ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 14, 2022

Mahabharata Tatparya Nirnaya Kannada 22-261-265

 

ಯದಾ ಜ್ವರಾದ್ಯಾ ಅಖಿಲಾಃ ಪ್ರವಿದ್ರುತಾಸ್ತದಾ ಸ್ವಯಂ ಪ್ರಾಪ ಹರಿಂ ಗಿರೀಶಃ ।

ತಯೋರಭೂದ್ ಯುದ್ಧಮಥೈನಮಚ್ಯುತೋ ವಿಜೃಮ್ಭಯಾಮಾಸ ಹ ಜೃಮ್ಭಣಾಸ್ತ್ರತಃ ॥೨೨.೨೬೧॥

 

ಯಾವಾಗ ಜ್ವರ ಮೊದಲಾದ ಎಲ್ಲಾ ಭೃತ್ಯರು ಪಲಾಯನ ಮಾಡಿದರೋ, ಆಗ ಸ್ವಯಂ ರುದ್ರನು ಯುದ್ಧಕ್ಕಾಗಿ ನಾರಾಯಣನನ್ನು ಹೊಂದಿದನು. ಶ್ರೀಕೃಷ್ಣ ಹಾಗು ಸದಾಶಿವನ ನಡುವೆ ಯುದ್ಧವಾಯಿತು. ಸ್ವಲ್ಪ ಹೊತ್ತಿನ ನಂತರ ಶ್ರೀಕೃಷ್ಣ ಪರಮಾತ್ಮನು ಜೃಮ್ಭಣಾಸ್ತ್ರದಿಂದ ಸದಾಶಿವನ ಮೈಯನ್ನು ಕುಗ್ಗಿಸಿದ. (ಜೃಮ್ಭಣ ಎನ್ನುವುದಕ್ಕೆ  ಮೈ ಮರಗಟ್ಟುವುದು/ಸ್ತಂಭೀಕರಿಸುವುದು, ಪದೇ ಪದೇ ಆಕಳಿಸುವಂತಾಗುವುದು  ಇತ್ಯಾದಿ ಅರ್ಥಗಳಿವೆ).

 

ವಿಜೃಮ್ಭಿತೇ ಶಙ್ಕರೇ ನಿಷ್ಪ್ರಯತ್ನೇ ಸ್ಥಾಣೂಪಮೇ ಸಂಸ್ಥಿತೇ ಕಞ್ಜಜಾತಃ ।

ದೈತ್ಯಾವೇಶಾದ್ ವಾಸುದೇವಾನಭಿಜ್ಞಂ ಸಮ್ಬೋಧಯಾಮಾಸ ಸದುಕ್ತಿಭಿರ್ವಿಭುಃ ॥೨೨.೨೬೨॥

 

ಸದಾಶಿವನು ತನ್ನ ದೇಹದ ಎಲ್ಲಾ ಕ್ರಿಯೆಗಳನ್ನು ಕಳೆದುಕೊಂಡು, ಪ್ರಯತ್ನವೇ ಇಲ್ಲದ ಮೋಟು ಮರದಂತಾಗಲು, ಬ್ರಹ್ಮದೇವರು ದೈತ್ಯಾವೇಶದಿಂದಾಗಿ ಪರಮಾತ್ಮನನ್ನು ತಿಳಿಯದೇ ಯುದ್ಧ ಮಾಡುತ್ತಿರುವ  ಸದಾಶಿವನಿಗೆ ವೇದೊಕ್ತಿಯಿಂದ ತಿಳುವಳಿಕೆ(ನೆನಪಿಸಿ) ಕೊಟ್ಟರು.

 

ಪ್ರಗೃಹ್ಯ ಶರ್ವಂ ಚ ವಿವೇಶ ವಿಷ್ಣೋಃ ಸ ತೂದರಂ ದರ್ಶಯಾಮಾಸ ತತ್ರ ।

ಶಿವಸ್ಯ ರೂಪಂ ಸ್ತಮ್ಭಿತಂ ಬಿಲ್ವನಾಮ್ನಿ ವನೇ ಗಿರೀಶೇನ ಚ ಯತ್ ತಪಃ ಕೃತಮ್ ।

ಶೈವಂ ಪದಂ ಪ್ರಾಪ್ತುಮೇವಾಚ್ಯುತಾಚ್ಚ ತಚ್ಚಾವದತ್ ಕಞ್ಜಜಃ ಶಙ್ಕರಸ್ಯ ॥೨೨.೨೬೩॥

 

ಸದಾಶಿವನನ್ನು ಕರೆದುಕೊಂಡು ಬ್ರಹ್ಮದೇವರು ಶ್ರೀಕೃಷ್ಣನ ಉದರವನ್ನು ಪ್ರವೇಶಮಾಡಿದರು. (ಇದು ಹೊರಗಿರುವ ಅಯೋಗ್ಯರಿಗೆ ಕಾಣುವ ಕ್ರಿಯೆ ಅಲ್ಲ). ಅಲ್ಲಿ ಕೃಷ್ಣನ ಅಸ್ತ್ರದಿಂದ ಸ್ತಂಭಿತವಾದ ರುದ್ರನ ರೂಪಾಂತರವನ್ನು ತೋರಿಸಿ. ಬಿಲ್ವಾ ಎನ್ನುವ ಹೆಸರಿನ ಕಾಡಿನಲ್ಲಿ ಹಿಂದೆ ಸದಾಶಿವನಿಂದ ಶಿವಪದವಿಯನ್ನು ಹೊಂದಲು ಏನು ತಪಸ್ಸು ಮಾದಲ್ಪಟ್ಟಿತ್ತೋ, ಅದರ ಬಗೆಗೆ ಅರಿವು ನೀಡಿದರು. ಅಂದರೆ ಯಾವ ಪರಮಾತ್ಮನಿಂದ ಶಿವ ಪದವಿಯನ್ನು ಹೊಂದಿರುವೆಯೋ ಅದೇ ಪರಮಾತ್ಮನಿಗೆ ವಿರುದ್ಧ ನಿಂತಿರುವೆ  ಎಂದು ಬ್ರಹ್ಮದೇವರು ರುದ್ರದೇವರಿಗೆ ಬೋಧನೆ ಮಾಡಿದರು.  ಸದಾಶಿವ ಭಗವಂತನ ಯಾವ ರೂಪವನ್ನು ಉಪಾಸನೆ ಮಾಡುತ್ತಾನೋ ಆ ರೂಪದ ಬಗ್ಗೆಯೂ  ಬ್ರಹ್ಮ ದೇವರು ಹೇಳಿದರು.

 

ಅಪೇತಮೋಹೋsಥ ವೃಷಧ್ವಜೋ ಹರಿಂ ತುಷ್ಟಾವ ಬಾಣೋSಭಿಸಸಾರ ಕೇಶವಮ್ । 

ತಸ್ಯಾಚ್ಯುತೋ  ಬಾಹುಸಹಸ್ರಮಚ್ಛಿನತ್ ಪುನಶ್ಚಾರಿಂ ಜಗೃಹೇ ತಚ್ಛಿರೋರ್ತ್ಥೇ ॥೨೨.೨೬೪॥

 

ತದನಂತರ ಮೋಹವನ್ನು ಕಳೆದುಕೊಂಡ, ವೃಷಭವನ್ನೇ ಧ್ವಜದ ಚಿಹ್ನೆಯಾಗಿ ಹೊಂದಿರುವ ಸದಾಶಿವನು ಪರಮಾತ್ಮನನ್ನು ಸ್ತೋತ್ರ ಮಾಡಿದನು. ಆಗ ಬಾಣಾಸುರನು ಪರಮಾತ್ಮನ ಬಳಿ ಯುದ್ಧ ಮಾಡಲು ಬಂದ. ಶ್ರೀಕೃಷ್ಣನು ಅವನ ಸಾವಿರ ತೋಳುಗಳನ್ನು ಕತ್ತರಿಸಿದ ಮತ್ತು ಅವನ ತಲೆಯನ್ನು ಕತ್ತರಿಸಲು ಚಕ್ರವನ್ನು ಕೈಗೆತ್ತಿಕ್ಕೊಂಡ.

 

ತದಾ ಶಿವೇನ ಪ್ರಣತೋ ಬಾಣರಕ್ಷಣಕಾಮ್ಯಯಾ ।

ಕೃತ್ವಾ ಸ್ವಭಕ್ತಂ ಬಾಣಂ ತಂ ರರಕ್ಷ ದ್ವಿಭುಜೀಕೃತಮ್    ॥೨೨.೨೬೫॥

 

ಆಗ ಬಾಣಾಸುರನನ್ನು ರಕ್ಷಣೆ ಮಾಡಬೇಕು ಎನ್ನುವ ಬಯಕೆಯಿಂದ ಸದಾಶಿವನಿಂದ ನಮಸ್ಕೃತನಾದ ಶ್ರೀಕೃಷ್ಣನು,  ಬಾಣನನ್ನು ತನ್ನ ಭಕ್ತನನ್ನಾಗಿ ಮಾಡಿಕೊಂಡು, ಅವನ ಎರಡು ಭುಜವನ್ನಷ್ಟೇ ಉಳಿಸಿ ರಕ್ಷಿಸಿದ.

No comments:

Post a Comment