ಗೂಢಂ ಕನ್ಯಾಗೃಹೇ ತಂ
ತು ಜ್ಞಾತ್ವಾ ಕನ್ಯಾಭಿರಕ್ಷಿಣಃ ।
ಊಚುರ್ಬಾಣಯಾದಿಶಚ್ಚ
ಕಿಙ್ಕರಾನ್ ಗ್ರಹಣೇSಸ್ಯ ಸಃ ॥೨೨.೨೫೧॥
ಅಂತಃಪುರದಲ್ಲಿ ಅವಿತಿರುವ ಅನಿರುದ್ಧನನ್ನು ಅಂತಃಪುರದ ಕಾವಲುಗಾರರು ತಿಳಿದು ಬಾಣನಿಗೆ ತಿಳಿಸಿದರು.
ಬಾಣಾಸುರನು ಅನಿರುದ್ಧನನ್ನು ಸೆರೆಹಿಡಿಯಲು ಭೃತ್ಯರಿಗೆ ಆಜ್ಞೆ ಮಾಡಿದನು.
ಆಗತಾನನಿರುದ್ಧಸ್ತಾನ್
ಪರಿಘೇಣ ಮಹಾಬಲಃ ।
ನಿಹತ್ಯ ದ್ರಾವಯಾಮಾಸ
ಸ್ವಯಮಾಯಾತ್ ತತೋSಸುರಃ ॥೨೨.೨೫೨॥
ಹಿಡಿಯಲು ಬಂದ ಆ ಎಲ್ಲಾ ಭೃತ್ಯರನ್ನು ಮಹಾಬಲನಾಗಿರುವ ಅನಿರುದ್ಧನು ಬಾಗಿಲಿಗೆ ಹಾಕಿದ
ಚಿಲಕದಿಂದ ಕೊಂದು ಉಳಿದವರನ್ನು ಓಡಿಸಿದನು. ಆಗ ಬಾಣಾಸುರನೇ ಸ್ವಯಂ ಬಂದ.
ಸ ತು ಯುಧ್ವಾSತಿಕೃಚ್ಛ್ರೇಣ ನಾಗಾಸ್ತ್ರೇಣ ಬಬನ್ಧ ತಮ್ ।
ಅಥ ಕೃಷ್ಣಃ ಸಮಾರುಹ್ಯ
ಗರುಡಂ ರಾಮಸಂಯುತಃ ॥೨೨.೨೫೩॥
ಪ್ರದ್ಯುಮ್ನೇನ ಚ
ತತ್ರಾಗಾತ್ ಪ್ರಥಮಂ ತತ್ರ ವಹ್ನಿಭಿಃ ।
ಯದ್ಧ್ವೈವಾಙ್ಗಿರಸಾ
ಚೈವ ಕ್ಷಣಾದ್ ವಿದ್ರಾಪ್ಯ ತಾನ್ ಹರಿಃ ॥೨೨.೨೫೪॥
ವಿದ್ರಾಪ್ಯ ಸರ್ವಪ್ರಮಥಾನಾಸಸಾದ್
ಜ್ವರಂ ತತಃ ।
ತೇನ ಭಸ್ಮಪ್ರಹಾರೇಣ
ಜ್ವರಿತಂ ರೋಹಿಣೀಸುತಮ್ ॥೨೨.೨೫೫॥
ಅನಿರುದ್ಧನೊಂದಿಗೆ ಸೆಣಸಿದ ಬಾಣನು, ಅತಿಕಷ್ಟದಿಂದ ಅನಿರುದ್ಧನನ್ನು ಸರ್ಪಾಸ್ತ್ರದಿಂದ
ಬಂಧಿಸಿದನು. ಅನಿರುದ್ಧ ಬಾಣಾಸುರನ ಸೆರೆಗೆ ಒಳಗಾದ ವಿಷಯವನ್ನು(ನಾರದರಿಂದ) ತಿಳಿದ ಶ್ರೀಕೃಷ್ಣನು
ಬಲರಾಮ, ಪ್ರದ್ಯುಮ್ನರೊಂದಿಗೆ ಕೂಡಿ ಗರುಡನನ್ನು ಏರಿ ಬಾಣಾಸುರನ ಪಟ್ಟಣವಾದ ಶೋಣಿತಪುರಕ್ಕೆ
ಬಂದನು. ನಗರವನ್ನು ಪ್ರವೇಶ ಮಾಡಬೇಕಾದರೆ ಶುಚಿ, ಪಾವಕ ಮತ್ತು ಪವಮಾನ ಎನ್ನುವ ಮೂರು ಅಗ್ನಿರೂಪಗಳೊಂದಿಗೆ
ಯುದ್ಧಮಾಡಿ, ರುದ್ರನ ಭೃತ್ಯರಲ್ಲಿ ಮುಖ್ಯಾದ ಅಂಗಿರಸನ ಜೊತೆಗೂ ಯುದ್ಧಮಾಡಿ, ಕ್ಷಣದಲ್ಲಿ ಎಲ್ಲರನ್ನು
ಓಡಿಸಿ, ರುದ್ರನ ಇತರ ಗಣಗಳನ್ನೂ ಕೂಡಾ ಓಡಿಸಿ, ತದನಂತರ ಜ್ವರದ ಅಭಿಮಾನಿಯನ್ನು ಶ್ರೀಕೃಷ್ಣ ಇದಿರುಗೊಂಡ. ಜ್ವರನ ಬಸ್ಮ ಪ್ರಹಾರದಿಂದ ಬಲರಾಮನು
ಜ್ವರಕ್ಕೊಳಗಾಗಿ ಏನೂ ಮಾಡಲಾರದವನಾದ.
[ಈ ಕುರಿತು ವಿಷ್ಣುಪುರಾಣದಲ್ಲಿ, ಹರಿವಂಶದಲ್ಲಿ ವಿವರಣೆಯನ್ನು
ಕಾಣಬಹುದು. ಅನಿರುದ್ಧನನ್ನು ಬಂಧಿಸಿರುವ ವಿಷಯವನ್ನು ನಾರದರು ಯಾದವರಿಗೆ ತಿಳಿಸುತ್ತಾರೆ]
ಆಶ್ಲಿಷ್ಯ ವಿಜ್ವರಂ
ಚಕ್ರೇ ವಾಸುದೇವೋ ಜಗತ್ಪ್ರಭುಃ ।
ಸ್ವಯಂ ವಿಕ್ರೀಡ್ಯ
ತೇನಾಥ ಕಞ್ಚಿತ್ ಕಾಲಂ ಜನಾರ್ದ್ದನಃ ॥೨೨.೨೫೬॥
ನಿಷ್ಪಿಷ್ಯ
ಮುಷ್ಟಿಭಿಶ್ಚಾನ್ಯಂ ಸಸರ್ಜ್ಜ ಜ್ವರಮಚ್ಯುತಃ ।
ಸ್ವಯಂ ಜಿತ್ವಾSಪಿ
ಗಿರಿಶಭೃತ್ಯಂ ನಾಲಮಿತಿ ಪ್ರಭುಃ ॥೨೨.೨೫೭॥
ಸ್ವಭೃತ್ಯೇನೈವ ಜೇತವ್ಯ
ಇತ್ಯನ್ಯಂ ಸಸೃಜೇ ತದಾ ।
ಜ್ವರೇಣ ವೈಷ್ಣವೇನಾಸೌ
ಸುಭೃಶಂ ಪೀಡಿತಸ್ತದಾ ॥೨೨.೨೫೮॥
ಜ್ವರಕ್ಕೊಳಗಾದ ಬಲರಾಮನನ್ನು ಆಲಂಗಿಸಿದ ಶ್ರೀಕೃಷ್ಣ, ಅವನನ್ನು ಜ್ವರರಹಿತನನ್ನಾಗಿ ಮಾಡಿದನು. ಶ್ರೀಕೃಷ್ಣಪರಮಾತ್ಮನು
ಕೆಲವು ಸಮಯದ ತನಕ ಜ್ವರದ ಅಭಿಮಾನಿಯೂ, ರುದ್ರನ ಭೃತ್ಯನೂ ಆದ ಶೈವಜ್ವರನೊಂದಿಗೆ ತಾನೇ ಯುದ್ಧಮಾಡಿ, ಅವನ
ಮೇಲೆ ಮುಷ್ಠಿಪ್ರಹಾರ ಮಾಡಿ, ತದನಂತರ ಶೈವ ಜ್ವರನನ್ನು ನಾಶ ಮಾಡಲು ಇನ್ನೊಂದು
ಜ್ವರನನ್ನು ತಾನು ಸೃಷ್ಟಿಸಿದ. ರುದ್ರನ ಭೃತ್ಯನಾದ ಜ್ವರನನ್ನು ತಾನು ಗೆದ್ದಿದ್ದರೂ ಕೂಡಾ, ಅದು ಸಾಲದು ಎಂದು, ತನ್ನ ಭೃತ್ಯನಿಂದಲೇ ಸೋಲಿಸಲ್ಪಡಬೇಕು
ಎಂದು ಇನ್ನೊಬ್ಬ ಜ್ವರನನ್ನು ಶ್ರೀಕೃಷ್ಣ ಸೃಷ್ಟಿ ಮಾಡಿದ. ಕೃಷ್ಣ ಸೃಷ್ಟಿಸಿದ ಜ್ವರದಿಂದ ಶೈವಜ್ವರನು
ಚೆನ್ನಾಗಿ ಪೀಡಿತನಾದ.
[ಲೋಕದಲ್ಲಿ ಜ್ವರ ಬಂದಾಗ ಮನಸ್ಸು ಮುದುಡುವುದು, ಮನಸ್ಸಿಗೆ ಕಷ್ಟವಾಗುವುದು,
ಇತ್ಯಾದಿ ಆಗುವುದು ಈ ಶೈವಜ್ವರದಿಂದ. ವೈಷ್ಣವ ಜ್ವರ ಎಲ್ಲಿಯೂ ಪ್ರಯೋಗದಲ್ಲಿ ಇಲ್ಲ. ದೇಹದಲ್ಲಿರುವ
ಮಾಂಸಖಂಡಗಳು, ಇತ್ಯಾದಿ ಧಾತುಗಳೇನಿವೆ, ಅದೆಲ್ಲವೂ ಕೂಡಾ ಮನಸ್ಸಿನೊಂದಿಗೆ ಕೂಡಿ ಸಂಕಟಕ್ಕೆ ಒಳಗಾಗುವುದು
ಶೈವಜ್ವರದಿಂದ]
ಗ್ರಾಸಾರ್ತ್ಥಮುಪನೀತಶ್ಚ
ಜಗಾಮ ಶರಣಂ ಹರಿಮ್ ।
ತೇನ ಸ್ತುತಃ ಸ ಭಗವಾನ್
ಮೋಚಯಾಮಾಸ ತಂ ವಿಭುಃ ॥೨೨.೨೫೯॥
ಶ್ರೀಕೃಷ್ಣನಿಂದ ಸೃಷ್ಟಿಸಲ್ಪಟ್ಟ ಜ್ವರನು ಶೈವಜ್ವರನನ್ನು ತಿನ್ನುವುದಕ್ಕಾಗಿ ಕೊಂಡೊಯ್ಯಲ್ಪಟ್ಟಾಗ,
ಶೈವಜ್ವರನು ಕೃಷ್ಣನನ್ನೇ ಶರಣು ಹೊಂದಿದ. ಅವನಿಂದ ಸ್ತುತಿಸಲ್ಪಟ್ಟ ಶ್ರೀಕೃಷ್ಣನು ಅವನನ್ನು
ಬಿಡುಗಡೆಗೊಳಿಸಿದ.
ಕ್ರೀಡಾರ್ತ್ಥಮತ್ಯಲ್ಪಜನೇಷ್ವಪಿ
ಪ್ರಭುಃ ಕಥಞ್ಚಿದೇವ ವ್ಯಜಯದ್ ವ್ಯಥಾಂ ವಿನಾ ।
ಇತ್ಯಾದಿ ಮೋಹಾಯ ಸ
ದರ್ಶಯತ್ಯಜೋ ನಿತ್ಯಸ್ವತನ್ತ್ರಸ್ಯ ಕುತೋ ವ್ಯತಾದಯಃ ॥೨೨.೨೬೦॥
ಶ್ರೀಕೃಷ್ಣ ಪರಮಾತ್ಮನು ಯಾವುದೇ ಬಳಲಿಕೆ ಇಲ್ಲದೇ ಗೆದ್ದರೂ, ಮೋಹಕ್ಕಾಗಿ ಅತ್ಯಂತ
ಅಲ್ಪರಾಗಿರುವ ಜನರಲ್ಲೂ ಕೂಡಾ ಪ್ರಯತ್ನಪಟ್ಟಂತೆ ತೋರಿಸುತ್ತಾನೆ.(ಉದಾಹರಣೆಗೆ ಇನ್ನೊಬ್ಬ
ಜ್ವರನನ್ನು ಸೃಷ್ಟಿಸಿ ಶೈವಜ್ವರನನ್ನು ಸೋಲಿಸಿರುವುದು, ಇತ್ಯಾದಿ) ಸರ್ವಸ್ವತಂತ್ರನಾಗಿರುವ ಭಗವಂತನಿಗೆ ವ್ಯಥೆ ಇತ್ಯಾದಿ
ಇಲ್ಲವೇ ಇಲ್ಲ. ಕೇವಲ ದುರ್ಜನರ ಮೋಹಕ್ಕಾಗಿ ಅವನು ಬಳಲಿದವನಂತೆ ತೋರುತ್ತಾನೆ ಅಷ್ಟೇ.
No comments:
Post a Comment