ತದೈವ ಮೈನ್ದೋ ವಿವಿದಶ್ಚ ಭೌಮೇ ಹತೇ ಸಖಾಯೌ ದಾನವಾವೇಶಯುಕ್ತೌ ।
ಆನರ್ತ್ತರಾಷ್ಟ್ರಂ ವಾಸುದೇವಪ್ರತೀಪೌ ವ್ಯನಾಶಯೇತಾಂ ವಾಸುದೇವೋsಥ
ಚೋಚೇ ॥೨೨.೨೩೩॥
ಇದೇ ಸಮಯದಲ್ಲಿ ಮೈನ್ದ ಮತ್ತು ವಿವಿದ ಎನ್ನುವ ಕಪಿಗಳು ದಾನವರ ಆವೇಶದಿಂದ ಕೂಡಿದವರಾಗಿ, ತಮ್ಮ ಮಿತ್ರ ನರಕಾಸುರನನ್ನು ಶ್ರೀಕೃಷ್ಣ ಸಂಹಾರ ಮಾಡಿರುವುದರಿಂದ,
ಕೃಷ್ಣನ ಮೇಲೆ ಸೇಡಿರಿಸಿಕೊಂಡು, ಅನರ್ತದೇಶವಾದ ದ್ವಾರಕೆಯನ್ನು ನಾಶಮಾಡಿದರು.
[ಮೈನ್ದ ಮತ್ತು ವಿವಿದ ಇವರು ರಾಮಾಯಣ
ಕಾಲದಲ್ಲಿ ರಾಮನಿಗೆ ಸೇವೆ ಸಲ್ಲಿಸಿದ ಆಶ್ವೀದೇವತೆಗಳ ಅವತಾರ ರೂಪ. ಇವರು ಅನೇಕ ಜನ ರಾಕ್ಷಸರನ್ನು
ಕೊಂದವರು. ಸಮುದ್ರಮಥನದ ಕಾಲದಲ್ಲಿ ದೈತ್ಯಾವೇಷದಿಂದಾಗಿ ದೇವರ ಅನುಮತಿ ಇಲ್ಲದೇ ಅಮೃತವನ್ನು ಪಾನ
ಮಾಡಿದರು. ಅದರಿಂದಾಗಿ ಅವರಿಗೆ ಧೀರ್ಘಾಯುಷ್ಯ ಬಂದಿತ್ತು. ದೈತ್ಯಾವೇಶ ಇದ್ದುದರಿಂದ ರಾಮಚಂದ್ರ
ಪರಂದಾಮಕ್ಕೆ ತೆರಳುವಾಗ ಅವರು ಅವನ ಜೊತೆಗೆ ಹೋಗಲಾಗಲಿಲ್ಲ. ಕಾಲಾನಂತರ ಅವರು ನರಕಾಸುರನ
ಗೆಳೆಯರಾದರು. ಕೃಷ್ಣ ನರಕಾಸುರನನ್ನು ಕೊಂದದ್ದರಿಂದ
ಕೃಷ್ಣನ ಮೇಲೆ ದ್ವೇಷ ಬೆಳೆಸಿದರು. ಸಮಯ ಕಾದುಕೊಂಡಿದ್ದ ಅವರಿಗೆ ಸಾಯುವ ಕಾಲ ಬಂದುದರಿಂದ
ಬುದ್ಧಿ ಪ್ರಚೋದನೆಯಾಯಿತು. ಅವರು ಯಾದವ ಪಟ್ಟಣವನ್ನು ನಾಶಮಾಡಲು ಪ್ರಾರಂಭಿಸಿದರು.]
ರಾಮಾಯ ಸೋSದಾದ್ ವರಮಬ್ಜನಾಭೋ ವದ್ಧ್ಯಾವೇತೌ ಭವತಾಂ ತೇsಪ್ಯವದ್ಧ್ಯೌ
।
ವರಾದ್ ವಿರಿಞ್ಚಸ್ಯ ತಥಾSಮೃತಾಶನಾದುಭೌ ಚ ಮೈನ್ದೋ ವಿವಿದೋ ಬ್ರಜೇತಿ ॥೨೨.೨೩೪॥
ಯಾವಾಗ ಈರೀತಿ ಮೈನ್ದ ಮತ್ತು ವಿವಿದ ದ್ವಾರಕೆಯನ್ನು
ನಾಶಮಾಡಲಾರಂಭಿಸಿದರೋ, ಆಗ ಬಲರಾಮನನ್ನು ಕುರಿತು ಶ್ರೀಕೃಷ್ಣ ‘ಇವರಿಬ್ಬರೂ ಕೂಡಾ ನಿನ್ನಿಂದ
ಸಾಯಬೇಕು’ ಎಂದು ಹೇಳಿದ. ವಸ್ತುತಃ ಅಮೃತವನ್ನು ಪಾನ ಮಾಡಿದ್ದುದರಿಂದಲೂ, ಬ್ರಹ್ಮ ದೇವರ
ವರದಿಂದಲೂ ಅವರು ಅವಧ್ಯರಾಗಿದ್ದರು. ಆದರೆ ನಾರಾಯಣನು ಹಿಂದೆ ‘ಬ್ರಹ್ಮನ ವರದಿಂದ ಅವಧ್ಯರಾದ ಮೈನ್ದ ವಿವಿದರು ಬಲರಾಮನಿಂದ
ಸಾಯುತ್ತಾರೆ’ ಎನ್ನುವ ವರವನ್ನು ನೀಡಿದ್ದ.
ಗತ್ವಾ ಸ ಮೈನ್ದಂ ಪ್ರಥಮಂ ಜಘಾನ ಕ್ರೋಧಾತ್ ಯುದ್ಧಾಯಾSಗತಂ
ರೈವತಾಗ್ರೇ ।
ದಿನೇ ಪರಸ್ಮಿನ್ ವಿವಿದಂ ಜಘಾನ ಶಿಲಾ ವರ್ಷನ್ತಂ ಮುಸಲೇನಾಗ್ರ್ಯಕರ್ಮ್ಮಾ ॥೨೨.೨೩೫॥
ಯಾದವರ ಕ್ರೀಡಾವಿಹಾರ ಸ್ಥಳವಾದ ರೈವತ ಪರ್ವತದ
ಮೇಲ್ಗಡೆ ಮೊದಲದಿನ ಕ್ರೋಧದಿಂದ, ಯುದ್ಧಕ್ಕೆಂದು ಬಂದ ಮೈನ್ದನನ್ನು ಬಲರಾಮ ಕೊಂದ. ಮರುದಿನ
ಕಲ್ಲುಗಳ ಮಳೆಗರೆಯುತ್ತಿರುವ ವಿವಿದನನ್ನು ತನ್ನ ಒನಕೆಯಿಂದ ಕೊಂದ.
ತಯೋರಾವಿಷ್ಟೌ ತಾವಸುರೌ ತಮೋSನ್ಧಂ ಪ್ರಾಪ್ತೌ ಚ ತಾವಶಿವನೌ ಸ್ವಂ ಚ ಲೋಕಮ್ ।
ದುರ್ಯ್ಯೋಧನಸ್ಯಾSಸ ಪುತ್ರೀ ರತಿರ್ಯ್ಯಾ ಪೂರ್ವಂ ನಾಮ್ನಾ ಲಕ್ಷಣಾ ಕಾನ್ತರೂಪಾ ॥೨೨.೨೩೬॥
ಮೈನ್ದ-ವಿವಿದರಲ್ಲಿ ಆವೇಶವನ್ನು ಹೊಂದಿ, ಕೆಟ್ಟ ಕೆಲಸವನ್ನು ಮಾಡಿಸುತ್ತಿದ್ದ ಅಸುರರು ಅನ್ದಂತಮಸ್ಸನ್ನು ಹೊಂದಿದರೆ, ಆಶ್ವೀದೇವತೆಗಳು ತಮ್ಮ ಲೋಕಕ್ಕೆ ತೆರಳಿದರು.
ದುರ್ಯೋಧನನಿಗೆ ಒಬ್ಬಳು ಮಗಳಿದ್ದಳು. ಅವಳು ಹಿಂದೆ ರತಿಯೇ ಆಗಿದ್ದಳು. ತುಂಬಾ
ಸುಂದರವಾಗಿದ್ದ ಅವಳ ಹೆಸರು ‘ಲಕ್ಷಣಾ’ ಎಂದಿತ್ತು.
ಸ್ವಯಮ್ಬರಸ್ಥಾಂ ತಾಂ ಬಲಾದೇವ ಸಾಮ್ಬೋ ಜಗ್ರಾಹ ಸಾ ಚೈನಮಾಸಾನುರಕ್ತಾ ।
ಬಲಾದ್ ಗೃಹೀತಾಂ ವೀಕ್ಷ್ಯ ತಾಂ ಕರ್ಣ್ಣಮುಖ್ಯಾ ದುರ್ಯ್ಯೋಧನಾದ್ಯಾ ಯುಯುಧುಃ ಕ್ರೋಧದೀಪ್ತಾಃ
॥೨೨.೨೩೭॥
ಸ್ವಯಮ್ಬರದಲ್ಲಿರುವ ಅವಳನ್ನು ಕೃಷ್ಣನ ಮಗನಾಗಿರುವ ಸಾಂಬನು ಬಲಾತ್ಕಾರದಿಂದ ಅಪಹರಿಸಿದ. ಅವಳಾದರೋ
ಸಾಂಬನಲ್ಲಿ ಆಸಕ್ತಳಾಗಿದ್ದಳು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕೂಡಾ, ಉಳಿದವರನ್ನು
ಧಿಕ್ಕರಿಸಿ ಬಲಾತ್ಕಾರದಿಂದ ಅಪಹರಿಸುವುದನ್ನು ಕಂಡು ಕರ್ಣ-ದುರ್ಯೋಧನ ಮೊದಲಾದವರು ಸಿಟ್ಟುಗೊಂಡು
ಯುದ್ಧಮಾಡಿದರು.
ಕೃಚ್ಛ್ರೇಣ ತಂ
ವಿರಥೀಕೃತ್ಯ ಚೈಕಂ ಸರ್ವೇ ಸಮೇತಾ ಜಗೃಹುರ್ದ್ಧಾರ್ತ್ತರಾಷ್ಟ್ರಾಃ ।
ಕರ್ಣ್ಣೇನ ಭೂರಿಶ್ರವಸಾ
ಚ ಸಾರ್ದ್ಧಂ ಬಾಹ್ವೋರ್ಬಲಾದೇವ ದುರ್ಯ್ಯೋಧನಸ್ಯ ॥೨೨.೨೩೮॥
ಕರ್ಣ ಹಾಗೂ ಭೂರಿಶ್ರವಸ್ಸಿನಿಂದ ಕೂಡಿದ ದುರ್ಯೋಧನಾದಿಗಳು ತಮ್ಮ ತೋಳ್ಬಲದಿಂದ, ಕಷ್ಟದಿಂದ ಸಾಂಬನನ್ನು
ರಥಹೀನನನ್ನಾಗಿ ಮಾಡಿ ಬಂಧಿಸಿದರು.
No comments:
Post a Comment