ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 16, 2022

Mahabharata Tatparya Nirnaya Kannada 22-273-280

 

ಏವಂ ವಸತ್ಯಮಿತಪೌರುಷವೀರ್ಯ್ಯಸಾರೇ ನಾರಾಯಣೇ ಸ್ವಪುರಿ ಶಕ್ರಧನಞ್ಜಯೋಕ್ತಃ ।

ಸಮ್ಪ್ರಾಪ್ಯ ಲೋಮಶಮುನಿಃ ಸಕಲಾನಿ ತೀರ್ತ್ಥಾನ್ಯಾಪ್ತುಂ ಸ ಪಾಣ್ಡುತನಯೇಷು ಸಹಾಯ ಆಸೀತ್ ॥೨೨.೨೭೩॥

 

ಈರೀತಿಯಾಗಿ ಶ್ರೀಕೃಷ್ಣ ಪರಮಾತ್ಮನು ಉತ್ಕೃಷ್ಟವಾಗಿರುವ ಪೌರುಷ ಮೊದಲಾದವುಗಳನ್ನು ಹೊಂದಿ ದ್ವಾರಕೆಯಲ್ಲಿ ಆವಾಸ ಮಾಡುತ್ತಿರಲು, ಇತ್ತ, ಇಂದ್ರನಿಂದಲೂ, ಅರ್ಜುನನಿಂದಲೂ ಹೇಳಿ ಕಳುಹಿಸಲ್ಪಟ್ಟ  ಲೋಮಶಮುನಿಗಳು ಯುಧಿಷ್ಠಿರನ ಬಳಿ ಬಂದು, ಎಲ್ಲಾ ತೀರ್ಥಕ್ಷೇತ್ರದಲ್ಲಿ ಸಂಚರಿಸಲು ಪಾಂಡವರಲ್ಲಿ ಮಾರ್ಗದರ್ಶಕರಾಗಿದ್ದರು.(ತಾತ್ಪರ್ಯ : ಸ್ವರ್ಗಲೋಕಕ್ಕೆ ಲೋಮಶಮುನಿಗಳು ಹೋಗಿದ್ದಾಗ, ಅರ್ಜುನ ಮತ್ತು ಇಂದ್ರ ಅವರಲ್ಲಿ - ಯುಧಿಷ್ಠಿರ, ಭೀಮಸೇನ , ನಕುಲ-ಸಹದೇವರು ಮತ್ತು ದ್ರೌಪದಿ - ಈ ಐದೂ ಜನರೂ ಕೂಡಾ ಭೂಮಿಯಲ್ಲಿರುವ ಸಕಲ ತೀರ್ಥಕ್ಷೇತ್ರಗಳನ್ನು ಸಂಚಾರ ಮಾಡಬೇಕು, ಇದು ದೈವೇಚ್ಛೆ ಎಂದು ಹೇಳಿ ಕಳುಹಿಸಿದ್ದರು. ಲೋಮಶಮುನಿಗಳು ಯುಧಿಷ್ಠಿರನಲ್ಲಿಗೆ ಬಂದು ವಿಷಯವನ್ನು ಹೇಳಿದರು ಮತ್ತು ತೀರ್ಥಯಾತ್ರೆಯಲ್ಲಿ ಪಾಂಡವರಿಗೆ ಮಾರ್ಗದರ್ಶಕರಾದರು).

 

ಪೃಥ್ವೀಂ ಪ್ರದಕ್ಷಿಣತ ಏತ್ಯ ಸಮಸ್ತತೀರ್ತ್ಥಸ್ನಾನಂ ಯಥಾಕ್ರಮತ ಏವ ವಿಧಾಯ ಪಾರ್ತ್ಥಾಃ।

ಸಮ್ಪೂಜ್ಯ ತೇಷು ನಿಖಿಲೇಷು ಹರಿಂ ಸುಭಕ್ತ್ಯಾ ಕೃಷ್ಣೇ ಸಮರ್ಪ್ಪಯಿತುಮಾಪುರಥ ಪ್ರಭಾಸಮ್ ।

ಸಮ್ಭಾವನಾಯ ಸಕಲೈರ್ಯ್ಯದುಭಿಃ ಸಮೇತಸ್ತೇಷಾಂ ಚ ರಾಮಸಹಿತೋ ಹರಿರಾಜಗಾಮ ॥೨೨.೨೭೪॥

 

ಪಾಂಡವರು ಇಡೀ ಭೂಮಿಯನ್ನು ಪ್ರದಕ್ಷಿಣೆ ಮಾಡಿ, ಕ್ರಮವಾಗಿ ಎಲ್ಲಾ ತೀರ್ಥಕ್ಷೇತ್ರಗಳ ಸ್ನಾನವನ್ನು ಶಾಸ್ತ್ರದಲ್ಲಿ ಹೇಳಿದಂತೆ ಮಾಡಿ, ಆ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪರಮಾತ್ಮನನ್ನು ಪೂಜಿಸಿ, ಎಲ್ಲವನ್ನೂ ಶ್ರೀಕೃಷ್ಣಪರಮಾತ್ಮನಿಗೆ ಸಮರ್ಪಿಸಲು ಪ್ರಭಾಸಕ್ಷೇತ್ರಕ್ಕೆ ಬಂದರು.  ಆಗ ಶ್ರೀಕೃಷ್ಣನೂ ಕೂಡಾ  ಎಲ್ಲಾ ಯಾದವರಿಂದ ಕೂಡಿಕೊಂಡು ಬಲರಾಮನೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಬಂದನು.

 

ಪಾರ್ತ್ಥೈಃ ಸಮ್ಪೂಜಿತಸ್ತತ್ರ ಕೃಷ್ಣೋ ಯದುಗಣೈಃ ಸಹ ।

ಪಾರ್ತ್ಥಾನ್ ಸಮ್ಪೂಜಯಾಮಾಸುರ್ವೃಷ್ಣಯಶ್ಚಾSಜ್ಞಯಾ ಹರೇಃ             ॥೨೨.೨೭೫॥

 

ಪ್ರಭಾಸಕ್ಷೇತ್ರದಲ್ಲಿ ಯಾದವರ ಸಮೂಹದಿಂದ ಕೂಡಿರುವ ಶ್ರೀಕೃಷ್ಣನು ಪಾಂಡವರಿಂದ ಪೂಜಿಸಲ್ಪಟ್ಟನು. ಪರಮಾತ್ಮನ ಅಣತಿಯಂತೆ ಯಾದವರೂ ಕೂಡಾ ಪಾಂಡವರನ್ನು ಸತ್ಕರಿಸಿದರು.

 

ತತ್ರ ಭೀಮಂ ತಪೋವೇಷಂ ದೃಷ್ಟ್ವಾSತಿಸ್ನೇಹಕಾರಣಾತ್ ।

ದುರ್ಯ್ಯೋಧನಂ ನಿನ್ದಯತಿ ರಾಮೇ ಸಾತ್ಯಕಿರಬ್ರವೀತ್                        ॥೨೨.೨೭೬॥

 

ಅಲ್ಲಿ ತಪಸ್ವಿಯ ವೇಷದಲ್ಲಿ ಕಾಣುತ್ತಿರುವ ಭೀಮಸೇನನನ್ನು ಕಂಡು, ಸ್ನೇಹ-ಪ್ರೀತಿ ಉಕ್ಕಿಬಂದ ಕಾರಣ, ಬಲರಾಮನು ದುರ್ಯೋಧನನನ್ನು ಬಯ್ಯುತ್ತಿರಲು, ಸಾತ್ಯಕಿಯು ಮಾತನ್ನಾಡಿದ:

 

ಸರ್ವೇ ವಯಂ ನಿಹತ್ಯಾದ್ಯ ಸಕರ್ಣ್ಣಾನ್ ಧೃತರಾಷ್ಟ್ರಜಾನ್ ।

ಅಭಿಮನ್ಯುಂ ಸ್ಥಾಪಯಾಮೋ ರಾಜ್ಯೇ ಯಾವತ್ ತ್ರಯೋದಶಮ್             ॥೨೨.೨೭೭॥

 

ಸಂವತ್ಸರಂ ಸಮಾಪ್ಯೈವ ಪುರಂ ಯಾಸ್ಯನ್ತಿ ಪಾಣ್ಡವಾಃ ।

ತತೋ ಯುಧಿಷ್ಠಿರೋ ರಾಜಾ ರಾಜ್ಯಂ ಶಾಸತು ಪೂರ್ವವತ್                ॥೨೨.೨೭೮॥

 

‘ಬಲರಾಮ, ತಡವೇಕೆ? ನಾವೆಲ್ಲರೂ ಕೂಡಾ ಕರ್ಣನಿಂದ ಕೂಡಿರುವ ದುರ್ಯೋಧನ ಮೊದಲಾದವರನ್ನು ಇವತ್ತೇ ಕೊಂದು, ಹದಿಮೂರನೇ ವರ್ಷ ಮುಗಿಯುವ ತನಕ ಅಭಿಮನ್ಯುವನ್ನು ರಾಜನನ್ನಾಗಿ  ಮಾಡೋಣ. ತಮ್ಮ ಅಜ್ಞಾತವಾಸವನ್ನು ಮುಗಿಸಿ ಪಾಂಡವರು ಹಸ್ತಿನಪುರಕ್ಕೆ ಬಂದ ನಂತರ ಯುಧಿಷ್ಠಿರನು ಹಿಂದಿನಂತೆಯೇ ರಾಜ್ಯವನ್ನಾಳಲಿ’ ಎಂದನು. (ಅಲ್ಲಿಯತನಕ ಪ್ರತಿನಿಧಿಯಂತೆ ಅಭಿಮನ್ಯುವನ್ನು ರಾಜನನ್ನಾಗಿರಿಸೋಣ ಎನ್ನುವ ಸಲಹೆ)   

 

ಏವಂ ವದತ್ಯೇವ ಶಿನಿಪ್ರವೀರೇ ಜನಾರ್ದ್ದನಃ ಪಾರ್ತ್ಥಮುಖಾನ್ಯುದೀಕ್ಷ್ಯ ।

ಉವಾಚ ಶೈನೇಯ ನ ಪಾಣ್ಡುಪುತ್ರಾಃ ಪರೇಣ ಸಂಸಾಧಿತರಾಜ್ಯಕಾಮಾಃ ॥೨೨.೨೭೯॥

 

ಸ್ವಬಾಹುವೀರ್ಯ್ಯೇಣ ನಿಹತ್ಯ ಶತ್ರೂನಾಪ್ಸ್ಯನ್ತಿ ರಾಜ್ಯಂ ತ ಇತೀರಿತೇSಮುನಾ ।

ತಥೇತಿ ಪಾರ್ತ್ಥಾ ಅವದಂಸ್ತತಸ್ತೇ ಕೃಷ್ಣಂ ಪುರಸ್ಕೃತ್ಯ ಯಯುರ್ದ್ದಶಾರ್ಹಾಃ ॥೨೨.೨೮೦॥

 

ಈರೀತಿಯಾಗಿ ಸಾತ್ಯಕಿಯು ಹೇಳುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಪಾಂಡವರ ಮುಖಗಳನ್ನು ಕಂಡು ಹೇಳಿದ: ಓ ಸಾತ್ಯಕಿಯೇ, ಪಾಂಡವರು ಬೇರೊಬ್ಬರು ರಾಜ್ಯವನ್ನು ಗೆದ್ದು ಕೊಟ್ಟರೆ, ಅದನ್ನು ಆಳಬೇಕೆಂದು ಬಯಸುವವರಲ್ಲ.  

ಪಾಂಡವರು  ಏನಿದ್ದರೂ ತಮ್ಮ ಸ್ವಂತ ತೋಳ್ಬಲದಿಂದ ಶತ್ರುಗಳನ್ನು ಕೊಂದು ರಾಜ್ಯವನ್ನು ಹೊಂದುತ್ತಾರೆ. (ಬೇರೊಬ್ಬರು ಸಹಾಯ ಮಾಡಬಹುದೇ ವಿನಃ, ಸ್ವಾಭಿಮಾನಿಗಳಾದ ಅವರು ಬೇರೊಬ್ಬರು ಗೆದ್ದುಕೊಟ್ಟರೆ ಅದನ್ನು ಸ್ವೀಕರಿಸಲಾರರು) ಎಂದನು.  ಆಗ ಪಾಂಡವರು ಕೃಷ್ಣನ ಅಭಿಪ್ರಾಯ ಸರಿ ಎಂದು ಹೇಳಿದರು. ತದನಂತರ ಯಾದವರು ಕೃಷ್ಣನನ್ನು ಮುಂದೆ ಮಾಡಿಕೊಂಡು ದ್ವಾರಕಾ ಪಟ್ಟಣಕ್ಕೆ ಹಿಂತಿರುಗಿದರು.

No comments:

Post a Comment