ಕ್ರಮೇಣ ಪಾರ್ತ್ಥಾ ಅಪಿ ಶೈಶಿರಂ ಗಿರಿಂ
ಸಮಾಸದಂಸ್ತತ್ರ ಕೃಷ್ಣಾಂ ಸುದುರ್ಗ್ಗೇ ।
ವಿಷಜ್ಜನ್ತೀಮೀಕ್ಷ್ಯ ತೈಃ ಸಂಸ್ಮೃತೋSಥ ಹೈಡಿಮ್ಬ
ಆಯಾತ್ ಸಹಿತೋ ನಿಶಾಚರೈಃ ॥೨೨.೨೮೧॥
ತದನಂತರ
ಕೃಷ್ಣಪರಮಾತ್ಮನಿಂದ ಬೀಳ್ಕೊಂಡ ಪಾಂಡವರು ಪ್ರಭಾಸದಿಂದ ಹೊರಟು ಹಿಮಾಲಯ ಪರ್ವತವನ್ನು ಹೊಂದಿದರು.
ಅಲ್ಲಿ ಕಡಿದಾದ ಪ್ರದೇಶದಲ್ಲಿ ಆಯಾಸಪಡುವ ದ್ರೌಪದಿಯನ್ನು ಕಂಡು ಪಾಂಡವರಿಂದ ಮನದಲ್ಲಿ
ನೆನೆಯಲ್ಪಟ್ಟವನಾದ ಘಟೋತ್ಕಚನು ರಾಕ್ಷಸರಿಂದ ಒಡಗೂಡಿ ಅಲ್ಲಿಗೆ ಬಂದನು.
ಉವಾಹ ಕೃಷ್ಣಾಂ ಸ ತು
ತಸ್ಯ ಭೃತ್ಯಾ ಊಹುಃ ಪಾರ್ತ್ಥಾಂಸ್ತೇ ಬದರ್ಯ್ಯಾಶ್ರಮಂ ಚ ।
ಪ್ರಾಪ್ಯಾತ್ರ
ನಾರಾಯಣಪೂಜಯಾ ಕೃತಸ್ವಕೀಯಕಾರ್ಯ್ಯಾ ಯಯುರುತ್ತರಾಂ ದಿಶಮ್ ॥೨೨.೨೮೨॥
ಘಟೋತ್ಕಚ ತಾಯಿ ದ್ರೌಪದೀದೇವಿಯನ್ನು
ಹೊತ್ತ. ಅವನ ದಾಸರೆಲ್ಲರೂ ಪಾಂಡವರನ್ನು ಹೊತ್ತರು. ಪಾಂಡವರು ಬದರೀಕಾಶ್ರಮವನ್ನು ಹೊಂದಿ, ಅಲ್ಲಿ ನರ-ನಾರಾಯಣರನ್ನು
ಪೂಜಿಸುವವ ಮೂಲಕ ತಮ್ಮೆಲ್ಲ ಕಾರ್ಯಗಳನ್ನು ಮುಗಿಸಿಕೊಂಡು ಉತ್ತರದಿಕ್ಕಿಗೆ ತೆರಳಿದರು.
ಅತೀತ್ಯ ಶರ್ವಶ್ವಶುರಂ
ಗಿರಿಂ ತೇ ಸುವರ್ಣ್ಣಕೂಟಂ ನಿಷಧಂ ಗಿರಿಂ ಚ ।
ಮೇರೋಃ ಪ್ರಾಚ್ಯಾಂ
ಗನ್ಧಮಾದೇ ಗಿರೌ ಚ ಪ್ರಾಪುರ್ಬದರ್ಯ್ಯಾಶ್ರಮಮುತ್ತಮಂ ಭುವಿ ॥೨೨.೨೮೩॥
ರುದ್ರನ ಮಾವನಾದ ಹಿಮವತ್ಪರ್ವತವನ್ನು
ದಾಟಿ, ಬಂಗಾರದ ಶಿಖರವನ್ನು ಹೊಂದಿರುವ ನಿಷಧ ಪರ್ವತವನ್ನೂ ದಾಟಿ, ಮೇರುಪರ್ವತದ
ಪೂರ್ವದಿಕ್ಕಿನಲ್ಲಿರುವ ಗಂಧಮಾದನ ಗಿರಿಯಲ್ಲಿರುವ, ಭೂಲೋಕದಲ್ಲೇ ಉತ್ತಮವೆನಿಸಿರುವ ಇನ್ನೊಂದು
ಬದರೀಕಾಶ್ರಮವನ್ನು ಕುರಿತು ಅವರು ತೆರಳಿದರು.
ತಸ್ಮಿನ್ ಮುನೀನ್ದ್ರೈರಭಿಪೂಜ್ಯಮಾನಾ ನಾರಾಯಣಂ
ಪೂಜಯನ್ತಃ ಸದೈವ ।
ಚಕ್ರುಸ್ತಪೋ ಜ್ಞಾನಸಮಾಧಿಯುಕ್ತಂ ಸತ್ತತ್ವವಿದ್ಯಾಂ ಪ್ರತಿಪಾದಯನ್ತಃ ॥೨೨.೨೮೪॥
ಆ ಬದರಿಕಾಶ್ರಮದಲ್ಲಿ
ಮುನಿಗಳಿಂದ ಸತ್ಕರಿಸಲ್ಪಟ್ಟವರಾದ ಪಾಂಡವರು, ಯಾವಾಗಲೂ ನಾರಾಯಣನನ್ನು ಪೂಜಿಸುವವರಾಗಿ, ವೇದಾಂತದ
ಚಿಂತನೆಯನ್ನು ಮಾಡುತ್ತಾ, ಜ್ಞಾನ ಹಾಗೂ ಧ್ಯಾನದಿಂದ ಕೂಡಿರುವ ತಪಸ್ಸನ್ನು ಮಾಡಿದರು.
ಏವಂ ಬದರ್ಯ್ಯಾಂ ವಿಹರತ್ಸು ತೇಷು ಕ್ವಚಿದ್ ರಹಃ
ಕೃಷ್ಣಯಾ ವಾಯುಸೂನೌ ।
ಸ್ಥಿತೇ ಗರುತ್ಮಾನುರಗಂ ಜಹಾರ ಮಹಾಹ್ರದಾದ್
ವಾಸುದೇವಾಸನಾಗ್ರ್ಯಃ ॥೨೨.೨೮೫
ಈರೀತಿಯಾಗಿ ಬದರಿಯಲ್ಲಿ
ಪಾಂಡವರು ವಿಹಾರ ಮಾಡುತ್ತಿರಲು,
ಒಮ್ಮೆ ಭೀಮಸೇನನು ದ್ರೌಪದಿಯೊಂದಿಗೆ ಏಕಾಂತದಲ್ಲಿರಲು, ಪರಮಾತ್ಮನ ವಾಹನದಲ್ಲಿಯೇ ಶ್ರೇಷ್ಠನಾದ
ಗರುಡನು ಅಲ್ಲಿರುವ ದೊಡ್ಡ ಸರೋವರದಿಂದ ಹಾವಂದನ್ನು ಅಪಹರಿಸಿದನು.
ತತ್ಪಕ್ಷವಾತೇನ ವಿಚಾಲಿತೇ ತು ತಸ್ಮಿನ್ ಗಿರೌ
ಕಮಲಂ ಹೈಮಮಗ್ರ್ಯಮ್ ।
ಪಪಾತ ಕೃಷ್ಣಾಭೀಮಯೋಃ ಸನ್ನಿಧಾನ ಉದ್ಯದ್ಭಾನೋರ್ಮ್ಮಣ್ಡಲಾಭಂ
ಸುಗನ್ಧಮ್ ॥೨೨.೨೮೬॥
ಗರುಡನ ರೆಕ್ಕೆಯ
ಬಡಿತದಿಂದ ಆ ಗಂಧಮಾದನ ಪರ್ವತವು ಅಲುಗಾಡಲು, ಉದಯಿಸುವ
ಸೂರ್ಯಮಂಡಲದಂತೆ ಹೊಳೆಯುವ, ಸುವರ್ಣಾತ್ಮಕವಾದ, ಶ್ರೇಷ್ಠವಾದ,
ಸುಗಂಧಿತವಾದ ತಾವರೆಯೊಂದು ದ್ರೌಪದಿ ಮತ್ತು ಭೀಮಸೇನರ ಹತ್ತಿರ ಬಂದು ಬಿದ್ದಿತು.
ದೃಷ್ಟ್ವಾSತಿಗನ್ಧಂ ವರಹೇಮಕಞ್ಜಂ ಕುತೂಹಲಾದ್
ದ್ರೌಪದೀ ಭೀಮಸೇನಮ್ ।
ಬಹೂನ್ಯಯಾಚತ್ ತಾದೃಶಾನ್ಯಾನುಭಾವಮವಿಷಹ್ಯಂ
ಜಾನತೀ ದೇವದೈತ್ಯೈಃ ॥೨೨.೨೮೭॥
ದ್ರೌಪದಿಯು ಅತ್ಯಂತ
ಪರಿಮಳಭರಿತವಾದ, ಶ್ರೇಷ್ಠವಾಗಿರುವ, ಬಂಗಾರವರ್ಣದ ಆ ತಾವರೆಯನ್ನು ಕಂಡು, ಕುತೂಹಲದಿಂದ,
ಅದೇರೀತಿಯಾಗಿರುವ ಬಹಳ ಕಮಲಗಳು ತನಗೆ ಬೇಕು ಎಂದು ಭೀಮನನ್ನು ಕೇಳಿದಳು. ದೇವತೆಗಳು ಹಾಗೂ
ದೈತ್ಯರಿಂದಲೂ ಎದುರಿಸಲಾಗದ ಬಲ ಭೀಮಸೇನನದ್ದು ಎಂದು ತಿಳಿದವಳಾಗಿಯೇ ದ್ರೌಪದಿ ಈ ರೀತಿ ಭೀಮಸೇನನನ್ನು
ಕೇಳಿದಳು.
No comments:
Post a Comment