ತಯಾSರ್ತ್ಥಿತಃ ಸಗದಸ್ತುಙ್ಗಮೇನಂ ಗಿರಿಂ
ವೇಗಾದಾರುಹದ್ ವಾಯುಸೂನುಃ।
ಪ್ರಶಸ್ಯಮಾನಃ ಸುರಸಿದ್ಧಸಙ್ಘೈಃ ಮೃದ್ನನ್
ದೈತ್ಯಾನ್ ಸಿಂಹಶಾರ್ದ್ದೂಲರೂಪಾನ್ ॥೨೨.೨೮೮॥
ತಾವರೆಗಾಗಿ ದ್ರೌಪದಿಯಿಂದ
ಬೇಡಲ್ಪಟ್ಟ ಭೀಮಸೇನನು ಗದೆಯನ್ನು ಹಿಡಿದು, ಎತ್ತರವಾಗಿರುವ ಆ ಬೆಟ್ಟವನ್ನು ವೇಗದಿಂದ ಏರಿದನು.
ದೇವತೆಗಳಿಂದಲೂ,
ಸಿದ್ಧರಿಂದಲೂ ಸ್ತೋತ್ರಮಾಡಲ್ಪಟ್ಟವನಾಗಿ, ಸಿಂಹ-ಶಾರ್ದೂಲ ಮೊದಲಾದವುಗಳ ವೇಷದಲ್ಲಿರುವ
ದೈತ್ಯರನ್ನು ತನ್ನ ಕಾಲಿನಿಂದ ಹೊಸಕಿಹಾಕುತ್ತಾ ಭೀಮ ಮುನ್ನೆಡೆದನು.
[ಮಹಾಭಾರತದ ವನಪರ್ವದಲ್ಲಿ
(೧೪೮.೪೨) ಈ ವಿವರಣೆ ಕಾಣಸಿಗುತ್ತದೆ. ‘ಸಿಂಹವ್ಯಾಘ್ರಮೃಗಾಂಶ್ಚೈವ ಮರ್ದಯಾನೋ ಮಹಾಬಲಃ’ .
ಸಿಂಹ-ವ್ಯಾಘ್ರ ಮೊದಲಾದ ಪ್ರಾಣಿಗಳನ್ನು ಹೊಸಕಿ ಹಾಕುತ್ತಾ ಭೀಮ ಮುಂದೆ ಸಾಗಿದ. ‘ಸಿಂಹವ್ಯಾಘ್ರಾಶ್ಚ ಸಙ್ಕ್ರುದ್ಧ ಭೀಮಸೇನಮಥಾSದ್ರವನ್ । ಶಕೃನ್ಮೂತ್ರಂ ಚ
ಮುಞ್ಚಾನಾ ಭಯವಿಭ್ರಾನ್ತಮಾನಸಾಃ । ವ್ಯಾದಿತಾಸ್ಯಾ ಮಹಾರೌದ್ರಾ ವ್ಯನದನ್ ಭೀಷಣಾನ್ ರವಾನ್’ (೧೪೮.೫೦-೫೧). ]
ಆಸೇದಿವಾಂಸ್ತತ್ರ ಹನೂಮದಾಖ್ಯಂ ನಿಜಂ ರೂಪಂ
ಪ್ರೋದ್ಯದಾದಿತ್ಯಭಾಸಮ್ ।
ಜಾನನ್ನಪ್ಯೇನಂ ಸ್ವೀಯರೂಪಂ ಸ ಭೀಮಶ್ಚಿಕ್ರೀಡ
ಏತೇನ ಯಥಾ ಪರೇಣ ॥೨೨.೨೮೯॥
ಆ ಪರ್ವತದಲ್ಲಿ ಉದಯಿಸುವ
ಸೂರ್ಯನಂತೆ ಪ್ರಕಾಶಿಸುತ್ತಿರುವ ‘ಹನುಮಂತ’ ಎಂಬ ತನ್ನದೇ ಆಗಿರುವ ಇನ್ನೊಂದು ರೂಪವನ್ನು ಭೀಮಸೇನ ಹೊಂದಿದನು.
ಹನುಮಂತನನ್ನು ತನ್ನದ್ದಾದ ರೂಪವೆಂದು ತಿಳಿದಿದ್ದರೂ ಕೂಡಾ, ಬೇರೊಬ್ಬರೊಂದಿಗೆ ಯಾವ ರೀತಿ ಮಾತನ್ನಾಡುತ್ತಾರೋ
ಹಾಗೆ ಅವನನ್ನು ಮಾತನಾಡಿಸಿ ಭೀಮ ಕ್ರೀಡಿಸಿದ.
ಧರ್ಮ್ಮೋ ದೇವಾನಾಂ ಪರಮೋ ಮಾನುಷತ್ವೇ ಸ್ವೀಯೇ
ರೂಪೇSಪ್ಯನ್ಯವದೇವ
ವೃತ್ತಿಃ ।
ಅನಾದಾನಂ ದಿವ್ಯಶಕ್ತೇರ್ವಿಶೇಷಾನ್ನರಸ್ವಭಾವೇ ಸರ್ವದಾ ಚೈವ ವೃತ್ತಿಃ ।
ತಸ್ಮಾದ್ ಭೀಮೋ ಹನುಮಾಂಶ್ಚೈಕ ಏವ
ಜ್ಯಾಯಃಕನೀಯೋವೃತ್ತಿಮತ್ರಾಭಿಪೇದೇ ॥೨೨.೨೯೦॥
ದೇವತೆಗಳು ಮನುಷ್ಯರಾಗಿ
ಅವತರಿಸಿದಾಗ, ಮನುಷ್ಯ ಸ್ವಭಾವದಂತೆ ವರ್ತಿಸುವುದು ಅವರಿಗೆ ಧರ್ಮವಾಗಿರುತ್ತದೆ. ದಿವ್ಯಶಕ್ತಿ
ಇದ್ದರೂ ಕೂಡಾ ಅದನ್ನು ಅವರು ಬಳಸಬಾರದು. ವಿಶೇಷವಾಗಿ ಅವರು ನರಸ್ವಭಾವದಲ್ಲಿ(ಬೆವರುವುದು,
ನಿದ್ರಿಸುವುದು, ಆಯಾಸಗೊಳ್ಳುವುದು, ಇತ್ಯಾದಿ ನರಸ್ವಭಾವದಲ್ಲಿ) ಯಾವಾಗಲೂ ಇರಬೇಕು. ಆ ಕಾರಣದಿಂದ ಭೀಮಸೇನ ಮತ್ತು ಹನುಮಂತ
ಇಬ್ಬರೂ ಒಬ್ಬರೇ(ಮುಖ್ಯಪ್ರಾಣನೇ) ಆಗಿದ್ದರೂ ಕೂಡಾ ಹನುಮಂತ ದೊಡ್ಡಣ್ಣ ಹಾಗೂ ತಾನು ಚಿಕ್ಕವನು
ಎನ್ನುವ ವರ್ತನೆಯನ್ನು ಭೀಮಸೇನ ಹೊಂದಿದನು.
ಸರ್ವೇ ಗುಣಾ ಆವೃತಾ
ಮಾನುಷತ್ವೇ ಯುಗಾನುಸಾರಾನ್ಮೂಲರೂಪಾನುಸಾರಾತ್ ।
ಕ್ರಮಾತ್ ಸುರಾಣಾಂ
ಭಾಗತೋSವ್ಯಕ್ತರೂಪಾ ಆದಾನತೋ ವ್ಯಕ್ತಿಮಾಯಾನ್ತ್ಯುರೂಣಾಮ್ ॥೨೨.೨೯೧॥
ಮನುಷ್ಯರಂತೆ ಬಂದಾಗ ದೇವತೆಗಳಿಗೆ
ಯುಗಕ್ಕೆ ಅನುಸಾರವಾಗಿ ಅವರ ಮೂಲರೂಪದ ಎಲ್ಲಾ ಗುಣಗಳಿಗೂ ಆವರಣವಿರುತ್ತದೆ. (ದೇವತೆಗಳಿಗೆ ಜ್ಞಾನ, ಆನಂದ, ಬಲ, ಐಶ್ವರ್ಯ, ಎಲ್ಲವೂ ಇರಬಹುದು. ಆದರೆ ಮನುಷ್ಯತ್ವ
ಹೊಂದಿದಾಗ ಅದು ಆವೃತವಾಗಿರುತ್ತದೆ). ಹೀಗಾಗಿ ಅವರವರ ಯೋಗ್ಯತೆಗೆ ಅನುಗುಣವಾಗಿ ಅವರ ಗುಣಗಳು ಅವ್ಯಕ್ತವಾಗಿರುತ್ತದೆ.
ಸ್ವರೂಪಭೂತವಾದ ಅತ್ಯಂತ ದೊಡ್ಡ ಗುಣಗಳು ಸ್ವೀಕರಿಸಿದಾಗ ಅಭಿವ್ಯಕ್ತಿಯಾಗುತ್ತದೆ, ಇಲ್ಲದಿದ್ದರೆ
ಅಭಿವ್ಯಕ್ತಿ ಆಗುವುದೇ ಇಲ್ಲ.
[ದೊಡ್ಡ ಗುಣವನ್ನು ಸ್ವೀಕರಿಸಿ
ಅಭಿವ್ಯಕ್ತಗೊಳಿಸಿರುವುದಕ್ಕೆ ಉತ್ತಮ ಉದಾಹರಣೆ ಬಲರಾಮ
ಪ್ರಲಂಬಾಸುರನನ್ನು ಕೊಂದಿರುವ ಘಟನೆ. ಆಟವಾಡುವಾಗ ಬಲರಾಮನಿಗೆ ಅವನು ರಾಕ್ಷಸ ಎನ್ನುವುದು
ಗೊತ್ತಿರಲಿಲ್ಲ. ಪ್ರಲಂಬ ತನ್ನ ನಿಜರೂಪವನ್ನು ಆವಿಷ್ಕರಿಸಿ, ಬಲರಾಮನನ್ನು ಬೆನ್ನಿನಲ್ಲಿ ಹೊತ್ತು ಓಡಲು
ಆರಂಭಿಸಿದಾಗ ಬಲರಾಮ ಭೀತನಾದ. ಆಗ ಕೃಷ್ಣ ಬಲರಾಮನಿಗೆ ಅವನ ಮೂಲರೂಪವನ್ನೂ ಮತ್ತು ಅವನ ಅಂತರ್ಯಾಮಿಯಾಗಿರುವ
ತನ್ನ ವಿಶೇಷರೂಪವನ್ನು ನೆನಪಿಸಿದ. ಆಗ ಬಲರಾಮ ತನ್ನ ಮೂಲರೂಪದ ಗುಣವನ್ನು ಸ್ವೀಕರಿಸಿದ ಮತ್ತು ಮುಷ್ಠಿಯಿಂದ ಗುದ್ದಿ ಪ್ರಲಂಬನನ್ನು ಕೊಂದ. ಮನುಷ್ಯರೂಪದಲ್ಲಿರುವ
ದೇವತೆಗಳು ತಮ್ಮ ದೊಡ್ಡಗುಣವನ್ನು ಈ ರೀತಿ ಸಾಂದರ್ಭಿಕವಾಗಿ
ಸ್ವೀಕರಿಸುತ್ತಾರೆ.
ಇದೇ ಬಲರಾಮ
ಲಕ್ಷ್ಮಣನಾಗಿದ್ದಾಗ, ರಾವಣನ ಆಯುಧದ ಹೊಡೆತ ತಿಂದು ಕೆಳಗೆ ಬಿದ್ದು ಮೂರ್ಛಿತನಾಗಿದ್ದ. ಆಗ ರಾವಣ
ಅವನನ್ನು ಅಪಹರಿಸಿಕೊಂಡು ಹೋಗಲು ಪ್ರಯತ್ನಪಟ್ಟ. ಆದರೆ ರಾವಣನಿಗೆ ಲಕ್ಷ್ಮಣನನ್ನು ಎತ್ತಲು ಸಾಧ್ಯವಾಗಲಿಲ್ಲ.
ಏಕೆಂದರೆ ಲಕ್ಷ್ಮಣ ತನ್ನ ಮೂಲರೂಪದ ಚಿಂತನೆ ಮಾಡಿ(ಭೂಮಿಯನ್ನು ಹೊತ್ತ ಶೇಷನ ಭಾರವನ್ನು ಚಿಂತನೆ ಮಾಡಿ) ಅದನ್ನು ಅಭಿವ್ಯಕ್ತಗೊಳಿಸಿದ.
ಹೀಗಾಗಿ ರಾವಣನಿಂದ ಅವನನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ.]
ನೈವಾವ್ಯಕ್ತಿಃ ಕಾಚಿದಸ್ತೀಹ ವಿಷ್ಣೋಃ
ಪ್ರಾದುರ್ಭಾವೇSಪ್ಯತಿಸುವ್ಯಕ್ತಶಕ್ತೇಃ
।
ಇಚ್ಛಾವ್ಯಕ್ತಿಃ ಪ್ರಾಯಶೋ ಮಾರುತಸ್ಯ ತದನ್ಯೇಷಾಂ
ವ್ಯಕ್ತತಾ ಕಾರಣೇನ ॥೨೨.೨೯೨॥
ಅತ್ಯಂತ
ವ್ಯಕ್ತವಾಗಿರುವ ಸ್ವರೂಪಶಕ್ತಿಯುಳ್ಳ ನಾರಾಯಣನಿಗೆ ಅವತಾರ ಕಾಲದಲ್ಲಿಯೂ ಕೂಡಾ ಬಲಜ್ಞಾನಾದಿ
ಗುಣಗಳ ವಿಷಯದಲ್ಲಿ ಅನಭಿವ್ಯಕ್ತಿ ಎನ್ನುವುದು ಇರುವುದೇ ಇಲ್ಲ. ಇನ್ನು ಮುಖ್ಯಪ್ರಾಣನಿಗೆ ಬಹುತೇಕ ಎಲ್ಲಾ ಸಮಯದಲ್ಲಿ, ಬಯಸಿದರೆ ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು
ಬಿಟ್ಟು ಇತರ ದೇವತೆಗಳಿಗೆ ಯಾವುದೋ ಒಂದು ಕಾರಣ ಇದ್ದರೆ ಮಾತ್ರ ಅಭಿವ್ಯಕ್ತಿಯಾಗುತ್ತದೆ.
[ತಾತ್ಪರ್ಯ: ಇಂದ್ರಾದಿ
ದೇವತೆಗಳು ಅವತಾರ ಎತ್ತಿದಾಗ (ಉದಾಹರಣೆಗೆ ರುದ್ರ ಅಶ್ವತ್ಥಾಮನಾದ, ಇಂದ್ರ ಅರ್ಜುನನಾದ, ಶೇಷ
ಬಲರಾಮನಾದ) ಅವರಿಗೆ ಅವತಾರದ ಎಲ್ಲಾ ಕಾಲದಲ್ಲಿ ಬಲಜ್ಞಾನದ ಅಭಿವ್ಯಕ್ತಿ ಇರುವುದಿಲ್ಲ. ಹೀಗಾಗಿ ಕೃಷ್ಣ
ಅರ್ಜುನನಿಗೆ ಉಪದೇಶ ಮಾಡಬೇಕಾಯಿತು, ಬಲರಾಮನಿಗೆ ನೀನು ಶೇಷ, ಸಂಕರ್ಷಣ ರೂಪಿಯಾದ ನನ್ನ ಆವೇಶ
ನಿನ್ನಲ್ಲಿದೆ ಎಂದು ಹೇಳಬೇಕಾಯಿತು. ಆದರೆ ಆ ರೀತಿ ಪರಮಾತ್ಮನಿಗಿಲ್ಲ. ಭಗವಂತ ರಾಮನಾದ,
ವೇದವ್ಯಾಸನಾದ, ಕೃಷ್ಣನಾದ, ಇನ್ನೂ ಅನೇಕ ರೂಪದಿಂದ ಭೂಮಿಯಲ್ಲಿ ಅವತರಿಸಿದ. ಅಲ್ಲಿ ಅವನಿಗೆ ಮೂಲರೂಪದ
ಬಲಜ್ಞಾನಾದಿಗಳು ಇರುವುದು-ಹೋಗುವುದು ಎಂಬುದಿಲ್ಲ. ಮುಖ್ಯಪ್ರಾಣನಿಗೆ(ಉದಾಹರಣೆಗೆ ಹನುಮಂತ, ಭೀಮ)
ಬಹುತೇಕ ಎಲ್ಲಾ ಸಮಯದಲ್ಲಿ ಸ್ವೇಚ್ಛಾನುಸಾರ
ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು ಬಿಟ್ಟು ಇತರ ದೇವತೆಗಳಿಗೆ ಯಾವುದೋ
ಒಂದು ಕಾರಣ ಇದ್ದರೆ ಮಾತ್ರ ಮೂಲರೂಪದ ಬಲಜ್ಞಾನಾದಿ ಗುಣಗಳು ಅಭಿವ್ಯಕ್ತವಾಗುತ್ತದೆ].
ತಸ್ಮಾದ್ ಭೀಮೋ ಧರ್ಮ್ಮವೃದ್ಧ್ಯರ್ತ್ಥಮೇವ
ಸ್ವೀಯೇ ರೂಪೇSಪ್ಯನ್ಯವದ್ ವೃತ್ತಿಮೇವ ।
ಪ್ರದರ್ಶಯಾಮಾಸ ತಥಾSಸುರಾಣಾಂ
ಮೋಹಾಯೈವಾಶಕ್ತವಚ್ಛಕ್ತಿರೂಪಃ ॥೨೨.೨೯೩॥
ಈ ಕಾರಣದಿಂದಲೇ ಭೀಮಸೇನನು ಧರ್ಮವೃದ್ಧಿಗಾಗಿ ಸ್ವಕೀಯನಾಗಿರುವ ಹನುಮಂತನ ಮುಂದೆ ತನ್ನನ್ನು ಇತರರು ಹೇಗೋ ಹಾಗೆ ತೋರಿಸಿಕೊಂಡ. ಅಷ್ಟೇ ಅಲ್ಲ, ಅಸುರರನ್ನು ಮೊಹಿಸುವುದಕ್ಕಾಗಿಯೇ ಶಕ್ತಿರೂಪನಾದರೂ ಕೂಡಾ ಭೀಮ ಆಶಕ್ತನಂತೆ ತೋರಿದ.
[ಹನುಮಂತನ ಬಾಲ ಎತ್ತುವ
ಪ್ರಸಂಗ ನಡೆದಿರುವುದು ಭೀಮಸೇನನ ಅಜ್ಞಾನದಿಂದಾಗಲೀ, ಬಲಹೀನತೆಯಿಂದಾಗಲೀ ಅಲ್ಲ. ಇದೆಲ್ಲವನ್ನೂ
ಕೂಡಾ ನಾರಾಯಣ ಪಂಡಿತರು ಹೀಗೆ ವಿವರಿಸಿದ್ದಾರೆ: ‘ಗಚ್ಛನ್ ಸೌಗನ್ಧಿಕಾರ್ಥಂ ಪಥಿ ಸ ಹನುಮತಃ
ಪುಚ್ಛಮಚ್ಛಸ್ಯ ಭೀಮಃ ಪ್ರೋದ್ಧರ್ತುಂನಾಶಕತ್ ಸ ತ್ವಮುಮುರುವಪುಷಾ ಭೀಷಯಾಮಾಸ ಚೇತಿ । ಪೂರ್ಣಜ್ಞಾನೌಜಸೋಸ್ತೇ
ಗುರುತಮ ವಪುಷೋಃ ಶ್ರೀಮದಾನನ್ದತೀರ್ಥ ಕ್ರೀಡಾಮಾತ್ರಂ ತದೇತತ್ ಪ್ರಮದದ ಸುಧೀಯಾಂ ಮೋಹಕದ್ವೇಷಭಾಜಾಮ್’]
No comments:
Post a Comment