ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 17, 2023

Mahabharata Tatparya Nirnaya Kannada 32-176-180

 

ತನುಸ್ತೃತೀಯಾ ಪವನಸ್ಯ ಸೇಯಂ ಸದ್ಭಾರತಾರ್ತ್ಥಪ್ರತಿದೀಪನಾಯ ।

ಗ್ರನ್ಥಂ ಚಕಾರೇಮಮುದೀರ್ಣ್ಣವಿದ್ಯಾ ಯಸ್ಮಿನ್ ರಮನ್ತೇ ಹರಿಪಾದಭಕ್ತಾಃ ॥ ೩೨.೧೭೬ ॥

 

ಮುಖ್ಯಪ್ರಾಣನ ಈ ಮೂರನೇ ಅವತಾರದಲ್ಲಿ, ನಿರ್ದುಷ್ಟವಾದ ಮಹಾಭಾರತದ ಅರ್ಥವನ್ನು ಪ್ರಕಾಶಪಡಿಸುವುದಕ್ಕಾಗಿ ಈ ಗ್ರಂಥವು ರಚಿಸಲ್ಪಟ್ಟಿತು. ವಿದ್ಯೆಯನ್ನು ಚೆನ್ನಾಗಿ ಬಲ್ಲ ಭಗವದ್ಭಕ್ತರು ಈ ಮಹಾಭಾರತ ತಾತ್ಪರ್ಯದಲ್ಲೇ ಆಸಕ್ತರಾಗಿ ನಿರಂತರ ಹರಿಪಾದಲ್ಲಿ ಕ್ರೀಡಿಸುತ್ತಾರೆ.

 

[ಋಗ್ವೇದದಲ್ಲಿ ಹೇಳಿರುವ, ಈಗಾಗಲೇ ಎರಡನೇ ಅಧ್ಯಾಯದಲ್ಲಿ ವಿವರಿಸಿರುವ ಮುಖ್ಯಪ್ರಾಣನ ಮೂರು ಅವತಾರದ ಕುರಿತಾದ ಮಾತನ್ನು ಮತ್ತೆ ಇಲ್ಲಿ ನಮಗೆ ನೆನಪಿಸುತ್ತಾರೆ:]

 

‘ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ।

‘ನಿರ್ಯ್ಯದೀಂ ಬುಧ್ನಾನ್ಮಹಿಷಸ್ಯ ವರ್ಪ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ॥ ೩೨.೧೭೭ ॥

 

‘ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ’ ।

ಇತ್ಯಾದಿವಾಕ್ಯೋಕ್ತಮಿದಂ ಸಮಸ್ತಂ ತಥಾ ಪುರಾಣೇಷು ಚ ಪಞ್ಚರಾತ್ರೇ ॥ ೩೨.೧೭೮ ॥

 

ವೇದಾಭಿಮಾನಿಗಳಾದ ತಾಯಂದಿರು ಪರಮಾತ್ಮನನ್ನು ವೇದಗಳ ರಹಸ್ಯ ಸಾರ ಎಂದು ತಿಳಿಸಿಕೊಡುವುದಕ್ಕಾಗಿ ಮಧ್ವನನ್ನಾಗಿ ಹುಟ್ಟಿಸಿದರು.  ಇದು ಮುಖ್ಯಪ್ರಾಣನ ಮೂರನೇ ರೂಪ.

ಜ್ಞಾನಿಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣನ ಅನುಗ್ರಹದಿಂದ, ಶ್ರೇಷ್ಠನಾದ  ಪರಮಾತ್ಮನ ಗುಣಗಳನ್ನು ಜ್ಞಾನಿಗಳು ಸುಖವಾಗಿ ತಿಳಿಯುತ್ತಾರೆ.  ಯಾವ  ಪರಮಾತ್ಮನ ಚಿಂತನೆಯಿಂದ ಸಜ್ಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾದ್ಯವೋ,  ಅಂತಹ  ಪರಮಾತ್ಮನ ಗುಣಗಳನ್ನು ಸಾಧನೆ ಮಾಡಲು ಮುಖ್ಯಪ್ರಾಣನು ನಮ್ಮ ಹೃದಯ ಗುಹೆಯಲ್ಲೇ ಇರುವ ಅಂತರ್ಯಾಮಿಯಾದ ಪರಮಾತ್ಮನನ್ನು ಮಥನ ಮಾಡಿ ಕೊಡುತ್ತಾನೆ. ಇತ್ಯಾದಿ ವಾಕ್ಯಗಳಿಂದ ಇದೆಲ್ಲವೂ ಕೂಡಾ ಹೇಳಲ್ಪಟ್ಟಿದೆ. ವೇದದಲ್ಲಷ್ಟೇ ಅಲ್ಲಾ,  ಪುರಾಣಗಳಲ್ಲಿಯೂ, ಪಂಚರಾತ್ರದಲ್ಲಿಯೂ ಇದನ್ನು ಹೇಳಿದ್ದಾರೆ.  

 

ಅತ್ರೋದಿತಾ ಯಾಶ್ಚ ಕಥಾಃ ಸಮಸ್ತಾ ವೇದೇತಿಹಾಸಾದಿವಿನಿರ್ಣ್ಣಯೋಕ್ತಾಃ ।

ತಸ್ಮಾದಯಂ ಗ್ರನ್ಥವರೋSಖಿಲೋರುಧರ್ಮ್ಮಾದಿಮೋಕ್ಷಾನ್ತಪುಮರ್ತ್ಥಹೇತುಃ ।

ಕಿಂ ವೋದಿತೈರಸ್ಯ ಗುಣೈಸ್ತತೋSನ್ಯೈರ್ನ್ನಾರಾಯಣಃ ಪ್ರೀತಿಮುಪೈತ್ಯತೋSಲಮ್ ॥ ೩೨.೧೭೯ ॥

 

ಇಲ್ಲಿ ಹೇಳಿದ ಎಲ್ಲಾ ಕಥೆಗಳೂ ಕೂಡಾ ವೇದ, ಇತಿಹಾಸ, ಇತ್ಯಾದಿಗಳ ನಿರ್ಣಯದಿಂದ ಬಂದಿರುವುವಂಥದ್ದು. ಅದರಿಂದ ಈ ಶ್ರೇಷ್ಠವಾದ ಗ್ರಂಥವು ಧರ್ಮ, ಅರ್ಥ, ಕಾಮ, ಮೋಕ್ಷ,  ಮೊದಲಾದ ಎಲ್ಲಾ ಪುರುಷಾರ್ಥಗಳಿಗೆ ಸಾಧನ. ಇದನ್ನು ಓದಿದರೆ ನಾರಾಯಣನು ಅತ್ಯಂತ ಪ್ರೀತನಾಗುತ್ತಾನೆ.  ಆದಕಾರಣ ಬೇರೆ ಎಷ್ಟು ಗುಣಗಳನ್ನು ಹೇಳಿ ಏನು ಪ್ರಯೋಜನ.

 

ಯಃ ಸರ್ವಗುಣಸಮ್ಪೂರ್ಣ್ಣಃ ಸರ್ವದೋಷವಿವರ್ಜ್ಜಿತಃ ।

ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮ್ಮೇ ಪರಮಃ ಸುಹೃತ್ ॥ ೩೨.೧೮೦ ॥

 

ಎಲ್ಲಾ ಗುಣಗಳಿಂದ ತುಂಬಿರುವ, ಯಾವ ಕೊರತೆಯೂ ಇಲ್ಲದ, ಎಲ್ಲಾ ಕೊರತೆಗಳನ್ನು ಮೀರಿ ನಿಂತಿರುವ, ನನ್ನಲ್ಲಿ ಯಾವಾಗಲೂ ಪ್ರೀತನೇ ಆಗಿರುವ,  ಪ್ರಿಯನಾದ ಶ್ರೀಹರಿಯು ಅತ್ಯಂತ ಪ್ರೀತನಾಗಲಿ.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವಸ್ವರ್ಗ್ಗಾರೋಹಣರ್ನ್ನಾಮ  ದ್ವಾತ್ರಿಂಶೋsಧ್ಯಾಯಃ ॥

[ ಆದಿತಃ ಶ್ಲೋಕಾಃ ೫೦೦೦ + ೧೮೦=೫೧೮೦ ]

*********

ಸಮಾಪ್ತೋಯಂ ಗ್ರನ್ಥಃ

 

ಶ್ರೀಕೃಷ್ಣಾರ್ಪಣಮಸ್ತು ॥

Mahabharata Tatparya Nirnaya Kannada 32-170-175

 

ಆನನ್ದತೀರ್ತ್ಥಾಖ್ಯಮುನಿಃ ಸುಪೂರ್ಣ್ಣಪ್ರಜ್ಞಾಭಿಧೋ ಗ್ರನ್ಥಮಿಮಂ ಚಕಾರ ।

ನಾರಾಯಣೇನಾಭಿಹಿತೋ ಬದರ್ಯ್ಯಾಂ ತಸ್ಯೈವ ಶಿಷ್ಯೋ ಜಗದೇಕಭರ್ತ್ತುಃ ॥ ೩೨.೧೭೦ ॥

 

ಜಗತ್ತಿಗೇ ಒಡೆಯನಾಗಿರುವ ವೇದವ್ಯಾಸರ ಶಿಷ್ಯನಾಗಿರುವ ಈ ಆನಂದತೀರ್ಥ ಎಂಬ ಮುನಿಯು, ಬದರಿಯಲ್ಲಿ ನಾರಾಯಣನಿಂದ ಆದೇಶಿಸಲ್ಪಟ್ಟವನಾಗಿ, ಪೂರ್ಣಪ್ರಜ್ಞಾ ಎಂಬ ಹೆಸರಿನವನಾಗಿ ಈ ಗ್ರಂಥವನ್ನು ರಚಿಸಿದನು.

 

ಯಸ್ತತ್ಪ್ರಸಾದಾದಖಿಲಾಂಶ್ಚ ವೇದಾನ್ ಸಪಞ್ಚರಾತ್ರಾನ್ ಸರಹಸ್ಯಸಙ್ಗ್ರಹಾನ್ ।

ವೇದೇತಿಹಾಸಾಂಶ್ಚ ಪುರಾಣಯುಕ್ತಾನ್ ಯಥಾವದನ್ಯಾ ಅಪಿ ಸರ್ವವಿದ್ಯಾಃ ॥ ೩೨.೧೭೧ ॥

 

ಭಗವಂತನ ಅನುಗ್ರಹದಿಂದ ಈ ಪೂರ್ಣಪ್ರಜ್ಞ ಎಲ್ಲಾ ಪಂಚರಾತ್ರ, ಬ್ರಹ್ಮಸೂತ್ರಾದಿಗಳಿಂದ ಒಡಗೂಡಿರುವ, ಪುರಾಣ, ವೇದ-ಇತಿಹಾಸಗಳಿಂದ ಕೂಡಿರುವ ಎಲ್ಲಾ ವಿದ್ಯೆಗಳನ್ನೂ ಕೂಡಾ ಬಲ್ಲವನಾಗಿದ್ದ.   

 

ಸಮಸ್ತಶಾಸ್ತ್ರಾರ್ತ್ಥವಿನಿರ್ಣ್ಣಯೋSಯಂ ವಿಶೇಷತೋ ಭಾರತವರ್ತ್ಮಚಾರೀ ।

ಗ್ರನ್ಥಃ ಕೃತೋSಯಂ ಜಗತಾಂ ಜನಿತ್ರಂ ಹರಿಂ ಗುರುಂ ಪ್ರೀಣಯತಾSಮುನೈವ ॥ ೩೨.೧೭೨ ॥

 

ಈ ಗ್ರಂಥ ಸಮಸ್ತ ಶಾಸ್ತ್ರದ ಅರ್ಥನಿರ್ಣಯ. ಇದು ವಿಶೇಷವಾಗಿ ಮಹಾಭಾರತದಲ್ಲಿ ಸಂಚರಿಸುತ್ತದೆ. ಜಗತ್ತಿನ ಜನಕನಾಗಿರುವ, ತನ್ನ ಗುರುವಾಗಿರುವ ನಾರಾಯಣನನ್ನು ಸಂತೋಷಗೊಳಿಸುವ ಸಲುವಾಗಿ ಈ ಆನಂದತೀರ್ಥನಿಂದಲೇ ಈ ಗಂಥವು ರಚಿಸಲ್ಪಟ್ಟಿದೆ.

 

ವಿನಿರ್ಣ್ಣಯೋ ನಾಸ್ತ್ಯಮುನಾ ವಿನಾ ಯದ್ ವಿಪ್ರಸ್ಥಿತಾನಾಮಿವ ಸರ್ವವಾಚಾಮ್ ।

ತದ್ ಬ್ರಹ್ಮಸೂತ್ರಾಣಿ ಚಕಾರ ಕೃಷ್ಣೋ ವ್ಯಾಖ್ಯಾSಥ ತೇಷಾಮಯಥಾ ಕೃತಾSನ್ಯೈಃ ॥ ೩೨.೧೭೩ ॥

 

ಈ ಗ್ರಂಥಕ್ಕಿಂತ ಅತಿರಿಕ್ತವಾದ ನಿರ್ಣಯವು ಇಲ್ಲ. ಇತಿಹಾಸ-ಪುರಾಣಗಳ ಪರಸ್ಪರ ವಿರುದ್ಧವಾಗಿರುವ ಎಲ್ಲಾ ಮಾತುಗಳ ನಿರ್ಣಯಕ್ಕಾಗಿ ಬ್ರಹ್ಮಸೂತ್ರಗಳನ್ನು ವೇದವ್ಯಾಸರು ರಚಿಸಿದರು. ಅದರ ವ್ಯಾಖ್ಯಾನವೂ ಕೂಡಾ ಬೇರೆಯವರಿಂದ ಬೇರೇ ರೀತಿಯಾಗಿ ಮಾಡಲ್ಪಟ್ಟಿದೆ.

 

ನಿಗೂಹಿತಂ ಯತ್ ಪುರುಷೋತ್ತಮತ್ವಂ ಸೂತ್ರೋಕ್ತಮಪ್ಯತ್ರ ಮಹಾಸುರೇನ್ದ್ರೈಃ ।

ಜೀವೇಶ್ವರೈಕ್ಯಂ ಪ್ರವದದ್ಭಿರುಗ್ರೈರ್ವ್ಯಾಖ್ಯಾಯ ಸೂತ್ರಾಣಿ ಚಕಾರ ಚಾSವಿಃ ॥ ೩೨.೧೭೪ ॥

 

ಬ್ರಹ್ಮ ಹಾಗೂ ಜೀವರಿಗೆ ಐಕ್ಯವನ್ನು ಹೇಳುವ ದೈತ್ಯರಿಂದ ಮುಚ್ಚಲ್ಪಟ್ಟ, ಸೂತ್ರದಲ್ಲಿ ಹೇಳಿದ ಪುರುಷೋತ್ತಮತ್ವವನ್ನೂ ಈ ಮುಖ್ಯಪ್ರಾಣನು, ಸೂತ್ರಗಳನ್ನು ವ್ಯಾಖ್ಯಾನಮಾಡಿ ಜನರ ಮುಂದಿಟ್ಟ.  

 

ವ್ಯಾಸಾಜ್ಞಯಾ ಭಾಷ್ಯವರಂ ವಿಧಾಯ ಪೃಥಕ್ಪೃಥಕ್ ಚೋಪನಿಷತ್ಸುಭಾಷ್ಯಮ್ ।

ಕೃತ್ವಾSಖಿಲಾನ್ಯಂ ಪುರುಷೋತ್ತಮಂ ಚ ಹರಿಂ ವದನ್ತೀತಿ ಸಮರ್ತ್ಥಯಿತ್ವಾ ॥ ೩೨.೧೭೫ ॥

 

ವೇದವ್ಯಾಸರ ಅಣತಿಯಂತೆ ಶ್ರೇಷ್ಠವಾದ ಭಾಷ್ಯವನ್ನು ರಚಿಸಿ, ಪ್ರತ್ಯೇಕ-ಪ್ರತ್ಯೇಕವಾಗಿ ಉಪನಿಷತ್ತುಗಳ ಭಾಷ್ಯವನ್ನೂ ಕೂಡಾ ಬರೆದು, ಈ ಜೀವ ಹಾಗೂ ಜಡ ಪ್ರಪಂಚಕ್ಕಿಂತ ವಿಲಕ್ಷಣನಾದ, ಅದರಿಂದಲೇ ಪುರುಷೋತ್ತಮ ಎಂಬ ಹೆಸರಿನವನಾದ ನಾರಾಯಣನನ್ನು ಈ ಎಲ್ಲಾ ಶಾಸ್ತ್ರಗಳು ಹೇಳುತ್ತವೆ ಎಂದು ಸಮರ್ಥನೆ ಮಾಡಿದನು.

Mahabharata Tatparya Nirnaya Kannada 32-165-169

 

ತತಃ ಕಲೇರನ್ತಮವಾಪ್ಯ ಧರ್ಮ್ಮಜ್ಞಾನಾದಿಕಲ್ಯಾಣಗುಣಪ್ರಹೀನೇ ।

ಲೋಕೇ ವಿರಿಞ್ಚತ್ರಿಪುರಘ್ನಶಕ್ರಪೂರ್ವಾಃ ಪಯೋಬ್ಧಿಂ ತ್ರಿದಶಾಃ ಪ್ರ ಜಗ್ಮುಃ ॥ ೩೨.೧೬೫ ॥

 

ದುರ್ಗಾವತಾರದ ನಂತರ, ಕಲಿಯುಗದ ಸಮಾಪ್ತಿ ಕಾಲದಲ್ಲಿ, ಭೂಲೋಕವು ಧರ್ಮ, ಜ್ಞಾನ ಮೊದಲಾದ ಕಲ್ಯಾಣಗುಣಗಳಿಂದ ಹೀನವಾಗಲು, ಬ್ರಹ್ಮ, ರುದ್ರ, ಇಂದ್ರ ಮೊದಲಾದವರು ಕ್ಷೀರಸಮುದ್ರವನ್ನು ಹೊಂದಿದರು. 

 

ನಾರಾಯಣಸ್ತೈಃ ಸ್ತುತಿಪೂರ್ವಮರ್ತ್ಥಿತೋ ಭವಾಯ ಲೋಕಸ್ಯ ಸ ಶಮ್ಭಳಾಖ್ಯೇ ।

ಗ್ರಾಮೇ ಮುನೇರ್ವಿಷ್ಣುಯಶೋSಭಿದಸ್ಯ ಗೃಹೇ ಬಭೂವಾSವಿರಚಿನ್ತ್ಯಶಕ್ತಿಃ ॥ ೩೨.೧೬೬ ॥

 

ನಾರಾಯಣನು ಅವರಿಂದ ಸ್ತೋತ್ರಪೂರ್ವಕವಾಗಿ ಪ್ರಾರ್ಥಿತನಾಗಿ, ಸಜ್ಜನರ ಅಸ್ತಿತ್ವಕ್ಕಾಗಿ ಶಮ್ಭಳಾ ಎಂಬ ಗ್ರಾಮದಲ್ಲಿ ವಿಷ್ಣುಯಶಸ್ಸು ಎಂಬ ಹೆಸರಿನ ಮುನಿಯ ಮನೆಯಲ್ಲಿ, ಎಣೆಯಿರದ ಶಕ್ತಿಯವನಾಗಿ ಅವತರಿಸಿದನು.(ಅವತರಿಸುತ್ತಾನೆ)

 

ಕಲೇಸ್ತು ಕಾತ್ಕಾರತ ಏಷ ಕಲ್ಕೀ ಜ್ಞಾನಂ ಕಲಂ ಕಂ ಸುಖಮೇವ ತದ್ವಾನ್ ।

ಕಲ್ಕೀತಿ ವಾ ತೇನ ಸಮಸ್ತದಸ್ಯುವಿನಾಶನಂ ತೇನ ದಿನಾದ್ ವ್ಯಧಾಯಿ ॥ ೩೨.೧೬೭ ॥

 

ಕಲಿಯ ನಿಗ್ರಹದಿಂದ ಇವನು ಕಲ್ಕೀ ಎಂಬ ಹೆಸರಿನವನು. ಕಂ ಎಂದರೆ ಸುಖ, ಕಲ ಎಂದರೆ ಜ್ಞಾನ. ಹೀಗೆ ಜ್ಞಾನಾನಂದ ಸ್ವರೂಪನಾದ ಇವನಿಗೆ ಕಲ್ಕೀ ಎಂದು ಹೆಸರು. ಇಂತಹ ಕಲ್ಕಿಯಿಂದ ಒಂದೇ ದಿನದಲ್ಲಿ ಎಲ್ಲಾ ದಸ್ಯುಗಳ ಕೊಲ್ಲುವಿಕೆಯು ಮಾಡಲ್ಪಟ್ಟಿತು.  

 

ಅಧರ್ಮ್ಮವೃತ್ತಂ ವಿಮುಖಂ ಹರೇಶ್ಚ ನಿಹತ್ಯ ನಿಃಶೇಷಜನಂ ತುರಙ್ಗೀ ।

ಸಂಸ್ಥಾಪಯಾಮಾಸ ಸ ಧರ್ಮ್ಮಸೇತುಂ ಜ್ಞಾನಂ ಸ್ವಭಕ್ತಿಂ ಚ ನಿಜಪ್ರಜಾಸು ॥ ೩೨.೧೬೮ ॥

 

ಕುದುರೆಯನ್ನೇರಿ ಬರುವ ಕಲ್ಕಿಯು ಅಧರ್ಮದಲ್ಲಿರುವ, ಪರಮಾತ್ಮನಿಗೆ ವಿಮುಖರಾಗಿರುವ ಎಲ್ಲಾ ದುರ್ಜನರನ್ನೂ ಕೊಂದು, ಧರ್ಮದ ಮರ್ಯಾದೆಯನ್ನು, ಯೋಗ್ಯರಲ್ಲಿ ಜ್ಞಾನವನ್ನೂ, ತನ್ನ ಭಕ್ತಿಯನ್ನೂ ಮತ್ತೆ ನೆಲೆಗೊಳಿಸಿದನು.

 

ಇತ್ಯಾದ್ಯನನ್ತಾನಿ ಹರೇರುದಾರಕರ್ಮ್ಮಾಣಿ ರೂಪಾಣಿ ಚ ಸದ್ಗುಣಾಶ್ಚ ।

ನಿತ್ಯವ್ಯಪೇತಾಖಿಲದೋಷಕಸ್ಯ ಬ್ರಹ್ಮೇತ್ಯನನ್ತೇತಿ ಚ ನಾಮ ಯೇನ ॥ ೩೨.೧೬೯ ॥

 

ಇವೇ ಮೊದಲಾದ ಕೊನೆಯಿರದ ಶ್ರೇಷ್ಠವಾದ ಕರ್ಮಗಳು ನಾರಾಯಣನದ್ದು. ಆ ಪರಮಾತ್ಮನ ರೂಪಗಳು, ಸದ್ಗುಣಗಳೂ ಅನಂತ. ಸದಾ ದೋಷ ರಹಿತನಾಗಿರುವ ಈ ನಾರಾಯಣನಿಗೆ ‘ಬ್ರಹ್ಮ’ ಎಂದೂ, ‘ಅನಂತ’ ಎಂದೂ ಹೆಸರಿದೆ.