥಾಃ । ಋತೇ ರಾಮಂ ಮಹಾಬಾಹುಂ ಪ್ರದ್ಯುಮ್ನಂ ಚ ಮಹಾಬಲಮ್’(೧೭).
ಇಲ್ಲಿ ರಾಮನನ್ನು, ಪ್ರದ್ಯುಮ್ನನನ್ನೂ ಕೂಡಾ ಎಂದಿದ್ದಾರೆ. ಇಲ್ಲಿ
ಬಳಕೆಯಾದ ಚ-ಕಾರ ಅನಿರುದ್ಧನನ್ನು ಸೂಚಿಸುತ್ತದೆ ಎನ್ನುವುದು ಆಚಾರ್ಯರ ನಿರ್ಣಯದಿಂದ ತಿಳಿಯುತ್ತದೆ.]
No comments:
Post a Comment