ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 9, 2022

Mahabharata Tatparya Nirnaya Kannada 22-245-250

 

ಇತ್ಯಾದಿಕರ್ಮ್ಮಾಣಿ ಮಹಾನ್ತಿ ರಾಮಸ್ಯಾSಸಞ್ಛೇಷಸ್ಯಾಚ್ಯುತಾವೇಶಿನೋSಲಮ್ ।

ಯಸ್ಯಾಚ್ಯುತಾವೇಶವಿಶೇಷಕಾಲಂ ಜ್ಞಾತ್ವಾ ಭೀಮೋSಪ್ಯಸ್ಯ ನೋದೇತಿ ಯುದ್ಧೇ ॥೨೨.೨೪೫॥

 

ಪರಮಾತ್ಮನ ವಿಶೇಷ ಆವೇಶವಿರುವ ಶೇಷಾವತಾರಿಯಾದ ಬಲರಾಮನು ಇವೇ ಮೊದಲಾಗಿರತಕ್ಕಂತಹ ಮಹಾಕರ್ಮಗಳನ್ನು ಮಾಡಿದ. ಪರಮಾತ್ಮನ ಆವೇಶದ ಕಾಲವನ್ನು ತಿಳಿದು, ಭೀಮನೂ ಕೂಡಾ ಯುದ್ಧದಲ್ಲಿ ಅವನನ್ನು ಸೋಲಿಸಲು ಮುಂದಾಗುತ್ತಿರಲಿಲ್ಲ.

 

ಕ್ರೀಡಾಯುದ್ಧೇ ಬಹುಶೋ ರೌಹಿಣೇಯೇ ವ್ಯಕ್ತಿಂ ವಿಷ್ಣೋರ್ಭೀಮಸೇನೋ ವಿದಿತ್ವಾ ।

ತಾತ್ಕಾಲಿಕೀಂ ಕ್ರೀಡಮಾನೋSಪಿ ತೇನ ನೈವೋದ್ಯಮಂ ಕುರುತೇ ವಿಷ್ಣುಭಕ್ತ್ಯಾ             ॥೨೨.೨೪೬॥

 

ತದಾ ಜಯೀ ಪ್ರಭವತ್ಯೇಷ ರಾಮೋ ನಾತಿವ್ಯಕ್ತಸ್ತತ್ರ ಯದಾ ಜನಾರ್ದ್ದನಃ ।

ತದಾ ಭೀಮೋ ವಿಜಯೀ ಸ್ಯಾತ್ ಸದೈವ ವಿಷ್ಣೋಃ ಕೇಶಾವೇಶವಾನ್ ಯತ್ ಸ ರಾಮಃ ॥೨೨.೨೪೭॥

 

ಗದಾಯುದ್ಧದಲ್ಲಿ ಬಲರಾಮ ಭೀಮನ ಗುರು. ಅಲ್ಲಿ ಕಲಿಕೆಯ ನಂತರ ದಿನವೂ ಯುದ್ಧದ ಅಭ್ಯಾಸಕ್ಕಾಗಿ ಕ್ರೀಡಾಯುದ್ಧ ನಡೆಯುತ್ತಿತ್ತು. ಆರೀತಿಯ ಕ್ರೀಡಾಯುದ್ಧದಲ್ಲಿ ಒಮ್ಮೊಮ್ಮೆ ಬಲರಾಮನಲ್ಲಿ ಪರಮಾತ್ಮನ ಅಭಿವ್ಯಕ್ತಿಯನ್ನು ತಿಳಿದು, ಪರಮಾತ್ಮನ ಮೇಲಿನ ಭಕ್ತಿಯಿಂದ ಭೀಮಸೇನನು ಏನೂ ಪ್ರಯತ್ನಪಡುತ್ತಿರಲಿಲ್ಲ ಮತ್ತು ಅದರಿಂದಾಗಿ ಹೊಡೆಸಿಕೊಳ್ಳುತ್ತಿದ್ದ ಮತ್ತು ಬಲರಾಮನು ಗೆಲ್ಲುತ್ತಿದ್ದ. ಬಲರಾಮನಲ್ಲಿ ಯಾವಾಗ ಜನಾರ್ದನ ಅಭಿವ್ಯಕ್ತನಾಗುತ್ತಿರಲಿಲ್ಲವೋ ಆಗ ಭೀಮಸೇನ ಗೆಲ್ಲುತ್ತಿದ್ದ. ಆ ಬಲರಾಮನು ನಾರಾಯಣನ ಶುಕ್ಲಕೇಶ ಎನಿಸಿಕೊಂಡಿರುವ ಸಂಕರ್ಷಣರೂಪಿ ಭಗವಂತನ ಆವೇಶವುಳ್ಳವನು ಆಗಿರುವನಷ್ಟೇ.

 

ಏತಾದೃಶೇನೈವ ರಾಮೇಣ ಯುಕ್ತೇ ಕೃಷ್ಣೇ ದ್ವಾರ್ವತ್ಯಾಂ ನಿವಸತ್ಯಭ್ಜನಾಭೇ ।

ಸ್ವಪ್ನೇSನಿರುದ್ಧೇನ ರತಾ ಕದಾಚಿದ್ ಬಾಣಾತ್ಮಜೋಷಾ ಚಿತ್ರಲೇಖಾಮುವಾಚ ॥೨೨.೨೪೮॥

 

ಈರೀತಿಯಾಗಿ ಬಲರಾಮನಿಂದ ಕೂಡಿರುವ ಶ್ರೀಕೃಷ್ಣನು ದ್ವಾರಕಾಪಟ್ಟಣದಲ್ಲಿ ವಾಸಮಾಡುತ್ತಿರಲು, ಒಮ್ಮೆ ಬಾಣಾಸುರನ ಮಗಳಾದ ಉಷಾ ನಾಮಕ ಕನ್ಯೆಯು ಅನಿರುದ್ಧನಿಂದ ಸಂಗಮಕ್ಕೆ ಒಳಗಾದ ಕನಸನ್ನು ಕಂಡು – ಆ ವಿಷಯವನ್ನು ಚಿತ್ರಲೇಖ ಎನ್ನುವ ತನ್ನ ಆಪ್ತಸಖಿಗೆ ಹೇಳುತ್ತಾಳೆ.

[ಬಾಣ ಎನ್ನುವವನು  ಬಲಿಯ ಮಗ. ಅವನು ಭಗವದ್ ಭಕ್ತನೇ ಆಗಿದ್ದ. ಅವನಲ್ಲಿ ಬಾಣ ಎನ್ನುವ ಅಸುರನ ಆವೇಶವಿತ್ತು. ಅದರಿಂದಾಗಿ ಎಷ್ಟೋ ಬಾರಿ ಅವನು ಪರಮಾತ್ಮನಿಗೆ ವಿರುದ್ಧವಾಗಿ ನಡೆಯುತ್ತಿದ್ದ. ಅವನಿಗೆ ಉಷಾ ಎನ್ನುವ ಒಬ್ಬಳು ಮಗಳಿದ್ದಳು. ರುದ್ರ ದೇವರ ಅನುಗ್ರಹವನ್ನು ಪಡೆದಿರುವ ಆಕೆ ಒಮ್ಮೆ ಒಬ್ಬ ಸುರಾಸುಂದರಾಂಗ ಬಂದು ತನ್ನನ್ನು ಕೂಡಿದಂತೆ ಕನಸು ಕಂಡಳು.  ಈ ವಿಷಯವನ್ನು ಅವಳು ಚಿತ್ರಲೇಖ ಎನ್ನುವ ಆಪ್ತಸಖಿಯಲ್ಲಿ ಹೇಳಿದಳು]  

 

ತಮಾನಯೇತ್ಯಥ ಸಾ ಚಿತ್ರವಸ್ತ್ರೇ ಪ್ರದರ್ಶ್ಯ ಲೋಕಾನ್ ಸಮದರ್ಶಯತ್ ತಮ್ ।

ಪೌತ್ರಂ ವಿದಿತ್ವಾ ವಚನಾಚ್ಚ ತಸ್ಯಾಃ ಕೃಷ್ಣಸ್ಯ ತಂ ಚಾSನಯತ್ ತತ್ರ ರಾತ್ರೌ ॥೨೨.೨೪೯॥

 

ತಾನು ಕನಸಿನಲ್ಲಿ ಕಂಡ ಯುವಕನನ್ನು ಕರೆದು ತರುವಂತೆ ಹೇಳಲ್ಪಟ್ಟ ಚಿತ್ರಲೇಖೆಯು ಸ್ವಲ್ಪ ಯೋಚಿಸಿ, ಲೋಕದಲ್ಲಿರುವ ಎಲ್ಲಾ ಸುಂದರ ಪುರುಷರ ಚಿತ್ರವನ್ನು ಬರೆದು ಉಷಾದೇವಿಗೆ ತೋರಿಸಿದಳು. ಅಲ್ಲಿ ಅವಳು ಅನಿರುದ್ಧನ ಚಿತ್ರವನ್ನೂ ಬರೆದು ತೋರಿಸಿದಳು. ಅನಿರುದ್ಧ ಕೃಷ್ಣನ ಮೊಮ್ಮಗ ಎಂದು ತಿಳಿದೂ ಕೂಡಾ  ಉಷಾದೇವಿಯು ಅವನನ್ನು ಕರೆದು ತರುವಂತೆ ಹೇಳಿದಳು. ಚಿತ್ರಲೇಖೆ ಅನಿರುದ್ಧನನ್ನು  ರಾತ್ರಿ ಯಾರಿಗೂ ಗೊತ್ತಿಲ್ಲದಂತೆ(ಮಾಯೆಯಿಂದ) ಬಾಣನ ಪಟ್ಟಣವಾಗಿರುವ ಶೋಣಪುರಕ್ಕೆ ಕರೆತಂದಳು.

 

ಅನಿರುದ್ಧಂ ಗುಣೋದಾರಮಾನೀತಂ ಚಿತ್ರಲೇಖಯಾ ।

ಪ್ರಾಪ್ಯ ರೇಮೇ ಬಾಣಸುತಾ ದಿವಸಾನ್ ಸುಬಹೂನಪಿ ॥೨೨.೨೫೦॥

 

ಚಿತ್ರಲೇಖೆಯಿಂದ ಕರೆತರಲ್ಪಟ್ಟ ಶ್ರೇಷ್ಠಗುಣವಿರುವ ಅನಿರುದ್ಧನನ್ನು ಗಂಧರ್ವವಿಧಿಯಿಂದ ಮದುವೆಯಾದ ಬಾಣನ ಮಗಳಾಗಿರುವ ಉಷಾದೇವಿಯು ಬಹಳ ದಿವಸಗಳ ಕಾಲ ಅವನೊಂದಿಗೆ ಆನಂದಿಸಿದಳು.

No comments:

Post a Comment