ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 7, 2022

Mahabharata Tatparya Nirnaya Kannada 22-239-244

 

ಶ್ರುತ್ವೈವ ತದ್ ವೃಷ್ಣಯಃ ಸರ್ವ ಏವ ಸಮುದ್ಯಮಂ ಚಕ್ರಿರೇ ಕೌರವೇಷು ।

ನಿವಾರ್ಯ್ಯ ತಾನ್ ಬಲಭದ್ರಃ ಸ್ವಯಂ ಯಯೌ ಸಹೋದ್ಧವಃ ಕೌರವೇಯಾಞ್ಛಮಾರ್ತ್ಥೀ ॥೨೨.೨೩೯॥

 

ಸಾಂಬನನ್ನು ದುರ್ಯೋಧನಾದಿಗಳು ಬಂಧಿಸಿರುವ ಸುದ್ದಿಯನ್ನು ಕೇಳಿದೊಡನೆಯೇ ಎಲ್ಲಾ ಯಾದವರೂ ಕೂಡಾ ಕೌರವರನ್ನು ನಾಶಮಾಡಬೇಕೆಂದು ಸನ್ನಾಹವನ್ನು ಮಾಡಿದರು. ಅವರೆಲ್ಲರನ್ನೂ ತಡೆದ ಬಲರಾಮ, ಉದ್ಧವನಿಂದ ಕೂಡಿಕೊಂಡು ತಾನೇ ಕೌರವರನ್ನು ಕುರಿತು ಹೊರಟ.

 

ಪುರಸ್ಯ ಬಾಹ್ವೋಪವನೇ ಸ್ಥಿತಃ ಸ ಪ್ರಾಸ್ಥಾಪಯಚ್ಚೋದ್ಧವಂ ಕೌರವಾರ್ತ್ಥೇ ।

ಆಗತ್ಯ ಸರ್ವೇ ಕುರವೋSಸ್ಯ ಪೂಜಾಂ ಚಕ್ರುಃ ಸ ಚಾSಹೋಗ್ರಸೇನಸ್ಯ ಚಾSಜ್ಞಾಮ್             ॥೨೨.೨೪೦॥

 

ಹಸ್ತಿನಪುರದ ಹೊರಭಾಗದಲ್ಲಿರುವ ಉದ್ಯಾನ ಒಂದರಲ್ಲಿ ನಿಂತ ಬಲರಾಮ, ಕೌರವರ ಬಳಿಗೆ ಉದ್ಧವನನ್ನು ಕಳುಹಿಸಿದ. ಆಗ ಎಲ್ಲಾ ಕುರುಗಳೂ ಕೂಡಾ ಬಲರಾಮ ಇದ್ದಲ್ಲಿಗೆ ಬಂದು ಸತ್ಕಾರವನ್ನು ಮಾಡಿದರು. ಬಲರಾಮನಾದರೋ ಉಗ್ರಸೇನನ ಆಜ್ಞೇ ಎಂದು ಹೀಗೆ ಹೇಳಿದ:

 

ಆಜ್ಞಾಪಯದ್ ವೋ ನೃಪತಿಃ ಸ್ಮ ಯನ್ನಃ ಕುಮಾರಕಃ ಪ್ರಗೃಹೀತೋ ಭವದ್ಭಿಃ ।

ಏಕಃ ಸಮೇತೈರ್ಬಹುಭಿರ್ಬಾನ್ಧವಾರ್ತ್ಥಂ ಕ್ಷಾನ್ತಂ ತನ್ನೋ ಮುಞ್ಚತಾSಶ್ವೇವ ಸಾಮ್ಬಮ್ ॥೨೨.೨೪೧॥

 

ನಮ್ಮ ರಾಜ ಉಗ್ರಸೇನನು ನಿಮ್ಮನ್ನು ಕುರಿತು ಆಜ್ಞೆ ಮಾಡಿದ್ದಾನೆ: ಯಾವ ಕಾರಣದಿಂದ ನಮ್ಮ ಕುಮಾರನು ಒಬ್ಬನೇ ಇರುವಾಗ ಬಹಳ ಜನ ಸೇರಿಕೊಂಡು ಸೆರೆ ಹಿಡಿಯಲ್ಪಟ್ಟಿದ್ದಾನೋ, ನಮ್ಮ ಬಂಧುತ್ವ ನಾಶವಾಗಬಾರದು ಎನ್ನುವ ಉದ್ದೇಶದಿಂದ ನಾವು ಅದನ್ನು ಸಹಿಸಿದ್ದೇವೆ. ಹೀಗಾಗಿ ಸಾಂಬನನ್ನು ಕೂಡಲೇ ಬಿಟ್ಟುಬಿಡಿ.

[ಉಗ್ರಸೇನ ಧೃತರಾಷ್ಟ್ರನಿಗಿಂತ ಹಿರಿಯ. ಹಾಗಾಗಿ ಬಾಂಧವಾರ್ಥ ಅವನು ಆಜ್ಞೆ ಮಾಡುತ್ತಿದ್ದಾನೆ ಎಂದು ಹೇಳಿರುವುದು. ಇಲ್ಲಿ ದುರ್ಯೋಧನ ಬಲರಾಮನ ಶಿಷ್ಯ. ಹಾಗಾಗಿ ಬಲರಾಮ ವಯಕ್ತಿಕ ಗುರುತ್ವವನ್ನು ಉಪಯೋಗಿಸುವ ಬದಲು ಒಂದು ಸಮಗ್ರ ರಾಜ್ಯದ ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ಇಲ್ಲಿ ಮಾತನಾಡಿದ].

 

ಆಜ್ಞಾಪಯಾಮಾಸ ವ ಉಗ್ರಸೇನ ಇತ್ಯುಕ್ತಮೇವ ತು ನಿಶಮ್ಯ ಕುರುಪ್ರವೀರಾಃ ।

ಸಂಶ್ರಾವ್ಯ ದುಷ್ಟವಚನಾನಿ ಬಲಂ ಪುರಂ ಸ್ವಂ ಕ್ರೋಧಾತ್ ಸಮಾವಿವಿಶುರತ್ರ ಚುಕೋಪ ರಾಮಃ ॥೨೨.೨೪೨॥

 

‘ಉಗ್ರಸೇನನು ನಿಮಗೆ ಆಜ್ಞೆಮಾಡಿದ್ದಾನೆ’ ಎನ್ನುವ ಬಲರಾಮನ ಹೇಳಿಕೆಯನ್ನು ಕೇಳಿ ದುರ್ಯೋಧನ  ಮೊದಲಾದವರು ಕೋಪಗೊಂಡು ಬಲರಾಮನನ್ನು ಚೆನ್ನಾಗಿ ಬೈದರು. (ಭಾಗವತದಲ್ಲಿ ಹೇಳುವಂತೆ: ಕಾಲಿನ ಚಪ್ಪಲಿ ತಲೆ ಮೇಲೆ ಕುಳಿತುಕೊಳ್ಳಲು ಸಾಧ್ಯವೇ .... ಇತ್ಯಾದಿಯಾಗಿ ಬೈದರು). ಹೀಗೆ ಅತ್ಯಂತ ದುಷ್ಟ ವಚನಗಳನ್ನು ಅವನಿಗೆ ಕೇಳಿಸಿ, ಸಿಟ್ಟಿನಿಂದ ತಮ್ಮ ಪಟ್ಟಣಕ್ಕೆ ಹಿಂತಿರುಗಿದರು. ಆಗ ಬಲರಾಮ ಕ್ರೋಧಗೊಂಡ.

[ಕೌರವಾದಿಗಳಿಗೆ ಕೋಪ ಏಕೆ ಬಂತು ಎಂದರೆ- ಯಾದವ ವಂಶದವರಿಗೆ ರಾಜಸೂಯ ಯಾಗವಾಗಲೀ, ಅಶ್ವಮೇಧ ಯಾಗವಾಗಲೀ ಇಲ್ಲ. ಅವರದ್ದು ಗಣರಾಜ್ಯವೇ ವಿನಃ ಚಕ್ರವರ್ತಿತ್ವ ಅವರಿಗಿರಲಿಲ್ಲ. ಯಯಾತಿಯ ಶಾಪದ ಹಿನ್ನೆಲೆಯಲ್ಲಿ ಪುರು ನಂತರ ಯದುಕುಲದಲ್ಲಿ ಎಲ್ಲರೂ ಕೇವಲ ಅವರ ಗುಂಪಿಗಷ್ಟೇ ರಾಜರಾಗಿದ್ದರು. ಅದು ಒಂದು ರೀತಿಯ ಖಾಸಗೀ ದೇಶ ಇದ್ದಂತೆ ಇತ್ತು! ಅವರು ಇನ್ನೊಬ್ಬ ಚಕ್ರವರ್ತಿಗೆ  ಅಧೀನರಾಗಿರಲಿಲ್ಲ. ಕಪ್ಪ ಕೊಡುವುದಾಗಲೀ ಅಥವಾ ಬೇರೆಯವರಿಂದ ಕಪ್ಪ ತೆಗೆದುಕೊಳ್ಳುವುದಾಗಲೀ ಅವರಿಗೆ ಅನ್ವಯವಾಗಿರಲಿಲ್ಲ. (ಇದನ್ನು ಮೀರಿ ಯದುಕುಲದಲ್ಲಿ ಇಬ್ಬರು ಅಶ್ವಮೇಧ ಯಾಗ ಮಾಡಿದ್ದಾರೆ. ಮೊದಲನೆಯವನು  ಕಾರ್ತವೀರ್ಯಾರ್ಜುನ. ಅವನು ದತ್ತಾತ್ರಯ ನಾಮಕ ಪರಮಾತ್ಮನ ಪ್ರಸಾದದಿಂದ ಅಶ್ವಮೇಧಯಾಗ  ಮಾಡಿದ. ಎರಡನೆಯದಾಗಿ ಸ್ವಯಂ ಶ್ರೀಕೃಷ್ಣ ಮಾಡಿದ ಒಂದು ದಿನದ ಅಶ್ವಮೇಧಯಾಗ. ಇದನ್ನು ಬಿಟ್ಟರೆ ಯದು ವಂಶದಲ್ಲಿ ಪ್ರಸಿದ್ಧರಾದ ಇತರರು ಕಾಣಸಿಗುವುದಿಲ್ಲ). ಹೀಗಾಗಿ ಇಂತಹ ಯಾದವ ರಾಜನಾದ ಉಗ್ರಸೇನ ತಮಗೆ ಆಜ್ಞೆ ಮಾಡಿ ಕಳುಹಿಸಿದ್ದಾನೆ ಎಂದು ಬಲರಾಮ ಹೇಳಿದಾಗ ಸ್ವಾಭಾವಿಕವಾಗಿ ಕೌರವರಿಗೆ ಕೋಪ ಬಂತು.]

 

ಸ ಲಾಙ್ಗಲೇನ ತತ್ ಪುರಂ ವಿಕೃಷ್ಯ ಜಾಹ್ನವೀಜಲೇ ।

ನಿಪಾತಯನ್ ನಿವಾರಿತಃ ಪ್ರಣಮ್ಯ ಸರ್ವಕೌರವೈಃ       ॥೨೨.೨೪೩॥

 

ಬಲರಾಮನಾದರೋ ಸಿಟ್ಟಿನಿಂದ ಇಡೀ ಹಸ್ತಿನಾವತಿಯನ್ನು ಎಳೆದು ಗಂಗಾನದಿಯಲ್ಲಿ ಮುಳುಗಿಸುವವನಾಗಿ ತೊಡಗಿದ. ಆಗ ಎಲ್ಲಾ ಕೌರವರು ಬಂದು  ನಮಸ್ಕರಿಸಿ ಬೇಡಿಕೊಂಡು -ತಡೆಹಿಡಿಯಲ್ಪಟ್ಟ.

[ಹಸ್ತಿನಪುರ ಗಂಗಾನದಿಗೆ ಬಾಗಿ ಇದೆ ಎನ್ನುತ್ತದೆ ಭಾಗವತ. ಇಂದು ಹಸ್ತಿನಪುರ ಪಟ್ಟಣ ನಶಿಸಿಹೋಗಿ  ‘ದೋಅಬ್’ ಎನ್ನುವ  ಒಂದು ಹಳ್ಳಿಯಾಗಿ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂದಿಗೂ ಇಂದ್ರಪ್ರಸ್ಥ ಒಂದು ಶಕ್ತಿಕೇಂದ್ರವಾಗಿರುವುದು ವಿಶೇಷ.] 

 

ಸಭಾರ್ಯ್ಯಮಾಶು ಪುತ್ರಕಂ ಸುಯೋಧನಾಭಿಪೂಜಿತಮ್ ।

ಸಪಾರಿಬರ್ಹಮಾಪ್ಯ ಚ ಪ್ರಜಗ್ಮಿವಾನ್ ಸ್ವಕಾಂ ಪುರಮ್             ॥೨೨.೨೪೪॥

 

ಬಲರಾಮನು ದುರ್ಯೋಧನನಿಂದ ಸತ್ಕೃತನಾದ.  ಹೆಂಡತಿಯೊಂದಿಗೆ ಕೂಡಿದ ಮಗನಾದ ಸಾಂಬನನ್ನು ದುರ್ಯೋಧನ ಗೌರವದಿಂದ, ವಿವಾಹಕಾಲದ ಬಳುವಳಿಗಳೊಂದಿಗೆ ತಂದೊಪ್ಪಿಸಿದ. ಅವರನ್ನು ಕಂಡು ಪ್ರಸನ್ನನಾದ ಬಲರಾಮ ಮಗ ಮತ್ತು ಸೊಸೆಯೊಂದಿಗೆ ತನ್ನ ಪಟ್ಟಣಕ್ಕೆ ಹಿಂತಿರುಗಿದ.

No comments:

Post a Comment